ಕನ್ಸೂ ನೀನೇ ಕನಸಿಗಂಟಿದ ಬೆಳಕಿನ ಹುಡಿಯೂ ನೀನೇ.....
........ಹರಿದ ಭಾವಗಳ ತುದಿಗಳ ಹಿಡಿದು ಗಂಟು ಝಡಿದು ಬೀಗಬಹುದು, ಆದರೆ ಆ ಗಂಟೂ ಕಾಣದಂತೆ, ಅಲವರಿಕೆಯಾಗಿ ಕಾಡದಂತೆ ಮಾಡುವ ಯಾವ ಮಾಯಾ ವಿದ್ಯೆ ಇದ್ದೀತು ಹೇಳು - "ನಂಗೆ ನೋವೇ ಆಗಿಲ್ಲ" ಎಂಬುದು ನೋವಿನ ನಗೆ ರೂಪದ ಹೇಳಿಕೆಯಾಗಿರುವಾಗ...
ಮೈಲಿಗಲ್ಲುಗಳ ಕೀಳಬಹುದು, ಹಾಯ್ದು ಬಂದ ನನ್ನದೇ ಕಾಲ್ಗಳ ಆರ್ತನಾದವನೆಲ್ಲಿ ಹೂಳಲಿ...
ಮೌನವಾಗಬೇಕು ಇಲ್ಲಾ ಒಂದು ಆಪ್ತ ಜಗಳವಾಡ್ಬೇಕು...
.......ಯಾರಲ್ಲಿ....
#ಭಾವಾವೇಶ...
×××××
ಕಹಿಯನೂ, ಸಿಹಿಯನೂ ಅದೇ ಸಮಾನ ಪ್ರೀತಿಯಿಂದ ಬೆಳೆಯುತ್ತಾ ನಿತ್ಯವೂ ಹೊಸದನ್ನೇ ಧರಿಸುವ ಕಾಲನಿಗೂ, ಧರಿತ್ರಿಗೂ ಹೊಸತರ ಹೆಸರೇಳಿ ನಾನಿಷ್ಟು ಹೊಸತನವ ಬಯಸಿ ಶುಭಕೆ ಮಿಡಿಯಲೊಂದು ದಿನ - ಯುಗಾದಿ...
ಒಂಚೂರು ಬೇವು, ಭರಪೂರ ಬೆಲ್ಲ ಜೊತೆಗೂಡಿ ಕಲೆತು ಬಾಳ ಬಂಡಿಗೆ ತುಂಬಲಿ ಪ್ರೀತಿ ನಗೆಯ ಸೊಲ್ಲ - ಹಾಯಾಗಿ ಹಸಿರುಣ್ಣಲಿ ಜೀವಜಾಲವೆಲ್ಲ...
#ನಗೆ_ಹೋಳಿಗೆ_ಹಬ್ಬ #ಪ್ರೀತಿ_ಬೆಳಕ_ದಿಬ್ಬ...
___ 06.04.2019
×××××
ಮೈಯ್ಯ ಖಂಡಗಳೆಲ್ಲ ಅಲ್ಲಲ್ಲೇ ಸಣ್ಣಗೆ ಬಿಸಿಯೇರಿ - ತಲೆಬೊಂಡದ ನರನರವೂ ಸಿಡಿದು ಸಿಕ್ಕಾಗಿ - ಅಂಡು ಸುಟ್ಟು ಉಸಿರು ಬಿಕ್ಕಳಿಸುವಾಗ ಮತ್ತೆ ಆ ಬೇತಾಳ ಪ್ರಶ್ನೆ ಕಾಡುತ್ತದೆ...
ಸಾವಿನ ಮನೆಗೆ ಬಾಗಿಲುಗಳೆಷ್ಟು...?
ಇನ್ನೆಷ್ಟು ಬಾಗಿಲುಗಳ ದಾಟಿದರೆ ನನ್ನ ಕೋಣೆ...??
ಹಾದಿಯ ಕೊನೆಗಿಂತ ತುಸು ಮುಂಚೆ ನೀನೊಮ್ಮೆ ಸಿಗಬಹುದೇ...???
ನೀ ಸಿಗದೆಯೂ ಅಷ್ಟು ದೂರ ನಡೆದವನು ಅಲ್ಲೆಲ್ಲೋ ನೀ ಸಿಕ್ಕೇಬಿಟ್ಟರೆ ಒಂದು ನಗುವಿಗಾದರೂ ಅರೆಘಳಿಗೆ ನಿಲ್ಲಬಲ್ಲೆನೇ...????
