Saturday, September 14, 2013

ಗೊಂಚಲು - ಎಂಬತ್ತು + ಆರು.....

ಹೀಗೆಲ್ಲ ಅನ್ನಬಹುದಾ.....

ಪ್ರೀತಿ – ಪ್ರೇಮ – ಒಲವು...
ಮೇಲ್ನೋಟಕ್ಕೆ ಮತ್ತು ಬಳಕೆಯಲ್ಲಿ ಮೂರೂ ಪದಗಳು ಒಂದೇ ಅರ್ಥ ಸೂಚಿಸುತ್ತವೆ... ಆದರೆ ಒಳಗಿಳಿಯುತ್ತ ಹೋದರೆ ಬೇರೆ ಬೇರೆಯಾಗಿಯೇ ದಕ್ಕುತ್ತವೆ...
ಹೌದು ಮೂರೂ ಪದಗಳ ಮೂಲ ಮತ್ತು ಸ್ಥಿರ ಭಾವ ಗೆಳೆತನವೇ – ಆದರೆ ಅಲ್ಲೆಲ್ಲ ದಕ್ಕುವ ಗೆಳೆತನದ ಸ್ತರ ಬೇರೆ ಬೇರೆ...

ಪ್ರೀತಿ – ಪ್ರೀತಿಯೆಂದರೆ ಸರ್ವವ್ಯಾಪೀ ಸ್ನೇಹದ ಮುಗುಳ್ನಗು...ಮಗುವಿಂದ ಹಿಡಿದು ಮುಪ್ಪಾನ ಮುದುಕರವರೆಗೆ ಯಾರೆಂದರೆ ಅವರಲ್ಲಿ - ಇರುವೆಯಿಂದ ಚಂದಿರನವರೆಗೆ ಯಾರೆಂದರೆ ಯಾರೆಡೆಗೂ – ಚಿಗುರು, ಇಬ್ಬನಿ, ಕಾಮನಬಿಲ್ಲು, ಒಂದೊಳ್ಳೆ ಪುಸ್ತಕ ಹೀಗೆ ಯಾವ ಜೀವ, ಯಾವುದೇ ವಸ್ತು ವಿಷಯದ ಮೇಲೂ ಮೂಡಬಹುದಾದ ಮುಗಳ್ನಗೆಯ ಸಂವಹನ... ಪ್ರೀತಿ ಒಟ್ಟೊಟ್ಟಿಗೇ ಸಾವಿರ ಮುಖಗಳಲ್ಲೂ ನಗಬಹುದಾದ, ನೀಡಬಹುದಾದ, ಹಂಚಿದಷ್ಟೂ ಹರಡಿಕೊಳ್ಳುವ ಹಿತವಾದ ಮಿತವಾದ ಸಸ್ನೇಹ ಭಾವ ಬಂಧ...

ಪ್ರೇಮ – ಪ್ರೇಮವೆಂದರೆ ಪೂಜೆ... ಅಲ್ಲಿ ಎದುರಿಗೊಂದು ಸ್ಪಷ್ಟ ಮೂರ್ತಿ ಇದೆ... ಅಲ್ಲಿ ಮಂತ್ರ, ತಂತ್ರ, ಅಲಂಕಾರ, ಅಹಂಕಾರ ಎಲ್ಲವೂ ಮಿಳಿತವೆ... ಪ್ರೇಮ ಅವೆಲ್ಲವನೂ ಬಯಸುತ್ತೆ... ಪ್ರೇಮದಲ್ಲಿ ಬೇಡಿಕೆಯಿದೆ, ಕೂಡಿಕೆಯಿದೆ, ನಂಬಿಕೆಯಿದೆ, ಮೂಢನಂಬಿಕೆಯೂ ಇದೆ... ಪ್ರೇಮ ಅವ್ಯಕ್ತ ಮನಸು ಮತ್ತು ವ್ಯಕ್ತ ದೇಹ ಎರಡೂ ಸಮಾನವಾಗಿ ಸ್ಪಂದಿಸಿ ಕಟ್ಟಿಕೊಳ್ಳೊ ಗೂಡು... ಪಾತ್ರಗಳು ಬದಲಾದಂತೆ ಒಂಚೂರು ಆಚೀಚೆಯೂ ಆದೀತು ಪ್ರೇಮ... ಅದು ಕೇವಲ ಇಬ್ಬರ ನಡುವಿನ, ಒಂದು ಸಮಯದಲ್ಲಿ ಒಬ್ಬರು ಒಬ್ಬರೊಂದಿಗೆ ಮಾತ್ರ ಪ್ರಾಮಾಣಿಕವಾಗಿ ಸವಿಯಬಲ್ಲ ಸವಿಭಾವ ಸಂವಹನ...

