Saturday, February 21, 2015

ಗೊಂಚಲು - ನೂರು + ನಲವತ್ತು + ಆರು.....

ಎಲ್ಲಾ ಅಯೋಮಯ.....
(ಏನು ಹೇಳಲು ಹೊರೆಟೆನೋ ನಂಗೇ ಅರಿವಿಲ್ಲ.....)

ಎಚ್ಚರಿಕೆಯಿಂದ ನಗಬೇಕು ಇಲ್ಲಿ – ಮುಖವಾಡಗಳು ಬಣ್ಣ ಬಣ್ಣದಲ್ಲಿರುತ್ತವೆ...

ಮುಳ್ಳಿನ ಗಿಡವೂ ಹಸಿರಾಗಿಯೇ ಇರುತ್ತದೆ ಮತ್ತು ಅದರಲ್ಲೂ ಹೂಗಳರಳುತ್ತವೆ...

ಗಡ್ಡ ಬಿಟ್ಟು ಅಥವಾ ಬಿಳಿ ಸೀರೆಯುಟ್ಟು ಧ್ಯಾನಕ್ಕೆ ಕೂತರೆ ಜ್ಞಾನಿಗಳಾದೇವಾ ಇಲ್ಲವಾ ಗೊತ್ತಿಲ್ಲ...
ಆದರೆ, ಖಂಡಿತಾ ಅರಿವೆಂಬುದು ಬದುಕಿನ ಮಳೆ, ಬಿಸಿಲು, ಬಿರುಗಾಳಿಗೆ ಎದೆಯೊಡ್ಡಿದವರ ಮನದ ಕಾಲಾಳು...
ಭಕ್ತನ ಕಾಣಿಕೆಯ ಬಾಳೆ ಹಣ್ಣು ತಿನ್ನೋ ಜ್ಞಾನಿ ಅನ್ನಿಸಿಕೊಂಡ ಸ್ವಾಮಿ ಖಂಡಿತಾ ಬಾಳೆಯ ಗಿಡ ನೆಟ್ಟು ಅದು ಫಲ ಕೊಟ್ಟಾಗ ರೈತ ಅನುಭವಿಸೋ ಖುಷಿಯ ಅನುಭವಿಸಿರಲಾರ...
ಕಾಯಕದ ಬೆಳಕಲ್ಲಿಲ್ಲದ ಕೈವಲ್ಯ ಜ್ಞಾನ ಗುಹೆಯ ಕತ್ತಲಲ್ಲಿದ್ದೀತಾ.?! 
ದುಡಿದು ಬೆವರಾದ ಕೊಳೆ ಬಟ್ಟೆಯವನಿಗಿರೋ ಜೀವನಾನುಭವ ಮಡಿಯ ಶುಭ್ರ ಪೀತಾಂಬರಧಾರಿಗೆ ಇದ್ದೀತೆನಿಸಲ್ಲ...

ಅಮ್ಮನ ಒದ್ದೆ ಕೈಯಲ್ಲೂ ರಂಗೋಲಿ ಹುಡಿ ಸರಾಗವಾಗಿ ಜಾರುತ್ತದೆ...
ನನ್ನ ಒರಟು ಕೈಯನೂ ಸುಡುವ ಬಿಸಿ ಹಂಚು ಅಮ್ಮನ ಮೃದು ಕೈಯಲಿ ಇಕ್ಕಳದ ಹಂಗಿಲ್ಲದೇ ಒಲೆಯಿಂದ ಕೆಳಗಿಳಿಯುತ್ತೆ...!!!
ಅಮ್ಮನ ಹಣೆಯ ಬೆವರ ಹನಿ – ಅಪ್ಪನೆದೆಯ ಒದ್ದೆ ರೋಮ ಹೇಗೆ ಬದುಕಬೇಕೆಂಬ ಸಾವಿರ ಕಥೆ ಹೇಳುತ್ತವೆ...
ಆದರೆ ಅವರೆಂದೂ ಪ್ರವಚನ ಕೊಟ್ಟಿದ್ದನ್ನ ಕೇಳಿಲ್ಲ...

ಜೀವಿಸಿ ಬಿಡಬೇಕು ರಾಕ್ಷಸ ಕರಡಿಯ ರತಿಯ ತೀವ್ರತೆಯಲ್ಲಿ ಭೂತ, ಭವಿಷ್ಯಗಳ ಹಂಗಿಲ್ಲದೆ ಇದ್ದದ್ದು ಇದ್ದಂತೆ ಈ ಘಳಿಗೆಯಲಿ...

ಹುಟ್ಟಿಲ್ಲದೆ ದೋಣಿಯ ನದಿಗಿಳಿಸಿದ ಮೇಲೆ ತೇಲಲೆ ಬೇಕು ನದಿ ತೇಲಿಸಿದ ಹಾಗೆ...

ಹೆಗಲ ಮೇಲೆ ಹೆಣ ಹೊತ್ತಾಗಲೇ ಇಲ್ಲಿನ ಸಕಲ ನಶ್ವರತೆಯೂ ಅರ್ಥವಾಗಿ ಬದುಕಿನೆಡೆಗೆ ಅಪಾರವಾದ ಹುಚ್ಚು ಮೋಹ ಹುಟ್ಟಿಬಿಟ್ಟಿತು...  

