Saturday, June 8, 2019

ಗೊಂಚಲು - ಮೂರು ಸೊನ್ನೆ ಒಂದು.....

ಕಣ್ಣಿಗಂಟಿದ  ಕಾವ್ಯ...  

ಚಿಟ್ಟೆ ವಿರಹದುರಿಯಲಿ ಹೂವು ಬಾಡುವಾಗ ಕಾಯಿ ನಕ್ಕಿತು...
#ಪ್ರೇಮ...
÷×=÷=×÷

ಎಲ್ಲೆಲ್ಲೋ ಅಲೆಯುತ್ತೇನೆ - ನಿನ್ನಲ್ಲಿ ಕರಗುತ್ತೇನೆ...
ಕೆಲವು ನೋಟಗಳು ಕಾಡಲಿಕ್ಕೆಂದೇ ಕೂಡುತ್ತವೇನೋ...
ಕೂಡು ಹಾದಿಯಲಿನ ನಿನ್ನ ಗೂಡಿಗೆ ನನ್ನ ಹೆಸರಿದೆಯಂತೆ...
ಗುಬ್ಬಚ್ಚಿ ಎದೆಯಲ್ಲಿ ಸಾಗರನ ತುಂಡು...
ಆ ಸ್ವರ್ಗಕ್ಕೆ ಸಾವೇ ದಾರಿಯಂತೆ - ಆ ದಾರಿ ಆಯಾಸಕ್ಕೆ ನರಕ ಸುಖಗಳೇ ನೆರಳಂತೆ...
#ಕೊಂಡಾಟ...
÷×=÷=×÷

ಕದ್ದು ಇಣುಕೋ ಕಣ್ಣಿನಲ್ಲಿ ರೆಕ್ಕೆ ಕುಣಿಸೋ ಮರುಳ ಮೋಹದ ತುಂಟ ಚಿಟ್ಟೆ ಮರಿ...
ಕಳ್ಳ ಆಸೆಯ ತೇವ ತೇವ ತುಟಿಗಳಲ್ಲಿ ಮಳೆ ಹನಿಯ ಕಚ್ಚಾ ರುಚಿ...
ಮಳೆಯ ಇರುಳಲಿ ಹರೆಯ ಕಣ್ಣಿ ಕಳಚಿದ ಕರು...
#ಬಯಲಿಗೆ_ಬಿದ್ದ_ಎದೆಯ_ಬಿಸಿ...
÷×=÷=×÷

ಸೃಷ್ಟಿ ಕಾವ್ಯವೇ -
ಈ ಶುಭ ಇರುಳಿನಲಿ ಭುವಿಯ ಮೈಯ್ಯಲಿಳಿವ ಮಳೆ ಪ್ರೇಮೋನ್ಮಾದ ಸ್ಫೋಟಿಸಿದ ನನ್ನ ನಿನ್ನ ಆ ಖಾಸಗಿ ಸಂಜೆಯ ಹಗೂರ ಬೆವರ ಸಾಲಿನ ಕಂಪನು ಎಳೆ ತಂದು ಚಾದರದೊಳಗಿನ ಒಂಟಿತನವ ಕೆಣಕಿದರೆ ಯಾರ ದೂರಲಿ...
#ಭಾರಭಾರ_ಈ_ಒಂಟೊಂಟಿ_ಮಳೆ_ರಾತ್ರಿ...
÷×=÷=×÷

ಕಳ್ಳಭಟ್ಟಿ ಏರಿಸಿ ಚಿತ್ತಾದವನ ಕರುಳಿನಲಿ ಕಳ್ಳ ಪ್ರೇಮವೊಂದು ಕತ್ತು ಕುಣಿಸಿದರೆ - ಷರಾಬಿಗೂ ಪ್ರಣಯಾಗ್ನಿಗೂ ನಶೆಯ ಜಿದ್ದಾಜಿದ್ದಿ...
#ಬಡಬಡಿಕೆಗೆ_ಮಳೆಯ_ಸಾಕ್ಷಿ...
÷×=÷=×÷

ಇಲ್ಲಿ, ಕಾಯುವ ಮಾತೇನೂ ಕೊಟ್ಟಿರಲಿಲ್ಲ - ಕಾಯುವಿಕೆ ನಿಂತಿಲ್ಲ... ಅಲ್ಲಿ, ಕಾದು ನಿಲ್ಲುವ ಆಣೆ ಪ್ರಮಾಣಗಳೆಷ್ಟೋ - ಕಾಯಲು ಪುರ್ಸೊತ್ತಿಲ್ಲ...

ಅಗೋ...... ಆ ಹಾದಿ.......‌.... ಕಣ್ಣರಳಿಸಿ ತುಂಬಿಕೊಳ್ಳಲು ಬಯಸಿದ್ದು..... ಅಂಥವೆಷ್ಟೋ ಕಿರು ಕಾಲು ಹಾದಿಗಳು..... ಅದೊಂದು ಸುಂದರ ಕನಸು......... ಮತ್ತದು ಅಷ್ಟೇ.......
÷×=÷=×÷

ಕರಿಮುಗಿಲ ಗೆಳತಿ ಅವಳು ಕರಗಿ ಸುರಿಯುತ್ತಾಳೆ - ಕರಿಬಂಡೆ ಎದೆಯಲ್ಲೂ ಬಣ್ಣದ ಹೂ ಅರಳಿ ನಗುತ್ತದೆ...
#ಕಪ್ಪು_ಹುಡುಗಿ...
÷×=÷=×÷

ಕಾಯುತ್ತಾ ನಿಂತ ಹಾದಿಯ ಕಿಬ್ಬಿಗಳಲಿ ಕಣ್ಸೆಳೆವ ಅಪರಿಚಿತ ಗೆಜ್ಜೆಗಳ ಕಿಂಕಿಣಿ ಘಲಿರು - ಆಹಾ! ಈ ಬೆಳಗಿನೆದೆಯಲಿ ಚಂದಾನೆ ಚೆಲುವು ಚೆಲ್ಲಾಡಿ ಕಣ್ಣಾಲಿ ಚಡಪಡಿಕೆಯಲಿ ಸೋಬಾನೆ ಸೊಬಗು...
#ಕಣ್ಣಿಗಂಟಿದ_ಕಾವ್ಯ...

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)

No comments:

Post a Comment