Thursday, March 28, 2019

ಗೊಂಚಲು - ಎರಡ್ನೂರ್ತೊಂಭತ್ತಾರು.....

ಬೆಳಕಿನಲ್ಲಿ ಕಳೆದೋದವನು.....

ಅವಳ ದಿನವಂತೆ - ಪ್ರಕೃತಿಯ ಅಂತಃಶ್ಯಕ್ತಿ, ಸಮಷ್ಟಿಯ ಸಾಕ್ಷೀಪ್ರಜ್ಞೆ..‌. ಬದುಕನ್ನು ಸಹನೀಯವಾಗಿಸುವಂತ ಎಲ್ಲಾ ಹೆಣ್ಣು ಜೀವಗಳಿಗೂ ಪ್ರೀತಿಯ ಶುಭಾಶಯ... ಖುಷಿಯಾಗಿರಿ ನೀವು ನಿಮ್ಮಂತೆ...
               __08-03-2019

↯↰↱↯↲↳↯

ಸುಗ್ಗಿಯೆಂದರೆ ಎದೆಗೂಡಿನ ಹಿಗ್ಗೇ ಅಲ್ಲವೇ...
ತೊಳೆಯಲಾಗದ, ತೊಡೆಯಲಾಗದ ಮುಗುಳ್ನಗೆಯ ರಂಗಲಿ ಎದೆಯ ಕೂಸನು ಮೀಯಿಸಿ...
ಬಾಂಧವ್ಯದ ನಗೆಯಲಿ ನಿತ್ಯ ಪ್ರೀತಿ ಬಣ್ಣದ ಹೋಳಿ...
#ಹಬ್ಬ...
                   ____ 21.03.2019

↯↰↱↯↲↳↯

ಯಾವ ಕವಿತೆಗೆ ಯಾವ ಕೊರಳೋ ಗಾಳಿ ಕೊಳಲಿನ ಕಂಪನ - ಇಲ್ಲಿನುಲಿಗೆ ಅಲ್ಲಿ ಮಿಡಿಯುವ ಎದೆ ಎದೆಯ ಏಕತಾರಿ ರಿಂಗಣ - ಕರುಳ ತುಂಬುವ ಪ್ರೀತಿ ಪಲುಕಿಗೆ ನೂರು ಭಾವಾಲಿಂಗನ - ಎನ್ನ ಹಾದಿಗೆ ನಗೆಯ ಬಣ್ಣವ ಎರಚಿದೆಲ್ಲರ ಕಕ್ಕುಲಾತಿಯ ವಿನಾಕಾರಣ ಸ್ಪಂದನ - ಆ ಎಲ್ಲ ಎದೆಗೂಡ ಮೂಲೆ ಮೂಲೆಯ ಬೆಳಗುತಿರಲಿ ಪ್ರೀತಿ ನಗೆಯದೇ ಸಾಲು ಸಾಲು ನೀಲಾಂಜನ...
#ಮತ್ತೆ_ಮತ್ತೆ_ಹೋಳಿ...
                                            ____ 22.03.2019

↯↰↱↯↲↳↯

ಪ್ರೇಮದ ಭಾಷೆ ಯಾವುದು...?
ಖಂಡಿತಾ ನಗುವೇ...
ಮತ್ಯಾಕೆ ಪ್ರೇಮಿಗಳ ಹಾದಿಯ ಕಣ್ಣ ತುಂಬ ಭರಿಸಲಾಗದ ನೋವು...??
ಅದು ಪ್ರೇಮಿಗಳ ಭಾಷೆ, ಪ್ರೇಮದ್ದಲ್ಲ...
!!!!
ಕೃಷ್ಣನ ಬೆರಳು ಮಿಡಿದ ರಾಧೆಯ ಉಸಿರು - ಕೊಳಲು ಪ್ರೇಮ...
ಉಪಾಸಕನ ಆಚೆಗೂ ಉಪಾಸನೆ ಕಾಲಕೂ ಜೀವಂತ - ನಾದ ವೇದ ಪ್ರೇಮ...
#ಕಲೆ...
↯↰↱↯↲↳↯

ಶೂನ್ಯದಷ್ಟು ನಿಖರಪೂರ್ಣವಾದ ಪ್ರೇಮವನ್ನು ಅಷ್ಟೇ ಪ್ರಾಕೃತಿಕವಾದ ಕಾಮದ ಸೊಗಡಿನಿಂದಾಗಿ ಪವಿತ್ರ ಮತ್ತು ಅಪವಿತ್ರ ಎಂದು ಬೇರ್ಪಡಿಸಿ ಆಡಿಕೊಳ್ಳೋ ಹೆಚ್ಚಿನ ಪ್ರೇಮಿಗಳ ಭಾವಾವೇಶ ಎಷ್ಟೊಂದು ಬಾಲಿಶ ಅನ್ನಿಸುತ್ತೆ... ತನ್ನ ನಿಯಂತ್ರಣವಿಲ್ಲದ ಅಹಂಭಾವ, ವಿಸ್ತಾರವಾಗದ ಅಂತರ್ಲೋಕ ಮತ್ತು ಸ್ವಭಾವಜನ್ಯ ಸಣ್ಣತನಗಳಿಂದಾಗಿ ತಾನು ಜೀವಿಸಿಯೇ ಇಲ್ಲದ ಪ್ರೇಮವನ್ನು ಕಳಕೊಂಡೆ ಅಂದುಕೊಂಡ ಪ್ರೇಮಿಯೊಬ್ಬ ಮಾತ್ರ ಪ್ರೇಮದ ಸಾವಿಗೆ ಕಾಮದ ಪಾವಿತ್ರ್ಯವನ್ನು ಪ್ರಶ್ನಿಸಬಲ್ಲನೇನೋ...
#ಸ್ವಮನಸಿಗೆ_ಅಭ್ಯಂಜನವಿಲ್ಲದೇ_ದೇವನ_ತಿಕ್ಕಿತಿಕ್ಕಿ_ತೊಳೆವ_ಜಗ...
↯↰↱↯↲↳↯

