Saturday, June 8, 2019

ಗೊಂಚಲು - ಎರಡ್ನೂರ್ತೊಂಭತ್ತೊಂಭತ್ತು.....

ಕತ್ತಲು ಹೇಳಿದ ಕಟ್ಟುಕಥೆಗಳು.....  

"ಎಲ್ಲ ಚಂದವಿದೆ ಇಲ್ಲಿ - ನನಗಾದರೋ ಕಳ್ಳ ಕುರುಡು..."
"ಬದುಕು ಬಣ್ಣ ಬಣ್ಣದ ಬಲೂನಿನಾಟ - ಉಸಿರು, ಗಾಳಿ, ಸೂಜಿ ಎಂಬೆಲ್ಲ ಪಾತ್ರಗಳು..."
"ಗೊತ್ತಲ್ಲ, ಕತ್ತಲಿಗೊಗ್ಗಿದ ಕಣ್ಣಿಗೆ ಕಂದೀಲೂ ಬಲು ಹಿಂಸೆ - ಒರೆಸಿಕೊಳ್ಳದಿದ್ದರೆ ಕಣ್ಣೀರೂ ಕಲೆ ಉಳಿಸುತ್ತೆ..."
"ಕೃತಕ ಬೆಳಕಿನ ಊರಲ್ಲಿ ಕಾಡುಗತ್ತಲ ಹುಡುಕುತ್ತೇನೆ - ಆಹಾ ಸಂತೆಯ ಮೌನವೇ..."
"ಅತ್ತು ಅತ್ತು ಬೇಸರಾಗಿ ಎದೆಬಿರಿಯೆ ನಕ್ಕುಬಿಟ್ಟೆ - ಹೆಗಲು ಇನ್ನಷ್ಟು ಭಾರವಾಯಿತು..."
"ನನ್ನ ನಗುವೇ ನನ್ನ ಅಣಕಿಸುತ್ತದೆ ಸುಡುಸುಡುವ ಏಕಾಂತದಲ್ಲಿ - ಒಳಗುಟ್ಟು ಒಳಗಲೆದವರಿಗಷ್ಟೇ ಗೊತ್ತು..."
"ಇರುಳ ಸಾಕ್ಷಾತ್ಕಾರಗಳನೆಲ್ಲ ಸಂಕಲಿಸಿ ಪ್ರಕಟಿಸಿದರೆ ಹಗಲು ದಿಕ್ಕೆಡುತ್ತದೆ - ಮೌನ ಉರಿದಷ್ಟೂ ಮಾತು ಬಣ್ಣಗೆಡುತ್ತದೆ..."
#ಕತ್ತಲು_ಹೇಳಿದ_ಕಟ್ಟುಕಥೆಗಳು...
¶¶¶¶¶¶¶¶

ಅಶುಭದ ಬೆನ್ನ ಮೇಲೆ 'ಶುಭಂ' ಅಂತೇನೋ ಬರೆದು ಸುಳ್ಳೇ ಆದರೂ ಹಗುರಾದೆ...
#ಉಳಿದದ್ದು_ಸಣ್ಣ_ಮೌನ...
¶¶¶¶¶¶¶¶

ಸುಳ್ಳನ್ನು ಚಂದನೆ ಬಣ್ಣದಲ್ಲದ್ದಿ ಸತ್ಯವಾಗಿಸೋ ಸತ್ಯಸಂಧರ ಜಗದಲ್ಲಿ ನಿಸೂರಾಗಿ ಸತ್ಯವನ್ನೇ ಒದರಿಬಿಡೋರು ಅಪಥ್ಯವಾಗೋದೇ‌ ಹೆಚ್ಚು...
#ಕತ್ತಲಿಗೂ_ಬಣ್ಣದ್ದೇ_ಬಿಕ್ಕಳಿಕೆ_ಇಲ್ಲಿ...
¶¶¶¶¶¶¶¶

ಕನಸು ಕಟ್ಟದ ಕಣ್ಣು - ನಗೆಯ ಬಿತ್ತದ ಮಡಿಲು - ಒಳಗೆಲ್ಲ ಬಣ ಬಣ...
ಬೆಳಕಿನ ಬೆತ್ತಲೆಗೆ ಕತ್ತಲು ಬಸಿರಾಗಿ ಕಣ್ಣ ಹನಿಯ ಹಡೆಯುತ್ತದೆ...
ನಾನೆಂದರಿಲ್ಲಿ ಗುಂಪಲ್ಲಿ ಕಲಸಿಟ್ಟ ಗುಂಪಿಗೆ ಸೇರದ ಪದ...
#ಕನ್ನಡಿಯಲಿ_ಕಂಡ_ಹೆಣ...
¶¶¶¶¶¶¶¶

