Thursday, January 15, 2015

ಗೊಂಚಲು - ನೂರಾ ಮೂವತ್ತು ಮತ್ತೆಂಟು.....

ಜಂಗಮ ಭಾವಗಳು.....

ಸಾವನ್ನು ಮತ್ತೆ ಮತ್ತೆ ಖಚಿತ ಪಡಿಸಿಕೊಳ್ಳೋ ನರಕ ಸುಖಕ್ಕೆ ನಿತ್ಯ  ಸಾಕ್ಷಿಯಂತೆ ಕಾಣೋ ಉದ್ದುದ್ದ ಕಾರಿಡಾರು...
ಬಾಗಿಲಾಚೆ ಕಾಯುತ್ತ ಕುಂತ ಆತಂಕದ ಬೆಂಕಿ ಉರಿವ ಹತ್ತಾರು ಕಂಗಳು...
ಒಳ ಕೋಣೆಯಿಂದ ಭರವಸೆಯ ಮಾತೊಂದು ತೂರಿ ಬರಲೆಂದು ಕಾತರಿಸೋ ಹಸಿದ ಎಷ್ಟೆಲ್ಲ ಕಿವಿಗಳು...
ಅದು ವೈದ್ಯ ನಾರಾಯಣರ ಭವನ...
ವೈದ್ಯ ರಾಜ ನಮಸ್ತುಭ್ಯಂ...

###

ಬದುಕ ಪಾತಳಿಯಲ್ಲಿ ಎಡವಿಬಿದ್ದ, ಎದ್ದು ನಿಂತ ಹಸಿ ಬಿಸಿ ಅನುಭವಗಳೆಲ್ಲವ ಸೋಸುತ್ತ ನಡೆದೆ – ಅಲ್ಲೆಲ್ಲೋ ಮಸ್ತಕದಾಳದಲ್ಲಿ ಒಂಚೂರು ತಿಳುವಳಿಕೆಯ ಕಿಟಕಿ ತೆರಕೊಂಡಿತು...
ಕಿಟಕಿಯಿಂದ ಬರೋ ವಿಚಾರಗಳ ಕಿರು ಬೆಳಕ ಪ್ರಖರತೆಗೇ ಕಣ್ಣು ಕುಕ್ಕುವಾಗ ಅನ್ನಿಸುತ್ತಿದೆ ಈಗ – ಮುಗ್ಧತೆಯ ಹೆಸರು ಹೊದ್ದ ಅಜ್ಞಾನದ ಸೆಳವಿನಲ್ಲಿ ತೇಲಿದಷ್ಟು ಸುಲಭವಿಲ್ಲ ಜ್ಞಾನದ ಕಿರುದಾರಿಯಲಿ ತೆವಳುವುದು...!!!

###

- ಜಂಗಮನ ಜೋಳಿಗೆಯ ತುಂಬಾ ಹಾದಿ ತಪ್ಪಿದ ಕಥೆಗಳು...
- ಮತಿಹೀನ ಅಲೆಮಾರಿಯ ಕೈಯಲ್ಲಿ ಸ್ನೇಹದ ಭಿಕ್ಷಾಪಾತ್ರೆ...
- ಕರುಣೆಯ ಹಂಗಿಲ್ಲದ ಪ್ರೀತಿಯ ಒಡನಾಟದ ನಿರಂತರ ಹುಡುಕಾಟ...
- ಬದುಕಿದು ಬರೀ ವೈರುಧ್ಯಗಳನೇ ಮಾರುವ ವಿಚಿತ್ರ ತೆವಲಿನ ವ್ಯಾಪಾರೀ ಮಳಿಗೆ...


###

ಮನದ ಜಗುಲಿಯ ತುಂಬೆಲ್ಲಾ ಸೂತಕದ ಮುನ್ಸೂಚನೆಯ ಗಾಢ ವಾಸನೆ...
ಸಾವು ದೇಹದ್ದೇ ಆಗಬೇಕಿಲ್ಲ, ಭಾವದ್ದೂ ಆಗಬಹುದು...
ನೋವಿನ ತೀವ್ರತೆಯಲ್ಲಿ ಎರಡೂ ಸಮಾನ ಸ್ಥಾಯಿಯಲ್ಲಿ ನಿಲ್ಲುತ್ತವೆ - ಎದುರಲ್ಲೇ ನಿಂತು ಸಾವ ನೋಡುತ್ತಲಿರಬೇಕಾದವರ ಕಣ್ಣಲ್ಲಿ...

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)

2 comments:

  1. ಸೂಪರ್...
    Ultimate:
    'ಬದುಕಿದು ಬರೀ ವೈರುಧ್ಯಗಳನೇ ಮಾರುವ ವಿಚಿತ್ರ ತೆವಲಿನ ವ್ಯಾಪಾರೀ ಮಳಿಗೆ'

    ReplyDelete
  2. 'ಬದುಕಿದು ಬರೀ ವೈರುಧ್ಯಗಳನೇ ಮಾರುವ ವಿಚಿತ್ರ ತೆವಲಿನ ವ್ಯಾಪಾರೀ ಮಳಿಗೆ'

    -ಹೌದಾಲ್ಲವಾ?
    :-)

    ReplyDelete