Tuesday, February 21, 2012

ಗೊಂಚಲು - ಇಪ್ಪತ್ತು ಮತ್ತೇಳು....

ಈವರೆಗೂ...!!!
ಉಂಡ ಬದುಕ ಬುತ್ತಿ.....


ಕನ್ನಡಿಯೆದುರು ಕೀಳರಿಮೆಯಾಗಿ...
ಹೆಣ್ಣಿನೆದುರು ಕಾಮವಾಗಿ...
ರೋಗಗಳ ನೆಚ್ಚಿನ ಗೂಡಾಗಿ...
ಮನದಾಸೆಗಳ ನೀಸಲಾರದ ಅಸಹಾಯ ನಿಟ್ಟುಸಿರ ಸ್ಥಾವರವಾಗಿ...
ಬದುಕೆಲ್ಲ ಇನ್ನಿಲ್ಲದಂತೆ ಕಾಡಿದ ಈ ದೇಹವೆಂಬ ಮೂಳೆ ಮಾಂಸಗಳ ಹಂದರ...
ಉಸಿರು ಚೆಲ್ಲಿ ಕೊರಡಾದ ಮೇಲಾದರೂ
ಒಂದಿಷ್ಟು ಉಪಯೋಗವಾದೀತೆಂಬ ಬಯಕೆಯಿಂದ ದೇಹದಾನಿಯಾದೆ...
ಇದ್ದೀತು - ಸತ್ತ ಮೇಲೂ ಬದುಕಿರುವ ಬಯಕೆ..!!!

                                        *\/*)(s)(s)(s)(*\/*

ಬದುಕೊಂದು ದ್ವಂದ್ವ..
ಬದುಕಿ ಸಾಧಿಸಿದ್ದೇನು...???
ಬದುಕಿ ಸಾಧಿಸಲಾಗದ್ದೇನು...???



ಒಂದು ಕ್ಷಣ - ಬದುಕು ದೀರ್ಘವಾಯ್ತೇನೋ ಎಂಬ ನೋವ ಭಾವ...
ಮರುಕ್ಷಣ - ಬದುಕು ನಂಗೆ ನನ್ನ ಅರ್ಹತೆಗಿಂತ ಹೆಚ್ಚಾಗೇ ಒಲವ ಕರುಣಿಸಿದೆಯೇನೋ ಎಂಬ ಖುಷಿಯ ಭಾವ...
ಈ ಕ್ಷಣದ ನೋವು - ಮರುಘಳಿಗೆ ನಲಿವು...
ಇದೇ ಬದುಕಿನ ಚೆಲುವೇನೋ..!!!



                                      """@@@"""


ಸತ್ತ ಕನಸುಗಳ ಘೋರಿಯ ಮೇಲೆ ಕುಳಿತು ಬದುಕಿನ ದಿನಗಳನ್ನೆಣಿಸುತ್ತಾ ದೇಹದ ಸಾವಿಗೆ ಕಾಯುವ ಯಾತನಾದಾಯಕ ನಿರೀಕ್ಷೆಯ ಬದುಕಿನ ಬಗ್ಗೆ...


ಸಾವು ಬರುವ ದಾರಿಯತ್ತ ಕಣ್ಣು ನೆಟ್ಟು
ನಗೆಯ ಎಣ್ಣೆ ಬತ್ತಿದ ದೊಂದಿ ಹಿಡಿದು
ಅಕಾಲದಲ್ಲಿ ಸತ್ತ ಭೂತ ಭವಿಷ್ಯಗಳ ಮೋಹದ ಘೋರಿಯ ಮೇಲೆ ಕೂತು
ವರ್ತಮಾನದ ಬದುಕನ್ನು ಪ್ರಯತ್ನಪೂರ್ವಕವಾಗಿ ತಳ್ಳುತ್ತಿದ್ದೇನೆ...



ಸಾವು : ಕರುಣೆಗೆ ಕುರುಡು - ಖುಷಿಯ ಕೇಕೆಗೆ ಕಿವುಡು...


ಎಂಥ ವಿಸ್ಮಯ.
ಈಗಿದ್ದು ಈಗಿಲ್ಲದಂತಾಗುವ ವೈಚಿತ್ರ್ಯ. 
ಮನುಷ್ಯ ಎಷ್ಟೆಲ್ಲ ಬೆಳೆದರೂ, ಏನೆಲ್ಲ ಸಾಧಿಸಿದರೂ, ವೈಜ್ಞಾನಿಕವಾಗಿ - ವೈಚಾರಿಕವಾಗಿ ಪ್ರಕೃತಿಗೇ ಎದುರಾಗಿ ಏನೇನೆಲ್ಲ ವಿಕ್ರಮಗಳನ್ನು ತನ್ನದಾಗಿಸಿಕೊಂಡರೂ, ಇನ್ನೂ ಬೇಧಿಸಲಾಗದ ಒಂದು ವಿಸ್ಮಯವೆಂದರೆ ಸಾವು.
ಸಾವನ್ನು ಬೇಧಿಸೋದಿರಲಿ ಅದಕ್ಕೊಂದು ಪರಿಪೂರ್ಣವಾದ ವ್ಯಾಖ್ಯಾನವನ್ನೂ ನಮ್ಮಿಂದ ಕೊಡಲಾಗಿಲ್ಲ ಈವರೆಗೂ.
"ಸಾವೆಂದರೆ ನಮ್ಮನ್ನು ಹೊರತುಪಡಿಸಿ ಉಳಿದಂತೆ ಪ್ರಪಂಚವೆಲ್ಲ ಹಾಗೇ ಇರುವುದು."
ಇದು ನಾನೋದಿದ ಸಾವಿನ ಬಗೆಗಿನ ಒಳ್ಳೇ ವ್ಯಾಖ್ಯಾನ.
ಅದು ಯಂಡಮೂರಿ ವೀರೇಂದ್ರನಾಥರ ಮಾತು.


ಹೃದಯ ಬಿಕ್ಕಳಿಸುತ್ತದೆ - ಕನಸುಗಳು ಸತ್ತ ಮೇಲೂ ಬದುಕಿರುವುದಕ್ಕಾಗಿ...
ಪ್ರಜ್ಞೆ ಸಂತೈಸುತ್ತದೆ - ಹೊಸ ಕನಸುಗಳ ಹೆಕ್ಕಿ ತರುವೆನೆಂದು...
ಆದರೂ 
ಸತ್ತ ಕನಸುಗಳ ಬದುಕಿರುವ ನೆನಪುಗಳ ದಾಳಿಯಿಂದ ತಾಳುವುದೆಂತು..???


ಒಂದು ವೇಳೆ ಇಲ್ಲದ ದೇವರನ್ನು ಇದ್ದಾನೆಂದು ನಂಬಿ ಎಂದಾದರೊಮ್ಮೆ ಆತನನ್ನು ಪ್ರಾರ್ಥಿಸುವುದೇ ಆದರೆ - ನೋವು ಮತ್ತು ಸಾವನ್ನು ಅನಿರೀಕ್ಷಿತವಾಗಿ ಸುಳಿವಿಲ್ಲದೇ ಬಂದೆರಗುವಂತೆ ಮಾಡೆಂದು ಬೇಡಿಕೊಳ್ಳುತ್ತೇನೆ.
ಕಾರಣ - ಅನಿರೀಕ್ಷಿತವಾದ ಆಕಸ್ಮಿಕ ನೋವು ಮತ್ತು ಸಾವನ್ನಾದರೂ ಅರಗಿಸಿಕೊಳ್ಳಬಹುದೇನೋ ಆಗಲೀ ಸುಳಿವು ನೀಡಿ ಬರುವ ನೋವು, ನೋಟೀಸ್ ಕೊಟ್ಟು ಬರುವ ಸಾವು ಅವಕ್ಕಾಗಿ ಕಾಯುವವನನ್ನು ತುಂಬ ಹಿಂಸೆಗೀಡು ಮಾಡುತ್ತವೆ.
ನೋವು ಬರುತ್ತದೆಂದು ಗೊತ್ತು.
ಬರುವ ನೋವಿನ ಪ್ರಮಾಣ ಮತ್ತು ಅದು ತರುವ ಯಾತನೆ ಎಂಥದ್ದು ಎಂದು ತಿಳಿಯದೇ ನೋವು ಬರುವವರೆಗೆ ಕಾಯುತ್ತ ಒದ್ದಾಡುವುದು ತುಂಬ ಕಷ್ಟ.
ಇನ್ನು ಸಾವು - ಹತ್ತಿರದಲ್ಲೇ ಇದೆ ಎಂದು ಗೊತ್ತು, ಹೀಗೇ ಬರಬಹುದೆಂಬ ಮಾಹಿತಿಯೂ ಸಿಕ್ಕಿ, ಇರುವ ಆಸೆಗಳನ್ನು ಕೊಂದು, ಕಂಡ ಕನಸುಗಳನ್ನು ಹೂತು, ಬರಲಿರುವ ಸಾವಿಗಾಗಿ ನಿಸ್ಸಹಾಯಕನಾಗಿ ಕಾಯುವುದು ನಿಜಕ್ಕೂ ಘೋರ.
ಇನ್ನು ನಗುವುದಕ್ಕೆಂದೇ ಹುಟ್ಟಿದವನಂತಿರುವ, ನಗುವು ಅಭ್ಯಾಸವಾಗಿ ಹೋಗಿರುವ ವ್ಯಕ್ತಿಗಾದರೆ ಅದು ಇನ್ನೂ ಕಷ್ಟ.
ಯಾಕಂದ್ರೆ ಆತನಿಗೆ ಅಳುವ ಅವಕಾಶವೂ ಇಲ್ಲ.
ಅತ್ತು ಹಗುರಾಗೋಣ ಅಂದುಕೊಂಡರೆ, ಸ್ವಭಾವಜನ್ಯವಾದ ನಗು ಹಾಗೂ ಆ ನಗು ಸೃಷ್ಟಿಸಿಕೊಟ್ಟ ಇಮೇಜ್ ಆತನನ್ನು ಎಲ್ಲರೆದುರು ಅಳದಂತೆ ತಡೆಯುತ್ತದೆ.
ಆತನದೇನಿದ್ದರೂ ಎದೆಯೊಳಗೇ ಬಿಕ್ಕುವ ಮೌನ ರೋದನ.
ಸಾವಿಗೊಂದು ಸೌಂದರ್ಯ ತಂದುಕೊಡುವ ವ್ಯರ್ಥ ಪ್ರಯತ್ನ.


