Friday, February 13, 2015

ಗೊಂಚಲು - ನೂರಾ ನಲವತ್ತೈದು.....

ಸುಮ್ಮನೇ ಒಂದಷ್ಟು ಮಾತು.....

ಆ ದಾರಿಯ ತಗ್ಗು ದಿಣ್ಣೆಗಳಲ್ಲಿ ನಡೆವಾಗ ಆ ಅಜ್ಜಿ ಮೆಲ್ಲಗೆ ತಾತನ ಕೈ ಹಿಡಿಯುತ್ತಾಳೆ. ಬೆಸೆದ ನಡುಗುವ ಕೈಗಳಿಂದ ಶಕ್ತಿ ಸಂಚಾರದ ಆಸರೆ ಯಾರಿಂದ ಯಾರಿಗೆ ಎಂಬುದು ಅರಿವಾಗದ ಮಾಗಿದ ಅಕ್ಕರೆಯ ಕಾಳಜಿ. ಪ್ರೇಮವೆಂದರೆ ಇದೇ ಮತ್ತು ಇಷ್ಟೇ ಅಲ್ಲವಾ - ಪ್ರೇಮ ದೈವೀಕ ಅನ್ನಿಸೋದು ಇಂಥ ಪುಟ್ಟ ಪುಟ್ಟ ಕ್ಷಣಗಳ ಸಾಂಗತ್ಯದಲ್ಲೇ ಅಲ್ಲವಾ ಅಂತನ್ನಿಸಿ ಯಾವುದೋ ಹಿಗ್ಗಿನಿಂದ ಪಕ್ಕ ತಿರುಗಿದರೆ ನನ್ನ ಕಪ್ಪು ಹುಡುಗಿಯ ಕಡುಗಪ್ಪು ಕಂಗಳಲ್ಲಿ ತಂಪಾದ ತೆಳು ನಾಚಿಕೆ... 

