Tuesday, March 14, 2023

ಗೊಂಚಲು - ನಾಕು ನೂರಾ ಎಂಟು.....

ನಾಯಿ ಕಾಲಿನ ಹುಡುಗ.....

ಮಗುವಾಗಬೇಕೆಂದರೆ ಮೊದಲು ಬೆತ್ತಲಾಗಬೇಕು...
____ 'ಮನದ' ಬೊಮ್ಮಟೆ ನಗ್ನತೆ - ಮಗುತನದ ನಿಜ ಬೆಳಕು...
␥␦␥

ಪ್ರತಿ ಜೀವಕ್ಕೂ ಒಂದು ಚೆಲುವಿದೆ, 
ಹೌದು ಕಣೇ, 
ಜೀವಂತ ಅನ್ನಿಸೋ ಪ್ರತೀ ಜೀವಕ್ಕೂ ಒಂದು ಘನ ಚೆಲುವಿದೆ...
ಅಂತೆಯೇ,
ಚೆಲುವನ್ನು ಚೆಲುವಾಗಿ ತೋರುವುದೂ ಒಂದು ಚಂದ ಕಲೆ - ನಿನ್ನಾ ಆ ಜೀವ/ಜೀವನ ಪ್ರೀತಿಗೆ ನನ್ನೀ ರಸಿಕ ಜೀವ ಮನಸಾ ಸೋತಿದೆ... 
_____ ಜೀವದ ಚೆಲುವು ಶುದ್ಧ ಪ್ರಾಕೃತಿಕ - ಅದೇ ಜೀವದ ಚೆಲುವಿಗೆ ಭಾವದ ಬೆಳಕ ನೇಯ್ದು ಒಪ್ಪವಾಗಿ ತೋರುವುದು ವ್ಯಕ್ತಿತ್ವದ ಎರಕ...
␥␦␥

ಪ್ರಜ್ಞೆ ಕೆಲಸ ನಿಲ್ಲಿಸಿರುವಲ್ಲಿ ಸತ್ಯ ಹೇಳುವುದು ಹುಚ್ಚುತನವೇ ಇರಬೇಕು...
___ ಜಗದ ಅಮಲುಗಳೆದುರು ಮೂಕನಾಗಿರುವುದೇ ಲೇಸು...
␥␦␥

ನಾನೆಂಬ ಸಜೀವ ಸೋಲನೂ ನಿರಂತರ ಹೊತ್ತು ಮೆರೆದ ತೇರು...
ಮರುಳನ ಹೆತ್ತು ರಾಯನಂತಾಡಿಸಿದ ಮಡಿಲು...
____ ಆಯಿ ಅಂಬೋ ಎಂದೂ ಸೋಲದ ಪ್ರೀತಿ ಗದ್ದುಗೆ...
␥␦␥

ಸಾವಿತ್ರೀ -
ಊಟ ಮಾಡಿದ್ಯಾ ಅಂತ ಕೇಳಿ, ಹೊಟ್ಟೆ ಕಾಯ್ಸಡಾ ಅಂತ ಬೈದು ಎಷ್ಟ್ ದಿನ ಆತು ಹೇಳಿ ನೆನ್ಪಿದ್ದಾ ನಿನ್ಗೆ...
........ಭರ್ತಿ ಒಂಭತ್ತು ಮಾಸಗಳು...
____ ಸಾವು ಮೌನವಾಗಿ ಕೊಲ್ಲುತ್ತದೆ...


ಬದುಕು ಅರ್ಥವಾಗದಿದ್ದರೆ ಹೋಗಲಿ, ನಿದ್ದೆ ಕೊಲ್ಲುವ ಈ ನೋವಾದರೂ ಅರ್ಥವಾಗಬೇಕಲ್ಲ...
ಇಡಿಯಾಗಿ ಸಿಗದ ವಿಚ್ಛಿದ್ರ ಭಾವವೊಂದು ಧುತ್ತನೆ ಮಾತನೆಲ್ಲ ನಿವಾಳಿಸಿ ಹಾಕುವಲ್ಲಿ ಕಡು ಮೌನವೊಂದು ಗಂಟಲ ಮುಳ್ಳಾಗಿ ಚುಚ್ಚುತ್ತದೆ...
ಮೂಲ ಹುಡುಕಿದರೆ ಮಸಣದ ಮೂಲೇಲಿ ಚಂದ್ರನ ಹೆಣ ಕಾಯುತ್ತಾ ಕೂತ ನಾನೇ ಕಾಣುತ್ತೇನೆ...
ನನಗೇ ನಾನು ಸಿಗದ ಹಾದಿಯಲ್ಲಿ ಇರುಳ ಹಾಯುವುದು ಕಡು ಕಷ್ಟ...
____ ಮಾತನು ಕಸಿದುಕೊಂಡ ಬೆಳಕು, ಮೌನವ ಹುಟ್ಟಿಸದ ಸಾವು - ನಾನಿಲ್ಲಿ ಮುಖಬೆಲೆಯೇ ಅಳಿಸಿಹೋದ ಸವಕಲು ಪಾವಲಿ...
␥␦␥

