Tuesday, January 14, 2014

ಗೊಂಚಲು - ಒಂದು ಸೊನ್ನೆ ನಾಕು.....

ಅದೇ ಹಾಳೆಯ ಬಿಡಿ ಬಿಡಿ ಸಾಲುಗಳು.....
(ಮನಸಿದು ನಿಜಕೂ ಕಲ್ಲಾಗಿರಬಾರದಿತ್ತೇ...)

ಸಂದೇಶವೊಂದು ನನ್ನ ತಲುಪಿತ್ತು - ಗೆಳೆಯಾ, ನೀ ಮನಸಿಗೆಷ್ಟೊಂದು ಆಪ್ತ ಆಪ್ತ... 
ಬದುಕಿಗೇನೋ ಸಾರ್ಥಕ್ಯ ಭಾವ - ಆಹಾ ಸ್ನೇಹ ಬಂಧ ಎಷ್ಟು ಚಂದ ಚಂದ...

ಕನ್ನಡಿಯೆದುರು ನಿಂತೆ - ಭ್ರಮೆಗಳೆಲ್ಲದರ ಪೊರೆ ಕಳಚಿ ಮನಸು ಕಂಗಾಲು ಕಂಗಾಲು...

ಮಾತಲ್ಲಿ ನಾನು ಸದಾ ಮನಸಿನ ಒಳಮನೆಯ ಅತಿ ಮುಖ್ಯ ಅತಿಥಿ - ಒಡನಾಟಕೆ ಹಂಬಲಿಸಿದರೆ ಮನದ ಹೊರಮನೆಯ ಅಂಗಳವೇ ನನ್ನ ಮಿತಿ...

ಛೆಛೆ..!! 
ಅವರ ಆರೋಪಿಸುವುದಾ - ತಪ್ಪು ಅವರದೇನಲ್ಲ - ಊನಗಳೇ ಮೈವೆತ್ತ ವ್ಯಕ್ತಿತ್ವ ಪಕ್ಕ ಹೆಜ್ಜೆ ಹಾಕ ಬಂದರೆ ಭಯವಾಗದಿದ್ದೀತಾ - ಎಷ್ಟೆಲ್ಲ ಜನ ನಡೆವ ಹಾದಿ - ನೋಡಿದವರಾದರೂ ಏನೆಂದುಕೊಂಡಾರು - ಕಳಿಸಿದ ಸಂದೇಶವೇನೂ ಪೂರ್ತಿ ಸುಳ್ಳು ಅಂತನ್ನಿಸಲ್ಲ... (ಸುಳ್ಳು ಅಂತ ಮನಸು ಒಪ್ಪಲು ತಯಾರಿಲ್ಲ...) - ಹಾಗಂತ ನೋಡುಗರ ಕಣ್ಣ ಸಂದೇಹವ ಇವರಿಂದ ಸಹಿಸಲಾಗುವುದೂ ಇಲ್ಲ... (ಆದರೂ ಈ ನೋಡುಗರು ನನ್ನನ್ನು ಮಾತ್ರ ಸಂದೇಹಿಸುವುದರ ಗುಟ್ಟೇನೋ ಎಂಬುದು ಅರಿವಾಗುತ್ತಿಲ್ಲ... ಅವರೆದುರು ನಾ ಅಷ್ಟೊಂದು ಕೆಟ್ಟದಾಗಿ ವರ್ತಿಸುತ್ತೇನಾ..??) - ಹೆಳವ ಕನ್ನಡಿಯೆದುರು ನಿಂತಾಕ್ಷಣ ಸುಂದರಾಂಗನಾದಾನಾ - ಯೋಗ್ಯತೆ ಇಲ್ಲದೇ ನಿರೀಕ್ಷೆಗಳ ಬೆಳೆಸಿಕೊಂಡದ್ದು ನನ್ನದೇ ಮನದ ತಪ್ಪು ಬಿಡಿ...