@@@

ಒಂದು ಸ್ನೇಹ ಬಂಧ...
ಭಾವ ಮತ್ತು ಒಡನಾಟ ಅದರ ಎರಡು ಬೆಸುಗೆಗಳು...
ಭಾವ – ಅದು ಒಂಟಿಯಾಗಿಯೇ ಆದರೂ ನೂರು ಕಾಲ ನಡೆಯಬಲ್ಲ ಅಂತರಂಗದ ಒಡನಾಡಿ...
ಒಡನಾಟ – ಒಂಟಿಯಾಗಿ ಹತ್ತು ಹೆಜ್ಜೆಗಳನೂ ನಡೆಯಲಾರದ ಹೆಳವ...
‘ಸ್ನೇಹದ ಪಲ್ಲಕ್ಕಿಯ ಮೇಲೆ ಕೂತ ನಿರ್ವ್ಯಾಜ್ಯ ಪ್ರೀತಿ, ಅಭಿಮಾನಗಳೇ’ ಭಾವದ ಅಧಿದೇವತೆಗಳು...
ಒಡನಾಟ ತಾನು ‘ಕ್ರಿಯೆಗೆ ಪೂರಕವಾದ ಆಪ್ತ ಪ್ರತಿಕ್ರಿಯೆಯ’ ಅಡಿಯಾಳು...
ಭಾವ – ನಮ್ಮೊಳಗೆ ನಾವೇ ನಮಗೆ ಬೇಕಾದಂತೆ ಸಿಂಗರಿಸಿ ಕಾಪಿಟ್ಟುಕೊಳ್ಳಬಹುದಾದ ಎದೆಯ ಹಾಡು...
ಒಡನಾಟ – ನಾನೆಂಬುದು ನಾವಾಗಿ ನಕ್ಕು ಸಲಹಿಕೊಂಡು ಹಾಡಬೇಕಾದ ಜುಗಲ್ ಬಂಧಿ...
ಭಾವ ಒಂಟಿ ಮನದಲೂ ಉಸಿರಾಡಬಲ್ಲ ಮೌನ ಸಂಭಾಷಣೆ...
ಒಡನಾಟವೆಂದರೆ ಎರಡು ಮನಗಳ ಭಾವದ ಅಭಿವ್ಯಕ್ತಿಯಾದ ಮಾತು, ಕಥೆ, ವ್ಯಥೆಗಳ ವಿನಿಮಯ...
ಭಾವ ತನ್ನೊಳಗೇ ತಾನು ಬೆಳೆಯಬಲ್ಲ, ಅಳಿಯಲೂ ಬಲ್ಲ ಪ್ರೀತಿಯೊಂದನೇ ನೆಚ್ಚಿಕೊಂಡ ಆತ್ಮದ ಒಳಸೆಲೆ...
ಒಡನಾಟದ್ದು ದೊಡ್ಡ ಬಳಗ - ಪ್ರೀತಿ, ಅಭಿಪ್ರಾಯ, ಭಿನ್ನಾಭಿಪ್ರಾಯ, ಅಹಂ (ಇಗೋ), ಅಹಂಕಾರ, ಅಲಂಕಾರ ಹೀಗೆ ಎಷ್ಟೆಷ್ಟೋ ಆಕಾರ, ವಿಕಾರಗಳೆಲ್ಲ ಅದರ ಒಳಮನೆಯ ಒಕ್ಕಲೇ...
ಮನೆಯ ಯಾಜಮಾನ್ಯ ಯಾರದಿದೆ ಎಂಬುದರ ಮೇಲೆ ಒಡನಾಟದ ಅಳಿವು ಉಳಿವು ನಿರ್ಧರಿತ...
ಯಜಮಾನಿಕೆ ಪ್ರೀತಿಯ ಕೈತಪ್ಪಿತೋ ಎಂಥ ಆತ್ಮ ಸಾಂಗತ್ಯದ್ದೇ ಆದರೂ ಒಡನಾಟದ ಉಸಿರುಗಟ್ಟಿತೆಂದೇ ಅರ್ಥ...
ಭಾವದರಮನೆಗೆ ಆ ಭಾವದೆಡೆಗಿನ ಸೆಳೆತವೊಂದೇ ಅಧಿನಾಯಕ...
ಪ್ರೀತಿ ಪ್ರಧಾನವಾದ ಭಾವ ಮತ್ತು ಸೂಕ್ತ ಪ್ರತಿಕ್ರಿಯೆಗಳ ಒಡನಾಟ ಎರಡೂ ದಕ್ಕುವುದಾದರೆ (?) ಆ ಬಂಧದ ಸೌಂದರ್ಯವೇ ಬೇರೆ...
ಪ್ರೀತಿ ಅಭಿಮಾನದ ಸಾಂಗತ್ಯದಲ್ಲಿ ಒಡಮೂಡಿದ ಎಷ್ಟೋ ಸ್ನೇಹ ಬಂಧಗಳು ಒಡನಾಟದ ಹಾದಿಯಲ್ಲಿ ಪ್ರೀತಿಯ ಪ್ರತಿಕ್ರಿಯೆಗಳ ಸಾಂಗತ್ಯ ತಪ್ಪಿ ಕೇವಲ ಭಾವದ ಒಂಟೊಂಟಿ ನಡಿಗೆಯಲ್ಲಿ ಕಾಲ ತಳ್ಳುವುದು ಅನುಭವವೇದ್ಯ ಸತ್ಯ...
ಪ್ರತಿಕ್ರಿಯೆಗಳ ಸಾಂಗತ್ಯ ತಪ್ಪಿದ್ದು ಯಾವ ಕಡೆಯಿಂದ ಎಂಬುದು ನಗಣ್ಯ – ತಪ್ಪಿದ್ದು ಯಾವುದೋ ಒಂದು ಕಡೆಯಿಂದಲೇ ಆಗಿದ್ದರೂ ಪರಿಣಾಮ ಒಟ್ಟು ಬಾಂಧ್ಯವ್ಯದ ಮೇಲೇ...
ಆತ್ಮ ಸಾಂಗತ್ಯವಾಗಿ ಕೊನೆಗಾಲದವರೆಗೆ ಸಾಗಬಹುದಾಗಿದ್ದ ಎಷ್ಟೋ ಬಂಧಗಳ ನಡುದಾರಿಯಲ್ಲೇ ಕಳಕೊಂಡಾದ ಮೇಲೆ ಮೂಡಿದ ಅರಿವೆಂದರೆ - ಭಾವ ಇಲ್ಲದ ಒಡನಾಟ, ಒಡನಾಟಕ್ಕೆ ಕಾವು ನೀಡದ ಭಾವ ಎರಡೂ ಅಪೂರ್ಣವೇ...
ಅಲ್ಲಿ ನಗುವೆಂಬುದು ಮತ್ತದೇ ಕೃತಕ ಉಸಿರಾಟ ಸಾಧನ...
ಭಾವಕ್ಕೆ ತಕ್ಕ ಒಡನಾಟದ ಒಲವೂ ದಕ್ಕಿದರೆ ಸುಮ್ಮನೆ ಆ ಬಂಧದೊಂದಿಗೆ ನಡೆದುಬಿಡುವುದೊಳಿತು – ಯಾವ ತಕರಾರೂ ಮಾಡದೆ, ಎಂಥ ತಂಟೆಯನೂ ಹೂಡದೆ...

