Thursday, February 5, 2015

ಗೊಂಚಲು - ನೂರಾ ನಲವತ್ತೆರಡು.....

ಮತ್ತಿಷ್ಟು ಖಾಲಿ ಖಾಲಿ ಭಾವಗಳು.....

ಪ್ರತೀ ಖುಷಿಗೂ ಖಂಡಿತಾ ಒಂದು ಅಂತ್ಯ 'ಇದ್ದೇ' ಇದೆ...
ಅಂತೆಯೇ ಪ್ರತೀ ವೇದನೆಗೂ ಕೂಡಾ ಅಂತ್ಯ ಇರುವುದಂತೆ - 'ಅಂತೆ' (?)...
ನಂಬದೇ ವಿಧಿಯಿಲ್ಲ ಬಿಡಿ...

;;;

ದೃಷ್ಟಿ ಇಂಗಿದರೂ ನನ್ನ ಕಣ್ಣ ಗುಡ್ಡೆಗಳ ಮೇಲೆ ಮನಸ ಆಸರೆಯಿಂದ ಕಲ್ಪನೆಯ ಕುಂಚ ಬಳಸಿ ಕನಸ ಬಣ್ಣ ಬಳಿದು ನಿನ್ನ ಚಿತ್ರವೊಂದ ಬಿಡಿಸ ಬಯಸುತ್ತೇನೆ...
ಇನ್ನೇನು ಕೊನೆಯಲ್ಲಿ ಆ ಚಿತ್ರಕ್ಕೆ ಕಂಗಳ ಬರೆದು ಜೀವ ತುಂಬಬೇಕು; ಅಷ್ಟರಲ್ಲಿ ನೆನಪುಗಳೆಲ್ಲ ಹನಿಗಳಾಗಿ ನನ್ನ ಕುರುಡು ಕಣ್ಣಲ್ಲಿ ತುಳುಕಿ ಬರೆದ ಚಿತ್ರವೆಲ್ಲ ಕಲೆಸಿ ಹೋಗುತ್ತೆ...
ದೃಷ್ಟಿಹೀನವಾದರೂ ಮನದ ಭಾವ ರೂವಾರಿಗಳಾದ ಈ ಕಂಗಳು ಭಾವಹೀನ ಅಲ್ಲವಲ್ಲ...
ನೀನೆಂದರೆ ನನ್ನೊಳಗೆ ನಾ ಸದಾ ಹುಡುಕೋ ಖುಷಿಯ ಆಕಾಶ ಬುಟ್ಟಿ...

;;;

ಆತ್ಮ ಸಂಗಾತಗಳೇ -
ನೂರಾರು ವಿಧಗಳ ಬಣ್ಣಗಳ ಸೃಜಿಸೋ ಬೆಳಕಿನಂಥ ಬದುಕು – ಎಲ್ಲಾ ಬಣ್ಣಗಳನೂ ನುಂಗಿ ತೇಗುವ ಕತ್ತಲಿನಂಥ ಸಾವು ಎರಡೂ ಒಂದೇ ಎದೆಯ ಕೋಣೆಯಲಿ ತಬ್ಬಿ ಮಲಗಿವೆ...
ಅವುಗಳ ಅನೈತಿಕ (?) ಸರಸೋನ್ಮಾದ ಸೃಷ್ಟಿಸುವ ಸಂಬಾಳಿಸ ಹೋದಷ್ಟೂ ಕೆರಳಿ ನಿಲ್ಲುವ ವಿಕಾರ ಭಾವಗಳೆಲ್ಲದರ ಮೊದಲ ಬಲಿ ನಾನೇ...
ನೀವೂ ಬಲಿಯಾಗುವ ಮುನ್ನ ದೂರವಾಗಿಬಿಡಿ...

;;;

ಸ್ನೇಹಗಳೇ - 
ವ್ಯಕ್ತಿತ್ವದ ವೈರುಧ್ಯಗಳು, ವಿಚಾರ ಭಿನ್ನತೆಗಳೆಲ್ಲ ಕೇವಲ ಭಿನ್ನಾಭಿಪ್ರಾಯಗಳಷ್ಟೇ ಆಗಿರುವವರೆಗೂ ಪ್ರತಿದಿನವೂ ‘ಮಾತು’ ಒಡನಾಟದ ಉತ್ತುಂಗದ ಉತ್ಸವ – ಅಲ್ಲಿ ಜಗಳವೂ ಒಂದು ಮನರಂಜನೆಯ ಗಿಲಕಿಯಾಟ... 
ಒಂದ್ಯಾವುದೋ ಭಿನ್ನಾಭಿಪ್ರಾಯ ಒಟ್ಟು ವ್ಯಕ್ತಿತ್ವದೆಡೆಗೇ ಬೇಸರ, ಕ್ರೋಧಗಳಾಗಿ ಬದಲಾದ ಘಳಿಗೆಯ ಬಿಂದುವಿನಾಚೆ ‘ಮಾತು’ ಮೌನದರಮನೆಯ ಜೀತದಾಳಿನ ಶವ ಶೃಂಗಾರ – ಅಲ್ಲಿ ಸರಸವೂ ಬಂಧದ ಕೃತಕ ಉಸಿರಾಟ ಅಷ್ಟೇ...
ಅತಿ ಪ್ರಾಮಾಣಿಕತೆ ಕೆಲವೊಮ್ಮೆ ತುಂಬಾನೆ ತುಟ್ಟಿಯಾಗುತ್ತೆ ಅನ್ಸುತ್ತೆ – ಒಳಗೇ ಸುಡುವ ಅಪ್ರಾಮಾಣಿಕ ಮೌನವೇ ಹಿತವಿತ್ತು ಅನ್ನಿಸುವ ಹಾಗೆ...

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)

2 comments:

  1. ಇಂಥಾ ಪೋಸ್ಟೊಂದ ಓದಿದ ಮೇಲೆ ಲೈಕೊತ್ತಲೇಬೇಕು ಅನಿಸುವುದು ಅಂತೆ ;-)

    ReplyDelete
  2. ನೀನೆಂದರೆ ನನ್ನೊಳಗೆ ನಾನು ಸದಾ ಹುಡುಕೋ ಖುಷಿಯ ಆಕಾಶ ಬುಟ್ಟಿ..
    -ಹೌದಲ್ಲವಾ ಖುಷಿಯನ್ನು ನಮ್ಮೊಳಗೆ ನಾವೇ ಕಂಡುಕೊಳ್ಳಬೇಕು.. ನಗುವ ಹುಟ್ಟಿಸಬೇಕು :)

    ಮೂರರದ್ದೂ.. ಮೂರು ಆಯಾಮ..
    ಚಂದ ಎಂದಿನಂತೆ.. :)

    ReplyDelete