Sunday, July 1, 2012

ಗೊಂಚಲು - ಮೂವತ್ತು + ಮೂರು.....


ಮಳೆ ಹಾಗೂ ಬೆಳದಿಂಗಳು ಬೆರೆತ
ಒಂದು ಹಳೆಯ ನೆನಪು.....





ಅಂದು 2006ನೇ ಇಸವಿಯ ಮಾರ್ಚ್ ತಿಂಗಳ ಹತ್ತನೇ ದಿನ.
ಆಗಿನ್ನೂ ನಾನು ಮಲೆನಾಡಿನ ಪುಟ್ಟ ಹಳ್ಳಿಯೊಂದರಲ್ಲಿ ಕೃಷಿಕನಾಗಿ  ಪ್ರಕೃತಿಯೊಡನೆ ಭಾವಗಳ ಬೆಸಗೊಂಡು  ಬದುಕು ಕಟ್ಟಿಕೊಳ್ಳಲು ಶ್ರಮಿಸುತ್ತಿದ್ದ ಕಾಲ.
ಆಗ ಮಧ್ಯ ಬೇಸಿಗೆಯಲ್ಲಿ ಸುರಿದ ಅಕಾಲ ಮಳೆಯ ದಿನದ ನನ್ನೊಳಗಿನ ಭಾವಾವೇಶಗಳಿಗೆ ಅಕ್ಷರ ರೂಪ ನೀಡುವ ಪ್ರಯತ್ನ ಮಾಡಿದ್ದೇನೆ.
ಓದಿ...
ನಕ್ಕು...
ಮರೆತು ಬಿಡಿ...

ಮೂಗನ್ನರಳಿಸುತ್ತಿದೆ - ಮಣ್ಣ ಕಂಪು.
ಮೊದಲ ಮಳೆಗೆ ಭೂಮಿ ಸ್ಪಂದಿಸುತ್ತಿದೆ.
ವರ್ಷದ ಮೊದಲ ಮಳೆ ತುಂಬಾ ಮುಂಚಿತವಾಗಿ ಅಕಾಲದಲ್ಲಿ ಅತಿವೃಷ್ಟಿ ಎಂಬಂತೆ ಸುರಿದು ಬಿಟ್ಟಿದೆ.
ಭುವಿಗೆ ಮೊದಲ ಮಿಲನದ ಸಂಭ್ರಮ.
ಪಾಪ ಭಯವೂ ಆಗಿದ್ದೀತು - ಅನಿರೀಕ್ಷಿತ ಆರ್ಭಟ ಅಲ್ಲವಾ.
ಆಗಸ ಹುಚ್ಚೆದ್ದುಬಿಟ್ಟಿದೆಯೇನೋ - ಭುವಿಯ ಯಾವುದೋ ಚೆಲುವ ಕಂಡು.
ಬೆಳಿಗ್ಗೆ ಎರಡು ತಾಸುಗಳ ಕಾಲ ಒಂದೇ ಸಮ ಮುಸಲಧಾರೆ.
ಆಗಸ ಮತ್ತು ವಸುಧೆಯ ಪ್ರೇಮೋನ್ಮಾದ ಏನೋ ಖುಷಿ ಮತ್ತೇನೋ ಆತಂಕ ಎರಡನ್ನೂ ಮೂಡಿಸುತ್ತದೆ ರೈತನ ಮನದಲ್ಲಿ.
ಮಳೆ ಯಾವತ್ತಿದ್ದರೂ ಸಂಭ್ರಮವೇ.
ಆದರೆ ಅಕಾಲದಲ್ಲಾದ್ದರಿಂದ ಸಣ್ಣ ಆತಂಕ.

ಸಂಜೆ ಕೂಡಾ ಮೋಡ ಮುಸುಕಿದ ವಾತಾವರಣ.
ಸೂರ್ಯ ಮುಳುಗುವ ಮುಂಚೆಯೇ ಮಧುರ ಕತ್ತಲು.
ಬೆಳಗಿನ ಮಳೆಯ ತಂಪು ಮತ್ತು ಮಣ್ಣ ಗಂಧ ಗಾಳಿಯಲ್ಲಿ ಇನ್ನೂ ಜೀವಂತ...
ಅವುಗಳನ್ನು ಆಸ್ವಾದಿಸ್ತಾ ಅಂಗಳದಲಿ ನಿಂತಿದ್ದೆ.
ಎದುರಿನ ಫಲವಂತ ಹಲಸಿನ ಮರದ ಹಸಿರೆಲೆಗಳ ನಡುವೆ ಎರಡು ಹೆಸರರಿಯದ ಚಂದದ ಹಕ್ಕಿಗಳು ಸರಸವಾಡ್ತಾ ಇದ್ವು.
ನಂಗದು ಪ್ರಣಯದಾಟದಂತೆ ತೋರಿ ನನ್ನಲ್ಲೂ ಎಲ್ಲೋ ಏನೋ ಸಣ್ಣ ಕಂಪನ.
ಒಂದು ಮಳೆಹನಿ ಮೈಮೇಲೆ ಬಿತ್ತು.
ಬೇಜಾರಾಯ್ತು.
ಯಾಕ್ ಗೊತ್ತಾ -
ಬಾನಾಡಿಗಳ ಮಿಲನ ಸಂಭ್ರಮಕ್ಕದು ಅಡ್ಡಿ ಮಾಡುತ್ತೇನೋಂತಾ.
ಆದ್ರೆ ಅಷ್ಟರಲ್ಲಾಗಲೇ ಅವು ದೂರ ಹಾರಿ ಹೋದ್ವು.
ಆಮೇಲೆ ಶುರುವಾಯ್ತು ನೋಡಿ ನನ್ನೊಳಗೆ ಬೆಚ್ಚಗಿನ ಕನಸುಗಳ ಓಕುಳಿ.
ಪ್ರಕೃತಿಯ ಪ್ರತೀ ಚರ್ಯೆಯೂ ಪ್ರಣಯದಾಟದಂತೆ ಕಂಡು ಮನಸಿಗೇನೋ ಹಿತವಾದ ರೋಮಾಂಚನ.
ಗಾಳಿಯ ತಂಪಿಗೆ ಬಾಗಿ ತೂಗಾಡಿ ಒಂದಕ್ಕೊಂದು ತಾಕುವ ದೂರದ ಬೆಟ್ಟದ ಮೇಲಿನ ತರುಲತೆಗಳು ಒಂದನ್ನೊಂದು ಮುತ್ತಿಟ್ಟು ಸರಸವಾಡಿ ಆನಂದಿಸ್ತಿವೆಯೇನೋ ಎಂಬ ಭಾವ.
ಅದರಲ್ಲೂ ಬೆಟ್ಟದ ತಲೆಯ ಮೇಲೆ ಎಲ್ಲಕ್ಕೂ ಎತ್ತರದಲ್ಲಿ ತಲೆದೂಗುವ ಬಿದಿರ ಮೆಳೆಗಳಂತೂ... 
ಓಹ್.!! 
ಮಾತಲ್ಲಿ ಹೇಳಲಾಗದ ಭಾವಗಳ ಸಂಕ್ರಾಂತಿ.

ಬಿರು ಬೇಸಿಗೆ ಇರಬೇಕಾದ ಒಂದು ದಿನದಲ್ಲಿ
ಜಡಿ ಮಳೆಯ ಬೆಳಗು - ಮೋಡಗಟ್ಟಿದ ಸಂಜೆ - ಈಗ ರಾತ್ರಿ ನಿಚ್ಛಳ ಬೆಳದಿಂಗಳು...
ಎಲ್ಲ ಸೇರಿ ಮನಕೆ ಅರಳು ಮರಳು.
ಪ್ರಕೃತಿಯ ಆಟ ಎಂಥ ವಿಚಿತ್ರ...
ಎಂಥ ಸೊಗಸು...

ಅದು ಚಾಲಿ ಅಡಿಕೆಯ ಕೆಲಸದ ಸಮಯ.
ನಾನು ಒಬ್ಬಂಟಿ ಕೆಲಸಗಾರ.
ನನ್ನ ಕೆಲಸಕ್ಕೆ ಸಾಥಿಯಾಗಿ ಟೇಪ್ ರೆಕಾರ್ಡಿನಲ್ಲಿ ಹದವಾಗಿ ಗುನುಗುವ ಮಧುರ ಪ್ರೇಮ ಗೀತೆಗಳು...
ಅದು ಹಳೆಯದಾದಷ್ಟೂ ಸೊಗಸು ಹೆಚ್ಚು.

ಬೆಳಗಿನಿಂದ ರಾತ್ರಿಯವರೆಗೂ ಅಡಿಕೆ ಕೆಲಸದೊಂದಿಗೆ ಜೊತೆಯಾದ ಏಕಾಂತ...
ಮನಸಿಗೂ ಮೈಗೂ ತುಂಬು ಹರೆಯ...
ಸಹಜವಾಗಿ ಮನದಲ್ಲಿ ಜೀಕುವ ಪ್ರೇಮ, ಪ್ರಣಯ ಭಾವಗಳ ಕನಸಿನ ಜೋಕಾಲಿ...
ಜೊತೆಗೆ ಎಲ್ಲೋ ಓದಿದ ಯಾವುದೋ ಪೋಲಿ ಪುಸ್ತಕದ ಸಾಲುಗಳ ನೆನಪು...
ಸಣ್ಣಗೆ ಕಿವಿಯಲ್ಲಿ ಮೊರೆವ ಪ್ರೇಮಗೀತೆಯ ಇನಿದನಿ...
ಮನಕೆ ಎಂಥಾ ಮುದವಿತ್ತು.

ಪ್ರೇಮ ಭಾವದ ಕಲ್ಪನೆಯೇ ಮೈಮನಗಳಲ್ಲಿ ಪುಳಕವೆಬ್ಬಿಸುವ ವಯಸಲ್ಲಿ - ಹಿತವಾದ ಏಕಾಂತದಲ್ಲಿ ಮಧುರ ಪ್ರೇಮ ಗೀತೆಗಳ ಕೇಳುತ್ತಾ ಕೆಲಸ ಮಾಡ್ತಾ ಇದ್ರೆ ಎಂಥ ಕೆಲಸವೂ ನಿರಾಯಾಸ...
ಕಣ್ಣಲ್ಲಿ  ಪ್ರೇಮಸೌಧ...
ಮೈಯಲ್ಲಿ ಪ್ರಣಯ ಝೇಂಕಾರ...

ಅಂತಹುದರಲ್ಲಿ ಇಂದು ಮಳೆಯೂ - ಬೆಳದಿಂಗಳೂ ಜತೆಯಾಗಿಬಿಟ್ಟಿವೆ...
ಎರಡೂ ನನ್ನ ಬಹು ಇಷ್ಟದ ವಿಷಯಗಳು...
ಹಾಗಾಗಿ ಅಕಾಲ ಮಳೆಯ ಆತಂಕವನ್ನೂ ಮೀರಿ ಮನದಲ್ಲಿ ಎಷ್ಟೆಲ್ಲ ಆನಂದಮಯ ಭಾವಗಳ ಸಮ್ಮಿಲನ...