ಪ್ರಜ್ಞಾಪೂರ್ವಕವಾಗಿ ಕೊಂದ ಆಸೆಗಳು, ಅರಳುವ ಮೊದಲೇ ಕಮರಿಹೋದ ಕನಸುಗಳು, ಬರುವ ಸಾವಿನ ಭಯ, ಅದಕ್ಕೂ ಮುಂಚೆ ಅನುಭವಿಸಬೇಕಾಗಬಹುದಾದ ನೋವಿನ ಯಾತನೆಯ ಕಲ್ಪನೆ ಎಲ್ಲ ಸೇರಿ ಇರುವ ನಾಲ್ಕು ದಿನಗಳನ್ನೂ ಖುಷಿಯಿಂದ ಕಳೆಯದಂತೆ ಮಾಡಿಬಿಡುತ್ತವೆ.
ಎಂಥ ಘಟ್ಟಿ ವ್ಯಕ್ತಿತ್ವದವನಾದರೂ ನೋವು ಮತ್ತು ಸಾವಿಗಾಗಿ ಕಾಯಬೇಕಾದಾಗಿನ ಯಾತನೆಯೆದುರು ಆಗೀಗಲಾದರೂ ಮಂಡಿಯೂರಲೇಬೇಕು.
ಸಾವಿನೆದುರು ಎಂಥ ಅಹಂಕಾರವೂ ತಲೆಬಾಗಲೇಬೇಕು.


ನಗೆಯು ಯಾಂತ್ರಿಕವಾಗುವುದಕ್ಕಿಂತ ದೊಡ್ಡ ಯಾತನೆ ಇನ್ನೇನಿದೆ.
ಕನಸು ಕಾಣಲು ಧೈರ್ಯ ಮೂಡದಂತಹ ಮನಸಿನೊಂದಿಗೆ ಜೀವಿಸುವುದು ಸುಲಭ ಸಾಧ್ಯವಾ..???
ಮೈಮನಗಳಲಿ ಸಿಡಿದೇಳುವ ವಿಧವಿಧದ ಸಹಜ ಸುಂದರ ಆಸೆಗಳನ್ನೂ ಮೇಲೇಳದಂತೆ ಹಾಗೇ ಗರ್ಭದಲ್ಲೇ ಹಿಸುಕಿ ಹೂಳುವುದು ಹೇಳಿದಷ್ಟು ಸುಲಭವಾ..???
ಅದಕ್ಕೇ ಅಂದಿದ್ದು ನೋವು ಹಾಗೂ ಸಾವು ಆಕಸ್ಮಿಕವಾಗಿದ್ದರೇ ಚಂದ ಎಂದು...

                                                ***/\/\/\***

ಬೇರು : ಇದೀಗ ನೆನಪಷ್ಟೇ...

ಮಲೆನಾಡಿನ ದಟ್ಟ ಕಾನನದ  - 
ಅಡಿಕೆ, ತೆಂಗುಗಳ - 
ಮಾವು, ಹಲಸುಗಳ - 
ಭತ್ತ, ಕಬ್ಬುಗಳ - 
ಹಚ್ಚ ಹಸುರಿನ - 
ತುಂಬಿ ತುಳುಕುವ ಝರಿ, ತೊರೆಗಳ - 
ಗುಡ್ಡಗಾಡಿನ ಮಡಿಲ ನಡುವಿನ ಪುಟ್ಟ ಹಳ್ಳಿಯ -
ಅರಮನೆಯಂಥ ಗೂಡಿನ - 
ದೊಡ್ಡ ಅಂಗಳದ ಅಂಚಲ್ಲಿ - 
ಮರಗಳ ಕೊಂಬೆಗಳೆಡೆಯಿಂದ ತೂರಿ ಬರುವ ಎಳೆ ಬಿಸಿಲಿಗೆ ಮೈಯೊಡ್ಡಿ ಕೂತು - 
ಕಣ್ಣ ತುಂಬಿದ ಕನಸುಗಳಿಗೆ ಕಾವು ಕೊಟ್ಟು - 
ಕಾವು ಕೊಟ್ಟ ಪುಟ್ಟ ಕನಸೊಂದು ಸಾಕಾರಗೊಂಡು ಬೆನ್ತಟ್ಟಿದಾಗ ಬೆಟ್ಟದಷ್ಟು ಖುಷಿಪಟ್ಟು
ಅದೇ ಅಂಗಳದ ನಡುವೆ ಕುಣಿದಾಡುತ್ತ - 
ಕನಸು ಕೈಸುಟ್ಟಾಗ ಮತ್ತದೇ ಅಂಗಳದ ನಡುವೆ ಕೂತು ನಿಟ್ಟುಸಿರಿಟ್ಟು -
ಹೊಸ ಕನಸಿಗೆ ಜೀವ ತುಂಬುತ್ತಾ -
ಆಸೆ, ನಿರಾಸೆ, ಕನಸು, ನನಸುಗಳ ನಡುವೆ ತುಯ್ಯುತ್ತಾ - 
ಅಂಥ ಮಹತ್ವಾಕಾಂಕ್ಷೆಗಳೇನೂ ಇಲ್ಲದೇ - 
ಬದುಕಿನ ಬಗ್ಗೆ ಅಂಥ ತಕರಾರುಗಳೂ ಇಲ್ಲದೇ ಎಲ್ಲ ಸಾಮಾನ್ಯರಂತೆ -
ಹತ್ತರೊಡನೆ ಹನ್ನೊಂದು ಎಂಬ ಮಾತಿನಂತೆ ಎಲ್ಲರೊಡನೊಂದಾಗಿ ನಗುನಗುತ್ತಾ ಬದುಕಿನ ಇಪ್ಪತ್ತೇಳು ವಸಂತಗಳನ್ನು ಹಾಗೇ ಸುಮ್ಮನೆ ಎನ್ನುವಂತೆ ಕಳೆದು ಬಿಟ್ಟಿದ್ದೆ...


