Friday, February 7, 2025

ಗೊಂಚಲು - ನಾಕ್ನೂರಾ ಐವತ್ತು ಮತ್ನಾಕು.....

ಇರಬೇಕಿತ್ತು ನೀನು.....



ಕರೆ ಮಾಡಿ ಶುಭವನುಲಿಯಲು ಅವಳ ಜಂಗಮವಾಣಿ ನನ್ನ ಬಳಿಯೇ ಇದೆ...
ವಿಳಾಸವಿಲ್ಲದ ಪತ್ರ ಅವಳ ತಲುಪಬಹುದಾ...!?
ಇಂದು ನಿನ್ನ ಹುಟ್ದಬ್ಬಾನೇ ಅಂದ್ರೆ,
ಬೆಳ್ಬೆಳಗ್ಗೆ ಫೋನ್ ಬಂದದ್ ನೋಡಿ ಎಂತಾ ಆತನಾ ಹೇಳಿ ಹೆದ್ರಕಂಡತ್ತು ಅಂತ ಗೊಣಗ್ತಿದ್ದೋಳು ತನಗೇ ಅಂತ ಸಂಭ್ರಮವ ಬಯಸಿದ್ದೇ ಕಂಡಿಲ್ಲ; ನಿನ್ ಬಳ್ಗಕ್ಕೆಲ್ಲಾ ಎನ್ ಲೆಕ್ದಲ್ಲಿ ಒಂದ್ ಸಣ್ಣ ಚೊಕ್ಲೇಟಾರೂ ಕೊಡ್ಸು ಅಂತಿದ್ದೋಳ ಲೆಕ್ಕದ ಪಟ್ಟಿಯೂ ಅನಾಥ ಈಗ...
ಮಗನ ಹೆಸರ್ಹೇಳಿ ಕರೆ ಮಾಡಿ ಶುಭ ಕೋರುವ ಹುಡ್ಗೀರೆಲ್ಲ ಅವಳ ಭಾವದಲ್ಲಿ ಪಾಪದ ಕೂಸ್ಗೊ - ಸಂಜೆ ಹೊತ್ತಿಗೆ, 'ನಿನ್ನ ಗೆಳತೀರ ಫೋನ್ ಕಾಲ್ದಲ್ಲಿ ಇಂದು ಊಟ ಮಾಡ್ಲೂ ಪುರ್ಸೊತ್ತಿಲ್ಲೆ' ಅನ್ನೋ ಖುಷಿಯ ಆರೋಪ ಬೇರೆ...
ನನ್ನ ಬೈದಷ್ಟೇ ಪ್ರೀತಿಯಲಿ ನನಗಾಗಿ ಅವಳ ದೇವರನೂ ಬೈಯ್ಯಬಲ್ಲವಳು ಬದುಕ ತಲಬಾಗಿಲಲಿ ಹಚ್ಚಿಟ್ಟು ಹೋದ ದೀಪದ ಬೆಳಕಲೇ ಬಾಳ ಬಟ್ಟೆ ನೇಯ್ದುಕೊಳ್ಳುತಿರುವ ನಾನು...
***

ಶಣ್ಣೀ -
ನಿನ್ನ ಹುಟ್ಟನ್ನು ಸಂಭ್ರಮಿಸಲು ನನ್ನಲ್ಲಿ ನೂರು ನೆಪಗಳಿದ್ದರೂ;
ನೀನಿಲ್ಲ -
ನನ್ನೊಡನೆ ನೀನಿಲ್ಲ ಈಗ ಎಂಬ ಒಂದು ಕಾರಣವೇ ಸಾಕು, ನಿನ್ನ ಹುಟ್ಟಿನ ಮೆರವಣಿಗೆಗೆ ನನ್ನಲಿರುವ ನೂರು ಕಾರಣಗಳನೂ ನುಂಗಿ ನೊಣೆಯುತ್ತದೆ - ಸರ್ವ ಬಣ್ಣ ಮಸಿ ನುಂಗಿದಂಗೆ...
ಸಾವು ನೆನಪಾಗದ ಹಾಗೆ ಹುಟ್ಟನು ಹಬ್ಬವಾಗಿಸುವುದು ಹೇಗೆ ಹೇಳೂ - ಸಾವೇ ಎದೆಗೂಡಿನ ಪರಿಚಾರಿಕೆಯಾದಲ್ಲಿ...
ನೀ ಬಿಟ್ಟು ಹೋದ ಖಾಲಿಯನ್ನು ನಿನ್ನ ನೆನಕೆಗಳೂ ತುಂಬಿಕೊಡುತಿಲ್ಲ; ಗಾಯಕ್ಕೆ ಉಪ್ಪು ಸವರಿದ ಹಾಂಗೆ ಖಾಲಿಗೆ ಉರಿ ಹಚ್ಚುತ್ತದೆ ನಿನ್ನ ನೆನಪುಗಳ ಕೇಕೆ...