ಕಣ್ತುಂಬ ಬೆಳದಿಂಗಳ ತುಂಬಿಕೊಂಡು ದಿಂಬಿಗೆ ತಲೆಯಿಟ್ಟರೆ ಮನದೊಳಗಣ ಎಷ್ಟೆಲ್ಲ ಆಸೆಗಳು ಕನಸುಗಳಾಗಿ ಜಾತ್ರೆ ನೆರೆದಿದ್ದವು ಕಣ್ಣ ಮುಂದೆ...
ಕನಸು ತುಂಬಿದ ಸಣ್ಣ ನಿದ್ದೆಯ ನಂತರದ ಮಧ್ಯ ರಾತ್ರಿಯ ಕಥೆ ಕೇಳ್ತೀರಾ...
ಅದು
ಪ್ರೇಮದ ಕನಸು ಪ್ರಣಯದ ಹಾದಿ ತುಳಿವ ಪ್ರೇಮಭಾವದ ಪರಾಕಾಷ್ಠೆಯ ಸಮಯ...
ಬೆಳಗಿನಿಂದ ಪ್ರೇಮಭಾವದ ರೋಮಾಂಚನದಿಂದ ಮೈಯಲೆಲ್ಲ ಗಡಿಬಿಡಿಯಿಂದ ಹರಿದಾಡುತ್ತಿದ್ದ ಒಳಗೇ ಕೆರಳಿದ ರಕ್ತ
ಒಮ್ಮೆಲೆ ತನ್ನ ಮಿತಿಗಿಂತ ಹೆಚ್ಚು ಬಿಸಿಯಾಗಿ
ದೇಹದ ಕೆಳಭಾಗಕ್ಕೆ ಹರಿದು
ನಾಭಿಯಾಳದ ಯಾವುದೋ ನರಕ್ಕೆ ನುಗ್ಗಿ -
ಒತ್ತಡದಿಂದ -
ಅಲ್ಲೇಲ್ಲೋ ಹೆಪ್ಪುಗಟ್ಟಿದ ಸೃಷ್ಟಿಜಲ ಕರಗಿ -
ಛೀ..!!
ಒಳ ಚೆಡ್ಡಿಯಲ್ಲಿ ಮಳೆ...
ಅಂಗುಷ್ಠದಿಂದ ನೆತ್ತಿಯವರೆಗೂ ಬೆವರ ಧಾರೆ...
ಏನೋ ಅರಿಯದ ಸುಖದ ಸುಸ್ತು...
ಸುಸ್ತಿನಿಂದಾಗಿ ಬೆಳಗಿನವರೆಗೆ ಮತ್ತೆ ಕನಸುಗಳೂ ಬಾರದ ಗಾಢ ನಿದ್ದೆ...
ಎಂಥ ಹೊಸತನದ ಸೊಬಗಿತ್ತು ದಿನಗಳಿಗೆ...

ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ಪ್ರಕೃತಿ ಮಡಿಲಲ್ಲಿ ಒಡನಾಟ -
ರಾತ್ರಿಯ ಮೊದಲ ಜಾವವೆಲ್ಲ ಅಂಗಳದಲ್ಲಿ ನಿಂತು ಚಂದಿರನ ಬೆಳಕಲ್ಲಿ ಕಾಣುವ ಚಂದ್ರಿಕೆಯೆಡೆಗಿನ ಕನಸು -
ಎರಡೂ ಸೇರಿ ಬಡಿದೆಬ್ಬಿಸಿದ ಕಲ್ಪನಾ ಪ್ರೇಮಭಾವ ಹಾಸಿಗೆ ಸೇರುವ ಹೊತ್ತಿಗೆ ಉತ್ಕಟ...
ಮನದ ಪ್ರೇಮ ದೇಹದ ಜೊತೆ ಸೇರಿ ಮಧ್ಯರಾತ್ರಿಯಲ್ಲಿ ಅರಿವೇ ಆಗದೇ ಕನಸಲ್ಲೇ ಬ್ರಹ್ಮಚರ್ಯದ ಅರ್ಧ ಸಾವು...

ನಂತರ ಪ್ರೇಮದ ಉತ್ಕಟತೆ ಕಾಮನ ಆವೇಶದಲ್ಲಿ ಕರಗಿ,
ಪ್ರೇಮ - ಕಾಮಗಳೇ ಜೋಗುಳವಾಗಿ,
ಮನಸೂ - ದೇಹವೂ ಸುಖದ ಸುಸ್ತಿನಿಂದ ವಿರಾಮವ ಬಯಸಿ,
ಏನೇನೂ ಇಲ್ಲದ ನಿರುಮ್ಮಳ ಭಾವದ ಮತ್ತೊಂದು ರೀತಿಯ ಸುಖದ -
ಪ್ರಚ್ಛನ್ನ ನಿದ್ರೆಯ ಕಾಲ.
ಮುಂದಿನ ಬೆಳಗಿನವರೆಗೆ...

ಮಲೆನಾಡ ಮಣ್ಣಲ್ಲಿ ಬೆಳೆದ ಹುಡುಗರಲ್ಲಿ ಇಂಥ ಎಷ್ಟೆಷ್ಟು ಅನುಭವಗಳೋ...
ಅದರಲ್ಲೂ ಮಳೆಗಾಲದಲ್ಲಿ...
ಪ್ರಕೃತಿಯ ಭಾವಗಳನ್ನು ತನ್ನದಾಗಿಸಿಕೊಂಡು ಆಸ್ವಾದಿಸಬಲ್ಲ ಸ್ವಲ್ಪೇ ಸ್ವಲ್ಪ ರಸಿಕತೆ ಇರುವ ಯಾರೇ ಮಲೆನಾಡ ಕೂಸು, ಮಾಣಿಗಳನ್ನು ಕೇಳಿ ನೋಡಿ -
ಹೊರಗೆ ಧೋ ಮಳೆ ಸುರಿಯುತಿರುವಾಗ -
ಒಳಗೆ - ತಮ್ಮ ಮನದೊಳಗೆ
ಸುರಿದು ಕಾಡುತ್ತಿದ್ದ ಬೆಚ್ಚನೆ ಭಾವಗಳ ನೂರು ಕಥೆ ಹೇಳಿಯಾರು...

@@@ % @@@

ಆದ್ರೆ ಇಂದು ನನ್ನಂಥ ಎಷ್ಟೋ ಹಳ್ಳಿ ಬಿಟ್ಟು ಪೇಟೆ ಸೇರಿದ ಮಲೆನಾಡಿಗರಿಗೆ ಇವೆಲ್ಲ ಬರೀ ನೆನಪಷ್ಟೇ ಎಂಬುದು ನೋವಿನ ಸಂಗತಿ.
ನಾನಂತೂ ಮಲೆನಾಡ ಜಡಿಮಳೆಯಲ್ಲಿ ಮನಸೋ ಇಚ್ಛೆ ಮೈತೋಯಿಸಿಕೊಂಡು ಮೂರು ವರ್ಷಗಳೇ ಸಂದು ಹೋದವು.
ಬೆಂದಕಾಳೂರಲ್ಲಿ ಸುರಿವ ಮಳೆಯೂ ಶುದ್ಧ ಅಂತ ಮನಸಿಗನ್ನಿಸಲ್ಲ.
ಮಲೆನಾಡ ಮಳೆಯಲ್ಲಿ ತೋಯ್ದು ತೊಪ್ಪೆಯಾಗುತ್ತಿದ್ದ ದೇಹ - ಮನಸುಗಳು ಅನುಭವಿಸುತ್ತಿದ್ದ ಸುಖವೇ ಬೇರೆ.
ಮಳೆಯೊಂದಿಗೆ ಗಾಳಿಯೂ ಬೆರೆತು ತೋಯ್ದ ದೇಹದಲ್ಲಿ ಹೊಟ್ಟೆಯೊಳಗಿಂದ ನಡುಕ...
ಮಳೆಯ ಸದ್ದು ಮನದಿ ಅರಳಿಸುವ ಮೌನ -
ಹೊಯ್ದಾಡುವ ತರವೆ ಗಿಡಗಳು
ವಿಚಿತ್ರ ಶಬ್ದ ಮಾಡುವ ತೆಂಗಿನ ಗರಿಗಳು
ಅಲ್ಲೆಲ್ಲೋ ಗುಡ್ಡದ ತುದೀಲಿ ಒಂಟಿ ಒಣಗಿದ ಮರದ ಮೇಲೆ ಒಮ್ಮೆ ಮೈಕೊಡವಿ ಹಾಗೇ ಕೂತ ಗಿಡುಗ...
ಜೊತೆಗೆ ಜಾಸ್ತಿ ತೋಯಬೇಡ ಎಂಬ ಅಮ್ಮನ ಕಾಳಜಿಯ ಗದರಿಕೆ...
ಇವನೆಲ್ಲಾ ನೋಡುತ್ತಾ, ಆಸ್ವಾದಿಸ್ತಾ ಪಡೆವ ಅನಿರ್ವಚನೀಯ ಸುಖ ಅದು ಭಾಷೆಗೆ ನಿಲುಕದ ಭಾವ ಗೀತೆ.
ಯಾವ ಕೊಪ್ಪೆ - ಯಾವ ಕಂಪನಿ ಕೊಡೆಗಳೂ ಅಲ್ಲಿಯ ಮಳೆಯಲ್ಲಿ ಸಂಪೂರ್ಣವಾಗಿ ಮೈತೋಯದಂತೆ ತಡೆಯಲಾರವು.
ಮಳೆಯಲಿ ನೆನೆದು ಭಾವಗಳ ಬೆಳೆ ಬೆಳೆವ ಹಸಿವಾಗುತಿದೆ...



Thursday, June 14, 2012

ಗೊಂಚಲು - ಮೂವತ್ತೆರಡು.....

ದೇವರ ನೋಡುವ ಕಣ್ಣು.....

ಸಕಲ ಜೀವ ಜಂತುಗಳಲ್ಲಿ ಮನುಷ್ಯ ಪ್ರಾಣಿಯೊಂದೇ ಇರಬೇಕು...
ಮನದಲ್ಲಿರಬೇಕಾದ ದೇವರನ್ನು ಒಯ್ದು ಗುಡಿಯ ಗೋಡೆಗಳ ಮಧ್ಯೆ ಇಟ್ಟು...
ದಿನಕ್ಕೆರಡು ಬಾರಿ ಊಟವಿಕ್ಕಿ ಬಿದ್ದಿರು ಸುಮ್ಮನೇ ಅಂತಂದು ಬಾಗಿಲು ಹಾಕಿ ತನ್ನ ಕರ್ಮ ಕೂಪಕ್ಕೆ ಧೈರ್ಯದಿಂದ ಸಾಗಬಲ್ಲವನು...
ಗುಡಿಯ ಹುಂಡಿಗೆ ನಾಕು ಕಾಸು ಹಾಕಿ ಕೆನ್ನೆ ತಟ್ಟಿಕೊಳ್ಳುತ್ತಾ ಪಾಪ ಪರಿಹಾರವಾಯಿತೆಂದುಕೊಂಡು ಹೊಸ ಪಾಪಕ್ಕೆ ಅಣಿಯಾಗಬಲ್ಲವನು...
ಎಂಥ ದುರಂತ...

ದೇವರಿದ್ದಾನಾ..? 
ಗೊತ್ತಿಲ್ಲ.
ಆದ್ರೆ ಈ ದೇವರ ಕುರಿತು ಎಷ್ಟೊಂದು ನಂಬಿಕೆಗಳು, ಮೂಢನಂಬಿಕೆಗಳು ತುಂಬಿ ತುಳುಕುತ್ತಿವೆ. ಆತನನ್ನು ಸಂಪ್ರೀತಗೊಳಿಸಲೋಸುಗ ಏನೆಲ್ಲ ಪಾಡು ಪಡ್ತಾರೆ ಈ ಮಂದಿ. 
ಎಲ್ಲೋ ಗುಡಿಯಲ್ಲಿನ ಕಲ್ಲ ಶಿಲೆಯಲ್ಲಿ, ಎಂತೆಂಥದೋ ಅರ್ಥ ಕಾಣದ ಆಚರಣೆಗಳಲ್ಲಿ, ಉರುಹೊಡೆದ ಮಂತ್ರಗಳಲ್ಲಿ, ಎರಗುವ ಸಾಷ್ಟಾಂಗಗಳಲ್ಲಿ, ಪ್ರದರ್ಶನದ ಭಕ್ತಿಯಲ್ಲಿ, ಸಂಖ್ಯೆಗಳ ಜಾಲಕ್ಕೆ ಸಿಕ್ಕ ಭಕ್ತಿಯಿರದ ಪ್ರದಕ್ಷಿಣೆಗಳಲ್ಲಿ ಅಲ್ಲೆಲ್ಲ ಭಗವಂತನ ಹುಡುಕುವ ಉಹುಂ ಹೊಂದಬಯಸುವ ಭ್ರಮೆ ತುಂಬಿದ ವ್ಯರ್ಥಾಲಾಪ. 
ಇಷ್ಟರ ನಡುವೆ ಯಾವ ದೇವರು ಶ್ರೇಷ್ಠ ಎನ್ನುವ ದ್ವಂದ್ವ ಬೇರೆ.
ಕಾಣದಿರುವ ದೇವನಿಗೂ ಜಾತಿ ಮತಗಳ ಸೋಂಕು.