ಹಳ್ಳಿಯ ಎಲ್ಲ  ಏಕತಾನತೆಗಳ ನಡುವೆಯೇ ಒಂದಷ್ಟು ಪುಟ್ಟ ಪುಟ್ಟ ಖುಷಿಗಳಿದ್ದವು.
ಗೆಳತಿಯಂಥ ಅಮ್ಮ - ಅಮ್ಮನಂಥ ಅಕ್ಕಂದಿರು - ಭಾವ ತುಂಬಿದ ಬಂಧುಗಳ ಬಂಧಗಳಿದ್ದವು.
ಎಂದೋ ಬರಬಹುದಾಗಿದ್ದ  ಚಂದಮಾಮದ ಕಥೆಗಳ ರಾಜಕುಮಾರಿಯಂಥ ಸಂಗಾತಿಯೆಡೆಗಿನ ಮೈಮನಗಳ ಪುಳಕಗೊಳಿಸುವ ಒಲವ ಕನಸುಗಳಿದ್ದವು.
ಅಲ್ಲಿ ಜೋಕಾಲಿಯಿದೆ.
ಗಾಳಿಯ ಜೋಗುಳವಿದೆ.
ಮಣ್ಣ ಗಂಧವಿದೆ.
ಹೂವ ಮಕರಂದ ಹೀರುವ ದುಂಬಿಯ ಖುಷಿಯ ನಾದವಿದೆ.
ಹಾಡುವ ಹಕ್ಕಿ - ಕಾಡುವ ಕಾಡು - ಅಂಬಾ ಎಂಬ ಕರು - ಕಾವಲಿನ ನಾಯಿ - ಹಾಲು ಕದಿವ ಬೆಕ್ಕು ಎಷ್ಟೆಲ್ಲ ಜೀವ ವೈವಿಧ್ಯ.
ಅಲ್ಲಿಯ ಜನಕ್ಕೆ ಅನ್ನ ಇಕ್ಕುವ ಔದಾರ್ಯ - ಸುಖವ ಕದಿವ ಮಾತ್ಸರ್ಯ ಎರಡೂ ಇದೆ.
ಸೆಖೆಯಾದರೆ ಬರಿಮೈಯಲ್ಲಿ ಬರಿ ನೆಲಕ್ಕೆ ಹೊರಳಾಡಬಹುದಿತ್ತು.
ಛಳಿಗೆ ಮೈಕಾಸಲು ಸೌದೆ ಒಲೆಯಿತ್ತು.
ಇನ್ನು ಮಳೆಯೆಂದರೆ ಅಂಗಳಕ್ಕಿಳಿದರೆ ರಕ್ತ ಹೀರಲು ಸದಾ ಸನ್ನದ್ಧ ಉಂಬಳ, ಸಂಜೆಯಾದರೆ ಮೈಯೆಲ್ಲ ಉರಿ ಎಬ್ಬಿಸುವಂತೆ ಸಾಮೂಹಿಕ ದಾಳಿ ನಡೆಸುವ ನೊರ್ಜು(ಸೊಳ್ಳೆಗಿಂತ ತುಂಬ ಚಿಕ್ಕದಾದ ರಕ್ತ ಹೀರುವ ಒಂದು ಕೀಟ ಜಾತಿ), ಸಿಮೆಂಟು ನೆಲದಲ್ಲೂ ಜಿನುಗುವ ನೀರು, ನಂಜಿನಿಂದ ಕೊಳೆಯುವ ಕಾಲ ಚರ್ಮ...
ಆದರೂ ಮಲೆನಾಡ ಮಳೆಯಲ್ಲಿ ನೆನೆಯುವ ಸುಖವೇ ಬೇರೆ...
ನಾಲಿಗೆಯ ಹಂಬಲಕ್ಕೆ ಹಲಸಿನ ಬೇಳೆ, ಹಪ್ಪಳ, ಸಂಡಿಗೆ, ಸುಟ್ಟ ಗೇರು ಬೀಜ.
ಸಮೃದ್ಧ ಊಟಕ್ಕೆ ಹಲಸಿನ ಕಾಯಿ ಹುಳಿ, ಮಾವಿನಕಾಯಿ ಗೊಜ್ಜು, ಅಪ್ಪೆಹುಳಿ.
ಸಿಹಿಯ ಚಪಲಕ್ಕೆ ಹಲಸಿನ ಹಣ್ಣಿನ ಇಡ್ಲಿ, ಬಕ್ಕೆಹಣ್ಣಿನ ಮುಳಕ.
ಮಾತಿನ ಚಟಕ್ಕೆ, ಇಸ್ಪೀಟಿನ ಪಾರಾಯಣಕ್ಕೆ ಸದಾ ಸಜ್ಜಾಗಿರುತ್ತಿದ್ದ ಹಿರಿ - ಕಿರಿಯ ಗಂಡು ಪ್ರಾಣಿಗಳು...
ಬಾಯ್ತುಂಬ ತಂಬಾಕಿನ ಕವಳ - ನಡುನಡುವೆ ಚಹಾದ ಸಮಾರಾಧನೆ...
ಎಲ್ಲರನ್ನೂ ನಿದ್ದಂಡಿಗಳೆಂದು (ಸೋಮಾರಿಗಳು) ಬಯ್ಯುತ್ತಾ ಮಂಚ ನಡುಗುವಂತೆ ಹೊರಕೆ ಹೊಡೆಯುವ ಅಜ್ಜಂದಿರು - ಮುಸಿ ಮುಸಿ ನಗುವ ಮಕ್ಕಳು...
ಸದಾ ಗೊಣಗುವ ಗಂಡ ಸತ್ತ ಅಜ್ಜಿಯರು (ಅವರೇ ಮೊಮ್ಮಕ್ಕಳನ್ನು ಅತೀ ಹೆಚ್ಚು ಪ್ರೀತಿಸುವವರು ಕೂಡಾ).
ಅಡಿಗೆ ಮನೆ, ಕೊಟ್ಟಿಗೆ, ಪಕ್ಕದ ಮನೆಯವಳೊಂದಿಗೆ ಆಚೆ ಮನೆಯವಳ ಬಗೆಗಿನ ಹರಟೆಯಲ್ಲೇ ಸಂತೃಪ್ತರಾದ ಹೆಂಗಸರು.
ರೇಡಿಯೋದ ಚಿತ್ರಗೀತೆಗಳು, ಕರೆಂಟಿದ್ದರೆ ಟಿ.ವಿಯ ಧಾರಾವಾಹಿ - ಸಿನೆಮಾಗಳು...
ವಾರಕ್ಕೊಮ್ಮೆ ಬರುವ ಬಸ್ಸು - ಕಣ್ಣಾಮುಚ್ಚಾಲೆ ಆಡೋ ಕರೆಂಟು - ಹಾಳುಬಿದ್ದ ರಸ್ತೆ - ಇಲ್ಲದ ಮೂಲ ಸೌಕರ್ಯ ಇವ್ಯಾವುವೂ  ಹಳ್ಳಿ ಬದುಕಿನಲ್ಲಿ ಅಂಥ ವ್ಯತ್ಯಾಸವನ್ನುಂಟುಮಾಡಲಾರವು.
ಆಗಾಗ ಬರುವ ಚುನಾವಣೆಗಳು ಮತ್ತು ಸುಳ್ಳೇ ಸದ್ದು ಮಾಡುವ ಸಾಲ ಮನ್ನಾದ ಸುದ್ದಿ ಹಳ್ಳಿಗರಲ್ಲಿ ಒಂದಷ್ಟು ದಿನ ಗಡಿಬಿಡಿ ಉಂಟುಮಾಡಬಹುದೇನೋ ಅಷ್ಟೇ..
ಉಳಿದಂತೆ ಎಲ್ಲ ವ್ಯತ್ಯಯಗಳ ನಡುವೆಯೂ ಬದುಕು ಸಂತೃಪ್ತ ಅನ್ನಿಸುತ್ತೆ ಹಳಿಯಲ್ಲಿ...
ಮನಸು ಪ್ರಶಾಂತ - ನಿದ್ದೆ ಸಮೃದ್ಧ - ಊರು ಧ್ಯಾನಸ್ತ...