ಏನ್ಗೊತ್ತಾ -
ಯಾವುದೇ ಹುಟ್ಟಿಗೂ ನಗುವೊಂದನೇ ಹರಸುವುದು ಯಾವತ್ತಿನ ರೂಢಿ ರಾಗ ನಂದು...
ಬರೀ ನಗೆಯ ಚಿತ್ರವಾಗಿ ಗೋಡೆಯನಲಂಕರಿಸಿದ ನಿನಗೆ ಹೇಗೆ ನಗೆಯನು ಶುಭನುಡಿವುದು ಹೇಳು ಇಂದು...

ಆದಾಗ್ಯೂ -
ನಿನ್ನ ನೆನಹುಗಳ ಕನ್ನಡಿಯ ಮುಖ ಒರೆಸಿ ಹೊಸತಾಗಿಸಿಕೊಳ್ಳುವ ಹಂಬಲಕೆ ಈ ತೇದಿ ಒಂದು ಚಂದ ನೆಪ ನೋಡು...
ನಿನ್ನ ಹುಟ್ಟಿನ ದಿನದ ನೆನಪಲ್ಲಿ ನನ್ನ ಹುಟ್ಟಿನ ಅಳುವೊಂದಿದೆ - ನಿನಗೆ ಶುಭಕೋರುವುದೆಂದರೆ ನನಗಾಗಿ ನಾ ಪ್ರಾರ್ಥನೆ ಗೈದಂಗೆ...
***

ಇರಬೇಕಿತ್ತು ನೀನು -
ಪ್ರೀತಿಯಿಂದ ಜಗಳಾಡಲು, ಜಗಳ ಆಡಿ ಪ್ರೀತಿ ಕೇಳಲು...
ನಿಸೂರಾಗಿ ಜಗಳ ಮಾಡಬಹುದಾದ, ಶರಂಪರ ಜಗಳದ ನಂತರವೂ ನಿಸೂರಾಗಿರಬಹುದಾದ ಮಡಿಲು ನಿನ್ನ ಹೊರತು ಬೇರೊಂದಿದ್ದೀತಾ...
ಇರಬೇಕಿತ್ತು ನೀನು -
ಶುಭಕೋರುವ ಖುಷಿಗಾದರೂ...
ಲವ್ಯೂ ಕಣೇ ಸುಂದ್ರೀ... 😘😘
***

ನಕ್ಷತ್ರ ದೀಪವೇ,
ಶುಭವೇ ನೀನು - ನಿನಗೇ ಶುಭ ಕೋರುವ ಹುಂಬ ಪಾಮರನು ನಾನು...
ಇಂತೆಯೇ ನಗೆಯಾಗಿ ಎದೆಯಲುಲಿಯುತ ಉಳಿದುಬಿಡೇ ಹುಡುಗೀ...
ಉಸಿರು ನೀಡಿದ, ಬಾಳನಾಳಿದ ಕರುಳ ಬೇರಿಗೆ ಪ್ರೀತಿ ಪ್ರೀತಿ ಪ್ರೀತಿ......... 🥰😘😘
ಆಯಿ ಅಂಬೋ ಮುದ್ಮುದ್ದು ಪ್ರೀತಿ ಉತ್ಸವ... 💞😘😘
&&&

ಊರ ಗದ್ದೆ ಬಯಲಿನ ಕಳೆಗಳ ನಡುವೆ ಸಡಗರದಿ ಕಾಳು ಹೆಕ್ಕುವ ಹಕ್ಕಿಯ ಸರಬರದಲಿ ಕಿವಿ ಕವಿತೆಯನರಸುವಾಗ ನಿನ್ನ ನೆನಪುಗಳ ಮಂಜು ಹನಿಯಲಿ ಮೋರೆ ತೊಳೆಯುತ್ತೇನೆ...
ಅಕ್ಕ ಹೊಸಿಲ ತೊಳೆದ ಗೋಮಯ ನೀರ ತೇವ ಪಾದಕಂಟುವಾಗ ಮೂರೆಳೆಯ ರಂಗೋಲಿ ನಿನ್ನ ಹಾಡು ಗುನುಗುತ್ತದೆ...
ಅಮ್ಮನೆಂದರೆ ಮಗುವ ಎದೆಯ ಧ್ಯಾನ ಎಂದಂತೆ ಅರಳುವ ತಂಪು ತಂಪು ಮಡಿಲ ಕಾವ್ಯ ಕಂಪಿನ ಬೆಳಗು...
___ ನಿನ್ನ ನೆನಪು...

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು... :)