ಅವರ ಮನದ ಭಾವ ಪ್ರಾಮಾಣಿಕವಾಗಿ ನನ್ನೆದುರು ಮಾತಾಗಿದ್ದರೆ ನಾನೇ ಒಂಚೂರು ಅವರಂತಾಗಿ ಅಂಗಳಕೂ, ಒಳಮನೆಗೂ ನಡುವಿನ ಗೋಡೆ ಒಡೆದು ಕಿಂಡಿಯನಾದರೂ ಕೊರೆಯಬಹುದಿತ್ತು - ಆದರೆ ಮೌನ ಅವರ ಮೂಲ ಸ್ವಭಾವ...

ನಾನೇ ಒತ್ತಾಯದಿಂದಾದರೂ ಮಾತಾಗೋಣವೆಂದರೆ ನನ್ನ ಬುದುಕು ನಂಗೆ ಕರುಣಿಸಿದ ಅಸಹಾಯ ಪರಿಸ್ಥಿತಿಗಳ ಒತ್ತಡ ಅದಕೂ ಎಡೆಕೊಡುತಿಲ್ಲ - ಬಿಡಿ ಭರವಸೆ ಮೂಡಿಸಲಾರದ ನನ್ನದೇ ಅಯೋಗ್ಯತೆಗೆ ಯಾರನ್ನ ಹೊಣೆ ಮಾಡಲಿ...

ಗಾವುದ ಗಾವುದ ದೂರ ನಿಂತು ಹತ್ತಿರ ಅನ್ನುವ 'ಮಾತು' ಕೇಳಿ ಅದೇ ಭ್ರಮೆಯಲ್ಲಿ ಬದುಕುವುದರಲ್ಲೇ ಸುಖವಿದೆಯೆನ್ನಿಸುತ್ತೆ - ಹತ್ತಿರ ಹೋಗಿ ಮಿತಿಯ ಸ್ಪಷ್ಟಪಡಿಸಿಕೊಂಬುದಕಿಂತ - ಮಿತಿಗಳ ಒಪ್ಪದ ನನ್ನ ಮನಸಿಗೆ - ಜತೆಗೇ ಮಿತಿಯ ಅರಿವಾದದ್ದೂ ನಿರಾಳ ಅಂತಲೂ ಅನ್ನಿಸುತ್ತೆ ಇನ್ನೊಮ್ಮೆ...

ಆದರೂ ಒಳಮನೇಲಿ ನನಗೆ ಮಾತ್ರ ಜಾಗ ಕೊಡಿ ಅಂದಿರಲಿಲ್ಲ ನಾನು – ನನಗೂ ಚೂರು ಜಾಗ ಇದ್ದಿದ್ದರೆ ಚೆನ್ನ ಅಂತಷ್ಟೇ ಅಂದುಕೊಂಡೆ – ಆತ್ಮೀಯ ಅಂದರಲ್ಲ, ಅಂದಂತೆ ನಡೆವ ಸ್ನೇಹಬಂಧವನಷ್ಟೇ ನಾ ಬಯಸಿದ್ದು ಅಲ್ಲಿ – ಆ ನನ್ನ ಬಯಕೆ ಇನ್ಯಾರದೋ ಕಣ್ಣಿಗೆ ಹೇಗೆ ಹೇಗೋ ಕಂಡರೆ ಬೇಸರವೇನಿಲ್ಲ ನಂಗೆ ಅದು ಅವರ ದೃಷ್ಟಿ ದೋಷ ಅಷ್ಟೇ – ಆದರೆ ಅಷ್ಟೆಲ್ಲ ಕಾಲ ಒಡನಾಡಿದ ಮೇಲೂ ಇವರಿಗೂ ನನ್ನೀ ಬಂಧದಲ್ಲಿ ಕಸರು ಕಂಡಿತಾದರೆ ನನ್ನನೇ ಅನುಮಾನಿಸಿಕೊಳ್ಳಬೇಕಲ್ಲವಾ ನಾನು...

ಒಳಮನೆಯ ನೋವು ನಲಿವುಗಳಲೆಲ್ಲ ನಿನ್ನದೇ ನೆನಪು, ಅಲ್ಲಿ ನೀ ಶಾಶ್ವತ ಭರವಸೆಯ ಆಪ್ತ ಸ್ನೇಹಿತ ಅಂದದ್ದು ನಾ ದೂರವಿದ್ದಾಗ – ಅಂಗಳಕೆ ಕಾಲಿಟ್ಟರೆ ಒಳಮನೆಯ ಮುಂಬಾಗಿಲಿಗೇ ಭದ್ರ ಬೀಗ – ಹೊಸ ಬಂಧಗಳೆಡೆಗೆ ಕೈಚಾಚಲೂ ಸಣ್ಣ ಭಯ ಈಗ...

