Tuesday, May 7, 2019

ಗೊಂಚಲು - ಎರಡ್ನೂರ್ತೊಂಭತ್ತೆಂಟು.....

ನಶೆ.....  
(ಎದೆಯ ಸವಿ ಸೊಲ್ಲು...)

ಬೆಳದಿಂಗಳ ತೋಪಿನಲಿ ಆ ಮೌನ ಈ ಹೆಗಲನಾತು ಮಾತಿಗೆ ಮುತ್ತಿಟ್ಟಾಗ ಕಣ್ಣಿಂದ ಜಾರಿದ ಹನಿ ಹನಿ - ಕನಸು ಕವಿತೆ...
#ಕಡಲು_ಕೊಳಲು...
⇂↺↻⇖⇗⇘⇙↺↻⇃

ವ್ಯಾಖ್ಯಾನಗಳ ಹಂಗಿಲ್ಲದ ರಸಕಾವ್ಯ ಅದು - ನಗುವೊಂದೆ ಭಾಷೆ, ಭಾಷ್ಯ ಇಲ್ಲಿ - ಖಾಲಿ ಜೋಳಿಗೆಯವನ ಸೋತ ಹೆಗಲಿಗೂ ನಗೆಯ ಸಿಹಿ ಮೂಟೆ ಹೊರಿಸಿ ತಬ್ಬುತ್ತದೆ "ನೇಹ..."
ಈ ಮರುಳನ ಮುಡಿಯೂ ತುಸು ಗೆಲುವಿನ ಹುಡಿ ಮಿಂದರೆ ಅದು ನೇಹಗಳ ಉಡಿಯಿಂದ ಬಸಿದುಕೊಂಡ ಬೆಳಕಿನ ಕಿಡಿಯಿಂದಲೇ...
#ಎದೆಯ_ಸವಿ_ಸೊಲ್ಲು...
⇂↺↻⇖⇗⇘⇙↺↻⇃

ಹುಡುಕಿದ್ದೇ ಹುಡುಕಿದ್ದು ಎಲ್ಲೆಂದರಲ್ಲಿ, ಯಾರ್ಯಾರ ಬೊಗಸೆಯಲ್ಲಿ - ಮುಗಿಯದ ಪರಿತಪನೆ; ಅವರೋ ನನ್ನ ಬೊಗಸೆಯ ನೋಡುತ್ತಾರೆ... ಹಸಿವೆಂದರೆ ಎಂಥ ಹಸಿವು - ಪಡೆವ ಚಿಂತೆಯಲಿ ಎಲ್ಲಾ ಕಂಗಳಲೂ ಅಮಾವಾಸ್ಯೆಯಂದೂ ಬೆಳದಿಂಗಳನೇ ಕುಡಿವಾಸೆ - ತಾರೆ ಮರಿ ಬಳಗ ರುಚಿಸುವುದಿಲ್ಲ...
ನನ್ನ ಬೊಗಸೆಯಷ್ಟು ನನ್ನ ಸಾಗರ ಅಂದರೆ ಅಲ್ಪತೃಪ್ತಿ, ನನ್ನೊಳಗೇ ಹುಡುಕಿಕೊಳ್ಳೋದು ಅಂದರೆ ಸಂನ್ಯಾಸ, ನಾನು ನನ್ನನೇ ಹಳಿದುಕೊಳ್ಳುವುದಾ, ಕೊಟ್ಟದ್ದಷ್ಟಕ್ಕೆ ಅಷ್ಟೂ ಅಲ್ಲದಿದ್ದರೂ ತುಸು ಕಮ್ಮಿಯೇ ಆದರೂ ಮರಳಿ ಬಯಸೋದೇನು ತಪ್ಪಲ್ಲವಲ್ಲಾ, ನಾ ಇವರಿಗೆ ಕೊಟ್ಟದ್ದನ್ನ ಇನ್ಯಾರೋ ನಂಗೆ ಕೊಟ್ಟದ್ದರಲ್ಲಿ ಚುಕ್ತಾ ಆಯ್ತು ಅಂದ್ಕೊಳ್ಳೋದು ಹೆಂಗೆ  - ನನ್ನದೇ ಬಹುರೂಪಿ ವ್ಯಾಖ್ಯಾನ ನನ್ನ ಹಸಿವಿಗೆ...
ಕೊಟ್ಟದ್ದೇ ಆದರೆ ಕೊಟ್ಟು ಖಾಲಿಯಾದಾಗಿನ ಹಗುರತೆಯೇ ಸಾಕಿತ್ತಲ್ಲವಾ, ಆ ಖಾಲಿಯಲ್ಲೇ ನಾನು ಅರಳಬಹುದಿತ್ತಲ್ಲವಾ, ಭಾವಕೂಟದಲಿ ಭಾವಗಳೂಟದಲಿ ಲೇವಾದೇವಿಯ ಗುಣವ ಮೀರಬೇಕಲ್ಲವಾ - ಪ್ರಜ್ಞೆಯ ಈ ಮಾತಿಗೆ ಸಿಡುಕುವ ಮನಸು...
ಒಟ್ನಲ್ಲಿ ಗಂವ್ವೆನ್ನುವ ಗೊಂದಲಗಳ ಋಣವಿಲ್ಲದೇ ರುಚಿಯಿಲ್ಲ ಬದುಕಿಂಗೆ...
#ಪ್ರೀತಿ_ವೃತ್ತಾಂತ...
⇂↺↻⇖⇗⇘⇙↺↻⇃