ಒಲವು – ಒಲವೆಂದರೆ ಆರಾಧನೆ... ಒಲವೆಂದರೆ ಮೌನ... ಒಲವೆಂದರೆ ಧ್ಯಾನ... ಒಳಗು ಅರಳುವಿಕೆ... ಒಳಗೇ ಹುಟ್ಟಿ, ಒಳಗೇ ಬೆಳೆದು, ನಮ್ಮೊಳಗನೇ ಅಮೂರ್ತಗೊಳಿಸಿ ಬೆಳಗುವ ಸೌಂದರ್ಯ ಲಹರಿ... ಒಲವೆಂದರೆ ಮೂರ್ತಿ, ಕೀರ್ತಿಗಳ ಹಂಗಿಲ್ಲದೆ ಎಲ್ಲ ಹಮ್ಮುಗಳ ತೊಡೆದುಕೊಂಡು ನಮ್ಮೊಡನೆ ನಾವೇ ನಡೆಸುವ ಸಂತೃಪ್ತ ಸಂವಹನ... ಒಲವೆಂದರೆ ಊರ ಹೊರಗಿನ ಯಾರೂ ಸುಳಿಯದ ಗುಡ್ಡದ ತುದಿಯ ಹನುಮನ ಗುಡಿಯ ನೀರವ ಮೌನದ ನಡುವೆ ನಾವೇ ಮೊಳಗಿಸಿದ ಘಂಟೆಯ ಸದ್ದಿನ ಸೊಬಗು...  ಒಲವು ಅಡಿಯಿಟ್ಟರೆ ಒಮ್ಮೆ ಮನಸೆಂಬುದು ಸದಾ ಹಗುರ ಹಗುರ... ಒಲವೆಂದರೆ ನಮ್ಮನೇ ನಮಗೆ ತೋರಿ – ಒಳಗಿನ ಹೊಟ್ಟುಗಳ ಹೊರ ತೂರಿ – ನಮ್ಮಿಂದಲೇ ನಮ್ಮ ಗಟ್ಟಿಯಾಗಿಸಿ, ಹಸಿರ ಹೊತ್ತ ಬೆಟ್ಟವಾಗಿಸುವ ಅವ್ಯಕ್ತ ಅನುಭಾವದನುಸಂಧಾನ...

ಎಲ್ಲರ ಬದುಕಲೂ ಪ್ರೀತಿ ಮುಗಳ್ನಕ್ಕು – ಪ್ರೇಮ ಫಲಿಸಿ – ಒಲವು ಲಾಲೈಸಲಿ... :)

%%%%%

ಮೌನ – ಮೌನವೆಂದರೆ ಮೇಲಿಂದ ಸರಳ ಗೋಚರ ಎನ್ನಿಸುವ ಆದರೆ ಅಷ್ಟು ಸುಲಭಕ್ಕೆ ವಿಶ್ಲೇಷಣೆಗೆ ಸಿಕ್ಕದ, ಆಗಾಗ ಬೇರೆ ಬೇರೆ ರೂಪಗಳಲಿ ಎದುರಾಗಿ ಮಿಡಿವ ಭಾವ... ಚಿರ ಮೌನಕೆ ಜಾರುವ ಮೊದಲು ಸಂಚಾರಿಯಾಗಿ ದಕ್ಕಿದಷ್ಟು ಸುಲಭಕ್ಕೆ ಸ್ಥಿರ ಜೀವನಾಡಿಯಾಗಿ ದಕ್ಕದ ಮನದಾಳದ ಭಾವ... 