ಹಿಂತಿರುಗಿ ನೋಡಲು ಭಯ - ನೀ ಕಾಣದೇ ಹೋದರೆ...
ಮುಂದೋಡಲೂ ಭಯವೇ - ನೀ ಸಿಕ್ಕಿಬಿಟ್ಟರೆ...
ನಿಂತಲ್ಲೇ ನಿಂತಿದ್ದೇನೆ ಕಾಲು ಕಟ್ಟಿದಂತೆ ಕೈಕಟ್ಟಿಕೊಂಡು...
___ ಪ್ರೀತಿ.‌‌..
␥␦␥

ನಾನೆಂದರಿಲ್ಲಿ ಇಕ್ಕಟ್ಟು ಬೀದಿಗಳ ಪರಿಶೆಗಳ ಜಂಗುಳಿಯಲಿ ಕಳೆದು ಹೋದವನು...
ಎದೆಗೇರಿದ ನಂಜನು ಜಾತ್ರೆ ಬೀದಿಯ ನಶೆಯ ಉಬ್ಬಸದಲಿ ಕಳೆದೇನೆಂಬ ಕುರುಡು ಹಂಬಲದ ಮಹಾ ಮರುಳನು...
ಎದುರು ಬಂದ ಅಪರಿಚಿತ ಕಂಗಳಿಗೆ ಹುಡುಕದೆಯೇ ಸಿಕ್ಕಿ ಪರಿಚಯಕೆ ಮರೆಯಾದ ‌ಗಾಂಪನು...
___ ಕನಸಿನ ಯೌವನವ ಯಾವುದೋ ಗಲ್ಲಿ ದೀಪದ ಬೆನ್ನಿಗಂಟಿಸಿ ಮರೆತು ಓಣಿ ಓಣಿ ಅಲೆಯುವ ನಾಯಿ ಕಾಲಿನ ಹುಡುಗ...
␥␦␥

ಕಾಲ ಚಲಿಸುತ್ತಲೇ ಇರುತ್ತದೆ...
ಕಾಲು ಸೋತವನ ಕಣ್ಣಲ್ಲಿನ ಕನಸೂ, ಶಲ್ಲಿಲ್ಲದ ಗಡಿಯಾರದ ಮುಳ್ಳೂ ಕಾಲ ಓಡುವುದಕ್ಕೆ ನಿಂತಲ್ಲೇ ನಿಂತ ಕರುಳಿನ ಸಾಕ್ಷಿಯಾಗುತ್ತವೆ...
ಯಾರೋ ನೊಂದು ಇಟ್ಟ ಶಾಪಗಳ ಮೂಟೆ ಬಿಚ್ಚಿಕೊಂಡ ಹಾಗೆ, ಹಸಿವಿಗೆಂದು ಅದೇ ಹೆಣೆದುಕೊಂಡ ಬಲೆ ಉರುಳಾಗಿ ಸುತ್ತಿ ಉಸಿರುಗಟ್ಟಿದ ಜೇಡನ ಹೆಣಗಾಟದ ಹಾಗೆ ಕಾಲು ನಿಂತ ಮರುಳನೊಬ್ಬ ನರಳಿದರೆ ಕಾಲ ಕತ್ತಲ ಕಣ್ಣಲ್ಲಿ ನೋಡುತ್ತಾ ಮುನ್ನಡೆಯುತ್ತದೆ...
ಕಾಲ ಚಲಿಸುತ್ತಲೇ ಇರುತ್ತದೆ; ಚಲಿಸುತ್ತಲೇ ಅಳಿಸುತ್ತದೆ ಮತ್ತು ಚಲನೆಯಿಂದಲೇ ಸಮಾಧಾನಿಸುತ್ತದೆ ಕೂಡಾ...
___ 'ನಾನು' ಉರುಳುವುದಕ್ಕೆ ಇಮಾರತ್ತುಗಳೂ ಪುರಾವೆಯೇ...

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು... :)

No comments:

Post a Comment