ಕಾರಣವಿಲ್ಲದೆ ಬಂದ 'ನಗು' ಕಾರಣ ಹೇಳದೇ ಹೊರಟುನಿಂತಾಗ ಬಿಕ್ಕುವ ಪ್ರಶ್ನೆ ಕ್ಲೀಷೆ ಅನ್ಸಲ್ಲವಾ...
ಕಾರಣವಿದ್ದು ಬಂದಂಥದ್ದು ಸದ್ದಿಲ್ಲದೆ ಸರಿದು ಹೋದರೆ ಅದರರ್ಥ ಕಾರ್ಯ ಕಾರಣ ಮುಗಿದಿದೆ ಅಂತಲೇ ಅಲ್ಲವಾ...
ಅಲ್ಲಿಗೇನು -
ಅಕಾರಣವೋ, ಸಕಾರಣವೋ ಬಂದದ್ದಕ್ಕೂ ಹೋದದ್ದಕ್ಕೂ ಸಾಕ್ಷಿ ಹಾಗೂ ಹೂರಣ 'ನಾನು' ಮಾತ್ರ...
#ಒಳಗುಡಿಯಲಾಡುವ_ಅಜೀಬು_ಕ್ಷಣಗಳಲಿ_ಆಖೈರು_ಜೀವಿಸಬೇಕಷ್ಟೇ_ಪ್ರೀತಿಯನ್ನ_ಪ್ರೀತಿಯಿಂದ...
⇂↺↻⇖⇗⇘⇙↺↻⇃

ಬೆಳುದಿಂಗಳಿಗೆ ಬೆಂಕಿ ಹಚ್ಚಿದವಳು...
ನಡು ಬಯಲ ಮಧ್ಯದಿಂದ ಹಾಯ್ದ ಜರಿ ನೆರಿಗೆಯಂಚಿನ ಕಿರು ನೆರಳ ಸುಳಿಯಲ್ಲಿ, ಸೆರಗ ಪಟ್ಟಿಯ ಒಳಗಿಂದ ಒದ್ದು ಇಣುಕಿ ಸೆಳೆದು ಸುಡುವ ಮೆತ್ತನ್ನ ಏರಿಯಲಿ ಕಣ್ಣ ದಿಟ್ಟಿ ಕಳೆದೇ ಹೋಗಿದೆ - ಹದಿ ಹೈದನೆದೆಯಲ್ಲಿ ಹಾದಿ ತಪ್ಪಿದ ಉಸಿರ ತೇರು...
ಎದುರು ಮನೆಯ ಬೆಣ್ಣೆ ಗಡಿಗೆ - ತಿನ್ನುವುದಾದರೆ ಕದ್ದೇ ತಿನ್ನಬೇಕು...
ನಿಂತು ನೋಡಬೇಕಾದ ಚೆಲುವು ಮಿಂಚಿನಂದದಿ ಸರಿದು ಆ ಹಾದಿ ಹರಿವಿನಲಿ - ಕಳ್ಳ ಹಸಿವಿನಂತೆ ಕಾಡುವುದು ರಸಿಕ ಮೀಸೆ ತಿರುವಿನಲಿ...
#ಕುಡಿನೋಟದಲಿ_ನೋಡಿ_ಸುಳ್ಳೇ_ನಾಚಿ_ಮೊಗ_ಮರೆಸಿಕೊಂಡ_ಸದಾ_ಮೊದಲೆನಿಸೋ_ಮರುಳ_ಮೋಹ...
⇂↺↻⇖⇗⇘⇙↺↻⇃

