Tuesday, August 19, 2014

ಗೊಂಚಲು - ಒಂದು ನೂರಾ ಮೂವತ್ತು.....

ಮನಸಿನ ಹೊಸ ನಡಿಗೆ.....
(ಅವಳೆದೆಯ ಕಲ್ಪಿತ ಭಾವಗಳು – ನನ್ನ ಶಬ್ದಗಳಲ್ಲಿ... ಅವಳಾರೆಂದು ಕೇಳಬೇಡಿ...)


‘ರೂಪ’ದರ್ಶಿ: ಸ್ನೇಹಿತೆ “ಊಪಿ...”
ಒಳಮನೆಯ ಕತ್ತಲಲಿ ಕಾಡುವ ನೆನಪು – ನೇವರಿಕೆ...
ವಾಡೆಯ ಬಾಗಿಲ ತೆರೆದಿಟ್ಟೆ...
ತೂರಿ ಬರೋ ಬೆಳಕಲ್ಲಿ ಕಂಡದ್ದೂ ಮತ್ತದೇ ನಿನ್ನಂದ, ಎದೆ ಬಯಲ ಚೆಂದ...
ಕಾರಣ - ಅಕ್ಷಿ ಅಕ್ಷದ ತುಂಬಾ ನಿನ್ನದೇ ಕನವರಿಕೆ...
ಸುಳಿವ ಹೊಸ ಗಾಳಿಯಲೂ ನಿನ್ನ ಬೆವರ ಗಂಧ...
ಜೀವ ಭಾವದೊಳೆಲ್ಲ ರೋಮಾಂಚದ ಭಾವಾನುಬಂಧ...


ನೆನಪಾಗಬಾರದೇ ನಿನಗೊಮ್ಮೆ  - ತುಟಿಯಂಚಿಂದ ನೀ ಕೆಡಿಸುತಿದ್ದ ನನ್ನ ಕಣ್ಣ ಕಾಡಿಗೆ, 
ಆಗೆಲ್ಲ ಖುಷಿಯಿಂದಲೇ ಗದರುತಿದ್ದ ನನ್ನ ತುಟಿಯ ಕೊಂಕು, 
ಹೆಣ್ಣೆದೆಯ ಅರಳುವಿಕೆಯ ನಸುಗಂಪನ,
ಭಯ ಬೇಡವೇ ಹುಡುಗೀ ಅಂತಂದು ನೀನೇ ಒರೆಸುತಿದ್ದ ಎನ್ನ ಹಣೆಯ ಬೆವರ ಮಣಿ, 
ಆ ನಸುಗತ್ತಲಲೂ ಎನ್ನ ಕಣ್ಣಲ್ಲಿ ಹೊಳೆಯುತಿದ್ದ ಆರಾಧನೆಯ ಆರದ ದೀಪ...


ಮನಸಿನದಿದು ಹೊಸ ನಡಿಗೆ – ಒಲವೇ ನಿನ್ನೆಡೆಗೆ...
ಅನುಕ್ಷಣವೂ ನಿನ್ನದೇ ಘಂಟೆ ಜಾಗಟೆ ಎದೆ ಗುಡಿಯ ಮಂಟಪದಲ್ಲೀಗ - ನಿದ್ದೆ ಮರುಳಲ್ಲೂ ಘಲಿ ಘಲಿರೆನ್ನುವ ಹಸುಕಂದನ ಅಂಬೆಗಾಲಿಗೆ ಕಟ್ಟಿದ ಗೆಜ್ಜೆಯಂತೆ...
ಹೂವ ಜೊತೆ ಸೇರಿ ಹಾಡಬೇಕಿದ್ದ ಹಾಡಿನ ಝಲಕೊಂದು ದುಂಬಿಯ ಕಾಯುತ್ತ ಇಲ್ಲೇ ಸುಳಿಯುತಿದೆ...
ಎನ್ನೆದೆಯ ಹಾಳೆಯ ಮೇಲೆ ನೀ ಅರ್ಧ ಬರೆದಿಟ್ಟು ಹೋದ ಕವನದ ಸಾಲು ಪೂರ್ಣತೆಯ ಚುಕ್ಕಿಯಿಡಲು ನಿನ್ನ ಬರವನೇ ಕಾಯುತಿದೆ...


