ಬೆಳಕ ಬಿತ್ತಿದ ಈ ಬದುಕ ಮೊದಲ ಗೆಳತಿಯೇ.....
(ಅಮ್ಮ ಅಂದರೆ ಅಮ್ಮ ಅಷ್ಟೇ... ಬೇರೆಲ್ಲ ಮಾತೂ ಬರಿ ಕ್ಲೀಷೆ ಅಷ್ಟೇ...)
ನಿನ್ನ ರಕ್ತವೇ ಅನ್ನವಾಗಿ ಈ ಜೀವ ಜಗಕೆ ಬಂತು...
ನಿನ್ನ ಕರುಳ ಮಮತೆಯೇ ಹಾಡಾಗಿ ತೊಟ್ಟಿಲ ತೂಗಿ ಉಸಿರ ತುಂಬಿತು...
ಸೆರಗ ತುದಿಯ ಮರೆಯಿಂದ ಭಯ ತೊರೆದು ಬೆಳಕಿಗೆ ಕಣ್ತೆರೆದೆ...
ಮೊದಲ ತೊದಲು ಹೆಜ್ಜೆಗೆ ನಿನ್ನ ಕಣ್ಣಂಕೆಯೇ ಶ್ರೀರಕ್ಷೆ...
ನಡಿಗೆಗೆ ಶಕ್ತಿ, ನುಡಿಗೆ ಯುಕ್ತಿ, ಜೀವನ ಯಾನಕ್ಕಿಷ್ಟು ಸ್ಪೂರ್ತಿ ಅದು ನಿನ್ನಿಂದ...
ಇಂದೀಗ ಅವಳ ಕಣ್ಣಲ್ಲೂ ನಾ ನಿನ್ನನೇ ಹುಡುಕುವಲ್ಲಿ ನನ್ನ ನಗುವಲ್ಲಿನ ಮಿಂಚು ನಿನ್ನಂದ...
ಅತ್ತದ್ದು ಮರೆಯೋಕೆ, ನಗೆಯ ಕನ್ನಡಕ ಧರಿಸಿ ಎದೆಯ ನೋವ ಭರಿಸೋಕೆ ನಿನ್ನಿರುವಿಕೆಯೇ ಕಾರಣ...
ನೀ ನಡೆದ ಹಾದಿ ನಾ ನಡೆಯಲಾರೆ - ನಿನ್ನ ಮುಡಿಯ ನೋವ ನಾ ಮುಡಿಯಲಾರೆ - ನೀ ತುಳಿದ ಧೂಳಲ್ಲಿ, ನಿನ್ನ ಕರುಣೆಯ ತೋಳಲ್ಲಿ ಅರಳಿದ್ದು ಈ ಬಾಳು - ಈ ಸತ್ಯವ ಮರೆಯಲಾರೆ...
ಹಿಮ್ಮಡಿಯ ಒಡಕಿನಲಿ ಹೆಪ್ಪುಗಟ್ಟಿರುವ ನಿನ್ನ ಹಾದಿಯ ಕಥೆಗಳು ದಾಖಲಾಗಲೇ ಇಲ್ಲ...
ಗೊಡ್ಡು ದನಕೂ ಅಕ್ಕರೆಯ ಕೈತುತ್ತನಿಡುವ ನಿನ್ನ ಪ್ರೀತಿಯ ಹರಿವಿನ ಹರಹು ನನ್ನೊಳಗೆ ಅರಗಲೇ ಇಲ್ಲ...
ನನ್ನದೊಂದು ಒಪ್ಪನೂ ಜಗದ ಬೀದಿಯಲಿ ಮೆರೆಸುವ, ಸಾವಿರ ತಪ್ಪುಗಳನು ಕದದ ಹಿಂದೆ ಮರೆಸುವ ನಿನ್ನ ಮಮತೆಯ ಸ್ವಾರ್ಥ ನಂಗೆ ಅರ್ಥವೇ ಆಗಲೊಲ್ಲದು...
ಅತ್ತದ್ದು, ನಕ್ಕದ್ದು, ಸೋತದ್ದು, ಗೆದ್ದದ್ದು, ಎಷ್ಟೆಲ್ಲಾ ಮೊದಲುಗಳಿಗೆ ನೀನೇ ಸಾಕ್ಷಿ...