ಆದರೂ ನಾ ಬದುಕಿದ ರೀತಿಗೆ, ನನಗಿರುವ ಯೋಗ್ಯತೆಗೆ, ಈ ಅಸಹಾಯ ಒಂಟಿ ಒಂಟಿ ದಾರಿಗೆ ಅಂಗಳದ ಆಥಿತ್ಯ ಮತ್ತು ಸಂದೇಶದ ಶಬ್ದಗಳ ಪ್ರೀತಿ ನೀಡಿದ್ದು ಕೂಡ ಅವರ ಹಿರಿತನವೇ – ನನ್ನ ವ್ಯಕ್ತಿತ್ವದಲ್ಲಿ ಅಷ್ಟೆಲ್ಲ ಊನಗಳಿದ್ದೂ, ನಿರ್ಭೀತ ನಂಬಿಕೆ ತುಂಬಲಾರದವನಾಗಿದ್ದರೂ ನನ್ನಂಥವನ ಜತೆಗೂ ಒಂದಿಷ್ಟು ನಕ್ಕರಲ್ಲ ಅದು ಆಶ್ಚರ್ಯ ಮತ್ತು ಅಧಿಕವೇ ನನ್ನ ಪಾಲಿಗೆ...

ಎಲ್ಲೋ ಏನೋ ಅಪಸ್ವರಗಳು ಮಿಡಿದಾಗ, ನಿರೀಕ್ಷೆ ಹುಸಿಯಾದಾಗ, ಇಟ್ಟ ನಂಬಿಕೆ ಸಣ್ಣಗೆ ಅಲುಗಾಡಿದಾಗ, ನನ್ನಂತರಂಗದ ಅರಿವಿದ್ದೂ (?) ಅರಿವೇ ಆಗದವರಂತೆ ಒಡನಾಡಿದಾಗ - ಆಗೆಲ್ಲ ಮನಸು ಕಂಗಾಲಾಗುವುದು ಸತ್ಯವೇ ಆದರೂ ಎಲ್ಲ ವೈರುಧ್ಯಗಳಾಚೆ ಈ ಸ್ನೇಹ ಎಷ್ಟು ಚಂದ...

ಬದುಕು ಇಷ್ಟಾದರೂ ನಗಲು ಕಾರಣರಾದ ಅಂತೆಲ್ಲ ಸ್ನೇಹಗಳಿಗೆ ಸಲಾಮ್...

***

ಬಾನ ಅಂಗಳದಿ ನನ್ನ ಪ್ರೀತಿಯ ಚಂದಿರನ ಹೆಣ ತೇಲೋ ರಣ ರಣ ಉರಿ ಹಗಲು – ಗುಡ್ಡದ ತುದಿಯ ಬೋಳು ಬಂಡೆ – ಕೂತು ಹಿಂದಿದ್ದ, ಇಂದು ತೊಟ್ಟು ಕಳಚಿಕೊಂಡ ಹಸಿರ ನೆನೆಸಿಕೊಳ್ಳೋ ನಾನು – ನಾಳೆಯೂ ಬರೋದು ಗ್ರೀಷ್ಮವೇ ಎಂಬ ಭಯ – ಯಾರೆಲ್ಲ ಜತೆಗಿದ್ದೂ ಮನಸನ್ನು ತಬ್ಬಿದ ಶಾಶ್ವತ ಒಂಟೊಂಟಿ ಭಾವ – ಪ್ರತಿಕ್ಷಣವೂ ಹಿಂಡುವ ಎಂದೂ ತುಂಬದ ಹಸಿದ ಮನಸಿನ ಭಾವಗಳನು ನಕ್ಕು ಅಣಕಿಸುವ ಅಸಂಬದ್ಧ ಉಸಿರ ಏರಿಳಿತ – ಮನದ ಅಂಗಳದ ತುಂಬಾ ರಾಶಿ ರಾಶಿ ಕನಸುಗಳ ಹೆಣಗಳ ಮೆರವಣಿಗೆ – ನಾನೊಬ್ಬ ಮೂಕ ಪ್ರೇಕ್ಷಕ...