ಪೆದ್ದು ಹುಡುಗಾ - ಬಾಲ್ಯ ಕಳೆದು ಹೆಣ್ಣಾಗಿ ಬೆಳೆದು ಎದೆಯ ಭಾವಗಳಿಗೆ ಹೊಸ ಬಣ್ಣ ಬಂದ ಮೇಲೆ ಹೆಣ್ಣಾಸೆಯ ಕೋಮಲ ಭಾವಗಳಿಗೆ ಕಿರುಬೆರಳಲೇ ಕಿಡಿ ಹಚ್ಚಿ, ಜಂಗಮ ಭಾವಗಳಿಗೆಲ್ಲ ಸ್ಥಾವರದ ಬಯಕೆ ತುಂಬಿದ ಮೊದಲ ಗಂಡು ಪ್ರಾಣಿ ಕಣೋ ನೀನು...


ಬೆರಳ ಬೆಸೆದು, ಕಣ್ಣಲ್ಲೇ ನನ್ನಾಳವನೆಲ್ಲ ಅಳೆದು, ಚಿತ್ತ ಸೋಲುವಂತ ಪ್ರಣಯದ ಕಲ್ಪನಾ ಚಿತ್ರಗಳಿಗೆ ಒಳಗೇ ಜೀವಬರಿಸಿ, ಎದೆ ಭಾರ ಏರಿಸಿ, ನಿನ್ನ ಕಣ್ಣ ತಪ್ಪಿಸಲು ಹೆಣಗುವಂತೆ ಮಾಡಿ, ನನ್ನ ಸಂಜೆಗಳಿಗೆಲ್ಲ ರಂಗೇರಿಸಿ, ಮೀಸೆ ಅಡಿಯಲ್ಲೇ ನಸುನಗುತ್ತ ನನ್ನೊಡನೆ ನೀ ಕೂರುತ್ತಿದ್ದ ನಿನ್ನ ಪ್ರೀತಿಯ ಜಾಗ ಅಂಗಳದ ಆ ಕಲ್ಲು ಮಂಚ ಕೂಡ ಈಗ ನಿನ್ನ ತುಂಟ ತುಂಟ ಪಿಸುನುಡಿಯ ದನಿಯ ಕೇಳದೇ ಒಂಟಿ ಭಾವದಲ್ಲಿ ನರಳುತಿರುವಂತೆ ಕಾಣುತಿದೆ ಕಣೋ...  


ತಲೆ ಸ್ನಾನ ಮಾಡಿ ಬಂದು ಎಳೆ ಬಿಸಿಲಲ್ಲಿ ಕೂದಲ ಕೊಡವುತ್ತ ನಿಂತಿದ್ದರೆ ನಾನು, ಹಿಂದಿನಿಂದ ಬಂದ ನೀನು ಸೋನೆ ಮಳೇಲಿ ನೆಂದ ಹಂಸೆ ಮಳೆ ನಿಂತ ಮೇಲೆ ಗರಿಕೊಡವಿಕೊಂಡಂತಿದೆ ಕಣೇ ಅಂದಿದ್ದೆ... ಎಣ್ಣೆ ಗಪ್ಪು ಹುಡುಗಿ ನಾನು, ಕಡುಗಪ್ಪು ಕೂದಲ ಕೊಡವಿದರೆ ಹಂಸೆಯಂತೆ ಕಾಣ್ತೀನಾ ಮೊದಲು ಕಣ್ಣು ತಪಾಸಣೆ ಮಾಡ್ಕೋ ಅಂದರೆ; ನಿನ್ನ ಮನದ ಬಿಳುಪಲ್ಲಿ ಬದುಕ ಬೆಳಗಿಸಿಕೊಳ್ಳ ಹೊರಟ ಮಹಾ ಸ್ವಾರ್ಥಿ ನಾನು ನಂಗೆ ನೀನೆಂದಿಗೂ ಹಂಸೆಯೇ, ಬೇಕಿದ್ದರೆ ಎಣ್ಣೆಗಪ್ಪು ಹಂಸೆ ಅಂತ ಕರೀತೀನಿ ಅಂತಂದು ಎಂದಿನ ನಿನ್ನ ದೊಡ್ಡ ನಗೆಯ ನಕ್ಕು ಅಂಗಳದಲೇ ಅರಳಿದ್ದ ಬಿಡಿ ಮಲ್ಲಿಗೆಯೊಂದ ನೀಡಿದ್ದು ನೆನಪಾದರೆ ಈಗಲೂ ಏನೋ ಅವ್ಯಕ್ತ ನಾಚಿಕೆ ಜೀವದಲಿ ಜೋಕಾಲಿಯಾಡುತ್ತೆ...