@@@

ಅಲ್ಲೆಲ್ಲೋ ಕೂತವರ ಮೌನ 'ಧ್ಯಾನ' ಆಗಿರದೇ ಅದವರ 'ಸಾವೂ' ಇರಬಹುದು...
ಸಾವೆಂದರೆ ದೇಹದ್ದು ಮಾತ್ರವೇ ಆಗಿರಬೇಕಿಲ್ಲ...

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)

4 comments:

  1. ‘ಸ್ನೇಹದ ಪಲ್ಲಕ್ಕಿಯ ಮೇಲೆ ಕೂತ ನಿರ್ವ್ಯಾಜ್ಯ ಪ್ರೀತಿ, ಅಭಿಮಾನಗಳೇ’ ಭಾವದ ಅಧಿದೇವತೆಗಳು...
    Hats off...

    ReplyDelete
  2. ಸೂಪರೋ.. ಅಜ್ಜ, ಅಜ್ಜಿ ಉದಾಹರಣೆ ಯಾಕೋ ಸಖತ್ತಿಷ್ಟ ಆಗೋತೋ...

    ReplyDelete
  3. ಚೆನ್ನಾದ ಭಾವಗಳು .... :) ನನಗೆ ಮೊದಲ ಐದೂವರೆ ಸಾಲುಗಳು ತುಂಬಾನೇ ಇಷ್ಟವಾಯ್ತು... ವರ್ಷ ಕಳೆದಂತೆ, ಸಾಂಗತ್ಯ , ಪ್ರೀತಿ ಮಾಗಿದಾಗಿನ ಬೆಚ್ಚನೆ ಭಾವಗಳು ಕೆಲವೇ ಸಾಲಿನಲ್ಲಿ ವ್ಯಕ್ತವಾಗಿದೆ.... :)

    ReplyDelete
  4. ಭಾವ ಮತ್ತು ಒಡನಾಟಗಳ ಒಳವನ್ನು ದಕ್ಕಿಸಿಕೊಳ್ಳವ ಪ್ರಯತ್ನದಲ್ಲಿರುವಾಗಲೇ ಕಡೆಸಾಲು ತಟ್ಟನೇ ನಿಲ್ಲಿಸಿಬಿಟ್ಟಿತ್ತು.

    ಅಂತ್ಯಗಳು ಯಾವತ್ತೂ ಹೀಗೇಯಾ..?!
    ನೀ ಬರೆದ ಕಡೆ ಸಾಲಂತೆ ?!

    ReplyDelete