ಆ ಮನೆಗೆ ನಾನೇ ಯಜಮಾನ.
ಒಂದೇ ಒಂದು ಗಂಡು ಜೀವ.
ಅಮ್ಮ - ಅಕ್ಕಂದಿರೇ ನನ್ನ ಬದುಕ ರೂಪಿಸಿದ ಜೀವಗಳು.
ನೋವು ಅವಮಾನಗಳ ಮೀರಿ ನಿಂತು ಬದುಕಲು ಕಲಿಸಿದ ಪ್ರಾಣಗಳು.
ಸೀಮೆ ಎಣ್ಣೆಯ ಬುಡ್ಡಿ ದೀಪದ ಬೆಳಕಲ್ಲಿ - ರೇಡಿಯೋದಲ್ಲಿನ ಚಿತ್ರಗೀತೆಗಳ ಕೇಳುತ್ತಾ - ಒಂಟಿಯಾಗಿ ಚಾಲಿ ಅಡಿಕೆ ಸುಲಿಯುತ್ತಾ -  ಹಸಿ ಬಿಸಿ ಕನಸು ಕಾಣುವ ಮಾಣಿ.
ಅದೇ ಬುಡ್ಡಿ ದೀಪದ ಬೆಳಕಲ್ಲಿ - ಬಾಲಮಂಗಳ, ಚಂದಮಾಮದ ಕಥೆಗಳಿಂದಾರಂಭಿಸಿ - ಯಂಡಮೂರಿ ವಿರೇಂದ್ರನಾಥ್, ರವಿ ಬೆಳಗೆರೆ, ಎಸ್.ಎಲ್.ಭೈರಪ್ಪ, ಶಿವರಾಮ ಕಾರಂತರ ಬರಹಗಳನ್ನು ಓದಿ ಅರ್ಥೈಸಿಕೊಳ್ಳಲು ಒದ್ದಾಡುತ್ತಾ - ಏಕಾಂತವ ಸವಿಯುತ್ತಾ ಜೀವಿಸಿಕೊಂಡಿದ್ದ ಸಾಮಾನ್ಯ ಹಳ್ಳಿ ಹುಡುಗ. 
ಖುಷ್ವಂತ್ ಸಿಂಗ್, ಪ್ರೋತಿಮಾ ಬೇಡಿಯರ ಪೋಲಿ ಪುಸ್ತಕಗಳ ಓದಿ - ರಾತ್ರಿಗಳಲ್ಲಿ ಕರೆಂಟಿದ್ದರೆ ಫ್ಯಾಶನ್ ಟಿ.ವಿಯ ಅರೆಬೆತ್ತಲೆ ಲಲನೆಯರ ನೋಡಿದ ಪರಿಣಾಮವಾಗಿ ನಿದ್ದೆ ಬಾರದೆ ಹೊರಳಾಡಿ - ಏನೇನೋ ಆಗಿ ಮೈಯೆಲ್ಲ ಬೆವರಿ - ಸಣ್ಣಗೆ ಭಯವಾಗಿ - ಗಾಢ ನಿದ್ದೆ ಆವರಿಸಿ - ಬೆಳಗೆದ್ದಾಗ ಮತ್ತೆ ಅದೆಲ್ಲ ನೆನಪಾಗಿ ಅಮ್ಮನೆದುರು ಸಣ್ಣ ಮುಜುಗರ ಅನುಭವಿಸಿದ ಸಂಭಾವ್ಯ ಪೋಲಿ...


ಮೂಗನರಳಿಸುವ ಕಾಡು ಹೂವಿನ ಕಂಪು, ನಾನು ನಡೆದರೆ ನಡೆಯುವ ಓಡಿದರೆ ಓಡುವ ಮರದ ಮರೆಯಿಂದ ಇಣುಕಿ ಕಣ್ಣಾಮುಚ್ಚಾಲೆಯಾಡುತ್ತಾ ಮುದನೀಡುವ ಚಂದಿರ ನೆನಪಿಸುವ ನನ್ನೊಲವಿನ ನಾಚಿಕೆಯ ಮುಖಾರವಿಂದ, ಉರಿಯುತ್ತಾ ಉದುರುವ ಉಲ್ಕೆಯ ಕಂಡು ಬೆರಗು ಮತ್ತು ಭಯದಿಂದ ಕಣ್ಣರಳಿಸುವ ಸೋಜಿಗದ ರಾತ್ರಿಗಳು ಹಾಗೂ ತೋಟದೆಡೆಯಿಂದ ಬೀಸುವ ಗಾಳಿಯ ತಂಪು, ಮಾಡಿನ ಮರೆಯಲ್ಲಿ ನಗುವ ಸೂರ್ಯ ಕಿರಣ, ಗೋಪಿ ಹಕ್ಕಿಯ ಸುಪ್ರಭಾತದೊಂದಿಗೆ ಆರಂಭವಾಗುವ ಪ್ರಚ್ಛನ್ನ ಬೆಳಗು...
ಇವುಗಳ ನಡುವೆ ಕಳೆದ ಬದುಕಿಗೆ ಎಂಥ ಸೊಬಗಿತ್ತು ಗೊತ್ತಾ..!!


ಅಂತಿದ್ದ ಬದುಕನ್ನು ಅಸಹಾಯಕನಾಗಿ ಬಲಿಕೊಟ್ಟು - ಅಲ್ಲಿ ಕಂಡ ಕನಸುಗಳನ್ನು ಅನಿವಾರ್ಯವಾಗಿ ಕೊಂದು, ಹುಟ್ಟಲಿದ್ದ ಕನಸುಗಳಿಗೆ ಗರ್ಭಪಾತವ ಮಾಡಿಸಿ ಅವನ್ನೆಲ್ಲ ಆ ನೆಲದಲ್ಲೇ ಹೂತು ಸಮಾಧಿ ಮಾಡಿ - ಸಮಾಧಿಯ ಕಾವಲಿಗೆ ಆಯಿಯನ್ನು ಕೂರಿಸಿ ಆ ಊರ ತೊರೆದು ಈ ಊರ ಸೇರಿದೆ...


ಹೃದಯದಿ ಮಿಡಿವ ಮರಣ ಮೃದಂಗ...
ಮನದಲ್ಲಿ ವಾಲಗದ ಕನಸು...
                                              
ಇನ್ನೂ ಮುಂಚೆ : ಬದುಕು ಚಿಗುರೊಡೆದದ್ದು...


ನೆನಪು ಕೂಡ ಅಸಹ್ಯ ಮೂಡಿಸುವಂಥ ಬೇಜವಾಬ್ದಾರಿಯುತ ಬದುಕು ರೂಢಿಸಿಕೊಂಡ ಅಪ್ಪ - ದಾಯಾದಿ ಕಲಹ - ಅಸಹಾಯಕ ಅಮ್ಮನ ಮಡಿಲಲ್ಲಿ ಇನ್ನೂ ಅರಿವು ಮೂಡದ ಮೂರು ಮಕ್ಕಳು - ಅಜ್ಜನ ಮನೆಯ ಔದಾರ್ಯದಲ್ಲಿ ಬದುಕು ಆರಂಭ.
ರಕ್ತ ಸುರಿಸಿ ದುಡಿಯುವುದು ಮಾತ್ರ ಗೊತ್ತಿದ್ದ ಆಯಿಯ ಬೆವರ ನದಿಯಲ್ಲಿ ನನ್ನ ಮತ್ತು ಇಬ್ಬರು ಅಕ್ಕಂದಿರ ಬದುಕು ತೇಲಿದ್ದು.
ಅಮ್ಮ ತಾನು ಗಂಡಿನಂತೆಯೇ ಗೇಯ್ದು ನಮಗೆ ವಿದ್ಯೆ ನೀಡಿದ್ದು.
ಅಜ್ಜನ ಮನೆಯ ಪ್ರೀತಿ ಔದಾರ್ಯ ಬೆನ್ನಿಗಿದ್ದೇ ಇತ್ತು.
ಹೀಗೆ ಬದುಕಿನ ಆರಂಭದ 15 ವರ್ಷಗಳು ಎಲ್ಲೆಲ್ಲೋ ಯಾರ ಯಾರದೋ ಪ್ರೀತಿ - ಔದಾರ್ಯಗಳಲ್ಲೇ ಅರಳಿನಿಂತಿತ್ತು.
ಆ ಜೀವಗಳ ಔದಾರ್ಯ - ಪ್ರಯತ್ನಗಳಿಂದಲೇ ನ್ಯಾಯವಾಗಿ ನಮ್ಮ ಬದುಕಿಗೆ ದೊರಕಿದ್ದು ನಮ್ಮದೇ ಒಂದು ಸ್ಥಾವರ - ನೆಲೆ.
ನಂತರವೂ ಸಿಕ್ಕ ಭೂಮಿಯಲ್ಲಿ ಬೆವರು ಹರಿಸಿದ್ದು - ನನ್ನ ಬದುಕಿಗೊಂದು ಭದ್ರ ಬುನಾದಿ ರೂಪಿಸಿದ್ದು ಅಕ್ಕರೆಯ ಆಯಿ ಮತ್ತು ಅಕ್ಕಂದಿರು. 
ಅಪ್ಪ ಎಂದಿನಂತೆ ಬದುಕಿದ್ದಾನೆ ಈಗಲೂ - ನಮ್ಮಗಳ ಬದುಕಿನ ಸಾಮಾಜಿಕ ಅವಮಾನಗಳ ಮೂಲವಾಗಿ.
ನನ್ನ ಮತ್ತು ಅಕ್ಕಂದಿರ ಬದುಕ ರೂಪಿಸಿದ್ದು ಆಯಿಯ ಬೆವರು, ಸಮಾಜ ಕರುಣಿಸಿದ ಅವಮಾನಗಳು, ಅದೇ ಸಮಾಜದಲ್ಲಿ ಅಲ್ಲಲ್ಲಿ ಸಿಕ್ಕ ವಿನಾಕಾರಣದ ಪ್ರೀತಿ, ನಮ್ಮ ಓದು (ಶಾಲೆಯ ಓದಿನಿಂದಾಚೆಯ ಓದು) ಮತ್ತು ಅವೆಲ್ಲವುಗಳಿಂದ ದಕ್ಕಿದ ಬದುಕಿನೆಡೆಗಿನ ಗ್ರಹಿಕೆಗಳೇ...