ಅವಳು ಗೊತ್ತಾ ನಿಂಗೆ...?
ಉತ್ತರ ಕಷ್ಟ - ಆಗೆಲ್ಲ ಹೌದು, ಇಲ್ಲಗಳ ನಡುಮಧ್ಯದ ಅಯೋಮಯ ಸ್ಥಿತಿ ನನ್ನಲ್ಲಿ... ಆದ್ರೆ ಅವಳಿಗೆ ನಾನು ಪೂರಾ ಪೂರಾ ಗೊತ್ತೆಂಬುದು ನನ್ನ ಯಾವತ್ತಿನ ಖುಷಿ...
#ಆತ್ಮಋಣ...

ಸ್ನೇಹವೆಂದರೆ ಏನು...??
ತಡವರಿಸದೇ ನಿನ್ನ ಹೆಸರ ಉಸುರಿದೆ ನಾನು...
#ಕತ್ತಲು_ಕತ್ತಲಿನಂಥವಳು...
↯↰↱↯↲↳↯

ಬಾಗಿಲ ಸಂದಿಯಲಿ ಬದುಕುಳಿದ ಕತ್ತಲ ಎದೆಗೆ ಕಿವಿಯಾನಿಸಿದೆ - ನಿಟ್ಟುಸಿರ ಬಿಸಿಯ ಭಾಷೆ ಕಿವಿ ಸುಟ್ಟಿತು, ನಗೆಯ ಬೆನ್ನಿನ ಮೌನ ಬೆಳಕಲ್ಲಿ ಮಿಂದು ಭಯ ಹುಟ್ಟಿಸಿತು...
#ಮಾತುಸತ್ತವರಮಾತು...

ಇಲ್ಲಿಂದ ಹೊರಟಾಗಿದೆ - ಅಲ್ಲಿಗಿನ್ನೂ ತಲುಪಿಲ್ಲ...
#ಹಾದಿಗೆ_ಮರುಳಾಗಿ_ತಿರುವಿನಲಿ_ನಶೆಯ_ಹೊದ್ದವನು...

ಎದೆ ಬಗೆವ ಈ ಮೌನ ತುಂಬಾ ತಣ್ಣಗಿದೆ....
ಪಿಸುನುಡಿಗಳು ಸತ್ತು ಕಾಲವೇ ಆಯಿತು...
#ಬೆಳಕಿನಲ್ಲಿ_ಕಳೆದೋದವನು...
↯↰↱↯↲↳↯

ನೆನಪು - ಮರೆವು - ಮರೆತಂತೆ ಮೆರೆವ ನೆನಪು - ನೆನಪನ್ನೇ ಅಣಕಿಸುವ ಮರೆವು - ಮರೆತೆನೆಂಬ, ಮರೆತೇನೆಂಬೋ ಭ್ರಮೆಯಲ್ಲಿ ನೆನಪ ಸಾಕುವ ವ್ಯಾಪಾರಿ ನಗೆ; ನಿದ್ದೆಯ ಸುಟ್ಟು ಇರುಳ ರಕ್ತ ಹೀರುವ ತಿಗಣೆಗಳು...
ಖಾಲಿ ಬೆಂಚಿನೆದುರು ಮಾತಿನ ಯಕ್ಷಿಣಿ ಸೋತು ಕೂತಾಗ, ಮರಳ ಗೂಡಿನಲಿ ಸಾಗರನ ಬಂಧಿಸಿದ, ಕಣ್ಣ ಗೋಳದಲಿ ತಾರೆಗಳ ಗುಪ್ಪೆ ಹಾಕಿದ ನೆನಪುಗಳು - ಮಳೆಯ ತೋಳಿನಲಿ ಮುತ್ತನೆಣಿಸಿದ್ದ ಕಾಲವ ಕದ್ದು ಮೆಲ್ಲುವ ಅವಳೆಂಬ ಯಾತನೆ...
ಮರೆತದ್ದೂ ಮರೆತೋಗುವಂಥ, ಎಲ್ಲಾ ಮರೆತೋಗುವ ಮರೆವಿನ ರೋಗವಿದೆಯಂತೆ - ಎಂಥಾ ಮಧುರ ಶಾಪ...
ಥಥ್ - ಒಮ್ಮೆ ನೆನಪು, ಒಂದೊಮ್ಮೆ ಮರೆವು ಸೃಷ್ಟಿಸಿಡುವ ಹಾದಿ ಬದಿಯ ಕಸದ ಗುಡ್ಡೆಗೆ ಬೆಂಕಿ ಇಡಬೇಕು - ಮತ್ತೆ ಹೊಸತಾಗಿ ಹುಟ್ಟಬೇಕು...
#ಚಿತೆ...

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)

No comments:

Post a Comment