***

ಮನಸಿದು ಮಲೆನಾಡು:
ಒಮ್ಮೆ ಬೋಳು ಬೋಳು – ಇನ್ನೊಮ್ಮೆ ಗಾಢ ಹಸಿರು – ಖಗ, ಮೃಗಗಳ ಘಲಘಲ – ನಡುವೆಯೇ ನೀರವ ಮೌನ – ಬೀಸು ಗಾಳಿ – ಸ್ಥಬ್ದ ಕಾಲ – ಅಲ್ಲಲ್ಲಿ ಬರಡು ಬಯಲು - ಒಳಗೆಲ್ಲೋ ಝರಿ ತೊರೆಗಳ ಜಲಲ ಧಾರೆ – ಉರಿವ ನಿಗಿ ನಿಗಿ ಹಗಲು – ಇರುಳ ಚಂಚಲ ಬೆಳದಿಂಗಳು –ಸೆಳೆವ ಮೋಡ, ಸುರಿವ ಮಳೆ – ಹಲ ಕನಸುಗಳ ಬೆಳೆ – ಜೀವ ರಕ್ಷಕ, ಜೀವ ಭಕ್ಷಕಗಳೆರಡೂ ಒಟ್ಟೊಟ್ಟಿಗೆ ಉಸಿರಾಡೋ ಜೀವದಾಯಿ – ತೊಟ್ಟು ಕಳಚಿದ ಹಳೆ ಎಲೆಯೇ ಗೊಬ್ಬರ ಹೊಸ ಚಿಗುರಿಗೆ – ನಿರ್ಮಲ – ನಿಗೂಢ – ಕೆಲವೊಮ್ಮೆ ನಿರ್ಭಾವದ ಠೇಂಕಾರ - ಕ್ಷಣ ಕ್ಷಣಕೂ ಹೊಸ ಹೊಸ ಜೀವ ಭಾವ ಸಂಚಾರ – ನೋವು, ನಗು, ಕನಸು, ಕನವರಿಕೆ... ಅದು ಮಲೆನಾಡ ಕಾಡು – ಅಂತೆಯೇ ನನ್ನ ಮನಸು ಕೂಡಾ...

6 comments:

  1. ತಮ್ಮಾ, ನಿನ್ನ ಮನಸಿನ ಚಂದ ಜಗತ್ತಿಗೆ ಒಂದೇಪೆಟ್ಟಿಗೆ ಸರಿಯಾಗಿ ಅರ್ಥವಾಗುವುದಿಲ್ಲ. ಯಾಕಂದ್ರೆ ಕೆಡುಕುಗಳೇ ಅಭ್ಯಾಸವಾಗಿರುವ ಈ ಕಾಲಘಟ್ಟದಲ್ಲಿ ಕತ್ತಲಿಗೆ ಹೊಂದಿಕೊಂಡ ಕಣ್ಣು ಬೆಳಕಿಗೆ ಬಂದೂ ಅಥವಾ ಉಲ್ಟಾನೇ ಅಂತಿಟ್ಟುಕೋ, ಆ ವಾತಾವರಣಕ್ಕೆ ಹೊಂದಿಕೊಳ್ಳಲು ಸ್ವಲ್ಪ ಹೊತ್ತು ತಗೊಳಲ್ಲ್ವಾ, ಅದೇ ಈ ಪ್ರಪಂಚದ ಪಾಡಾಗಿರುತ್ತದೆ. ಆದರೆ ಆ ಸ್ವಲ್ಪ ಹೊತ್ತಿನ ಅಂತರವನ್ನೂ ನಮ್ಮ ಅತಿಯಾದ ಪ್ರೀತಿಗೆ ಮತ್ತೆ ಪ್ರೀತಿಗಷ್ಟೇ ಹಂಬಲಿಸುವ ಮನಸ್ಸು ತಡೆದುಕೊಳ್ಳದೆ ಅಲ್ಲೊಂದು ಸಣ್ಣ ಸಂಶಯ ಹುಟ್ಟುಹಾಕಿಬಿಡುತ್ತದೆ. ಸಂಶಯ ನಿಂಗೇ ಗೊತ್ತಲ್ಲಾ, ಸಂಬಂಧದ ಆಯುಸ್ಸಿಗೆ ಮಹಾಮಾರಿ. ಹಾಗಾಗಿ ಎಲ್ಲ ಬಂಧಗಳಿಗೂ ಸ್ವಲ್ಪ ಹೊತ್ತು ಕೊಡುವಾ ಆಗದಾ, ಆ ಸ್ವಲ್ಪ ಹೊತ್ತು ಎಷ್ಟು ಉದ್ದ ಇರಬೇಕು ಅನ್ನೋದನ್ನ ನಿರ್ಧರಿಸುವ ಹಕ್ಕು ಮಾತ್ರ ನಿನ್ನ ಮನಸ್ಸಿನದೇ ಹೌದು. ಆಮೇಲೂ ಅಲ್ಲಿ ವಿಮುಖತೆ ಅಥವಾ ಮುಖ ತಪ್ಪಿಸುವ ಲಕ್ಷಣ ಕಂಡು ಬಂದರೆ ಅದು ಹಳತು ಹರಿದುಹೋಗಿ ಹೊಸದು ಬರಲಿಕ್ಕೆ ಜಾಗ ಆಗುತ್ತಿರುವ ಒಂದು ಒಳ್ಳೆಯ ವ್ಯವಸ್ಥೆ ಅಂದುಕೊಳ್ಳುವಾ... ನೀನು ಬರೆದ ಹೆಚ್ಚಿನ ಬರಹಗಳ ಭಾವದ ಹಾದಿ ನಾನೂ ಸಾಗಿಬಂದದ್ದೇ, ಮತ್ತೆ ಅಲ್ಲಿ ನಡೆದ ನನ್ನ ಮಂಥನ ನನಗೆ ಹೇಳಿದ ಸಮಾಧಾನವನ್ನೇ ನಿನಗೂ ಹೇಳ್ತಾ ಇದ್ದೇನೆ... ಇನ್ನು ಭಾವಗೊಂಚಲಿನ ಈ ಶಾಖೆಯ ಬಗ್ಗೆ ಹೇಳುವುದಾದರೆ ಮತ್ತೊಂದು ತುಂಬಾ ಆಪ್ತ ಅನಿಸುವ ಬರಹ..

    ReplyDelete
  2. ಬಲು ಆಪ್ತವಾಗಿದೆ! ಎಲ್ಲೋ ಒಮ್ಮೊಮ್ಮೆ ನೀ ನನ್ನ ಮನವನೂ ಓದಿ ಬರಿತಿಯೋ ಹೇಗೆ ಎಂಬ ಭಾವವೂ..

    ನಿನ್ನ ಯಾವುದೇ ಬರಹಕ್ಕೆ ಪ್ರತಿಕ್ರಿಯಿಸಲು ಆಗದಷ್ಟು ಮೌನ ಆವರಿಸುತ್ತದೆ!

    ಜೀವನ ಚಕ್ರದಲ್ಲಿ ಬಹುಶಃ ಭಾವುಕರಿಗೆಲ್ಲವೂ ಅನುಭವಕೆ ಇದೆಲ್ಲಾ ಬಂದೇ ಬರುತದೆ. ಒಂದಾದ ಮೇಲೊಂದು ಸಿಕ್ಕ ಅನುಭವ ಎಲ್ಲವನ್ನೂ ಅತಿಯಾಗಿ ಹಚ್ಚಿಕೊಳ್ಳದಂತೆ ನೀತಿ ಹೇಳಿ ಹೋಗುತ್ತದೆಯಾದರೂ ಮತ್ತೆ ಅದೇ ತಪ್ಪು ಘಟಿಸುತ್ತದೆ.. ಮತ್ತೆ ಭಾವುಕ ಚಕ್ರದ ಸೆಳೆತ.. ಕೊನೆಗೂ ಇದು ಸೂತ್ರಧಾರಿಯ ಲೀಲೆ ಅಂತ ಅರ್ಥವಾಗಿದೆ! ಅವನು ಕೊಟ್ಟದನ್ನು ಒಪ್ಪಿ ನೋವು ನಲಿವನ್ನು ಬಂದ ಹಾಗೆ ಸ್ವೀಕರಿಸುವುದು ಬಿಟ್ಟು ಬೇರೆ ದಾರಿಯಿಲ್ಲ.