                                       ***##$##***


ಸದ್ಯದ ನಿಲ್ದಾಣ : ಹೊಸ ಸಾಧ್ಯತೆಗಳನರಸಿ...


ಆಗಸವ ಚುಂಬಿಸ ಹೊರಟ ಕಟ್ಟಡಗಳ ಕಂಡು ಬೆರಗಾಗುತ್ತಾ -
ಸಣ್ಣ ತುಂತುರು ಮಳೆಗೂ ರಸ್ತೆ ತುಂಬ ಹರಿವ ಕೊಚ್ಚೆಯ ಕಂಡು ಮೂಗು ಮುರಿಯುತ್ತಾ -
ಲಾಲ್ಬಾಗು, ಕಬ್ಬನ್ ಪಾರ್ಕುಗಳೇ ಮಹಾ ಕಾಡುಗಳೆಂದು ಮತ್ತೆ ಮತ್ತೆ ಅವನ್ನೇ ನೋಡಿ ಸಂಭ್ರಮದ ಸೋಗು ಹಾಕುತ್ತಾ -
ಹಗಲಿರುಳೆನ್ನದೆ ರಸ್ತೆ ತುಂಬ ಓಡಾಡುವ ಪ್ರೇತಗಳಂಥ ಜನರ ಜಾತ್ರೆಯ ನಡುವೆ ಅಷ್ಟೇ ಸಂಖ್ಯೆಯಲ್ಲಿ ಹರಿದಾಡುವ ವಾಹನಗಳ ಚಕ್ರಗಳಡಿಯಲ್ಲಿ ಸಿಲುಕದಂತೆ ನನ್ನನ್ನು ನಾನು ರಕ್ಷಿಸಿಕೊಳ್ಳಲು ಒದ್ದಾಡುತ್ತಾ -
ಮೆಜೆಸ್ಟಿಕ್ಕಿನ ಪ್ಲಾಟ್ ಫಾರಮ್ಮುಗಳಲ್ಲಿ ಜನಜಂಗುಳಿ ನಡುವೆ ಸಹಜವಾಗಿ ಮೈಸೋಕಿದ ಚೆಲುವೆಯ ಕೈಗಳ ಮೃದುತ್ವಕ್ಕೇ ರೋಮಾಂಚಿತನಾಗುತ್ತಾ -
ತುಂಬಿ ತುಳುಕುವ ಬಿ.ಎಂ.ಟಿ.ಸಿ ಬಸ್ಸಲ್ಲಿ ಸೀಟು ಸಿಕ್ಕಿದ್ದೇ ಪುಣ್ಯ ಎಂದುಕೊಂಡು, ನಿಂತಿರುವ ವಯಸ್ಸಾದ ಅಜ್ಜನನ್ನು ಕಂಡರೂ ಕಾಣದಂತೆ ಕಿಟಕಿಯಿಂದಾಚೆಯ ಕಟ್ಟಡಗಳ ಕಾಡು ನೋಡುತ್ತಾ ಕೂತು -
ನೈಜ ಸಂಗೀತ ಕಾರ್ಯಕ್ರಮಗಳಿಗೆ ಹೋಗಲು ಸಮಯ ಸಾಲದೇ ಎಪ್.ಎಂಗಳ ಅಬ್ಬರವೇ ಸಂಗೀತವೆಂದುಕೊಂಡು ತಲೆದೂಗುತ್ತಾ -
ಮೊಬೈಲ್ ಕಂಪನಿಗಳು, ರೇಡಿಯೋ ಜಾಕಿಗಳು, ಟಿ.ವಿ.ನಿರೂಪಕರುಗಳಿಂದ ಮಾತು ಕಲಿತು ಮೌನದ ಮಾಧುರ್ಯ ಮರೆತು -
ಸಮಯ ಮುಗಿದರೂ ಕೆಲಸ ಬಿಟ್ಟೇಳಲು ಕೊಡದ ಮೇಲಧಿಕಾರಿಯನ್ನು ಮನದಲ್ಲೇ ಶಪಿಸುತ್ತಾ -
ಯಾರಮೇಲೆಂದು ಅರ್ಥವಾಗದ ಸಿಟ್ಟನ್ನು ಸದಾ ಮೊಗದಲ್ಲಿ ತುಂಬಿಕೊಂಡು -
ನಗುವ ನವಿರು ಭಾವಗಳನೆಲ್ಲಾ ಯಾಂತ್ರಿಕವಾಗಿಸಿಕೊಂಡು -
ನೀಗಿಕೊಳ್ಳಲಾಗದ ಒತ್ತಡದಲ್ಲಿ ಸದಾ ಬೇಯತ್ತಾ -
ತಿಂಗಳ ಕೊನೆಯಲ್ಲಿ ನನ್ನದೇ ಖಾಲಿ ಖಿಸೆಯನ್ನು ನೋಡಿಕೊಂಡು ಸ್ವಾನುಕಂಪದಲ್ಲಿ ತೇಲುತ್ತಾ -
ದಾರಿ ಬದಿಯ ಭಿಕ್ಷುಕರನ್ನು ಬೈದು ಪುಡಿಗಾಸಿಗೆ ಮಾಲೀಕನೆದುರು ಕೈಚಾಚಬೇಕಾದ ನೋವನ್ನು ಮರೆಯುತ್ತಾ -
ನಿದ್ದೇಲಿ ಕಂಡ ಬದುಕನ್ನು ನನಸಾಗಿಸಿಕೊಳ್ಳಲು ಖಾಲಿ ಖಿಸೆಯೇ ಅಡ್ಡಗೋಡೆಯಂತೆನಿಸಿ, ಇನ್ಯಾರದೋ ತುಂಬಿದ ಖಿಸೆ ಅಣಕಿಸಿದಂತೆನಿಸಿ ಅವರೆಡೆಗೆ ಈರ್ಷ್ಯೆ ಪಡುತ್ತಾ -
ಆ ಈರ್ಷ್ಯೆ ಕ್ರಮೇಣ ವ್ಯವಸ್ಥೆಯೆಡೆಗೆ ತಿರುಗಿ ಇಡೀ ವ್ಯವಸ್ಥೆಯನ್ನೇ ಅವಕಾಶವಾದಾಗೆಲ್ಲ ಹಳಿಯುತ್ತಾ -
ಚಂದಮಾಮದ ರಾಜಕುಮಾರಿಯನ್ನು ಸಪ್ತ ಸಾಗರ ದಾಟಿ ಗೆದ್ದು ತರುವುದಿರಲಿ ಕನಸಿಗೂ ಕರೆಯಲಾಗದ ಅಸಹಾಯ ನಿಟ್ಟುಸಿರೊಂದಿಗೆ -
ಒಂದು ಸಾಮಾನ್ಯ ಬದುಕನ್ನು ರೂಪಿಸಿಕೊಳ್ಳಲೂ ಪರದಾಡುತ್ತಾ -
ಎಲ್ಲ ಬಣ್ಣ ಬಣ್ಣದ ಪ್ರೇತಗಳ ನಡುವೆ ನಾನೂ ಒಂದು ಬಣ್ಣದ ಪ್ರೇತವಾಗಿ ಜೀವಿಸುತ್ತಿದ್ದೇನೆ...


ಇಲ್ಲಿ ಚಂದ್ರನಿರುತ್ತಾನೆ - ಆದರೆ ಬೆಳದಿಂಗಳ ತಂಪಿಲ್ಲ...
ನಗುವಿದೆ - ಆದರೆ ಆನಂದದ ಸೊಬಗಿಲ್ಲ...
ಸುಖವಿದೆ - ಆದರೆ ನೆಮ್ಮದಿಯ ಸಂತೋಷವಿಲ್ಲ...
ಕನಸುಗಳನ್ನೂ ನಿರ್ಭಾವುಕವಾಗಿಸಿ - ಬದುಕನ್ನು ಯಾಂತ್ರಿಕವಾಗಿಸುವ ಮಾಂತ್ರಿಕ ಶಕ್ತಿಯ ಮಹಾನಗರದ ಕಡೆಗೊಂದು ಭಯದ ನೋಟ ಬೀರುತ್ತಾ ಅದೇ ಮಹಾನಗರದ ಅಂಗವಾಗಿ ಜೀವಿಸುತ್ತಿದ್ದೇನೆ...