ಇಂದಿಗೂ ಅಹಂ ಕಾಡದೆ ಅಳಬಹುದಾದದ್ದು, ಎಡವಿದ್ದನ್ನೂ ಗೆಲುವನ್ನು ಹೇಳಿಕೊಂಡಷ್ಟೇ ಧೈರ್ಯವಾಗಿ ಹೇಳಿಕೊಳ್ಳಬಹುದಾದದ್ದು, ಕಳಕೊಳ್ಳೋ ಭಯ ಕಿಂಚಿತ್ತೂ ಇಲ್ಲದೇ ರಚ್ಚೆ ಹಿಡಿದು ಜಗಳ ಕಾಯಬಹುದಾದದ್ದು ಅದು ನಿನ್ನ ಮಡಿಲಲ್ಲಿ ಮಾತ್ರವೇ...
ನಿಂಗೆ ಹಸಿವಾದರೆ ಮಾಣೀ ಊಟ ಮಾಡು ಅನ್ನುವ, ನಿಂಗೆ ಚಳಿಯಾದರೆ ಮಾಣಿಗೆ ಕಂಬಳಿ ಹೊದೆಸೋ ನಿನ್ನ ಮುಗ್ಧತೆಯ ಮುದ್ದು ಎಂದಿಗೂ ಅಚ್ಚರಿಯೇ ನನಗೆ...
ನನ್ನ ಮೊಬೈಲ್ ಕರೆಗಂಟೆಯಲಿ ನಿನ್ನ ಹೆಸರು ಕಂಡರೆ ಹೊಸ ಜಗಳಕ್ಕೆ ನಾಲಿಗೆ ತುರಿಸೋ ಸಂಭ್ರಮ ನನ್ನಲ್ಲಿ...
ನಿನ್ನ ಕನಸು ಕನವರಿಕೆಗಳೆಲ್ಲಾ ನನ್ನ ಸುತ್ತಲೇ ಸುತ್ತುವಾಗ ಸೊಕ್ಕು ಸುರಿವ ನನ್ನ ನಗುವಲ್ಲಿ ನೀನೇ ನೀನು...
ನಿನ್ನ ಮಾತೆಲ್ಲ ಮನದ ಮನೆಯದು, ನನ್ನ ನಡೆಯೆಲ್ಲ ಬುದ್ಧಿಯ ಕೈಯ್ಯಾಳು - ಆದರೂ, ಸಾವಿರ ಭಿನ್ನತೆಗಳ ಆಚೆ ನೀನು ಆಯಿ ನಾನು ಮಗರಾಯ...
ಹುಚ್ಚು ಹುಡುಗೀ ನಿನ್ನ ಹುಟ್ಟು ಹಬ್ಬವಂತೆ ಇಂದು - ಶುಭಾಶಯ ಹೇಳಲು ನಾ ಫೋನು ಮಾಡಿದ್ರೆ, ನಿದ್ದೆಗಣ್ಣಲ್ಲಿ ಎದ್ದು ಬಂದು ಮಾತಾಡುತಿದ್ದ ನಿನ್ನ ಮೇಲೆ ಇನ್ನಿಲ್ಲದ ಮುದ್ದು ನಂಗಿಲ್ಲಿ...
ಫೋನಲ್ಲೇ ಕೊಟ್ಟುಕೊಂಡ ಪಪ್ಪಿ ಬದುಕಿನ ದೊಡ್ಡ ಉಡುಗೊರೆ ಇಬ್ಬರಿಗೂ...
ಎನ್ನಾತ್ಮದ ಸಾಕ್ಷೀ ಪ್ರಜ್ಞೆಯೇ,
ಮತ್ತೇನಿಲ್ಲ -
ಈ ಬದುಕ ಮುನ್ನಡೆಯ ಎಕೈಕ ಉದ್ದೇಶ ನೀನು; ಬದುಕಿಗೆ ಮುನ್ನುಡಿ ಬರೆದವಳು - ನಿನ್ನೊಡನೆಯ ಮಾತು ಮಾತಿನ ಜಗಳ, ಮರಳಿ ಮರಳಿ ತೋರುವ ಮರುಳ ಮನಸಿನ ಮುನಿಸು ಎಲ್ಲವೂ ನಿನ್ನೆಡೆಗಿನ ಪ್ರೀತಿಯ ಮತ್ತೊಂದು ಮಗ್ಗುಲಷ್ಟೇ...
ಲವ್ ಯೂ ಕಣೇ ಹುಡುಗೀ... ❤
ಹ್ಯಾಪಿ ಹುಟ್ದಬ್ಬ ಆಯೀ...❤❤
ಅಮ್ಮ ಅಂದರೆ ಅಮ್ಮ ಅಷ್ಟೇ...
ಬೇರೆಲ್ಲ ಮಾತೂ ಬರಿ ಕ್ಲೀಷೆ ಅಷ್ಟೇ....
|
wah..wah.... ninnaayiya hutdabbakke ee barahakkinta udugore beka..!
ReplyDelete