    ನನಗೋ ನಲ್ವತ್ತಕ್ಕೆ ಆದ ಜ್ಞಾನೋದಯ ನಿನಗೀಗಾಗಲೇ ಆಗಿದೆ.

    ಪುಟ್ಟಮರಿ ಸದಾ ಖುಷಿಯಲ್ಲಿಡಲಿ ನನ್ನೊಡೆಯನು ನಿನ್ನ!

    ReplyDelete
  3. ಮಾತುಗಳಿಲ್ಲ ನನ್ನಲ್ಲಿ.. ಆಪ್ತರೆನಿಸಿಕೊಂಡವರು ಮೌನವಾಗಿದ್ದು ಬಿಟ್ಟರೆ, ಆ ಸಂದರ್ಭ ನೀ ಅಂಗಳದಲ್ಲೇ ಇದ್ದು ಬಿಟ್ಟರೆ, ಮನದ ಒಳಮನೆಯ ಕೋಣೆಗೆ ಕಿಂಡಿ ತೆಗೆದಾದರೂ ಒಳಸೇರು... ನಿನ್ನ ಅಗತ್ಯ ಬಹುವಾಗಿ ಇದ್ದೀತು ಅಲ್ಲಿ..

    ಬರಹ ಎಂದಿನಂತೆ ಭಾವದ ಶಾಯಿಯಲ್ಲಿ ಅದ್ದಿದ್ದು. ಇಷ್ಟವಾಗದೇ ಇದ್ದೀತೇ...?

    ReplyDelete
  4. Sooper.. >> ಬದುಕು ಇಷ್ಟಾದರೂ ನಗಲು ಕಾರಣರಾದ ಅಂತೆಲ್ಲ ಸ್ನೇಹಗಳಿಗೆ ಸಲಾಮ್...<<

    ReplyDelete
  5. ಶ್ರೀವತ್ಸ... ಎ೦ದಿನ೦ತೆ ಬಹಳ ಚನ್ನಾಗಿದೆ.

    ReplyDelete
  6. ಮನಸಿದು ನಿಜಕೂ ಕಲ್ಲಾಗಿರಬಾರದಿತ್ತೇ.

    ವತ್ಸಾ ನಮ್ಮ ಎಲ್ಲ ಭಾವಾನುಭವಗಳೂ ಆ ಕ್ಷಣಕ್ಕೆ ಮಾತ್ರ ಸೀಮಿತ..
    ಅದರಲ್ಲೆಷ್ಟೋ ಸ್ವಲ್ಪ ಹೆಚ್ಚಿಗೆ ಕಾಡುತ್ವೆ.. ನಮಗೆ ಈವತ್ತಿಗೆ ತುಂಬಾ
    ಅತಿಯಾಗಿ ಕಾಡುವ ಭಾವಗಳು ನಾಳೆಯಷ್ಟೊತ್ತಿಗೆ ತೀರಾ ಸಪ್ಪೆಯಾಗಿ
    ಏನೂ ಅನ್ನಿಸದಿರಬಹುದು...
    ನಮ್ಮ ಮನಸ್ಸು ಅನ್ನುವುದಕ್ಕೆ ಇದ್ದಿದ್ದು ಯಾವಾಗಲೂ ಬೇಡಾ...
    ನಿರ್ಲಕ್ಷ್ಯ ಮಾಡಿಬಿಡುತ್ತೆ....
    ಇಲ್ಲದ್ದಕ್ಕೆ ಅದು ಎಷ್ಟೇ ಚಿಕ್ಕದಾದರೂ ಹಪಹಪಿಸುತ್ತೆ.....


    ಒಳ್ಳೆಯ ಬರಹಕ್ಕೆ ಮತ್ತೊಮ್ಮೆ ತುದಿ ಬುಡವಿಲ್ಲದ ಕಾಮೆಂಟು.......
    ಸಹಿಸಿಕೊಳ್ಳಿ ದೊರೆ................

    ReplyDelete