ಇಷ್ಟಕ್ಕೂ ನಾನು ದೇವರ ಅಸ್ತಿತ್ವವನ್ನು ವಿಮರ್ಷಿಸ್ತಿರೋದು ನಾಸ್ತಿಕನೆನಿಸಿಕೊಳ್ಳಬೇಕೆಂಬ ಹಮ್ಮಿನಿಂದಲ್ಲ. 
ಒಪ್ಪುತ್ತೇನೆ ದೇವರೆಡೆಗಿನ ನಂಬಿಕೆಯಲ್ಲೂ ಒಂದಿಷ್ಟು ಧನಾತ್ಮಕ ಅಂಶಗಳಿವೆ.
ಆದರೆ ದೇವರೆಡೆಗಿನ ಭಕ್ತಿ ಹಾಗೂ ಆಚರಣೆಗಳ ಹೆಸರಲ್ಲಿ ನಡೆಯುವ ಆಡಂಬರ, ಅನಾಚಾರಗಳು ಮತ್ತು ಕಳೆಯಂತೆ ಬೆಳೆಯುವ ಮೌಢ್ಯದೆಡೆಗೆ ನನಗೆ ತೀವ್ರ ಅಸಮಾಧಾನವಿದೆ.
ದಾನ ಧರ್ಮದ ಹೆಸರಲ್ಲಿ ಭಗವಂತನಿಗೇ ಕೊಡಮಾಡುವ ಲಂಚ, ಒಳಿತನ್ನು ಮಾತ್ರ ಮಾಡಬೇಕಾದವನ ಹೆಸರು ಬಳಸಿಕೊಂಡು ನಡೆಸುವ ಕೆಡುಕುಗಳನೆಲ್ಲ ಕಂಡಾಗ ಮನ ಹೇಸುತ್ತದೆ.
100/-ರೂ ಕೊಡಬಲ್ಲವನಿಗೆ ದೇವರ ನೇರ ಹಾಗೂ ಶೀಘ್ರ ದರ್ಶನ ಮತ್ತು ಕಿಸೆಯಲ್ಲಿ 20/-ರೂ ಮಾತ್ರ ಇರುವವನಿಗೆ ಸರತಿಯಲ್ಲಿ ನಿಂತದ್ದೇ ಭಾಗ್ಯ ಅಂತನ್ನುವ ದೊಡ್ಡ ದೊಡ್ಡ ದೇಗುಲಗಳಲ್ಲಿ ಖಂಡಿತಾ ದೇವನಿರಲು ಸಾಧ್ಯವಿಲ್ಲ.

ದೇವರೆಂದರೆ ನನ್ನ ಕಣ್ಣಲ್ಲಿ ಒಂದು ಅದೃಶ್ಯ ಶಕ್ತಿಯ (ವ್ಯಕ್ತಿ ಎಂದರೂ ಆದೀತು) ಕಲ್ಪನೆ. 
ನಾವು ಮಾಡಬಯಸುವ ಆದರೆ ಮಾಡಲಾಗದ ಕಾರ್ಯಗಳನ್ನು ಮಾಡಬಲ್ಲ,  ನಮ್ಮ ಅಸಹಾಯಕತೆಯನ್ನು ಆರೋಪಿಸಬಹುದಾದ, ನಾವೇ ನಮಗಾಗಿ ಸೃಷ್ಟಿಸಿಕೊಂಡ ಒಂದು ಅಸೀಮ ಸಾಮರ್ಥ್ಯದ ಕಲ್ಪಿತ ಶಕ್ತಿ. 
ನಮ್ಮ ಮನಸಿನ ಎಲ್ಲ ತುಮುಲಗಳನ್ನು, ಕಂಗಾಲುಗಳನ್ನು, ಕೊನೆಗೆ ವಿಕಾರಗಳನ್ನೂ ಕೂಡ ನಿರ್ಭಯವಾಗಿ, ನಿಸ್ಸಂಕೋಚವಾಗಿ ಪೂರಾ ಪೂರಾ ಹೇಳಿಕೊಂಡು ಮನಸನ್ನು ನಿರಾಳಗೊಳಿಸಿಕೊಳ್ಳಬಲ್ಲ ಸುಲಭ (?) ಸಾಧನವಷ್ಟೇ. 

ಆತ ನಮಗೆ ಕಾಣಲಾರ ಮತ್ತು ನಾವು ಹೇಳಿದ್ದನ್ನು ಇನ್ನೊಬ್ಬರ ಹತ್ತಿರ ಹೇಳಲಾರ. ಹಾಗಾಗಿ ಅವನೆಡೆಗೆ ನಿರ್ಭಯತೆ.

ಆತ ನಮ್ಮ ಮನದಾಳದ ನೋವು, ವೇದನೆ, ವಿಕಾರ, ಒಳಿತು, ಕೊಳಕುಗಳೆಲ್ಲವನ್ನು ಕಂಡೂ, ಕೇಳಿಯೂ ನೀನಿಷ್ಟೇ ಅಂತ ಲೇವಡಿ ಮಾಡಿ ನಗಲಾರ ಮತ್ತು ಬಿಟ್ಟಿ ಸಲಹೆಗಳನ್ನು ನೀಡಿ ನಮ್ಮ ತಲೆ ತಿನ್ನಲಾರ. 
ಆ ಕಾರಣ ಅವನೆಂದರೆ ನಿಸ್ಸಂಕೋಚ.

ಆತ ಅಗೋಚರಿ. 
ಅಂತಲೇ ಅವನಿಗೆ ಸಾಷ್ಟಾಂಗವೆರಗಿದರೂ ನಮ್ಮಲ್ಲಿ ಕೀಳರಿಮೆ ಮೂಡಲಾರದು - ನಮ್ಮ ಅಹಂಕಾರ ಕೆಣಕಲಾರದು. 
ಹಾಗಾಗಿ ದೇವರು ಅಷ್ಟೆಲ್ಲ ಆಕರ್ಷಕ...
ಅವನೆಂದರೆ ಆ ಪರಿ ಪ್ರೀತಿ.

ಭಗವಂತ ಎಲ್ಲೋ ಇರುವನೆಂದು ಸುಳ್ಳೇ ಕಲ್ಪಿಸಿಕೊಂಡು ನಂಬುತ್ತೇವೆ. 
ಆತ ಇಲ್ಲೇ ನಮ್ಮಲ್ಲೇ ಇದ್ದಾನೆಂದುಕೊಂಡರೆ ಅಲ್ಲಿಗೆ ಮುಗೀತು - ಮರ್ಕಟ ಮನಸಿನ ಸ್ವೇಚ್ಛೆಗೆ ಲಗಾಮು ಬಿದ್ದಂತೆಯೇ ಸರಿ. 
ಅದಕ್ಕೇ ಅವನು ಅಲ್ಲೆಲ್ಲೋ ಗುಡಿಯ ಬಂಧನದಲ್ಲಿದ್ದರೇನೇ ನಮಗೆ ಖುಷಿ.

ದೇವರು -
ನಮಗಿರುವ ಮಿತಿಗಳನ್ನು ಮೀರಬಲ್ಲ ನಾವೇ ರೂಪಿಸಿಕೊಂಡ ನಮ್ಮದೇ ಕಲ್ಪನೆಯ ಕೂಸು. 
ಕಲ್ಪನೆ ಯಾವತ್ತಿಗೂ ವಾಸ್ತವಕ್ಕಿಂತ ಸುಂದರ. 
ವಾಸ್ತವವನ್ನು ಎದುರಿಸಲಾಗದ ಹೇಡಿಗಳಾದ ನಾವು, ತಪ್ಪೆಂದು ಗೊತ್ತಿದ್ದೂ ಮಾಡದೇ ಇರಲಾರದ ನಾವು, ಬಲಹೀನತೆಗಳನ್ನು ಮೀರಲಾರದೇ ಹೋಗುವ ನಾವು, ನಮ್ಮೊಳಗೇ ಎದ್ದು ನಿಲ್ಲುವ ಅಪರಾಧೀ ಭಾವದಿಂದ ಹೊರ ಬರುವ ಸುಳ್ಳೇ ಸಮಾಧಾನಕ್ಕಾಗಿ ದೇವರನ್ನು ಗಾಢವಾಗಿ ನಂಬಬಯಸುತ್ತೇವೆ. 
ಆ ಮೂಲಕ ಹೆಚ್ಚಾಗಿ ನಮ್ಮಂಥವರೇ ತುಂಬಿರುವ ಸಮಾಜದೆದುರು ನಾವು ಅವರಿಗಿಂತ ಸಾತ್ವಿಕರಂತೆ ತೋರಿಸಿಕೊಳ್ಳಲು ಹೆಣಗುತ್ತೇವೆ. 
ದೈವ ಭಕ್ತಿಯ ಹೆಸರಲ್ಲಿ ಮುಖವಾಡಗಳನ್ನು ಧರಿಸಿಕೊಂಡು ಬದುಕುತ್ತೇವೆ. 
ತಪ್ಪೆಂದು ಗೊತ್ತಾಗಿದ್ದನ್ನು ಮಾಡದೇ ಇರುವ ಬದಲು ತಪ್ಪು ಮಾಡಿ, ಮಾಡಿದ ತಪ್ಪಿಂದ ಹುಟ್ಟಿದ ಅಪರಾಧೀ ಭಾವವ ಮರೆಯಲು ದೇವರ ಮೊರೆ ಹೋಗ್ತೇವೆ.
ಹರಕೆಗಳ ಮೊರೆ ಹೋಗ್ತೇವೆ. 
ತಪ್ಪಿನ ಒಂದಂಶವನ್ನು ಹರಕೆ ಸಲ್ಲಿಸಿ ಪ್ರಾಯಶ್ಚಿತ್ತವಾಯ್ತೆಂದು ಹೊಸ ತಪ್ಪು ಮಾಡಲು ಆಸೆಯಿಂದ ಹೊರಡ್ತೇವೆ. 
ಕದ್ದ  ಚಿನ್ನದಲ್ಲಿ ಗುಡಿಗೆ ಹೊನ್ನ ಕಳಶವಿಟ್ಟು ದಾನಶೂರನೆನಿಸಿಕೊಂಡು ಬೀಗಿದರೆ ಕದ್ದ ಪಾಪ ಪರಿಹಾರವಾಗುತ್ತಾ..???

ಪಾಪ ಪ್ರಾಯಶ್ಚಿತ್ತಾಂಗವಾಗಿ ಹರಕೆ ಸಲ್ಲಿಸುವ ದಾನ ಭೀರುಗಳ ಗುಂಪು ಒಂದಾದರೆ - 
ಪಾಪದ ಅರ್ಥ ಗೊತ್ತಿಲ್ಲದಿದ್ದರೂ ಜನ್ಮಾಂತರಗಳ ಪಾಪ ಪುಣ್ಯಗಳ ಭ್ರಮೆಯ ಭಯದಲ್ಲಿ ಮೌಢ್ಯದಿಂದ ಹರಕೆ ಹೊರುವವರದ್ದು ಇನ್ನೊಂದು ದೊಡ್ಡ ಗುಂಪು.
ಇವರಿಬ್ಬರನ್ನೂ ತಮ್ಮ ಅಡ್ಡಗೋಡೆಯ ಮೇಲೆ ದೀಪವಿಟ್ಟಂತಿರುವ ಅರ್ಥವಾಗಲಾರದ ಶಬ್ದಾಡಂಬರಗಳ ವಾಗ್ಝರಿಯಿಂದ ಸೆಳೆದುಕೊಂಡು ಹೊಟ್ಟೆ ತುಂಬಿಕೊಳ್ಳುವವರದ್ದೇ ಮತ್ತೊಂದು ಸಮೂಹ.
ಇವರೆಲ್ಲರ ದೊಂಬರಾಟಗಳ ನಡುವೆ ದೇವರು ಇದ್ದುದೇ ಆದರೂ ಕಂಗಾಲಾಗಿರುತ್ತಾನೆ - ಗುಡಿಯಿಂದೆದ್ದು ಓಡಿ ತಲೆಮರೆಸಿಕೊಂಡಿರುತ್ತಾನೆ...:):):)

ದೇವರೇ ಇಲ್ಲ ಎನ್ನುವ ನಾಸ್ತಿಕನಿಗೆ ಮಾಡಿದ ತಪ್ಪಿಗೆ ಸುಲಭ ಪ್ರಾಯಶ್ಚಿತ್ತಗಳಿಲ್ಲ. 
ಹರಕೆಯ ಸವಲತ್ತುಗಳಿಲ್ಲ. 
ತಪ್ಪೇ ಮಾಡದಿರಲಂತೂ ಸಾಧ್ಯವಿಲ್ಲ. 
ಹಾಗೆಂದೇ ಜಗದಲ್ಲಿ ನಾಸ್ತಿಕರ ಸಂಖ್ಯೆ ವಿರಳ. 
ತತ್ಪರಿಣಾಮ ಎಲ್ಲ ದೇಗುಲಗಳ ಸುತ್ತ ಜನ ಜಂಗುಳಿ. 
ಒಮ್ಮೊಮ್ಮೆ ಕಾಲ್ತುಳಿತಕ್ಕೆ ಸಿಕ್ಕಿ ಕೆಲವರಿಗೆ ಅಲ್ಲೇ ಮುಕ್ತಿ ಸಿಗುವುದೂ ಉಂಟು. 
ಕೂತಲ್ಲೇ ತಿಮ್ಮಪ್ಪ ಕೋಟ್ಯಾಧಿಪತಿ...
ಮಲಗಿಯೂ ಶ್ರೀಮಂತ ಪಧ್ಮನಾಭ...

