Monday, August 20, 2012

ಗೊಂಚಲು - ಹತ್ತು ಗುಣಿಸು ನಾಲ್ಕು.....


ಹತ್ತಿರವೋ..?
ದೂರವೋ..??


ಮನಸು ಮಾತಾಡುವುದ ನಿಲ್ಲಿಸಿಬಿಟ್ಟಿದೆ...

ಉಸಿರಾಟದಲ್ಲೂ ಜಾಗತೀಕರಣದ ಗಾಳಿ...

ಮನೆ ಬಾಗಿಲಲ್ಲೇ ಸಿಗುತ್ತವೆ
ವಿಶ್ವದರ್ಜೆಯ ಮುಖವಾಡಗಳು...

'ಅಮ್ಮ' - 'ಮಮ್ಮಿ'ಯಾಗಿ ಹೆಣವೆನಿಸಿಕೊಂಡಳು
ತೊದಲು ನುಡಿಯಲ್ಲೂ ಮಣ್ಣಗಂಧವಿಲ್ಲ...

ತುಟಿ - ನಾಲಿಗೆಗಳಿಗೆ ದಿನವಿಡೀ ಬಿಡುವಿಲ್ಲ 
ಕಿವಿ ಬಿಸಿಯಾಗಿ ಹೋಗಿದೆ 
ಕುಣಿಯುತ್ತಿವೆ
ಭಾವಸೆಲೆಯಿಲ್ಲದ ಸಾವಿರಾರು ಒಣ ಶಬ್ದಗಳು...

ಹಸುಳೆಯ ಕೈಯಲ್ಲೂ ಗಣಕಯಂತ್ರ 
ಬೆರಳುಗಳು ಮಾತಾಡುತ್ತವೆ ಅಜೀರ್ಣವಾಗುವಷ್ಟು
ಅಲ್ಲೂ ಕಡ ತಂದ ಸಂದೇಶಗಳದ್ದೇ ಮೇಲುಗೈ...

ಎಲ್ಲೋ ಯಾರೋ ಮಡಿದ ಸುದ್ದಿಗೆ
ಸಾಮಾಜಿಕ ಜಾಲತಾಣದಲ್ಲೊಂದು ತುಂಬ ನೋವಿನ (?)
ಗೋಡೆ ಬರಹ...
ವೃದ್ಧಾಶೃಮದಲ್ಲಿ ತನ್ನಮ್ಮ ನಿತ್ಯವೂ ಸಾಯುತಿರುವುದರೆಡೆಗೆ
ಜಾಣ ಮರೆವು...

ಕಾರು ಬಂಗಲೆಗಳೆಲ್ಲ ಸಾಧನೆಯ ಅಳತೆಗೋಲುಗಳಾಗಿ,
ಗಳಿಕೆ - ಹೂಡಿಕೆಗಳೇ ಬದುಕಾಗಿ ಹೋಗಿ,
ಜೀವಿಸುವ ಖುಷಿಯ ಕಳೆದುಕೊಂಡ 
ವಿಶ್ವ ಮಾರುಕಟ್ಟೆಯಲ್ಲಿ
ಭಾವ - ಬಂಧಗಳೆಲ್ಲ
ಅನಾಥ ಶವಗಳು...:::(((

ಚಿತ್ರ ಕೃಪೆ : ಅಂತರ್ಜಾಲದಿಂದ...
ಸೂಚನೆ: ಈ ಬರಹದ ಇನ್ನಷ್ಟು ವಿಸ್ತಾರವಾದ ಓದಿಗೆ ಗೆಳೆಯ ಹುಸೇನ್ ರ ಈ ಬ್ಲಾಗ್ ನೋಡಿ:
http://nenapinasanchi.wordpress.com/2012/09/21/%E0%B2%85%E0%B2%A8%E0%B2%BE%E0%B2%A5-%E0%B2%B6%E0%B2%B5%E0%B2%97%E0%B2%B3%E0%B3%81/

8 comments:

  1. ಭಗವದ್ಗೀತೆಯಲ್ಲೊಂದು ಕಡೆ ಕೃಷ್ಣನ ಮಾತು.....

    "ಒಂದನ್ನು ಪಡೆದುಕೊಳ್ಳಬೇಕಾದರೆ ಮತ್ತೊಂದನ್ನು ಕಳೆದುಕೊಳ್ಳಲೇ ಬೇಕು"

    ಸಹಜವಾಗಿ ನಮ್ಮದು ಮಾನವ ಪ್ರಕೃತಿ...... ಎಲ್ಲವೂ ಅಧಿಕವೇ.......

    ಒಂದನ್ನು ಪಡೆದುಕೊಳ್ಳಲು ಎಲ್ಲವನ್ನೂ ಕಳೆದುಕೊಳ್ಳುತ್ತಿದ್ದೇವೆ.

    ಈಗಿನ ಕಾಲಮಾನದ ವಿಪರ್ಯಾಸಗಳನ್ನು ಒಪ್ಪಿಕೊಳ್ಳಲೇ ಬೇಕಾಗಿದೆ. ಗತಿ ಇಲ್ಲ....