ಮಹಾನಗರದೆಡೆಗೆ ಹೆಜ್ಜೆ ಇಡುವಾಗ ಒಂದು ಕನಸು ಮೂಡಿತ್ತು.
ಅಜ್ಞಾತ ಬೀದಿಗಳಲ್ಲಿ ಅಲೆಮಾರಿಯಾಗುವ ಕನಸು.
ಬೆಂಗಳೂರು ಮಹಾನಗರದ ರಸ್ತೆಯ ತಿರುವುಗಳಲ್ಲಿ ಆ ಕನಸು ನನಸಾಯ್ತು.
ಮಹಾನಗರಗಳ ವೈಶಿಷ್ಟ್ಯವೇ ಅದು.
ಅಲ್ಲಿ ನಿತ್ಯ ಓಡಾಡುವ ದಾರಿಗಳಲ್ಲೂ ನಾವು ಅಜ್ಞಾತರೇ - ಶುದ್ಧ ಅಪರಿಚಿತರೇ.
ಮಹಾನಗರಗಳು ಕೊಡುವ ಸುಖಗಳಲ್ಲಿ ಅದೂ ಒಂದು.
ವಿಪರ್ಯಾಸವೆಂದರೆ ದುಃಖವೂ ಅದೇ.


ಬೇರು ಹರಿದುಕೊಂಡು ಆ ಊರ ಬಿಟ್ಟು ಈ ಊರ ಸೇರಿ ಹೊಸ ಸಾಧ್ಯತೆಗಳ ಅರಸಿ ಬದುಕಿಗಾಗಿ ಇಲ್ಲ ಬದುಕಿರುವುದಕ್ಕಾಗಿ ಬಡಿದಾಡಲು ಕಾರಣ - ಬದುಕು ಕರುಣಿಸಿದ ಹಠಾತ್ ತಿರುವು.


ದೇಹ ಜವರಾಯನ ಊಳಿಗದ ಆಳು...
ಮನಸಿಗೆ ಬದುಕಿನ ಹಂಬಲ ತೀವ್ರ...
ಒಂದು ವಾಸ್ತವ - ಇನ್ನೊಂದು ಕನಸು...
ಎರಡರ ನಡುವೆ ಬುದ್ಧಿ ಅತಂತ್ರ.....
                     
                                             ***)(%)(%)(***


ಅಲ್ಲಿ - ಇಲ್ಲಿಗಳ ನಡುವೆ : ಕತ್ತಲು ಕವಿದ ಬದುಕು...


ವಾಸ್ತವದ ಸುನಾಮಿಗೆ ಸಿಕ್ಕಿ ನಿಷ್ಪಾಪಿ ಕನಸುಗಳ ಸಾವು...


ನಿತ್ಯ ನಿರಾಯಾಸವಾಗಿ ಏರುವ ಗುಡ್ಡ - ಇಂದೇಕೋ ಏದುಸಿರು.
ನಿತ್ಯ ಎತ್ತುವ ಭಾರ - ಇಂದು ಹೆಗಲೇರಲೊಲ್ಲದು.
ಎಲ್ಲೋ ಉಸಿರ ನಾಳದಲ್ಲಿ ಅಡಿಕೆ ಸಿಕ್ಕಂಥ ಭಾವ.
ಮೊದಲಾಗಿ ಎದೆಯ ಮೂಲೆಯಲ್ಲಿ ಸಣ್ಣ ನೋವು - ಅದು ನಿಧಾನವಾಗಿ ಮೈಯೆಲ್ಲ ವ್ಯಾಪಕ.
ಬೆನ್ನು ಮೂಳೆಯಲ್ಲಿ ಸಣ್ಣ ನಡುಕ.
ನರನರಗಳಲ್ಲೂ ಅಸಹಜ ಎನಿಸುವ ಕಂಪನ.
ಏನೂ ಇಲ್ಲದಿದ್ದರೂ ತಲೆಯೆಲ್ಲ ಭಾರಭಾರ.
ಸುತ್ತ ಸುತ್ತುವ ಭೂಮಿ.
ಹಾಡ ಹಗಲಲ್ಲೇ ಕಣ್ಣ ಮುಂದೆ ನಕ್ಷತ್ರಗಳು.
ಕಳೆದ ಹತ್ತಾರು ವರ್ಷ ಕಾಲ ನಡೆದ ಬಿಡುಬೀಸು ನಡಿಗೆ, ದಿನದ ಹತ್ತಾರು ಘಂಟೆ ದೇಹದಲ್ಲಿ ಸಣ್ಣ ನಸನಸೆಯೂ ಇಲ್ಲದೇ ದುಡಿದ ದುಡಿಮೆ ಎಲ್ಲ ಸುಳ್ಳು ಎನ್ನಿಸುವಂತೆ ಈಗೀಗ ಸಣ್ಣ ಕೆಲಸಕ್ಕೂ, ಮಾರು ದೂರದ ನಡಿಗೆಗೂ ಕಾಡುವ ಆಯಾಸ.
ಕೂತವನು ತಕ್ಷಣ ಎದ್ದಾಗಲೂ, ಬಾಗಿದವನು ತಕ್ಷಣ ನೆಟ್ಟಗೆ ನಿಂತಾಗಲೂ ಚಡಪಡಿಸಿ ಒದ್ದಾಡುವ ದೇಹ.
ಒಂದು ಕ್ಷಣ ನಿಂತಂತಾಗುವ ಉಸಿರು.
ಕಣ್ಣ ಮುಂದೆ ಬರೀ ಕತ್ತಲು.
ದೇಹದಲ್ಲಿ ಎಲ್ಲಿ ಏನಾಯ್ತೆಂದು ತೋಚದೇ ಬುದ್ಧಿ ಅಸ್ತವ್ಯಸ್ತ.
ಆಸ್ಪತ್ರೆಯೆಡೆಗೆ ಹೆಜ್ಜೆ...
ಮೊದಲು ಇ.ಸಿ.ಜಿ. ಆಮೇಲೆ ಸ್ಕ್ಯಾನಿಂಗು ಇನ್ನೂ ಏನೇನೋ...
ಅರ್ಥವಾದದ್ದು ಈ ಎಲ್ಲ ಬೆಳವಣಿಗೆಗಳ ಮೂಲ ಹೃದಯ ಎಂಬುದಷ್ಟೇ...
ಹಾಗಾದರದಕ್ಕೆ ಉತ್ತರ ಎಂದು ವೈದ್ಯರನ್ನು ಕೇಳಿದರೆ ಸಿಕ್ಕಿದ್ದು ಬರೀ ಅವರ ಅಸಹಾಯಕ ನೋಟ ಮತ್ತು ಹಾರಿಕೆಯ ಭರವಸೆ.
ಅಲ್ಲಿಂದ ಶುರುವಾದದ್ದು ದವಾಖಾನೆಯಿಂದ ದವಾಖಾನೆಗೆ, ವೈದ್ಯರಿಂದ ವೈದ್ಯರೆಡೆಗೆ ಅಲೆದಾಟ...
ಆಯುರ್ವೇದದ ಅರಿಷ್ಠಗಳಿಂದ (ಅರ್ಜುನಾರಿಷ್ಠಗಳಂಥ ಔಷಧಿಗಳು), ಹೋಮಿಯೋಪತಿಯ ಸಕ್ಕರೆ ಗುಳಿಗೆಗಳಿಂದ, ಹಳ್ಳಿ ವೈದ್ಯರ ಕಹಿಮದ್ದಿನವರೆಗೆ ಎಷ್ಟೆಲ್ಲ ಏನೇನೆಲ್ಲ ಆರೈಕೆಗಳು - ಪಥ್ಯಗಳು.
ಅವೆಲ್ಲವುಗಳಿಂದ ಔಷಧಿ ಅಂದರೆ ದೇಹ ಸಂಕುಚಿತವಾಗುವಂತಾದದ್ದು ಬಿಟ್ಟರೆ ಇನ್ನೇನೂ ಸಾಧನೆಯಾಗಿಲ್ಲ...
ವೈದ್ಯರ ಭರವಸೆಗಳೂ ನಂದುತ್ತ ಬಂದವು.
ಪಾಪ ಅವರುಗಳಿಗೇ ಇಲ್ಲದ ಭರವಸೆಯನ್ನು ನನಗೆಲ್ಲಿಂದ ತುಂಬಿಯಾರು...
ಎಲ್ಲ ಹೇಳಿದ್ದು ಒಂದೇ ಮಾತು ಇದು ತುಂಬ ಅಪರೂಪದ ಖಾಯಿಲೆ.
ಇದಕ್ಕೆ ಸರಿಯಾದ ಮದ್ದು ವೈದ್ಯಲೋಕಕ್ಕಿನ್ನೂ ದಕ್ಕಿಲ್ಲ.
ಜೀವನ ವಿಧಾನ ಬದಲಿಸಿಕೊಳ್ಳಿ ಅಷ್ಟೆ.
ಆನಂತರ ಗೆಳೆಯನ ಒತ್ತಾಯಕ್ಕೆ ತಜ್ಞ ವೈದ್ಯರನ್ನರಸಿ ಮಹಾನಗರದ ದೊಡ್ಡಾಸ್ಪತ್ರೆಯೆಡೆಗೆ ನನ್ನ ಸವಾರಿ...