#ಸುಡುಸುಡು_ಮುಸ್ಸಂಜೆ...
×××××
ಸಾವಿನಂಥ ಬೆಳಕೇ -
ಖಾಲಿ ಬಟ್ವೆಯ ಹಿಡ್ದು, ನಕ್ಷತ್ರಗಳ ಬಟವಾಡೆಯ ಕನಸು ಹೊಸೆಯುತ್ತ ಕಾಡು ಅಲೆಯುತಿದ್ದವನ ಅಶಾಂತ ಕಣ್ಣಲ್ಲಿ ಎಡ್ಹೊತ್ನಲ್ ಹುಟ್ದ್ ಅಡ್ಣಾಡಿ ಕನ್ಸು ನೀನು - ಉಲ್ಕೆ ಉದುರೋದ ಕಂಡ ಕಂಗಳ ಆ ಹೊತ್ತಿನ ಬಯಕೆ ನಿಜ್ಜ ಕೈಗೂಡುವುದಂತೆ - ಅಂಗಳದಂಚಿಗೆ ನಿದ್ದೆಗಣ್ಣಲ್ಲಿ ಕತ್ತಲ ಸೀಳಿ ಉಚ್ಚೆ ಹಾರಿಸುತ್ತ ನಿಂತ ಪೋರನ ತೋಳಲ್ಲಿ ಸುಳ್ಳೇ ರೋಮಾಂಚನ - ಆಮ್ಯಾಲೆ ಕಣ್ ಗುಡ್ಡೆ ತುಂಬಾ ನಿಂದೇ ತಕಧಿಮಿತಾ... ಹೆಸರೆಂತಾ ಇಡ್ಲಿ ಈ ಎದೆ ಮಾಳದ ತಲಬಾಗಿಲ ಅಲಂಕರಿಸಿದ ನೀನೆಂಬೋ ಆ ಭಾವ ಮೂರ್ತಿಗೆ...?
ಮತ್ತೀಗ -
ನೀ ಜೀವಿಸುತಿರುವ ಈ ಇದೇ ಕಾಲದಲ್ಲಿ, ನಿನ್ನ ನೆರಳು ಸರಿದಾಡಿದ ಇಲ್ಲಿನ ಈ ಇದೇ ನೆಲದಲ್ಲಿ ನಾನೂ ಬದ್ಕಿದ್ದೇನೇ ಎಂಬುವ ಅಸೀಮ ಖುಷಿಯೇ ನಾನಿನ್ನೂ ಬರೆಯದ ನನ್ನ ಅತ್ಯಾಪ್ತ ಕವಿತೆ... ಅದನ್ನೇ ಮತ್ತೆ ಮತ್ತೆ ಓದಿಕೊಳ್ತೇನೆ - ಹಂಗಂಗೇ ಸತ್ತೋಗುವಂಥಾ ಸಂಭ್ರಮ - ಹಗೂರ ಕಣ್ಹನಿಯ ಮಿಡಿತ... ಇಷ್ಟೇ - ಬದುಕಿನೆಡೆಗಿನ ಸಾವಿರ ತಕರಾರುಗಳಿಗೆ ಊಫಿ ಮಾಫಿ......
#ಕನ್ಸೂ_ನೀನೇ_ಕನಸಿಗಂಟಿದ_ಬೆಳಕಿನ_ಹುಡಿಯೂ_ನೀನೇ...
×××××
ರೇಖೆ: ಸುಮತಿ ದೀಪಾ ಹೆಗಡೆ |
ಹಾರಿ ಬಿಟ್ಟರೆ ಉಸಿರು ಬಯಲ ಗಾಳಿಗೆ ಸ್ವಂತ...
ಹಿಡಿದು ಕಾಯುವ ಪ್ರೀತಿ ಬಲೂನಿಗಂಟಿದ ಬಣ್ಣ...
ಕುಂಟು ನೆಪಗಳ ನಿರೀಕ್ಷೆ ಯಮುನೆ ಮಡುವಿಗೆ ಬಿದ್ದ ಹಾಲಬಿಂದಿಗೆ...
ನೀನೆಂದರಿಲ್ಲಿ ಬೆನ್ನ ಹಾಳೆಯಲಿ ಬೆಳದಿಂಗಳು ಗೀಚಿದ ಕೂಸುಮರಿ ಕುಸುರಿ...
#ಪ್ರತೀಕ್ಷಾ...
*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)
No comments:
Post a Comment