    ವಿಶ್ವ ಮಾರುಕಟ್ಟೆಯಲ್ಲಿ ಭಾವ - ಬಂಧಗಳೆಲ್ಲ ಇಲ್ಲ ಅಂತಲ್ಲ....

    ಆದರೆ ಅವು ಅನಾಥ ಶವಗಳು...

    ಆ ಭಾವಗಳಿಗೆ ಜೀವ ತುಂಬಲು ಮನಸ್ಸೊಂದೇ ಸಾಲದು.....

    ಧೈರ್ಯವೂ ಬೇಕಷ್ಟೆ.....

    ಒಳ್ಳೆಯ ವಿಚಾರವಂತ ಬರಹ.......

    ReplyDelete
  2. ನಿಜ, ಮನಸ್ಸುಗಳು ಮಾತು ಮರೆತಿವೆ, ಮೆದುಳುಗಳು ಮಾತ್ರ ಮಾತಾಡುವ ಕಾಲವಿದು

    ಆದರೂ ಒಂದಷ್ಟು ಕಾಡುವ ಕಾಡಿಸುವ ಭಾವಗಳಿವೆ ಅನಾಥ ಶವಗಳಾಗಿ,
    ಜೀವ ತುಂಬ ಬೇಕಿದೆ ಅವುಗಳನ್ನೆಲ್ಲ ಆಯ್ದು - ಅಕ್ಷರಗಳಿಂದ ಅಕ್ಕರೆಯಿಂದ...

    ಜೀವಿಸುವ ಖುಷಿಯ ಸೊಗಸು ಮತ್ತೆ ಹಸಿರಾಗಿ ಅರಳುವ ಕಾಲ ಬಂದೀತು....

    ಬರಹವರಳಿಸುವ ಭಾವ ಬತ್ತದಿರಲಿ...

    ReplyDelete
  3. ಬಹಳ ಚನ್ನಾಗಿದೆ. ನಿಜ, ಮಾನವನ ಬದುಕು ಯಾ೦ತ್ರಿಕವಾಗಿಬಿಟ್ಟಿದೆ. ಅಲ್ಲಿ ಭಾವನೆಗಳಿಗೆ, ಸ೦ಬ೦ಧಗಳಿಗೆ ಜಾಗವಿಲ್ಲದ೦ತಾಗಿದೆ. ಆದರೆ ಯಾ೦ತ್ರಿಕ ಬದುಕಲ್ಲಿ ಸುಖ ಎಲ್ಲಿ? ಅದಕ್ಕಾಗಿಯೇ ಜನರು ನೆಮ್ಮದಿಗಾಗಿ ಪರಿತಪಿಸುತ್ತಿದ್ದಾರೆ, ಆದರೆ ವಿಷಾದವೆ೦ದರೆ ಆ ನೆಮ್ಮದಿಯನ್ನೂ ಯ೦ತ್ರಗಳಲ್ಲಿ ಹುಡುಕುತ್ತಿದ್ದಾರೆ....

    ReplyDelete
  4. ಮನುಷ್ಯ ಆಧುನಿಕತೆಯ ಮಾಯೆಯಲ್ಲಿ ತನ್ನತನವನ್ನು ಕಳೆದುಕೊಂಡಿದ್ದಾನೆ...ಮನುಷ್ಯನಲ್ಲಿರಬೇಕಾದ ಯಾವುದೇ ಗುಣಗಳು ಅವನಲ್ಲಿಲ್ಲ ... ಹಣದ ಹಿಂದೆ ಬಿದ್ದ ಅವನ ಬುದ್ದಿಯನ್ನು ಅದೇ ಆಕ್ರಮಿಸಿದೆ ...
    ಮನೆ ಬಾಗಿಲಲ್ಲೇ ಸಿಗುತ್ತೆ ವಿಶ್ವದರ್ಜೆಯ ಮುಖವಾಡಗಳು ... ನಿಮ್ಮ ಮನಸ್ಸಿನ ಭಾವನೆಯನ್ನು ಎಷ್ಟು ಚೆನ್ನಾಗಿ ಅಭಿವ್ಯಕ್ತಿಸಿದ್ದೀರಿ .. ಇದೊಂದು ಸಾಲು ಸಾಕು .. ನಿಮ್ಮ ಕವನದ ಒಳ ಮರ್ಮ ತಿಳಿಯಲು...

    ಪ್ರೀತಿಯಿಂದ ,
    ಹುಸೇನ್ (http://nenapinasanchi.wordpress.com/)

    ReplyDelete
  5. ಮೆಚ್ಚಿದ ಎಲ್ಲರಿಗೂ ಕೃತಜ್ಞ...

    ReplyDelete
  6. ಹಲವಾರು ಬಾರಿ ನಮ್ಮೆಲ್ಲರಿಗೂ ಈ ಕೃತಕತೆಯ ಅನುಭವ ಆಗದೇ ಏನಿಲ್ಲ! ಬಹಳ ಅರ್ಥವತ್ತಾಗಿ ಬರೆದಿದ್ದೀರ.. ಇಷ್ಟವಾಯ್ತು :-)

    ReplyDelete