ಚಟ್ಟದ ಮೇಲೆ ಮಲಗಿ ಪ್ರಸ್ಥದ ಕನಸು ಕಾಣುವ ಮನಸು ...


'ಜಯದೇವ' : ಸಾವಿಗೆ ನಾಮಕರಣ...


ಬೆಂಗಳೂರು ಮಹಾನಗರದ ದೊಡ್ಡಾಸ್ಪತ್ರೆಯ ಅಂಗಳದಲ್ಲಿ ಅಬ್ಬೆಪಾರಿಯಂತೆ ನಿಂತಿದ್ದೆ. 
'ಜಯದೇವ ಹೃದ್ರೋಗ ವಿಜ್ಞಾನಗಳ ಸಂಸ್ಥೆ'ಯ ಆವರಣದಲ್ಲಿ ಶಿವರಾತ್ರಿಯಂದು ನಮ್ಮೂರ ಜಾತ್ರೆಯಲ್ಲಿ ಸೇರುವಷ್ಟೇ ಜನ ಸೇರಿದ್ದರು.
ರೋಗಿಗಳು, ರೋಗಿಗಳ ಜೊತೆ ಬಂದವರು, ವೈದ್ಯರು, ದಾದಿಯರು ಎಷ್ಟೊಂದು ಜನ...
ರೋಗಿಗಳು ಮತ್ತವರ ಬಂಧುಗಳ ಮುಖಗಳಲ್ಲಿ ಏನೋ ದುಗುಡ ಧಾವಂತವಿದ್ದರೆ, ವೈದ್ಯರು ದಾದಿಯರೆಲ್ಲ ಏನೋ ಗಡಿಬಿಡಿಯಿಂದ ಓಡಾಡುತ್ತಿದ್ದರೆ, ಅವನ್ನೆಲ್ಲ ಮೊದಲ ಬಾರಿ ನೋಡ್ತಿರೋ ನನ್ನಲ್ಲಿ ಏನೋ ಅವ್ಯಕ್ತ ಶೂನ್ಯ ಆವರಿಸಿತ್ತು.
ಇಲ್ಲಿಯೂ ಮತ್ತದೇ ಪರೀಕ್ಷೆಗಳ ಪುನರಾವರ್ತನೆ..
ಸಾಮಾನ್ಯ ಪರೀಕ್ಷೆಯಿಂದ ಪ್ರಾರಂಭವಾಗಿ ಇ.ಸಿ.ಜಿ., ಸ್ಕ್ಯಾನಿಂಗುಗಳ ನಂತರ ವೈದ್ಯರೆಂದದ್ದು ಇನ್ನೂ ದೊಡ್ಡ ಮತ್ತು ಅಂತಿಮ ಪರೀಕ್ಷೆ ನಡೆಸಬೇಕು. ಮತ್ತದಕ್ಕೆ ಒಳರೋಗಿಯಾಗಿ ಸೇರಿಕೊಳ್ಳಬೇಕೆಂದು..


ಎರಡನೆ ದಿನ ಒಳರೋಗಿಯಾಗಿ ಹೋಗುವ ಹೊತ್ತಿಗೆ ನಾನು ಆ ವಾತಾವರಣಕ್ಕೆ ಹೊಂದಿಕೊಂಡಿದ್ದೆ.
ಕಾರಣ ನಂಗೆ ರೋಗ ಹಳೆಯದು.
ಪರೀಕ್ಷೆಯಷ್ಟೇ ಹೊಸತು.
ಮನದಲ್ಲಿದ್ದ ಶೂನ್ಯದ ಜಾಗದಲ್ಲಂದು ಬರೀ ಕುತೂಹಲವಷ್ಟೇ ಉಳಕೊಂಡಿತ್ತು.
ರೋಗದ ತೀವ್ರತೆ ಮತ್ತು ಹೆಸರಿನೆಡೆಗಿನ ಕುತೂಹಲ.
ಮಾರನೆ ದಿನ ಆಸ್ಪತ್ರೆಯ ವಸ್ತ್ರ ತೊಡಿಸಿ ನನ್ನನ್ನು ನನ್ನವರಿಂದ ಬೇರ್ಪಡಿಸಿ ಕೇವಲ ಪರೀಕ್ಷಾಪೂರ್ವ ರೋಗಿಗಳಿರುವ ಕೊಠಡಿಗೊಯ್ದು ಕೂರಿಸಿದಾಗ ನೋವೆನಿಸಿದ್ದು ಅಲ್ಲಿದ್ದ ನನಗಿಂತ ಚಿಕ್ಕ, ಇನ್ನೂ ಮುಗ್ಧತೆ ಆರದ ಅಬೋಧ ಕಂಗಳ ಮಕ್ಕಳನ್ನು ನೋಡಿ.
ಆಗಷ್ಟೇ ಹುಟ್ಟಿದ ಮಗುವನ್ನು ನೋಡಿ.
ಕನಸು ಕಾಣುವ ವಯಸು ಮೂಡುವ ಮುನ್ನವೇ ಆಸ್ಪತ್ರೆಗಳೊಂದಿಗೆ ಸರಸ - ಆ ಮಕ್ಕಳನ್ನು ಕಂಡು ನನ್ನಲ್ಲಿ ಇರಬಹುದಾಗಿದ್ದ ಅಲ್ಪ ಸ್ವಲ್ಪ ಭಯ, ನೋವುಗಳೂ ಸತ್ತು ಹೋದವು.
ಮೊದಲಿನವರ ಪಾಳಿ ಮುಗಿದು ನನ್ನ ಸರದಿ ಬರುವಾಗ ಮಧ್ಯಾಹ್ನ ಮಗ್ಗಲು ಬದಲಿಸಿತ್ತು...


ಆಂಜಿಯೋಗ್ರಾಮ್ ನ (angiogram) ಪರೀಕ್ಷಾ ಕೊಠಡಿ ಮತ್ತು ಆಸುಪಾಸಿನ ಪರೀಕ್ಷಾ ಕೊಠಡಿಗಳಲ್ಲಿರುವ ಬುಲ್ಡೋಜರ್ ಗಳಂಥ ದೊಡ್ಡ ದೊಡ್ಡ ಯಂತ್ರಗಳನ್ನು ನೋಡಿಯೇ ರೋಗಿಯ ಅರ್ಧ  ಉಸಿರು ನಿಂತಿರುತ್ತೆ.
ಆ ಯಂತ್ರಗಳಡಿಯಲ್ಲಿ ನಾವೇ ಮಲಗಬೇಕಾಗಿ ಬಂದಾಗ..???


ತೊಡೆಯ ನರವನ್ನು ಕೊಯ್ದು - ಎರಡು ಮಾರುದ್ದದ ನಳಿಕೆಯನ್ನು ಅಲ್ಲಿಂದ ಹೃದಯದವರೆಗೆ ತೂರಿಸಿ ನನ್ನ ಹೃದಯಾನ ನನಗೇ ತೋರಿಸಿ ಓಹ್...ಅಮೇಜಿಂಗ್..!!!
ವೈದ್ಯರು ಮಾತಾಡಿಕೊಳ್ಳುವ ವೈದ್ಯಕೀಯ ಭಾಷೆ ಅರ್ಥವಾಗದಿದ್ದರೂ ಅದರ ಭಾವ ಅರ್ಥವಾಗಿ - ಸಮಸ್ಯೆ ನಾನಂದುಕೊಂಡದ್ದಕ್ಕಿಂತ ಜಟಿಲವಿದೆ ಮತ್ತು ಈವರೆಗೆ ಅನುಭವಿಸಿದ್ದಕ್ಕಿಂತ ಹೆಚ್ಚಿನದನ್ನು ಇನ್ನು ಮೇಲೆ ಅನುಭವಿಸಬೇಕಿದೆ ಎಂಬುದಷ್ಟು ಗೊತ್ತಾಯ್ತು.
ವೈದ್ಯರನ್ನು ಅಲ್ಲೇ ಕೇಳಿದ್ದಕ್ಕೆ ಎಲ್ಲಾ ನಾಳೆ ಹೇಳ್ತೀನಿ ಈಗ ವಿಶ್ರಾಂತಿ ತಕೋ ಅಂದರಷ್ಟೇ.
ಮತ್ತೆ ಸಸ್ಪೆನ್ಸ್...