ಯಾರದೋ ಘೋರಿಯ ಮೇಲೆ ಅವರವರ‍್ಯಾರೋ ನೆಟ್ಟ ನಿಂಬೆಯ ಗಿಡಕ್ಕೆ ಅದ್ಹೇಗೋ ಮಲ್ಲಿಗೆ ಬಳ್ಳಿಯೊಂದು ಹಬ್ಬಿದೆ – ಇದೀಗ ಮಸಣದ ಮೂಲೆಯಲಿ ಮಲ್ಲಿಗೆ ಅರಳಿದೆ – ಸಾವಿನ ವಾಸನೆಯ ಜೊತೆ ಬೆರೆತ ಮಲ್ಲಿಗೆ ಕಂಪು...

ಕಿಟಕಿಯಾಚೆ ಕಾಂಬ ಲೋಕ ಮಹಾ ಮಾಯಕ ರೂಪ...
ಕುತೂಹಲದ ಎಣ್ಣೆ ಉರಿದು ಹೊಳೆವ ಕಣ್ಣ ದೀಪ...
ಮಿತಿಗಳ ಮೀರುವಾಸೆಯಲಿ ಉರಿವ ಮನದ ತಾಪ...
ನಾವೇ ನೆಟ್ಟುಕೊಂಡ ಕಂಬಿಗಳೊಳಗಿನ ಬದುಕಿದು ಯಾವ ದೇವನ ಶಾಪ...

ದನಿ ಇಂಪಿರುವ ಮಾತ್ರಕ್ಕೆ ಅಳಲೇ ಬಾರದೆ ಕೋಗಿಲೆ...?

ಎಲ್ಲ ಗೊಂದಲಗಳಾಚೆ ನಗುವೆಂಬುದಿದ್ದರೆ ಅದು ಸಾವೇ ಇರಬೇಕು...

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)

5 comments:

  1. ತುಂಡು ಭಾವಗಳು ಪರಿಪೂರ್ಣವಾಗಿದೆ.

    ReplyDelete
  2. ಪ್ರತಿ ಸಾಲು ಒಂದಕ್ಕಿಂತ ಒಂದು ಚಂದಗೆ ಅರಿವಿನ ಪಾಠ ಮಾಡುತ್ತದೆ .. ಇಷ್ಟವಾಯ್ತಪ್ಪ ನಂಗಂತು....

    ReplyDelete
  3. ದುಡಿದು ಬೆವರಾದ ಕೊಳೆ ಬಟ್ಟೆಯವನಿಗಿರೋ ಜೀವನಾನುಭವ ಮಡಿಯ ಶುಭ್ರ ಪೀತಾಂಬರಧಾರಿಗೆ ಇದ್ದೀತೆನಿಸಲ್ಲ...
    ಅಮ್ಮನ ಹಣೆಯ ಬೆವರ ಹನಿ – ಅಪ್ಪನೆದೆಯ ಒದ್ದೆ ರೋಮ ಹೇಗೆ ಬದುಕಬೇಕೆಂಬ ಸಾವಿರ ಕಥೆ ಹೇಳುತ್ತವೆ...
    ಜೀವಿಸಿ ಬಿಡಬೇಕು ರಾಕ್ಷಸ ಕರಡಿಯ ರತಿಯ ತೀವ್ರತೆಯಲ್ಲಿ ಗತ, ಭೂತಗಳ ಹಂಗಿಲ್ಲದೆ ಇದ್ದದ್ದು ಇದ್ದಂತೆ ಈ ಘಳಿಗೆಯಲಿ...
    ಯಾರದೋ ಘೋರಿಯ ಮೇಲೆ ಅವರವರ‍್ಯಾರೋ ನೆಟ್ಟ ನಿಂಬೆಯ ಗಿಡಕ್ಕೆ ಅದ್ಹೇಗೋ ಮಲ್ಲಿಗೆ ಬಳ್ಳಿಯೊಂದು ಹಬ್ಬಿದೆ –.........
    ಒಂದಕ್ಕಿಂದ ಒಂದು ಇಷ್ಟವಾಯ್ತು :)

    ReplyDelete
  4. ಜೀವಿಸಿ ಬಿಡಬೇಕು ರಾಕ್ಷಸ ಕರಡಿಯ ರತಿಯ ತೀವ್ರತೆಯಲ್ಲಿ ಭೂತ, ಭವಿಷ್ಯಗಳ ಹಂಗಿಲ್ಲದೆ ಇದ್ದದ್ದು ಇದ್ದಂತೆ ಈ ಘಳಿಗೆಯಲಿ... ಬರೆಯುತ್ತಿರು.ಹಾಗೆ ಬದುಕುತ್ತಿರು ಸ್ನೇಹೀ..

    ReplyDelete
  5. ಕಾಯಕದ ಬೆಳಕಲ್ಲಿಲ್ಲದ ಕೈವಲ್ಯ ಜ್ಞಾನ ಗುಹೆಯ ಕತ್ತಲಲ್ಲಿದ್ದೀತಾ.?!

    ಕಾಡಿತು.. ಮತ್ತೆ ಮತ್ತೆಓದಿಕೊಂಡೆ..

    ReplyDelete