ಗೆದ್ದ ಮೌನಕೂ ದಿವ್ಯ ಸಂಭಾಷಣೆಯ ಕಿರೀಟ - ಕವಿತೆ...
ಸೋತ ಮಾತಿನ ನಗುವಿಗೂ ಸೋಲಿನದೇ ಪಟ್ಟ ಇಲ್ಲಿ - ವ್ಯಥೆಯ ಕಥೆ...
ಸಂತೆಯಲಿ ಕೂಗಿ ಕೂಗಿ ಮಾತು ಮಾರಿ ಸಂಜೆಗೆ ಉಳಿದ ನಿತ್ರಾಣ ಮೌನಕೆ ಸಾವೆಂದು ಹೆಸರಿಡಬಹುದೇ...
ಕನಸು ಕಾಡದ ನಿದ್ದೆಯೇ ಜರೂರು ಕಣ್ತಣಿಸು ಬಾ...
#ಒಂದು_ಮುಟಿಗೆ_ಮೌನ...
***ಯಥಾರ್ಥ ಕೇಳಬೇಡಿ...
¶¶¶¶¶¶¶¶

ಹಸಿವು:
ನಿನ್ನೆಯನ್ನು ಕೊಂದಿತ್ತು
ಇಂದೀಗ ಎಚ್ಚರ ತಂದಿಟ್ಟಿದೆ
ನಾಳೆಯ ಕಾಯಬಹುದು...
#ಗಡಿಯಾರದ_ಮುಳ್ಳು_ತುಸು_ಹೆಚ್ಚೇ_ಚುಚ್ಚುತ್ತದೆ...
¶¶¶¶¶¶¶¶

ನಿಶ್ಯಬ್ದವನ್ನೇ ಮೌನ ಅಂದುಕೊಂಡವರೇ ಹೆಚ್ಚು ಇಲ್ಲಿ...
ಶಬ್ದ ಶಬ್ದದ ನಡುವಿನ ವಿವೇಚನೆಯಲ್ಲವಾ ಮೌನ...
#ಸಾಕ್ಷೀಪ್ರಜ್ಞೆ...
¶¶¶¶¶¶¶¶

ರಣ ಬಿಸಿಲ ಮುಖ ತೊಳೆವ ಎರಡು ಹನಿ ಸಂಜೆಮಳೆ - ಥಾರು ರಸ್ತೆಯ ಮೇಲೆ ಮಿಂದು ಮಲಗಿದ ಧೂಳ ಕಣ - ಹೆಣ ಭಾರದ ಮನಸು - ಮಣ ಭಾರದ ಹೆಜ್ಜೆ - ಇರುಳ ಬಾಗಿಲ ಮುರಿದು ಮುಕ್ಕಿ ಕಣ್ಣ ಕೊಯ್ಯುವ  ಕೃತಕ ಬೆಳಕು - ಚಪ್ಪಲಿಯ ಬೆನ್ನಿಗಂಟಿದ ಗಾಢ ಕಂಪಿನ ಕಾಡು ಸಂಪಿಗೆ ಎಸಳು - ಕಾಲಿನ ಕ್ರೌರ್ಯಕ್ಕೆ ಕಾಲನ ನಿಯಮದ ಹೆಸರು - 'ಆ ಕಾಲ ಒಂದಿತ್ತು' ಎಂದು ನಿನ್ನೆಗಳ ಕಿವುಚುತ್ತಾ ಕಾಲನ ಕಾಲು ತೊಳೆದ ಉದಕವ ಕಣ್ಣಿಂದ ಇಳಿಸುತ್ತಾ ಇಲ್ಲಿಯವರೆಗೆ ನಡೆದಿದ್ದಾಯ್ತು - ಮುಗಿಯಲೊಲ್ಲದು ಈ ಪರಿಚಿತ(?) ಹಾದಿಯ ಅಪರಿಚಿತ ಪಯಣ - "ತುಂಬ ಮಾತಾಡುವ ನನ್ನ ದಾರಿ ಮೌನವನ್ನು ಹುಡುಕುತ್ತದೆ ಮತ್ತು ಬೋಧಿಸುತ್ತದೆ..."
#ಕಾಕಭೋಜನ...

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)

No comments:

Post a Comment