ನಿಜದ ಮೌನವೆಂದರೆ ಮಾತಾಡದೇ ಇರುವುದಲ್ಲ... ಮೌನವೆಂದರೆ ಒಳಗಣ ಮಾತು - ಅಂತರಂಗದ ಮೃದಂಗ ನಾದ... ಮೌನವೆಂದರೆ ಗೋಡೆಯಲ್ಲ... ಮೌನ - ಮಾತು ಮಾತಿನ ನಡುವಿನ ಖಾಲಿ... ಖಾಲಿಯೆಂದರೆ ಅದು ಖಾಲಿಯಲ್ಲ – ಕಳೆದುಕೊಳ್ಳುತ್ತಲೇ ತುಂಬಿಕೊಳ್ಳುವ ಪ್ರಕ್ರಿಯೆ – ಹೊಸ ಉಬ್ಬರಕೆ ಮುನ್ನುಡಿ... ಮೌನವೆಂದರೆ ಬೇಲಿಯಲ್ಲ... ಬಯಲು – ಎಲ್ಲವನೂ ಒಳಗೊಳ್ಳುವ ಬಯಲು... ಮಗುವ ನಗೆಯ ಮೌನದಿಂದ ಹಿಡಿದು ನಗುವೊಂದು ಚಿರಮೌನಕೆ ಜಾರುವವರೆಗಿನ ನಡುವಿನ ಈ ಬದುಕು ಕೂಡ ಒಂದು ಸುದೀರ್ಘ ಮೌನವೇ... 

7 comments:

  1. ಪದೇ ಪದೇ ಓದಿಸಿಕೊಂಡ ಬರಹ.

    ReplyDelete
  2. chintanege hacchida baraha... tumbaa chennaagide...

    ReplyDelete
  3. ವಾಹ್..!! ಎಷ್ಟು ವಿಭಿನ್ನತೆ ಇದೆ.. ಒಳ್ಳೆಯ ವಿಚಾರವನ್ನು ಮುಂದಿಟ್ಟಿದ್ದೀರಿ. ತುಂಬಾ ಚೆನ್ನಾಗಿ ಬರೆದಿದ್ದೀರಿ
    -ಸುಗುಣ ಮಹೇಶ್

    ReplyDelete
  4. ಶ್ರೀವತ್ಸ, ಈ ಬರಹ ನನಗೆ ಬಹಳ ಇಷ್ಟವಾಯಿತು.. ಅದರಲ್ಲೂ ಮೌನದ ಬಗ್ಗೆ ಬರೆದದ್ದು ಹೇಳಲಾರದಷ್ಟು ಇಷ್ಟವಾಯಿತು...:)

    ReplyDelete
  5. ಶ್ರೀವತ್ಸ ಮನಮಿಡಿಯುವ ವ್ಯಾಖ್ಯಾನಗಳು. ಮನದೊಳಗಿನ ಆಳವಾದ ತುಲನೆಯಿಂದ ದಕ್ಕಿಸಿಕೊಂಡ ಭಾವಾನುವಾದದಂತೆ ದಕ್ಕಿದಂತವು ಇವು. ಹಿಡಿಸಿದವು :-)

    - ಪ್ರಸಾದ್.ಡಿ.ವಿ.

    ReplyDelete
  6. ಚಂದದ ಭಾವ ಬರಹ ,,
    ಪ್ರೀತಿ ಪ್ರೇಮದ ನಡುವ ಈ ಗೊಂದಲವ ನೀನಿಷ್ಟು ಸಲೀಸಾಗಿ ಬಗೆಹರಿಸ್ತೀಯ ಅಂತ ಅಂದುಕೊಂಡಿರಲೇ ಇಲ್ಲ ನಾ .

    ಒಲವ ಪ್ರೀತಿಯ ಬಗೆಗಿನ ಯಾರದೇ ಗೊಂದಲವಾದ್ರೂ ಬಗೆಹರಿಯುತ್ತೆ ಇದ ಓದಿದ ಮೇಲೆ .

    ಅಂದ ಹಾಗೇ ಕಟ್ಟಿಕೊಂಡಿರುವ ಮೌನದ ಬಗೆಗಿನ ಭಾವ ಮನ ಮುಟ್ತು.

    ReplyDelete