ತಲೆ ನೋವೆಂದು ಸಪ್ಪೆ ಮುಖ ಮಾಡಿದರೆ ನಾನು – ಎಂದಿನ ಪೋಲಿತನವನೆಲ್ಲ ಮರೆತು ಪ್ರೀತಿಯಿಂದ ತಲೆಗೆ ಎಣ್ಣೆ ತಟ್ಟಿ ಬಿಸಿ ಬಿಸಿ ನೀರೆರೆದ ಸಾಧು ಗೆಳೆಯ ನೀನು... ಆಗೆಲ್ಲ ಕೇವಲ ಹುಡುಗಿಯಲ್ಲಿ ಮಾತ್ರವಲ್ಲ ಅಮ್ಮನಿರೋದು ಒಬ್ಬ ಶುದ್ಧ ಮನದ ಗೆಳೆಯನಲ್ಲೂ ಅಮ್ಮನಿರ್ತಾಳೆ ಅನ್ನಿಸಿದ್ದಿದೆ... ಅದಕೇ ಅಮ್ಮ ನೆನಪಾದಾಗಲೆಲ್ಲ ಬೆಳ್ಳಂಬೆಳಗ್ಗೆಯೇ ನಿನ್ನ ಮನೆಯಂಗಳದಲಿ ಪ್ರತ್ಯಕ್ಷವಾಗುತ್ತಿದ್ದುದು ನಾನು... ತಲೆ ನೇವರಿಸಿ ಏನೇ ಆಯ್ತು ಅಂತ ಆ ಶಾಂತ ಕಣ್ಗಳಲ್ಲೊಮ್ಮೆ ನನ್ನ ನೋಡಿದರೂ ನನ್ನ ನೋವೆಲ್ಲ ಅಂದಿನ ಮಟ್ಟಿಗೆ ಸತ್ತವೆಂದೇ ಲೆಕ್ಕ... ಅದೆಲ್ಲ ನೆನಪಾದರೆ ಕೊರಳ ಸೆರೆಯುಬ್ಬಿ ಬರುತ್ತೆ...


ನಿನ್ನ ಮಾತಿನೆದುರಿನ ಯಾವ ಮೌನ – ಯಾವುದದು ಪುಟ್ಟ ಬೇಸರ – ಎಲ್ಲ ಸ್ನೇಹಗಳ ನಡುವೆಯೂ ಇರಬಹುದಾದ ಇಷ್ಟಿಷ್ಟು ಭಿನ್ನಾಭಿಪ್ರಾಯ - ನನ್ನ ಬಿಟ್ಟು ನೀನೆಲ್ಲಿ ಹೋಗ್ತೀಯಾ ಎಂಬ ನನ್ನ ಸಣ್ಣ ಅಸಡ್ಡೆ ಇನ್ನೆಷ್ಟು ಕಾಲ ದೂರ ನಿಲ್ಲಿಸಲಿದೆಯೋ ನಿನ್ನಿಂದ ನನ್ನನ್ನ... ನೀ ಅಷ್ಟೆಲ್ಲ ಪ್ರೀತಿಸೋ, ಮುದ್ದಿಸೋ ನನ್ನ ಕಂಗಳಿಂದ ಇನ್ನೆಷ್ಟು ಹನಿ ಜಾರಿದರೆ ನೀ ಸಮಾಧಾನಿಸಲು ಬರ್ತೀಯಾ..? ಅಷ್ಟೆಲ್ಲ ಕಾಲ ನನ್ನದೇ ತಪ್ಪಿದ್ದರೂ ನೀನೇ ಕ್ಷಮೆ ಕೇಳ್ತಿದ್ದೆಯಲ್ಲ ಇಂದು ನಾನೇ ಮಂಡಿಯೂರಿದರೂ ಯಾಕಿಷ್ಟು ಕಠೋರ... ಅರ್ಥವಾಗುತ್ತಿಲ್ಲ...