ನಮಗೆ ಇನ್ನೊಬ್ಬರೆದುರು ಅಳಲಿಕ್ಕೆ ಅಹಂ ಅಡ್ಡಿ ಬರುತ್ತೆ. 
ಆದರೆ ಅಳಲು ಒಂದು  ಹೆಗಲು ಬೇಕು. 
ಆ ಹೆಗಲು ದೇವರು. 
ಅದಕ್ಕೇ ದೇವನೆದುರು ನಿಂತು ಕೈಮುಗಿದು ಮನದಲ್ಲೇ ಅತ್ತು ಮನಸು ಹಗುರಾಯ್ತೆಂದುಕೊಂಡು ನಗಲು ಪ್ರಯತ್ನಿಸುತ್ತಾ ಗುಡಿಯಿಂದ ಹೊರ ಬೀಳ್ತೇವೆ. 

ಪ್ರಸಿದ್ಧನಲ್ಲದ ದೇವನ ಊರಾಚೆಯ ಗುಡಿಯಾದರೆ ಅಲ್ಲೊಂದು ಪ್ರಶಾಂತತೆ ಇರುತ್ತೆ. 
ಘಂಟೆಯ ನಿನಾದ, ಕಲ್ಯಾಣಿಯ ತಂಪು, ಕಲ್ಯಾಣಿಯೊಳಗಿನ ನೈದಿಲೆಯ ಮೇಲಿಂದ ಸುಳಿದಿರುಗಿ ಬರುವ ತಂಗಾಳಿಯಲ್ಲಿನ ನೈದಿಲೆಯ ಕಂಪು. 
ಎಲ್ಲ ಸೇರಿ ಒಂದು ಅನಿರ್ವಚನೀಯ ಆನಂದ ಭಾವ ಸಮ್ಮಿಲನ. 
ಅದಕ್ಕೆ ಪೂರಕವಾಗಿ ಅರ್ಚಕರ ಮಂತ್ರ ಘೋಷ ಜೋಗುಳದಂತೆ ಕೇಳಿಸಿ ಏನೋ ಮಂಪರು ಮಂಪರು.
ಯಾವುದೋ ಭಾವ ಧ್ಯಾನ.
ಜೊತೆಗೆ ದೇವಸ್ಥಾನದ ಮುಂದಿನ ಧ್ವಜಗಂಭಕ್ಕೋ, ಅರಳೀಕಟ್ಟೆಗೋ ಪ್ರದಕ್ಷಿಣೆ ಹಾಕುವ ಹರೆಯದ ಚೆಲುವಿನ ಗೆಜ್ಜೆನಾದವಿದ್ದರೆ ದೇವಸ್ಥಾನ ಒಂದು ಸುಂದರ ತಾಣವೇ ಸರಿ...
ಅಂತಲ್ಲಿ ದೇವರಿಲ್ಲದಿದ್ದರೂ ಒಂದು ಸ್ವಚ್ಛ ಮೌನವಿದೆ...
ಪ್ರಕೃತಿಯ ನಿನಾದವಿದೆ...
ಆದರೆ ಪ್ರಸಿದ್ಧ ದೇವಾಲಯಗಳಲ್ಲೆಲ್ಲ ಬರೀ ಗದ್ದಲ ಮತ್ತು ದಕ್ಷಿಣೆಯದ್ದೇ ಕಾರುಬಾರು.

ಎಲ್ಲ ಕಡೆ ಸೋತು ಸುಣ್ಣವಾಗಿದ್ದ ದುರ್ಬಲ ಮನಸಿಗೆ ಯಾವುದೋ ಒಂದು ದೇವರ ಕಾರ್ಯ (ಜಪ, ತಪ, ಹೋಮ, ಹವನ ಇತ್ಯಾದಿ) ಮಾಡುವುದರಿಂದ ನಾಳೆಯಿಂದ ಒಳ್ಳೆಯದಾಗುತ್ತೆ ಬಿಡು, ಗೆಲುವು ದಕ್ಕತ್ತೆ ಬಿಡು ಎಂಬಂತಹ ತಾತ್ಕಾಲಿಕ ಭರವಸೆ ಸಿಕ್ಕಿ ಮನಸು ಉತ್ಸಾಹಿತವಾಗಿ, ಒಂದಿಷ್ಟು ಆತ್ಮವಿಶ್ವಾಸ ಚಿಗುರಿಬಿಡಬಹುದು. 
ಹೆಚ್ಚಿನ ಸಲ ಈ ಆತ್ಮವಿಶ್ವಾಸವೇ ಚೈತನ್ಯದಾಯಿಯಾಗಿ ಗೆಲುವನ್ನು ದಕ್ಕಿಸಿಕೊಟ್ಟುಬಿಡುತ್ತದೆ. 
ಮನಸು ಸೋತಾಗ ಮನಸಿನೆಲ್ಲ ಭಾರವನ್ನೂ ಯಾರೋ ದೇವರಿಗೊಪ್ಪಿಸಿ ಆತ ಕಾಯ್ತಾನೆ ಬಿಡು ಎಂಬ ಸಮಾಧಾನವನ್ನು  ನಮ್ಮ ಮನಸಿಗೆ ನಾವೇ ನೀಡಿಕೊಂಡು ನಿಸೂರಾಗುತ್ತೇವೆ. 
ಅಷ್ಟರ ಮಟ್ಟಿಗೆ ಸಮಸ್ಯೆ ಬಗೆಹರಿದಂತೆಯೇ. 
ಏಕೆಂದರೆ ಒತ್ತಡ ಮುಕ್ತವಾದ ಮನಸಿಗೆ ಸಮಸ್ಯೆಯಿಂದ ಹೊರಬರಲು ಸಾವಿರ ದಾರಿಗಳು ಗೋಚರಿಸುತ್ತವೆ. 
ಅಷ್ಟರ ಮಟ್ಟಿಗೆ ದೇವರ ಅಸ್ತಿತ್ವದ ಕಲ್ಪನೆ ಸಾರ್ಥಕ.

ಇನ್ನು ದೇವರ ಪೂಜೆ, ಆಚರಣೆಗಳ ಹೆಸರಲ್ಲಿ ಬಂಧು ಬಾಂಧವರು, ಆತ್ಮೀಯರು, ಇನ್ನೇನು ಸಂಬಂಧದ ಕೊಂಡಿ ಕಳಚಿ ಹೋಗೇ ಬಿಡಬಹುದು ಎಂಬಂತಾದ ನೆಂಟರು ಎಲ್ಲ ಒಂದೆಡೆ ಸೇರುತ್ತೇವೆ. 
ಕಷ್ಟ ಸುಖ ಹಂಚಿಕೊಂಡು ಹಗುರಾಗ್ತೇವೆ. 
ನಕ್ಕು ಬಾಂಧವ್ಯ ವೃದ್ಧಿಸಿಕೊಳ್ತೇವೆ. 
ಮರೆತ ಮುಖವನ್ನು ನೆನಪಿಸಿಕೊಳ್ತೇವೆ. 
ಇವೆಲ್ಲ ಚೆಂದ ಚೆಂದ.  

ಆಚರಣೆಗಳ ಗೆಲುವಿದ್ದರೆ ಅದು ಬಾಂಧವ್ಯ ಬೆಸೆವ ನಗುವಿನಲ್ಲಿ ಮಾತ್ರ.
ಇವಿಷ್ಟೇ ದೇವರ ಹಾಗೂ ಪೂಜೆ ಪುನಸ್ಕಾರಗಳ ಕಲ್ಪನೆಯೆಡೆಗಿನ ಸಾರ್ಥಕತೆ ಮತ್ತು ಧನಾತ್ಮಕ ಅಂಶಗಳೇನೋ....

ನನಗನ್ನಿಸಿದಂತೆ -

ದೇವರೆಂದರೆ ನಂಬಿಕೆ : 
ತನ್ನ ಮೇಲೆ ತನಗಿರುವ ನಂಬಿಕೆ (ತನ್ನ ಮೇಲೆ, ತನ್ನ ಕಾರ್ಯಗಳ ಮೇಲೆಯೇ ನಂಬಿಕೆಯಿರದವನನ್ನು ದೇವರು ಕೂಡ ಸಲಹಲಾರನೇನೋ) ಮತ್ತು ತನ್ನ ಸುತ್ತಲಿನ ಜೀವಿಗಳ ಮೇಲಿನ ನಂಬಿಕೆ.

ದೇವರೆಂದರೆ ಪ್ರೀತಿ : 
ತನ್ನ ಮೇಲೆ ತಾನಿಟ್ಟುಕೊಂಡ ಪ್ರೀತಿ ( ತನ್ನನ್ನ ತಾನು ಪ್ರೀತಿಸಿಕೊಳ್ಳಲಾರದವನು ಇನ್ನೊಬ್ಬರನ್ನು ಅಥವಾ ದೇವರನ್ನು ಹೇಗೆ ಪ್ರೀತಿಸಿಯಾನು) ಮತ್ತು ತನ್ನ ಸುತ್ತಲಿನ ಜೀವ ಜಂತುಗಳೊಂದಿಗೆ ಬೆಸೆದುಕೊಳ್ಳುವ ಬೇಷರತ್ತಾದ ಪ್ರೀತಿ.

ದೇವರೆಂದರೆ ವಾತ್ಸಲ್ಯ : 
ಒಬ್ಬ ತಾಯಿಗೆ ತನ್ನ ಮಗುವಿನ ಮೇಲಿರುವಂಥ ನಿಷ್ಕಲ್ಮಶವಾದ ವಾತ್ಸಲ್ಯ. ಆ ನಿಷ್ಕಪಟ ವಾತ್ಸಲ್ಯವನ್ನು ಪರರ ಮಗುವಿನ ಮೇಲೆಯೂ ತೋರಿಸಬಲ್ಲ ಹೆಣ್ಣು ಜೀವದಲ್ಲಿ ಖಂಡಿತಾ ದೇವರಿದ್ದಾನೆ.

ದೇವರೆಂದರೆ ವಿಶ್ವಾಸ : 
ತಾನು ಮಾಡ ಹೊರಟ ಕಾರ್ಯದ ಉದ್ದೇಶ ಉತ್ತಮವಿರುವಾಗ, ಕಾರ್ಯ ಸಾಧಿಸುವ ವಿಧಾನ - ಮಾರ್ಗ ನ್ಯಾಯಯುತವಾದುದು ಎಂಬ ದೃಢವಾದ ನಂಬಿಕೆ ಇದ್ದಾಗ, ಆದ್ದರಿಂದ ತಾನು ಗೆದ್ದೇ ಗೆಲ್ತೇನೆಂಬ ವಿಶ್ವಾಸ ಮೊಗದಲ್ಲಿ ನಗುವಾಗಿ ಮೂಡಿ ನಿಲ್ಲುತ್ತಲ್ಲ ಅಲ್ಲಿ ದೇವರಿದ್ದಾನು.

