Saturday, June 8, 2019

ಗೊಂಚಲು - ಮೂರು ಸೊನ್ನೆ ಮೂರು.....

ಸರ್ಪಸರಸ.....  

ಅಹ್...!!!
"ಕಣ್ಮುಚ್ಚೋ ಬೆತ್ತಲೆಗಿಂತ ಅಲಂಕಾರವುಂಟೇ ಇರುಳಿಗೆ..."
ಮೂಗುತಿ ಇಟ್ಟ ಮುತ್ತಿಗೆ ಉಸಿರ ಸದ್ದೇ ಢಮರುಗ...
ಕಣ್ಣ ಕಾಂಕ್ಷೆಗೆ ಅಡಗಲಾರದೆ ಶರಣು ಬಂದ ಮತ್ತ ಮಚ್ಚೆಗಳು...
ಅಣು ರೇಣು ಮೃಗ ವಾಂಛೆ - ಮೇರು ಮಥನಕೆ ದಾರಿ ತೋರೋ ನಾಚಿಕೆಯ ಬೆಳಕು...
ಕಣಿವೆ ಕುಲುಮೆಯಲಿ ಈಸು ಯುದ್ಧ - ಹೆಣಿಗೆ ತೋಳ್ಗಳ ತುಂಬಾ ಸುಖದ ಬಣ್ಣಗಳ ಸುರಿವ ಬಣ್ಣವಿಲ್ಲದ ಬೆವರು...
"ಗೆಲುವುದಲ್ಲದೆ ಇದು ಗೆಲ್ಲಿಸುವ ಆಟ..."
ಉಳಿದರೆ ಉಳಿಯಲಿ ಉತ್ಖನನದ ಗಾಢ ಕಲೆಗಳು ಪ್ರೇಮದ ಮೈಮೇಲೆ - ಹಗಲಿನ ಧ್ಯಾನಕೆ...
#ಜೀವೈಕ್ಯ_ಮಿಥುನರಾಗ...
🔀🔁🔃

ಮಳೆಯ ಭಣಿತಕ್ಕೆ ಖುಷಿಯ ತೋಳ ಕಸುವಿನ ಮತ್ತೇರಿ; ಮಳೆ ಬಿದ್ದ ಮರು ಘಳಿಗೆ ಮೈಮನಸಲರಳೋ ಮಲ್ಲಿಗೆಯ ನಶೆಗೆ ನಿನ್ನ ಹೆಸರು...
#ಕರಡಿ_ಹಸಿವು...
🔀🔁🔃

ನನ್ನ ದಿವ್ಯ ಏಕಾಂತವೆಂದರೆ ನಿನ್ನೊಡನಾಡುವ ಆತ್ಮಬಂಧೀ ಭಾವ ಸಾಂಗತ್ಯ...
#ಭೂಮಿ_ಭಾರ_ಹಕ್ಕಿ_ಹಗೂರ_ಕಣ್ಣ_ಹನಿಗಳು...
🔀🔁🔃

ದುಂಬಿ ಕಾಲಿನ ಹಸಿ ಧೂಳು, ಹೂ ಗರ್ಭದ ಹದ ಬಿಸಿ - ಪ್ರೇಮವೆಂದರೆ ಅಷ್ಟೇ, ಹೂ ಚಿಟ್ಟೆ ಮೌನ...
#ಸೃಷ್ಟಿ_ಸೌಗಂಧ...
🔀🔁🔃

ತುಂಟ ಸೆರಗು ಒಂಟಿ ಕಣ್ಣ ಮುಚ್ಚಿದೆ - ಇಣುಕೋ ಹರೆಯದ ಸಿರಿಯ ಭಾರ ಹೈದನೆದೆಯ ಚುಚ್ಚಿದೆ...
ಬೆಟ್ಟ, ಬಯಲು ಬಳಸಿ ಕಣಿವೆಯಾಳಕೆ ಜಾರೋ ಬಿಸಿ ಉಸಿರ ಉತ್ಸವ...😍😉
#ಕನಸಲ್ಲಿ_ಸರ್ಪಸರಸ...
🔀🔁🔃

ಆ ಬೇಲಿ ಮೂಲೆಯ ಹೂವು ಗಾಳಿರಾಯನ ಪಕ್ಕೆ ತಿವಿದರೆ ಈ ದುಂಬಿ ನಾಭಿಯಲಿ ಆಸೆ ಅರಳುವುದು ಶುದ್ಧ ಧ್ಯಾನ...

ಬೆಳುದಿಂಗಳ ತೋಪಿನಲಿ ಒಳಭಾವ ಉಮ್ಮಳಿಸಿ ಕವಿ ಕವಿತೆಯಾಗುವ ಪರ್ವ ಶುದ್ಧಾನುಶುದ್ಧ ದಿವ್ಯ ಮೌನ...
🔀🔁🔃

ಮುಕ್ಕರಿಸಿ ಮುರಿದು ನೆಲಕೆ ಬೀಳುತಿದೆ ಕರಿ ಮೋಡ ಹನಿಹನಿಯಾಗಿ ಒಡೆದು; ಒಳನಾಡಿಗಳ ಬಿಸಿ ಉಕ್ಕಿಸಿ ಸಡಿಲ ವಸನದಲಿ ತೋಳ್ದೆರೆದು ಕರೆದ ವಸುಧೆಯ ಮೋಹಕ ಮೋಹಕೆ ಸೋತು...
ಋತುಗಾನ ಸೆಳೆತಕೆ, ರತಿರಾಗ ಮಿಡಿತಕೆ, ಗುಡುಗುಡುಗಿ ಸರಸದಲಿ, ಮಿರಿ ಮಿಂಚಿ ಚಂದಾನ ಬೆಳಗಿ, ಮಡಿ ಕಳಚಿ ಮುಡಿ ಬಿಚ್ಚಿ, ಸಹಜ ಪ್ರೇಮವೆ ಪಲ್ಲಂಗವಾಗಿ ಪ್ರಕೃತಿ ತಾ ಮಿಳನ ಮೇಳನದಿ ಸಂಭ್ರಮಿಸುತ್ತದೆ - ಹಸಿದ ಬೀಜ ಸುಖದಿ ಸಿಡಿದು ಹಸಿರ ಚಿಗುರಾಗಿ ಅರಳಿ ಬರುವ ನಾಳೆಗೆ ನವೋದಯ ಸಂಲಗ್ನ ಸಂಭವಿಸುತ್ತದೆ...
ನಾನಿಲ್ಲಿ ಕತ್ತಲ ಕೋಣೆಯ ಗೋಡೆಗೆ ಮೆತ್ತಿಕೊಂಡು ಹಸಿದ ಹಲ್ಲಿಯಂತೆ ಲೊಚಗುಡುತ್ತೇನೆ - ಬೊಗಸೆಯಲಿ ಹನಿಗಳ ಹಿಡಿದು ಸೋಕಿ ಕಣ್ಣೀರ ತೊಳೆಯುತಿದ್ದ ಆ ಕಪ್ಪು ಹುಡುಗಿಯ ನೆನೆನೆನೆದು ಬಿಗಿವ ಕೊರಳ ಸೆರೆ ಬಿಡಿಸಿ ಕವಿಯಾಗಲು(?) ಹೆಣಗುತ್ತೇನೆ...
#ಮತ್ತೆಮಳೆ_ಒಂದುಹನಿಮೌನ...

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)

No comments:

Post a Comment