ಒಳರೋಗಿಯ ಮಂಚದಲ್ಲಿ ಅಲ್ಲಾಡದಂತೆ ಮಲಗಿರುವಾಗ ಕಂಡದ್ದೆಂದರೆ - ಎಲ್ಲ ರೋಗಿಗಳ ನೋವಿಗೂ ಸಮಾನವಾಗಿ ಮಿಡಿಯುವ ದಾದಿಯರ ಹೃದಯವಂತಿಕೆ, ನೂರಾರು ರೋಗಿಗಳನ್ನು ಸಂಭಾಳಿಸಿದ ಮೇಲೂ ನಗುತ್ತ ಮಾತಾಡುವ ವೈದ್ಯರ ಸಹನೆ, ತಾಯಂತೆ ಸಲಹಿದ ಗೆಳೆಯನ ಹಾಗೂ ಬಂಧುಗಳ ಪ್ರೀತಿ...


ಮರುದಿನ ಆಸ್ಪತ್ರೆಯಿಂದ ಹೊರಬರುವ ಮುನ್ನ ವೈದ್ಯರು ನಮ್ಮಗಳ ಮುಂದೆ (ನಾನು,ಅಕ್ಕ,ಚಿಕ್ಕಪ್ಪ ಮತ್ತು ಮಿತ್ರ) ನನ್ನ ಪರೀಕ್ಷಾ ಫಲಿತಾಂಶ ಹಿಡಿದು ಹೇಳಿದ್ದು ಮೊದಲಿನ ವೈದ್ಯರುಗಳು ಹೇಳಿದ್ದನ್ನೇ - ಇನ್ನಷ್ಟು ಕರಾರುವಾಕ್ಕಾಗಿ.
ಖಡಾಖಂಡಿತವಾಗಿ.
ನಮ್ಮ ಒಂದಿಷ್ಟು ಪ್ರಶ್ನೆಗಳಿಗೆ ಉತ್ತರಿಸುವಾಗ ಅಂಥ ಅನುಭವೀ ತಜ್ಞ ವೈದ್ಯರು ಕೂಡ ಅಸಹಾಯ ನೋಟ ಬೀರಿ, ತಡವರಿಸಿದ್ದು, ಅಕ್ಕನ ಕಣ್ಣಲ್ಲಿನ ನೀರಿಗಾಗಿ ಅವರು ಕ್ಷಮೆಯಾಚಿಸಿದ್ದು ನನ್ನ ಬದುಕಿನ ಕಡೆಗಾಲಕ್ಕೆ ವಿಷಾದ ವ್ಯಕ್ತ ಪಡಿಸಿದಂತಿತ್ತು...


ವೈದ್ಯಲೋಕದಲ್ಲಿ ಶಾಶ್ವತ ಪರಿಹಾರವಿಲ್ಲದ, 2 ಲಕ್ಷ ಜನರಲ್ಲಿ ಒಬ್ಬರಿಗೆ ಮಾತ್ರ ಕಾಣಿಸಿಕೊಳ್ಳೋ, ಹೆಚ್ಚಿನ ಸಂದರ್ಭಗಳಲ್ಲಿ ಹಠಾತ್ ಮರಣ ಕಲ್ಪಿಸುವ, ಬದುಕಿರುವಷ್ಟು ಕಾಲ ಸಣ್ಣ ಪುಟ್ಟ ಕಿರಿಕಿರಿಗಳಿಂದ - ನೋವುಗಳಿಂದ ಕಾಡಿ, ಮನಸು ದೇಹಗಳ ಜರ್ಜರಿತವಾಗಿಸುವ, ಮೇಲ್ನೋಟಕ್ಕೆ ಕಾಣಿಸದೇ ಒಳಗೇ ಕೊಲ್ಲುವ ಅಪರೂಪದ ರೋಗಕ್ಕೆ ಪರಿಹಾರವೆಂದರೆ ಜೀವನ ವಿಧಾನದ ಬದಲಾವಣೆ.
ಹೇಗೆಂದರೆ ದೇಹ ಮತ್ತು ಮನಸಿಗೆ ಒತ್ತಡವಾಗುವಂತಹ ಶ್ರಮದ ಕೆಲಸಗಳನ್ನು ಬಿಟ್ಟು - ಸಣ್ಣ ಪುಟ್ಟ ಕಾರ್ಯಗಳನ್ನು ಮಾಡಿಕೊಂಡು - ವೇಗದ ದಿನಮಾನದಲ್ಲಿ ನಿಧಾನ ಗತಿಯ ಬದುಕ ರೂಢಿಸಿಕೊಂಡು - ದುಡಿದ ದುಡ್ಡಲ್ಲಿ ಹೆಚ್ಚಿನ ಪಾಲನ್ನು ಆಸ್ಪತ್ರೆ ಮತ್ತು ಗುಳಿಗೆಗಳಿಗೇ ವ್ಯಯಿಸುತ್ತಾ - ಸಾವನ್ನು ಮುಂದೂಡುವ ಪ್ರಯತ್ನದಲ್ಲಿ ಇರುವಷ್ಟು ಕಾಲ ನಗುನಗುತ್ತಾ ಬದುಕಿರುವುದು.

ದಿನಕ್ಕೊಂದು ಹೊಸ ಆಸೆ ಕನಸುಗಳು ಹುಟ್ಟಿ ನಿಲ್ಲುವ ವಯಸಲ್ಲಿ ಎಲ್ಲ ಆಸೆ ಕನಸುಗಳನ್ನು ಪ್ರಯತ್ನಪೂರ್ವಕವಾಗಿ ಅದುಮಿಟ್ಟು ಬದುಕಿರುವುದು...
ಈ ಬದುಕು ನನ್ನದಲ್ಲ ಎನ್ನುವಂತೆ...

ಬದುಕಿನೆಡೆಗೆ ಕಡು ವ್ಯಾಮೋಹಿ ಹುಡುಗ ನಾನು.
ನನ್ನ ಮೋಹವೆಲ್ಲ ಕಳಚಿಬೀಳುವಂತೆ - 
ನನ್ನ ಕನಸುಗಳ -
ನನ್ನ ಆಸೆ ಆಕಾಂಕ್ಷೆಗಳೆಲ್ಲದರ ಸಾವಿಗೆ -
ವೈದ್ಯಲೋಕ ಇಟ್ಟ ಮಾರುದ್ದದ ಹೆಸರು - - -
HYPERTROPHIC OBSTRUCTIVE CARDIOMYOPATHY.....
ಈ ಹೆಸರು ನಂಗಿನ್ನೂ ಕಂಠಸ್ತವಾಗಿಲ್ಲ...:):):)

ಸ್ವಾವಲಂಬಿ ಸಾವಿನೆಡೆಗೆ ಭಯವಿಲ್ಲ.
ಪರಾವಲಂಬಿಯಾಗುವ ಬದುಕಿನೆಡೆಗೆ ಸಣ್ಣ ಕಂಪನ...



                                             {s}{s}{s}{s}{s}



ಮರೆಯಲಾಗದ ಚಿತ್ರಗಳು.....
ಹೊಸ ಕನಸುಗಳ ಹೆಣೆಯಲಾರದ ಮನಸಲ್ಲಿ...
ಹಳೆ ನೆನಪುಗಳದೇ ಗದ್ದಲ - 
ಬರೀ ಗೊಂದಲ.....












ನಿಮ್ಮನ್ನೂ ಸೇರಿದಂತೆ ಒಲವ ಧಾರೆ ಹರಿಸಿ -

ಬದುಕಿಗೆ ಬಣ್ಣತುಂಬಿ -
ಹೊಸ ಕನಸಿಗೆ ಜೀವ ನೀಡಲು ಪ್ರೇರಕ ಶಕ್ತಿಯಾದ ಎಲ್ಲ ಜೀವಗಳಿಗೆ -
ನನ್ನ ನೆನಕೆಗಳು ಸಲ್ಲುತ್ತವೆ...
ಈ ಪ್ರೀತಿ ಹೀಗೇ ಇರಲಿ ಸದಾ...


\\\***@@@@@***///