ದೇವರೆಂದರೆ ಆದರ್ಶ : 
ಮಾತನಾಡದೇ ಸ್ವಚ್ಛ ಮೌನದಲ್ಲೇ ಸ್ವರ್ಗವಿದೆ ಎನ್ನುವಂಥ ಆತನ ಪ್ರಶಾಂತತೆ, ಎಲ್ಲ ಕೇಳಿಸಿಕೊಂಡೂ ಏನೂ ಕೇಳದಂತಿರುವ ಆತನ ಒಳ್ಳೆಯತನ, ಎಲ್ಲರಿಂದ ಸಾಷ್ಟಾಂಗವೆರಗಿಸಿಕೊಂಡೂ ಅಹಂಕಾರಿಯಾಗದ ಅವನ ವಿನಯ, ನಮ್ಮೆಲ್ಲ ದೊಂಬರಾಟಗಳ ಕಂಡೂ ವ್ಯಘ್ರನಾಗದ ಆತನ ವಿನೋದ, ತನ್ನನ್ನ ನಂಬಿದವರನ್ನೂ ನಂಬದವರನ್ನೂ ಒಂದೇ ತೆರನಾಗಿ ನೋಡಬಲ್ಲ ಆತನ ಸ್ಥಿತಪ್ರಜ್ಞತೆ - ಈ ಎಲ್ಲ ಆದರ್ಶ ಗುಣಗಳಲ್ಲಿ ದೇವರಿದ್ದಾನೆ.

ದೇವರೆಂದರೆ ಕರುಣೆ : 
ಪರರ ನೋವಿಗೆ ತಾನೂ ನೊಂದು - ತನ್ನ ನೋವ ಮರೆತು - ಅವರಿವರ ಮೊಗದ ಕಿರುನಗೆಗಾಗಿ ಮಿಡಿದು ಶ್ರಮಿಸುವ ನಿಸ್ವಾರ್ಥ ಹೃದಯದ ಕರುಣೆ.

ದೇವರೆಂದರೆ ಧೈರ್ಯ :

ಎದುರು ಬರುವ ಸಾವಿರ ಕಷ್ಟಗಳ ಸಾಗರವ ಈಜಿ ನೋವ ಪಂಜರದಲ್ಲಿ ಬಂಧಿಯಾಗಿರುವ ನಗುವ ಗಿಣಿಯನು ಬಿಡಿಸಿ ತಂದು ಬದುಕ ರಾಜಕುಮಾರಿಯ ಗೆಲ್ಲುತ್ತೇನೆಂಬ ಧೈರ್ಯ.

ದೇವರೆಂದರೆ ವಿಜ್ಞಾನ :
ಸದಾ ಹೊಸದಕ್ಕಾಗಿ ತುಡಿಯುವ, ಹೊಸ ಏಳ್ಗೆಗಾಗಿ ದುಡಿಯುವ, ಕುತೂಹಲದ ಕೂಸಾದ ವಿಜ್ಞಾನ.

ನಗುವ ಹಸುಳೆಯ ಅಬೋಧ ಕಂಗಳಲ್ಲಿ....
ಮಗುವನ್ನು ತಬ್ಬಿ ವಿನಾಕಾರಣ ಖುಷಿಪಡುವ ತಾಯ ಮಮತೆಯ ಮಡಿಲಲ್ಲಿ...
ಸಾವನ್ನು ಎದುರು ನೋಡುತ್ತಿರುವ ವೃದ್ಧೆಯ ಒಳಿತನ್ನು ಹರಸುವ ನಡುಗುವ ಕೈಗಳಲ್ಲಿ...
ತನ್ನೆಲ್ಲ ಜ್ಞಾನವನ್ನೂ ಧಾರೆಯೆರೆದು ಶಿಷ್ಯನನ್ನು ತನಗಿಂತ ಜ್ಞಾನಿಯಾಗಿಸಲು ತುಡಿಯುವ ಗುರುವಿನ ಮನದ ವೈಶಾಲ್ಯದಲ್ಲಿ...
ಪ್ರತಿಫಲಾಪೇಕ್ಷೆಯಿಲ್ಲದೇ ನಿರಂತರ ಜಗವ ಬೆಳಗುವ ಸೂರ್ಯ ಚಂದ್ರರಲ್ಲಿ...
ಕಡಿವ ಕಟುಕನಿಗೂ ನೆರಳನೀವ ಮರಗಿಡಗಳ ನಿಸ್ವಾರ್ಥತೆಯಲ್ಲಿ...
ಅರಳುವ ಹೂವು ಚೆಲ್ಲುವ ಚೆಲುವು ಹಾಗೂ ಸುಗಂಧದಲ್ಲಿ...
ಬೀಸುವ ಗಾಳಿಯಲ್ಲಿ...
ಸುರಿವ ಜಲಧಾರೆಯಲ್ಲಿ...
ಹಸಿರುಣಿಸುವ ಭೂತಾಯ ಕರುಣೆ ಕಡಲಲ್ಲಿ...
ಅಲ್ಲೆಲ್ಲ ದೇವರಿದ್ದೇ ಇದ್ದಾನು...

ಯಾವುದೋ ಗುಡಿಯ ಶಿಲೆಯ ಪೂಜಿಸುವುದಕ್ಕಿಂತ...
ಇನ್ಯಾವುದೋ ಸ್ವಾಮಿಯ ಪಾದಪೂಜೆ ಮಾಡಿ ದಕ್ಷಿಣೆ ಬಟ್ಟಲ ತುಂಬುವುದಕ್ಕಿಂತ... 
ಪ್ರಕೃತಿಯ ಪ್ರೀತಿ ಮಡಿಲಲ್ಲಿ - ನಮ್ಮ ನಿಮ್ಮ ಮನ ಮಂದಿರಗಳಲ್ಲೇ ದೇವರ ಕಾಣುವುದು ಎಷ್ಟೊಂದು ಒಳಿತಲ್ಲವಾ...

***!!!!!***

ಭಾವ - ಭಕ್ತಿ.....

ಭಕ್ತಿ ಅಂದರೇನು..???
ಕಂಡ ಕಂಡ ಸಕಲ ದೇವರುಗಳಿಗೂ ಶಿರಬಾಗೋದಾ.?
ಪ್ರದಕ್ಷಿಣೆಯ ಹೆಸರಲ್ಲಿ ಎಲ್ಲ ದೇವಸ್ಥಾನಗಳಿಗೂ ನೂರಾರು ಸುತ್ತು ಹಾಕೋದಾ.??
ಬಹು ವಿಜೃಂಭಣೆಯಿಂದ ಯಜ್ಞ ಯಾಗಾದಿಗಳನ್ನು ನಡೆಸೋದಾ.??
ಮೂರು ಹೊತ್ತೂ ದೇವನಾಮ ಸ್ಮರಣೆಯ ಹೆಸರಲ್ಲಿ ಕಣ್ಣು ಮೂಗು ಮುಚ್ಚಿಕೊಂಡು ತುಟಿಯಲುಗಿಸುತ್ತಾ ಕೂತಿರೋದಾ.???
ಇವುಗಳಲ್ಲಿ ಯಾವುದು ಭಕ್ತಿ.?
ಯಾವ ಭಕ್ತಿಯಿಂದ ನಮಗೆ ಮುಕ್ತಿ.??
ಇವೆಲ್ಲ ಭಕ್ತಿ ಅಂತಾದ್ರೆ, ಇವೆಲ್ಲವುಗಳಿಂದ ದೇವನೊಲಿದು ನಮ್ಮ ಕಷ್ಟ ಕಾರ್ಪಣ್ಯಗಳೆಲ್ಲ ಕಳೆಯೋದೇ ಆಗಿದ್ರೆ ಜಗದಲ್ಲಿ ಇಷ್ಟೆಲ್ಲ ನೋವುಗಳು, ಬಡತನ, ಆಸ್ಪತ್ರೆಗಳು ಯಾಕಿರಬೇಕು.
ಪೂಜಾರಿಗೂ ಬವಣೆ ತಪ್ಪಿಲ್ಲ...
ಸ್ವಾಮಿಗೂ ಸಾವು ತಪ್ಪಿದ್ದಲ್ಲ...

ನಂಗನಿಸಿದಂತೆ ಭಕ್ತಿ ಅಂದ್ರೆ -
ತನ್ನದೊಂದು ಗಮ್ಯವನ್ನು ಸೇರಲಿಕ್ಕಾಗಿ ತನ್ನೆಲ್ಲ ಶಕ್ತಿಯನ್ನೂ ಒಟ್ಟಾಗಿಸಿಕೊಂಡು, ಸರ್ವ ಪ್ರಯತ್ನ ಮಾಡಿ ಕೊನೆಗೆ ಗೆಲುವನ್ನು ತನ್ನದಾಗಿಸಿಕೊಂಡು, ಆಮೇಲೆ ತಾನೇ ತನ್ನ ಸಾಮರ್ಥ್ಯದಿಂದ ದಕ್ಕಿಸಿಕೊಂಡ ಗೆಲುವಿಗೆ ವಿನಯದಿಂದ ದೇವರ ಆಶೀರ್ವಾದವೇ ಕಾರಣ ಅಂತಾನ/ಳಲ್ಲ ಒಬ್ಬ ಯಶಸ್ವೀ ಸಾಧಕ/ಕಿ ಅವರದು ಭಕ್ತಿ ಅಂದರೆ.

ಇರುವ ಸಾವಿರದಲ್ಲಿ ಹತ್ತನ್ನು ದೇವರ ಹುಂಡಿಗೆ ಹಾಕಿ ಬೀಗೋದಲ್ಲ ಭಕ್ತಿ ಅಂದರೆ. 
ಇರೋ ಹತ್ತರಲ್ಲೇ ಒಂಭತ್ತನ್ನು ತನಗಿಂತ ದುಃಸ್ಥಿತಿಯಲ್ಲಿರುವವರಿಗೆ ಹಂಚಿ ತೃಪ್ತಿಯಿಂದ ನಗ್ತಾ  ಹಾಯಾಗಿ ನಿದ್ರಿಸ್ತಾನಲ್ಲ ಒಬ್ಬ ಆತನದು ನಿಜದ ಭಕ್ತಿ. 

ಮಳೆಯಾಗುತ್ತೋ - ಬೆಳೆ ಹಸನಾಗಿ ಲಾಭ ತರುತ್ತೋ ಒಂದೂ ಗೊತ್ತಿಲ್ಲದಿದ್ರೂ ಬೀಜ ಬಿತ್ತನೆ ಮಾಡಿ ತನ್ನ ಕೆಲಸವನ್ನು ತಾನು ನಿರ್ವಂಚನೆಯಿಂದ ಮುಗಿಸಿ ಆಗಸಕ್ಕೆ ಕೈಯೆತ್ತಿ ನಮಸ್ಕರಿಸುತ್ತಾನಲ್ಲ ಒಬ್ಬ ಬಡ ರೈತ ಅವನದು ಭಕ್ತಿ ಅಂದ್ರೆ.

ವರ್ಷವಿಡೀ ಬೆವರ ಹರಿಸಿ ಶ್ರಮಿಸಿ ಬೆಳೆದ ಫಸಲೆಲ್ಲ ಒಂದಿನಿತೂ ಉಳಿಯದೇ ತೊಳೆದು ಹೋದಾಗಲೂ ನೆಲವನ್ನಾದ್ರೂ ಉಳಿಸಿದೀಯಲ್ಲ ಭಗವಂತಾ ಅಂತ ದೇವರನ್ನ ಸ್ಮರಿಸ್ತಾನಲ್ಲ ಒಬ್ಬ ನೆರೆಪೀಡಿತ ನಿರಾಶ್ರಿತ ಆತನದು ಶ್ರೇಷ್ಠ ಭಕ್ತಿ.
ಆ ದೇವರು ಕೂಡ ಅಂಥ ಭಕ್ತನನ್ನೇ ಇಷ್ಟಪಟ್ಟಾನು...
ನಂಗೆ ಅಜ್ಜ ಹೇಳ್ತಿದ್ದ ಆ ಕಥೆ ನೆನಪಾಗುತ್ತೆ. 
ನಿಮಗೂ ಗೊತ್ತಿರೋದೇ.
ದಿನದ ಇಪ್ಪತ್ನಾಲ್ಕು ಘಂಟೆಯೂ ನಾರಾಯಣ ನಾರಾಯಣ ಎಂದು ಜಪಿಸ್ತಾ ಲೋಕ ತಿರುಗೋ ನಾರದನಿಗಿಂತಲೂ - ಹಗಲಿಡೀ ದುಡಿದು ದಣಿದು ರಾತ್ರಿ ಮಲಗೋ ಮುನ್ನ ಒಮ್ಮೆ ಮಾತ್ರ ಹೇ ನಾರಾಯಣಾ ಪಾಲಿಸು ಅಂತ ಬೇಡ್ಕೊಂಡು ಮಲಗ್ತಿದ್ದ ಬಡ ರೈತನೇ ಭಗವಂತನಿಗೆ ಪ್ರಿಯವಾಗಿದ್ನಂತೆ...