ರಾಜಿಯಾಗಲು ಬಿಡೆನೆನುವ ಸಣ್ಣ ಮುನಿಸಿನ್ನೂ ಬಾಕಿ ಇದೆ -  ದೂರ ನಿಲ್ಲಲೊಲ್ಲೆನೆನುವ ಸಿಹಿ ಮುದ್ದಿನ ಆಸೆಯ ಕರೆಯಿದೆ - ಗುಣು ಗುಣು ಗೊಣಗುತ್ತ, ಮೂತಿ ತಿರುವುತ್ತಲೇ ಕಣ್ಮುಚ್ಚಿ ಕೆನ್ನೆ ತಾಕೋ ಚಿಗುರು ತುಟಿಗಳ ಒದ್ದೆ - ಮುಗ್ಧ ಮುದ್ದು ಎಳೆತನವ ಬಾಚಿ ಎದೆಯಲಿಂಗಿಸಿಕೊಂಡ ಪ್ರೀತಿ ಘಮ್ಮೆಂದಿದೆ...
ಸಣ್ಣ ಗುಡುಗು - ಸುಳಿ ಸುಳಿ ಗಾಳಿ - ಮೊದಮೊದಲು ನೆಲದೆದೆಯ ತಂಪಾಗಿ ತಬ್ಬಿದ ನಾಕೇ ನಾಕು ಹನಿ ತುಂತುರು ಮಳೆ - ಉಸಿರ ತಿತ್ತಿಯಲೀಗ ನೆಲಕಂಟಿದ ಧೂಳ ಘಮ...
ಮೈ ಚೂರೂ ತೋಯದಿದ್ದರೂ ಮನ್ಸು ಮುದ್ದನುಂಡಂತಿದೆ...
#ನೆನೆದು_ಬಂದೆ... ⛈⛈
⇂↺↻⇖⇗⇘⇙↺↻⇃

ಬೆಳಕ ಸಾಲಿನಲಿ ನಾಚಿಕೆಯ ಸೋನೆಗೆ ನೆಲ ತೀಡೋ ಆ ಅವಳ ಅಂಗುಷ್ಟ ಇರುಳ ಉತ್ತರೀಯ ಆಸೆ ಬೆನ್ನಿಂದ ಜಾರುವಾಗ ಎನ್ನ ಮೀನಖಂಡದ ಹುರಿಯ ತುಂಬಾ ಓತಪ್ರೋತ ಹಸೆ ಬರೆಯುತ್ತದೆ...
ಕಿವಿಯ ತೀರದಲಿ ಉಸಿರು ಕಾಮನೋಲೆ ಓದಿ ಮಿಳನ ಮೇಳನದಿ ಇರುಳ ಪಕ್ಕೆಗಳಿಗಿಷ್ಟು ರಸಿಕ ಕಿಡಿ ಸೋಕಲಿ, ಕಾಲನ ಕೊರಳಿಗಿಷ್ಟೇ ಇಷ್ಟು ರೋಮಾಂಚದ ಹುಡಿ ಮೆತ್ತಲಿ ತಳುಕು ತೋಳ್ಗಳ ಬೆಮರಿನ ಘಮಲಲ್ಲಿ... ಹೂ ಕಾಯಿ ಹಣ್ಣಿನ ಕಿಡಿ, ಕುಡಿ ನೆಲಬಗೆದ ಬೀಜದುದರದಲ್ಲಿ...
#ಕಡುಬೇಸಿಗೆಗೆ_ಅರಳೋ_ವಸಂತ_ಅಡ್ಡಮಳೆಗೆ_ಝುಮ್ಮೆಂದಾಗ...
⇂↺↻⇖⇗⇘⇙↺↻⇃

ಬೆಳದಿಂಗಳ ಬೆತ್ತಲೆಗೆ ಕೊಳ ನಾಚಿ ತುಳುಕಿದ ಕಂಪನದ ಕಥೆ ಹೇಳಿ ಕೆಣಕುತಿದೆ - ನನ್ನವಳ ಕನ್ನಡಿ...😉
#ನಶೆ...

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)

No comments:

Post a Comment