ನಂಗೆ ಅವರಿವರಿಂದ ಗೊತ್ತಾಗಿದ್ದಿಷ್ಟೇ ಕಣೋ – ಯಾವುದೋ ನೋವೊಂದು ನಿನ್ನ ಬದುಕ ತನ್ನ ತೆಕ್ಕೆಗೆಳೆದುಕೊಂಡಿದೆ - ನಿನ್ನ ಕಾಡುವ ನೋವು ನನ್ನದೂ ಅಲ್ಲವೇನೋ – ನನ್ನ ನೋವುಗಳಿಗೆಲ್ಲ ಜತೆಯಿದ್ದು, ನನ್ನೆಷ್ಟೋ ನಗುವಿಗೆ ಕಾರಣನಾದ ನೀ ನಿನ್ನೊಳಗೆ ಅಳುವಾಗ ನನ್ನ ದೂರ ಸರಿಸಿದ್ದು ಸರಿಯಾ - ನಗುವಷ್ಟೇ ನನಗಿರಲಿ ಎಂದು ನಿನ್ನ ನೋವಲ್ಲಿ ಜತೆ ನಿಲ್ಲದೇ ದೂರ ಓಡುವಷ್ಟು ಕ್ಷುಲ್ಲಕಳಾ ನಿನ್ನೀ ಸ್ನೇಹಿತೆ - ನಿನ್ನ ನೋವು ನನ್ನ ತಾಕದಿರಲೆಂದು ನೀ ದೂರ ನಿಂತ ಈ ನೋವೇ ನನ್ನ ಇನ್ನಿಲ್ಲದಂತೆ ಹಿಂಸಿಸುತ್ತದೆ ಕಣೋ - ನೀನಾಗಿ ಒಮ್ಮೆ ಎಲ್ಲವನೂ ಹಂಚಿಕೊಂಡು ಹಗುರಾಗಿ ನಕ್ಕುಬಿಡು ಬದುಕೆಲ್ಲ ಎದೆಯ ಗೂಡಲ್ಲಿ ಗುಬ್ಬಚ್ಚಿಯಂತೆ ಬಚ್ಚಿಟ್ಟುಕೊಂಡುಬಿಡ್ತೀನಿ ನಿನ್ನ... ಹಟ ಹೂಡದೇ, ತಂಟೆ ತಕರಾರು ಮಾಡದೇ... ಸಾವೇ ಎದುರು ನಿಂತರೂ ನಿನ್ನಿಂದ ದೂರ ಸರಿಯದಂತೆ ಜತೆಯಿದ್ದು ಬದುಕ ತಬ್ಬಿ ನಿಲ್ಲುತ್ತೇನೆ... ಒಮ್ಮೆ ಮಾತಾಗು – ಇಬ್ಬರೂ ಸೇರಿ ನೋವನೇ ಹರಿದು ತಿಂದು ಬದುಕ ಕಟ್ಟಿಕೊಳ್ಳೋಣ... ಸಾವಿಗೂ ನಗುವ ಕಲಿಸೋಣ...


ಮುದ್ದು ಗೆಳೆಯಾ - 
ಅದೇ ಮುಚ್ಚಟೆಯ ಭಾವದಲಿ ಬರಬಾರದೇ ಇನ್ನೊಮ್ಮೆ ಈ ಬೀದಿಯೊಳಗೆ – ನಿನ್ನೊಲವ ಮೆರವಣಿಗೆ...
ನೀ ಬಂದರೂ, ಬರದಿದ್ದರೂ ನಿನ್ನ ಹೆಸರಿನದೇ ನಿರಂತರ ಮರ್ಮರ - ಇನ್ನೀಗ ಎನ್ನೆದೆಯ ಒಳಮನೆಯೊಳಗೆ...


***ಚಿತ್ರಗಳು: ನನ್ನದೇ ಕ್ಯಾಮರಾ ಕಣ್ಣಿಗೆ ಸೆರೆ ಸಿಕ್ಕವುಗಳು... 

4 comments:

  1. ಸಾವಿಗೂ ನಗುವ ಕಲಿಸೋಣ...
    ನೆಚ್ಚಿಗೆಯಾದದ್ದು ಇಲ್ಲೇ...

    ReplyDelete
  2. ಪ್ರೀತಿಯ ಭಾವಗಳಿಗೆ..
    ಇಷ್ಟು ಚಂದದ ನಿರೂಪಣೆಗೆ ಕಾಮೆಂಟ್ ಮಾಡಲು ತೋಚುತ್ತಿಲ್ಲಾ..

    ಇಷ್ಟವಾಯ್ತು..

    ReplyDelete
  3. ನಿಮ್ಮ ಈ ಭಾವ ಗೊಂಚಲನ್ನು ಹೇಗೆ ಪ್ರತಿಕ್ರಿಯಿಸುವದೋ ಗೊತ್ತಾಗ್ತಾ ಇಲ್ಲ....ಅದ್ಭುತ...

    ReplyDelete
  4. ಭಾವನೆಗಳ ಬಿತ್ತರ ನಿಮ್ಮಿಂದಲೇ ಸಾಧ್ಯ..

    ReplyDelete