ನಾವೆಲ್ಲ ಪ್ರದರ್ಶನಪ್ರಿಯ ಧರ್ಮಭೀರುಗಳಾಗುವ ಬದಲು - ಕಾಯಕಪ್ರಿಯ ಭಕ್ತರಾಗೋದು ಒಳಿತಲ್ಲವಾ...


'ಗಲ್ಫ ಕನ್ನಡಿಗ' ಈ - ಪತ್ರಿಕೆಯಲ್ಲಿ 15-06-2012 ರಂದು ಪ್ರಕಟಿತ 

Tuesday, June 5, 2012

ಗೊಂಚಲು - ಮೂವತ್ತು + ಒಂದು.....

ಕತ್ತಲು.....


ಅಂದೂ -
ಮನೆಯ ತಾರಸಿಯ ಮೇಲೆ ಹೀಗೆಯೇ ಅಲೆಯುತ್ತಿದ್ದೆ...
ಆಗೆಲ್ಲ -
ನಿಶೆ ಬೆಳಕ ನುಂಗುವ ಮುನ್ನಿನ ಸಂಜೆಗತ್ತಲ ನನ್ನ ಮೌನಕ್ಕೆ ಎಂಥದೋ ಸೊಗಸಿತ್ತು...
ಬಾನಾಡಿಗಳ ಬಳಗ ಸೇರಿ ಬಾನೆತ್ತರ ಹಾರುತಿತ್ತು ಬಯಕೆ ತುಂಬಿದ ಮನ...
ಗೂಡು ಸೇರುವ ಮುನ್ನ ಕಿರುಚಾಡುತಿದ್ದ ಕಾಗೆ ಕೂಡ ನನ್ನ ಮೌನ ಮುರಿಯುವ ಕೀಟಲೆಯ ಮಿತ್ರನಂತೆ ಕಾಣುತಿತ್ತು...
ಪಿಳಿ ಪಿಳಿ ಬೆಳಕು ಚೆಲ್ಲುತ್ತಾ ನೂರಾರು ಬದುಕುಗಳ ಒಡಲಲ್ಲಿ ತುಂಬಿಕೊಂಡು ದೂರ ತೀರ ಯಾನ ಹೊರಟ ಲೋಹದ ಹಕ್ಕಿ ಬೆರಗು ಮೂಡಿಸ್ತಿತ್ತು...
ನಿದ್ದೆ ಬರಿಸುವ ಕತ್ತಲಿಗೂ ಯಾವುದೋ ಅಪರಿಚಿತತೆಯ ಸೊಗಡಿನ ಸೊಬಗಿತ್ತು...


ಕಾರಣ -
ಅಂದು ಮೊದಲಾಗಿ ನಕ್ಕಿದ್ದಳು
ನೋಡಿ ನನ್ನೆಡೆಗೆ...
ಎನ್ನ ಮನದಿ ಒಲವ ನವಿಲು ಗರಿಬಿಚ್ಚಿತ್ತು...
ಆ ನಗೆ ಬೆಳದಿಂಗಳಲಿ ನನ್ನ ಬದುಕ ಕತ್ತಲೆಲ್ಲ ಕರಗಿ ಹೋದೀತು,
ಆ ಕಣ್ಣ ನಗೆಯ ಪನ್ನೀರಲಿ ಬರಡಾದ ಎನ್ನ ಎದೆಯ ನೆಲ ತುಸು ನೆಂದು ಮಿದುವಾದೀತು,
ಮಿದುವಾದ ಎದೆ ನೆಲದಿಂದ ಹೊಸ ಜೀವೋನ್ಮಾದದ ಸ್ಫೂರ್ತಿ ಗಂಧ ಹೊಮ್ಮೀತು,
ಬದುಕ ಬಳ್ಳಿಯಲಿ ಹೊಸ ಮೊಗ್ಗು ಅರಳೀತು...
ಹೀಗೇ ಎಷ್ಟೆಷ್ಟೋ, ಇನ್ನೂ ಏನೇನೋ ಆಸೆ ತುಂಬಿದ ಭಾವೋನ್ಮಾದ...
ಏಕಾಂತ ಸೀಮೆಯನೇರಿ ಮೌನ ಗಾನ...
ಹಾರು ಹಕ್ಕಿಯ ರೆಕ್ಕೆಯಲಿ, 
ಜೀವ ಸೆಲೆ ಬತ್ತಿದ ಮೇಲೂ ಹಕ್ಕಿಗೆ ತಾವು ಕೊಡುವ ಬೋಳು ಮರದ ಪ್ರೀತಿಯಲಿ, 
ಹಸಿರ ಸಿರಿಯಲಿ, 
ಖಾಲಿ ಬಾನ ಬಯಲಲ್ಲಿ,  
ಕೊನೆಗೆ ನಿರ್ಜೀವ ಕಟ್ಟಡದಲಿ ಕೂಡ,  
ಒಟ್ಟಿನಲ್ಲಿ ನೋಟ ಹರಿದಲ್ಲೆಲ್ಲ ಖುಷಿಯ ಒಲವಿನ ಬಣ್ಣ...


           ~ * ~ & ~ * ~

ಇಂದೂ -
ಅದೇ ಮನೆಯ ಅದೇ ತಾರಸಿಯ ಮೇಲೆ ಅಂದಿನಂತೆಯೇ ಅಲೆಯುತ್ತಿದ್ದೇನೆ...
ಎದುರಿನ ಇಪ್ಪತ್ತಂತಸ್ತಿನ ಕಟ್ಟಡದಾಚೆ ಸೂರ್ಯ ಮೆಲ್ಲಗೆ ತಲೆ ಮರೆಸಿಕೊಳ್ಳುತ್ತಿದ್ದಾನೆ...
ಸುತ್ತಲೂ ನಿಧಾನವಾಗಿ ಜೀವ ತಳೆಯುತಿರುವ ಕತ್ತಲು..
ಇಷ್ಟಿಷ್ಟಾಗಿ ಸಂಜೆಯೊಂದು ಸಾಯುತ್ತಿದೆ...
ನನ್ನೊಳಗೆ ಸಾವಿನಂಥ ಮೌನ...
ಹಾಡುವ ಕೋಗಿಲೆ ದನಿಯೂ ಕರ್ಕಶ...
ಸುಡುವ ಬೆಳದಿಂಗಳು...

ಕಾರಣ -
ನನ್ನ ನಾಳೆಗಳಿಗಾಗಿ ಕಾಯದೇ ಕಳೆದು ಹೋದ ಅವಳು
ಮತ್ತು
ಕಳೆದು ಹೋಗದೇ ಕಾಡುವ ಅವಳ ನೆನಪುಗಳು...


 ~ * ~ & ~ * ~


ಮೊನ್ನೆ ಅಲ್ಲೆಲ್ಲೋ ಮತ್ತೆ ಸಿಕ್ಕಳು...
ಕಣ್ಣಲ್ಲಿ ಸಣ್ಣ ನೀರ ಅಲೆ...
ಕಾರಣ ಗೊತ್ತಾಗಿಲ್ಲ...
ಮತ್ತೆ ನೋಡಿದ ಖುಷಿಗಾ..?
ತನ್ನ ಕಳಕೊಂಡ ಮೇಲೂ ಬದುಕಿರುವನಲ್ಲಾ ಎಂಬ ನೋವಿಗಾ..??

ಹಾಂ -

ಅವಳೆಂದರೆ - 
"ನಿನ್ನೆ ನಾನು ಕಂಡಿದ್ದ ನಾಳೆಗಳೆಡೆಗಿನ ಕನಸುಗಳು....."

^### %%% ###^

'ಗಲ್ಫ ಕನ್ನಡಿಗ' ಈ - ಪತ್ರಿಕೆಯಲ್ಲಿ 08-06-2012 ರಂದು ಪ್ರಕಟಿತ

Tuesday, May 1, 2012

ಗೊಂಚಲು - ಹತ್ತು + ಹತ್ತು + ಹತ್ತು.....

ಬಾಲ್ಯ ಹಾಗೂ ಬಾಲಮಿತ್ರರು.....

ಬಾಲ್ಯ ಅಂದರೆ -


ಅಮ್ಮನ ಮಡಿಲು, ಅಜ್ಜನ ಕಥೆ, ಅಜ್ಜಿಯ ಸೀರೆ ಹಾಸಿಗೆ, ಮಾವನ ಮೈಮೇಲೆ ಕೂಸುಮರಿ...
ಅಜ್ಜನ ಕಥೆಗಳಲ್ಲಿನ ಕಾಗೆ, ಗುಬ್ಬಿ, ಹುಲಿ, ಸಿಂಹ, ಮೊಲಗಳ ಜೊತೆಗೆ 'ಬಾಲಮಂಗಳ'ದ ಡಿಂಗ, ಫಕ್ರು, ಲಂಬೋದರ 'ಚಂದಮಾಮ'ದ ರಾಜಕುಮಾರ, ಬಡಬ್ರಾಹ್ಮಣ ಮತ್ತು ತ್ರಿವಿಕ್ರಮನ ಬೇತಾಳ ಕೂಡ ಗೆಳೆಯರಾಗಿ ಪರಿಣಮಿಸಿದ್ದು...
ಹಗಲೆಲ್ಲ ಆಟ, ಸಂಜೆ ಬಾಯಿ ಪಾಠ... 
ಕನಸಲ್ಲೂ ಚಿಣ್ಣಿ - ದಾಂಡು, ಲಗೋರಿ...
ಮಂಡಿಯ ತರಚು ಗಾಯಕ್ಕೆ ಕಾಂಗ್ರೆಸ್ ಗಿಡದ ಎಲೆಯ ಮದ್ದು...
ಪಕ್ಕದ ಮನೆಯ ಹಿತ್ತಲ ಸೌತೆ ಮಿಡಿ, ಮಾವಿನ ಮಿಡಿಗಳು ನಮ್ಮನೆಯ ಉಪ್ಪು ಖಾರದೊಂದಿಗೆ ಸದ್ದಿಲ್ಲದೆ ನಮ್ಮ ಬಾಯಲ್ಲಿ ಕರಗಿದ್ದು...
ತರುತ್ತಲಿದ್ದ ಲಿಂಬು ಪೆಪ್ಪರ್ಮೆಂಟಿನ ಆಸೆಗೆ ಮನೆಗೆ ಬರುವ ನೆಂಟರಿಗಾಗಿ ಕಾಯುತ್ತಿದ್ದದ್ದು...
ರಾತ್ರಿ ಒಬ್ಬನೇ ಎದ್ದು ಧೈರ್ಯವಾಗಿ ಬಚ್ಚಲಿಗೆ ಹೋಗಿ ಉಚ್ಚೆ ಹೊಯ್ದದ್ದು ಕನಸು ಎಂಬುದು ಗೊತ್ತಾದದ್ದು ಹಾಸಿಗೆ ಒದ್ದೆಯಾಗಿ ಬೆಚ್ಚಗಾಗಿ ಎಚ್ಚರಾದಾಗ...
ರಾಡಿ ನೀರಲ್ಲಿ ಎಮ್ಮೆಗಳೊಂದಿಗೆ ಈಜು ಕಲಿತದ್ದು...
ಹುಲಿಮನೆ ಆಟದಲ್ಲಿ ಅಜ್ಜನ ಗೆದ್ದು ರಾಜ್ಯವನ್ನೇ ಗೆದ್ದಂತೆ ದಿನವಿಡೀ ಬೀಗಿದ್ದು...
ಕವಡೆ ಆಟದಲ್ಲಿ ಅಮ್ಮ ಸೋತಾಗ ಯಾಕೋ ನೋವಾಗಿದ್ದು...
ಬೆಟ್ಟೆ ಆಟದಲ್ಲಿ ಐದನೇ ಮನೆಯ ಗೆಲ್ಲುವುದೇ ಬಹು ದೊಡ್ಡ ಕನಸಾಗಿದ್ದದ್ದು...
ತಂಗಿ ನಿದ್ದೆಯಲ್ಲೂ ಕನವರಿಸಿದ್ದು ಕಲರ್ ಕಲರ್ ವಾಟ್ ಕಲರ್...
ನೆಲ್ಲಿ ಕಾಯಿ, ಸಂಪಿಗೆ, ನೇರಳೆ, ಮುಳ್ಳೆಹಣ್ಣುಗಳಿಗಾಗಿ ದಿನವೆಲ್ಲ ಮರಿ ಸೈನ್ಯದಂತೆ ಗುಂಪಾಗಿ ಕಾಡು ಅಲೆದದ್ದು...
ಮನೆಯಲ್ಲೇ ಕದ್ದು ತಿಂದ ಕೊಬ್ಬರಿ, ಬೆಲ್ಲದುಂಡೆ...
ಗೆಳೆಯರೊಂದಿಗೆ ಕುಸ್ತಿ - ತಪ್ಪಿದ ಮಗ್ಗಿ - ಮಾಸ್ತರರ ಕೈಯ ನಾಗ ಬೆತ್ತದ ರುಚಿ - ರಾತ್ರಿ ಮಲಗುವ ಮುನ್ನ ದೇವರಲ್ಲಿ ಮೇಷ್ಟ್ರ ಬಗ್ಗೆ ಕಂಪ್ಲೇಂಟು...
ವರ್ಷಕ್ಕೊಮ್ಮೆ ಶಾಲೆಗೆ ಭೇಟಿ ಕೊಡುತ್ತಿದ್ದ ಸಾಯ್ಬ್ರು (ಶಿಕ್ಷಣಾಧಿಕಾರಿ) ಹುಟ್ಟಿಸ್ತಿದ್ದ ಭಯ...(ಈ ಭಯ ನಮ್ಮಷ್ಟೇ ನಮ್ಮ ಮೇಷ್ಟ್ರಿಗೂ ಇರ್ತಾ ಇತ್ತೇನೋ ಎಂಬ ಅನುಮಾನ ನನಗೀಗಲೂ ಇದೆ)
ಪರೀಕ್ಷೆಯ ಭಯವ ಹೋಗಲಾಡಿಸಲು ವಿಫಲವಾಗಿ ಗಣಿತ ಪಟ್ಟಿಯ ನಡುವೆ ಸುಮ್ಮನೆ ಒಣಗುತ್ತಿದ್ದ ಬೇರು ಬಿಡುವ ಎಲೆ ಮತ್ತು ಮರಿಹಾಕುವ ನವಿಲುಗರಿ...
ಎರಡು ಮೂರು ವರ್ಷಕ್ಕೊಮ್ಮೆ ಹೊರಡುತ್ತಿದ್ದ ಶಾಲೆಯ ಪ್ರವಾಸದ ತೀರದ ಸಂಭ್ರಮ - ಆ ಪ್ರವಾಸದ ದಾರೀಲಿ ಜನ ಕಂಡಲ್ಲೆಲ್ಲ ಎಸೆಯಲೆಂದು ತಿಂಗಳ ಮುಂಚಿನಿಂದ ಬರೆಯಲು ಶುರುವಿಡುತ್ತಿದ್ದ ------ ಶಾಲೆಯ ----- ಪ್ರವಾಸಕ್ಕೆ ಜಯವಾಗಲಿ ಎಂಬ ವಿಧವಿಧ ವಿನ್ಯಾಸಗಳ ಚೀಟಿಗಳು...(ಹಿಂತಿರುಗಿ ಬರುವಾಗ ಎಸೆಯಲು -----ಪ್ರವಾಸಕ್ಕೆ ಜಯವಾಯಿತು ಎಂಬ ಚೀಟಿಯನ್ನೂ ಮುಂಚೆಯೇ ಬರೆದಿರುತ್ತಿದ್ದೆವು. ನಮ್ಮ ಗೆಲುವಿನ ಬಗ್ಗೆ ಎಂಥ ಭರವಸೆ...)
ಹುಟ್ಟು ಹಬ್ಬದಂದು ಹೊಸ ಅಂಗಿ ಹಾಕ್ಕೊಂಡು ಎದೆ ಉಬ್ಬಿಸ್ಕೊಂಡು ಶಾಲೆಗೆ ಹೊರಟಾಗ ಸುರಿದ ಮಳೆ - ಮಳೆ ನೀರಿನೊಂದಿಗೆ ಕರಗಿ ಹೋದ ಅಂಗಿಯ ಬಣ್ಣ ಹುಟ್ಟಿಸಿದ ನಿರಾಸೆ...
ಮಲೆನಾಡಿನ ಧೋಮಳೆ - ಎಲ್ಲೆಲ್ಲೂ ಹರಿವ ಕೆಂಪು ನೀರು - ಪ್ಲಾಸ್ಟಿಕ್ ಕೊಪ್ಪೆ - ಅರಲು ಗದ್ದೇಲಿ ಹೊರಳಾಟ...
ಮುಸ್ಸಂಜೆಯಲಿ ಹೊಡತ್ಲ ಸುತ್ತ ಕನಸುಗಳು ಬೆಚ್ಚಗೆ - ಸುಟ್ಟ ಹಲಸಿನ ಬೇಳೆ, ಗೇರು ಬೀಜಗಳ ಘಮ - ಅಜ್ಜ ಹೇಳುವ ಕಥೆಗಳ ಸಂಭ್ರಮ...
ರೇಡಿಯೋದಲ್ಲಿ 'ಯುವವಾಣಿ'ಯ ಚಿತ್ರ ಗೀತೆಗಳ ಸರಿಗಮ...
ನಿಮ್ಮ ಮೆಚ್ಚಿನ ಚಿತ್ರಗೀತೆಗಳ ಕಾರ್ಯಕ್ರಮ 'ಅಭಿಲಾಷಾ' ಅಂತನ್ನುವುದ ಕೇಳಿ ಒಂದಿಲ್ಲೊಂದು ದಿನ ನಮ್ಮ ಹೆಸರೂ ಬಂದೀತೆಂದು ಕಾಯುತ್ತಿದ್ದುದು...(ನಮ್ಮ ಹೆಸರನ್ನೆಂದೂ ನಾವು ಆಕಾಶವಾಣಿಗೆ ಕಳಿಸಿಯೇ ಇರಲಿಲ್ಲ. ನಾವೇ ಕಳಿಸಬೇಕೆಂಬುದು ಗೊತ್ತೂ ಇರಲಿಲ್ಲ...)
ನಾಗರಪಂಚಮಿಯ ಬೇಳೆ ಒಬ್ಬಟ್ಟನ್ನು ವಿಪರೀತ ತಿಂದು - ಅದು ಹೊಟ್ಟೇಲಿ ಮಾರನೇ ದಿನವೂ ಹಾಗೇ ಉಳಿದು - ಹೂಸು ಬಿಟ್ಟದ್ದು ನಾನಲ್ಲ ಎಂದು ತೋರಿಸಿಕೊಳ್ಳಲು ಬಿಡುವ ಮುನ್ನವೇ ಮೂಗು ಮುಚ್ಚಿಕೊಂಡು ನಗೆಪಾಟಲಾದದ್ದು...
ಚೌತಿಯ ಚಂದ್ರನ ಕಂಡು ಬರುವ ಅಪವಾದಕ್ಕೆ ಹೆದರಿ ಅಜ್ಜಿ ಎಂದೋ ಹೇಳಿದ್ದು ನೆನಪಾಗಿ ಅಮ್ಮನ ಹಿತ್ತಲಲ್ಲಿನ ಕರಿಕೆಸುವಿನ ಗಿಡಗಳನೆಲ್ಲ ಕಡಿದು ಹಾಕಿ ಆಯಿಯ ಕೈಲಿ ಲತ್ತೆ ತಿಂದದ್ದು...(ಕರಿಕೆಸುವ ಕಡಿದರೆ ಅಪವಾದ ಬರಲ್ಲ ಎಂಬುದೊಂದು ನಂಬಿಕೆ)
ದೀಪಾವಳಿಯಂದು ಹಬ್ಬದ ಗುಬ್ಬಿಯ ಕಾಡಿಗೆಯಲ್ಲಿ ಗಡ್ಡ ಮೀಸೆಗಳ ಬಿಡಿಸಿಕೊಂಡು ಊರೆಲ್ಲ ಸುತ್ತಿದ್ದು...
ಅಜ್ಜನ ಸಂಚಿಯಿಂದ ಕದ್ದು ಹಾಕಿದ ಕವಳದಿಂದ ಕೆಂಪಾದ ನಾಲಿಗೆಯ ರಂಗು ಕಂಡು ಪುಳಕಗೊಂಡದ್ದು...
ಮಾವ ಸೇದಿ ಎಸೆದ ಮೋಟು ಬೀಡಿಯ ಕದ್ದು ಸೇದಿ ಕೆಮ್ಮಿ ಕೆಮ್ಮಿ ಸುಸ್ತಾಗಿ ಕಣ್ಣೀರು ಸುರಿದದ್ದು...
ಅಕ್ಕ ದೊಡ್ಡವಳಾದಳೆಂದಾಗ ದೊಡ್ಡವಳಾಗುವುದೆಂದರೆ ಏನೆಂಬುದರ ಬಗ್ಗೆ ವರ್ಷಗಳ ಕಾಲ ತಲೆ ಕೆಡಿಸಿಕೊಂಡದ್ದು...
ಪ್ರೀತಿಯ ದೊಡ್ಡತ್ತೆ ಕಾರಣವನೇ ಹೇಳದೆ ನೇಣಿಗೆ ಶರಣಾದದ್ದು - ಬದುಕು ಕಂಡ ಮೊದಲ ಸಾವು - ಉರಿವ ಚಿತೆಯ ಎದುರು ಸಾವಿನ ಅರ್ಥ ಅಸ್ಪಷ್ಟ...
ಬಾಲ್ಯದ ಬದುಕ ಕಣಜದಲ್ಲಿ ಎಷ್ಟೆಲ್ಲ - ಏನೇನೆಲ್ಲ ಸಿಹಿ ಕಹಿ ನೆನಪುಗಳ ತೆನೆಗಳು...

***&&&***

ಆಲದ ಬಿಳಲಿನ ಜೋಕಾಲಿಯಲಿ ಜೀಕುತ್ತ ಜೀಕುತ್ತಲೇ ಕಳೆದು ಹೋದ ಬಾಲ್ಯ ಮತ್ತು ಬಾಲ್ಯದ ಗೆಳೆಯರನ್ನು ಎಂದಿಗಾದರೂ ಮರೆಯೋಕೆ ಸಾಧ್ಯವಾ..? 
ನೋ ಛಾನ್ಸ್.
ನಾವೆಷ್ಟೇ ದೊಡ್ಡೋರಾದ್ರೂ - ಬದುಕು ನಮ್ಮನ್ನು ಎಷ್ಟೇ ಎತ್ತರಕ್ಕೊಯ್ದು ನಿಲ್ಲಿಸಿದ್ರೂ - ವರ್ಷ ನೂರಾಗಿ ಮೃತ್ಯುಮುಖಿಯಾಗಿ ಕುಳಿತು ಕ್ಷಣಗಣನೆ ಮಾಡುತ್ತಿರುವಾಗಲೂ ನೆನಪಾದರೆ ಮೊಗದಿ ಮಂದಹಾಸವೊಂದನು ಮೂಡಿಸಬಲ್ಲದ್ದು ಹೆಚ್ಚಾಗಿ ಬಾಲ್ಯ ಮತ್ತು ಬಾಲಮಿತ್ರರೊಂದಿಗೆ ಬೆಸೆದ ಮಧುರ ಕ್ಷಣಗಳ ನೆನಪುಗಳೇನೇನೋ...
ನೋಡಿದ್ದೆಲ್ಲ ನವನವೀನವಾಗಿ ಕಾಣುತ್ತಿದ್ದ ಆ ಕಾಲ ಎಷ್ಟು ಚೆಂದಗಿತ್ತಲ್ಲವಾ...
ಎಲ್ಲ ಕಿತ್ತಾಟಗಳ ನಡುವೆಯೂ ಹಬ್ಬಿ ನಿಲ್ಲುತ್ತಿದ್ದ ಸುಂದರ ಗೆಳೆತನಕ್ಕೆ ಎಂಥ ಕಸುವಿತ್ತಲ್ಲವಾ...
ನೆನೆಸಿಕೊಳ್ಳುತ್ತಿದ್ದರೆ ಎಂಥದೋ ಅರಿಯದ ರೋಮಾಂಚನ...

ಬಾಲ್ಯ ಕಳೆದು ಪ್ರೌಢರಾಗಿ, ಯೌವನವಂತರಾಗಿ ಬದುಕಿನ ಸಾಧ್ಯತೆಗಳ ವಿಸ್ತಾರದ ನಿರಂತರ ನಿರೀಕ್ಷೆಯಲ್ಲಿ - ನಿರೀಕ್ಷೆಗಳ ಕನಸ ಸ್ತಂಭ ಉರುಳದಂತೆ ಕಾಪಾಡಿಕೊಳ್ಳಬೇಕಾದ ಒತ್ತಡದಲ್ಲಿ - ಸ್ವಂತ ಬದುಕು ಕಟ್ಟಿಕೊಳ್ಳುವ ಭರದಲ್ಲಿ ಬಾಲ್ಯದ ಮಿತ್ರರೆಲ್ಲ ದಿಕ್ಕಿಗೊಬ್ಬರಾಗಿ ಬೇರಾಗಿ ಚೆದುರಿ ಹೋದರೂ, ವರ್ಷಾಂತರಗಳ ಕಾಲ ಭೆಟ್ಟಿಯೇ ಆಗದಿದ್ದರೂ, ಯಾವುದೇ ಸಂವಹನ ಸಾಧ್ಯವಾಗಿಲ್ಲದಿದ್ದರೂ, ಬದುಕಿನ ಜಂಜಡಗಳು ಹಣ್ಣಾಗಿಸಿದ್ದರೂ ಬಾಲ್ಯ ಮತ್ತು ಆ ಕಾಲದ ಗೆಳೆಯರೊಂದಿಗೆ ಕಳೆದ ಮಧುರ ಕ್ಷಣಗಳ ನೆನಪು ಸದಾ ಹಚ್ಚ ಹಸಿರು...
ಎಲ್ಲ ಅನಿಶ್ಚಿತತೆಗಳ ನಡುವೆ ನೆನಪೊಂದೇ ಶಾಶ್ವತ ಅನ್ನಿಸಿಬಿಡುತ್ತಲ್ಲವಾ...
ನೆನಪು ಪ್ರಕೃತಿ ನಮಗಿತ್ತ ವರ...(ಕೆಲವೊಮ್ಮೆ ಶಾಪ ಕೂಡ - ಆ  ಮಾತು ಬೇರೆ)

ಬಾಲ್ಯದಲ್ಲಿ ನಾವೂ ಶಕ್ತಿವಂತರಾಗಬೇಕು - ನಾವೂ ಸ್ವತಂತ್ರ ನಿರ್ಧಾರಗಳನ್ನ ತಗೋಬೇಕು - ನಮ್ಮ ಮಾತನ್ನ ಎಲ್ರೂ ಕೇಳೋಹಂಗಾಗ್ಬೇಕು - ಹಾಗೆಲ್ಲ ಆಗ್ಬೇಕೂಂದ್ರೆ ಆದಷ್ಟು ಬೇಗ ನಾವು ದೊಡ್ಡೋರಾಗ್ಬೇಕು ಅಂತೆಲ್ಲ ಅಂದ್ಕೋತಿದ್ದ ನಾವುಗಳೇ  ಈವತ್ತು ಹಾಗೆಲ್ಲ ಆದ ಮೇಲೆ ಯೋಚಿಸಿದ್ರೆ ಬಾಲ್ಯದ ಆ ದಿನಗಳೇ ಎಷ್ಟು ಚೆನ್ನಾಗಿತ್ತು ಅನ್ನಿಸುತ್ತಲ್ಲವಾ..???
ಅದೇ ಏನೋ ಬದುಕಿನ ವೈಚಿತ್ರ್ಯ...
ಸಿಗೋದಿಲ್ಲ ಅಂತ ಖಾತ್ರಿ ಇದ್ದೂ ಅದಕಾಗಿ (ಕಳೆದುಹೋದದ್ದಕ್ಕಾಗಿ) ಹಂಬಲಿಸೋದು - "ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೇ ಜೀವನ" ಎಂಬ ಕವಿವಾಣಿಯಂತೆ...

ಆದರೂ ಈ ನೆನಪುಗಳಿಗೊಂದು ಸಲಾಮ್...


ಚಿತ್ರ ಕೃಪೆ : ಅಂತರ್ಜಾಲದಿಂದ ಪಡೆದದ್ದು.



Wednesday, April 11, 2012

ಗೊಂಚಲು - ಇಪ್ಪತ್ತು + ಒಂಭತ್ತು...


ಭಯವಾಗುತ್ತಿದೆ - ಅಮ್ಮ
ಬದುಕೆಂಬ ಗುಮ್ಮನ ವಿವಿಧ ರೂಪಗಳ ಕಂಡು...


ಸದ್ದೇ ಇಲ್ಲದೆ ಒಂದಷ್ಟು ದೂರ ಜೊತೆ ನಡೆದು -
ಅಷ್ಟೇ ನಿಶ್ಯಬ್ದವಾಗಿ ಸರಿದು ಹೋಗುವ 
ಎಷ್ಟೊಂದು ಸಂಗತಿಗಳು ಈ ಪುಟ್ಟ ಬದುಕಲ್ಲಿ...
ಕೆಲವು ಬಣ್ಣ ತುಂಬಿ ಹೋಗುತ್ತವೆ...
ಇನ್ಕೆಲವು ಬಣ್ಣ ಅಳಿಸಿ...


ಹುಡುಕುತ್ತೇನೆ ನನ್ನ ನಾನು 
ಇಡಿಯಾಗಿ 
ಒಡೆದ ಗಾಜಿನ ಚೂರುಗಳಲ್ಲಿ...
ಕಂಡದ್ದು - ಸಾವಿರ ಮುಖಗಳು...
ಯಾವುದೂ ನನ್ನದಲ್ಲ - ಎಲ್ಲವೂ ನನ್ನದೇ...


ಘೋರಿ ಸೇರಿದ ಆಸೆ...
ಗರ್ಭ ತಳೆದ ಹೊಸ ಕನಸು...
ನಿನ್ನೆಯ ಹಳವಂಡ - ನಾಳೆಯ ಕನವರಿಕೆಗಳಲ್ಲಿ...
ಈ ಕ್ಷಣ -
ಅರ್ಧ ಜಗಿದುಗಿದ ತಾಂಬೂಲ...


ನನಗೇ ಅರ್ಥವಾಗದ ನನ್ನ ಬೇಕುಗಳು...
ಕೂಡುವ - ಕಳೆಯುವ
ಗುಣಿಸಿ - ಎಣಿಸುವ...
ಗೊತ್ತಿಲ್ಲದ - ಗುರಿಯಿಲ್ಲದ...
ಕೊನೆ ಕಾಣದ ಅಲೆದಾಟದಲ್ಲಿ...
ಕಳೆದು ಹೋಗುತಿದೆ ಬದುಕು
ಹಾಗೇ ಸುಮ್ಮನೆ...


*****


ಭಯವಾಗುತ್ತಿದೆ - ಅಮ್ಮ
ಬದುಕೆಂಬ ಗುಮ್ಮನ ವಿವಿಧ ರೂಪಗಳ ಕಂಡು...


ಅಂದು - ನೀ ಹೇಳುತ್ತಿದ್ದ ಕತ್ತಲ ಗುಮ್ಮನ ಬಗೆಗೆ ಭಯವಾದರೆ ಅಡಗಿಕೊಳ್ಳಲೆನಗೆ ನಿನ್ನ ಸೆರಗ ಮರೆಯಿತ್ತು.
ನಿನ್ನ ಮಡಿಲ ಕಂಪಿಗೆ ಎಂಥ ಗುಮ್ಮನ ಭಯವನ್ನೂ ಓಡಿಸಬಲ್ಲ ಬೆಚ್ಚನೆಯ ಬಿಸುಪಿತ್ತು.
ನೋವಾದರೆ ಸಂತೆಯ ನಡುವೆಯೂ ದನಿ ತೆರೆದು ಅತ್ತು ಬಿಡಬಹುದಿತ್ತು.
ಏನೋ ಬೇಕೆನಿಸಿದರೆ ನಿನ್ನೆಡೆಗೆ ಕೈಚಾಚಿ ರಚ್ಚೆ ಹಿಡಿಯಬಹುದಿತ್ತು.
ನಿನ್ನ ಮುದ್ದಿಗೆ - ನನ್ನ ನಗುವಿಗೆ ಊರನೆಲ್ಲ ಸೆಳೆವಂಥ ಸ್ವಚ್ಛ ಸೊಬಗಿತ್ತು.
ಹರಿದ ಮಂಡಿಗೆ, ತರಚು ಗಾಯಕ್ಕೆ -  ನಿನ್ನ ಮಮತೆಯ ಮುಲಾಮಿತ್ತು.

ಸೋತ ಆಟ, ಪಾಠಗಳ ನೋವಿಗೆ - ನಿನ್ನ ಭರವಸೆಯ ತಬ್ಬುಗೆಯಿತ್ತು.

ಆಡುತ್ತಾಡುತ್ತಲೇ ಓಡುವ ದಿನಗಳೊಂದಿಗೆ ಅರಿವೇ ಆಗದೆ ಬೆಳೆದುಬಿಟ್ಟೆ.
ನಿನ್ನ ಮಡಿಲಿಂದ ಕೊಸರಿ ಜಗದ ಬಯಲಿಗೆ ಬಿದ್ದುಬಿಟ್ಟೆ.

ಈಗ - 
ನಡೆಯಲೇ ಬೇಕಾದ ಬದುಕಿನ ಕೊನೆ ಕಾಣದ ದಾರಿಯ ನಡುವಿನ ವಿಚಿತ್ರ ತಿರುವು, ಕವಲುಗಳ ಎದುರು ಉಸಿರು ಸಿಕ್ಕಂತಾಗಿ ತಡವರಿಸುತ್ತ ನಿಂತಿದ್ದೇನೆ.
ಇಂದು -
ಬೆಳೆದ ಹಮ್ಮು - ತೋರಲೇ ಬೇಕಾದ ಬಿಮ್ಮುಗಳಲಿ
ಎಂಥ ನೋವಿಗೂ ಅಳುವಂತೆಯೂ ಇಲ್ಲ.
ಎಷ್ಟೇ ಖುಷಿಯಾದರೂ ನಗುವು ಸಲ್ಲ.
ಕಾರಣ -
ನಾನತ್ತರೆ ಜಗವೆಲ್ಲ ಒಳಗೇ ನಗುತ್ತೆ.
ನಾ ನಗುತಿದ್ದರೆ ಸುತ್ತಣ ಕಣ್ಣುಗಳಲಿ ಈರ್ಷ್ಯೆ.

ಯಾರ್ಯಾರೋ ಅಂತಾರೆ ಇದೆಯಂತೆ ಬದುಕ ಅಂತ್ಯದಲ್ಲಿಯೂ ಶಾಂತಿ.
ಆದರೆ ನನಗನಿಸುತ್ತೆ ಅಲ್ಲಿರುವುದು ಬರೀ ಸ್ಥಬ್ದತೆ.
ಒಂದಾನುವೇಳೆ ಇದ್ದರೂ ಇರಲಾರದು ಬಿಡು
ನಿನ್ನೆದೆಗೇ ಒದೆಯುತ್ತ ನಿನ್ನೆದೆಯ ಅಮೃತವ ಹೀರುವಾಗ ಇದ್ದಿರುತ್ತಿದ್ದ ಪ್ರಶಾಂತಿ.

ಅಮ್ಮಾ -
ಒಮ್ಮೆ ಈ ಜಗದುಡಿಯಿಂದ ಸೆಳೆದುಕೋ ನನ್ನ ನಿನ್ನ ಮಡಿಲಿಗೆ.
ನಿನ್ನ ಅಂತಃಕರಣದ ಹಾರೈಕೆಯೊಂದೇ ಭರವಸೆಯು ಭವಿತವ್ಯಕೆ...










ಚಂದದ ಪ್ರತಿಕ್ರಿಯೆಗಳಿವೆ... ಒಮ್ಮೆ ಕಣ್ಣಾಡಿಸಿ...