Saturday, September 20, 2014

ಗೊಂಚಲು - ಒಂದು ನೂರಾ ಮೂವತ್ತೆರಡು.....

ಆಗೀಗ ಹಿಂಡುವ ತುಂಡು ತುಂಡು ಭಾವಗಳು.....
(ಬದುಕ ಕಾಡುವ ಸಂಚಾರಿ ಭಾವಗಳಿವು - ಒಂದಕೊಂದು ವಿರುದ್ಧವೆನಿಸಿದರೆ ತಪ್ಪು ನನ್ನದಲ್ಲ...)

ಆತ್ಮ ಸಾಂಗತ್ಯವೇ - 
ಹೊಸ ಹೆಸರಿಡುವ ಹಂಗನು ಮರೆತು ಹಸನಾಗಿ ಹಬ್ಬಿರುವ ಸ್ನೇಹದ ಅನುಭಾವದಾಲಯದ ನಡುಮನೆಯಲ್ಲಿ ಈ ಬದುಕೆಂಬೋ ಬದುಕನು ಹಣತೆಯಾಗಿಸಿ ಹಚ್ಚಿಟ್ಟುಕೊಂಡು ಇಷ್ಟಿಷ್ಟೇ ಕರಗೋಣ... 
ಕರಗೋ ನೋವು ಮತ್ತು ಬೆಳಗೋ ನಗು ಎರಡೂ ನಮ್ಮದಾಗಲಿ...

ಕರುಳ ಜೋಗುಳವೇ -
ಎನ್ನ ಮೊಗದ ನಿತ್ರಾಣ ನಗುವನ್ನೂ, ಮನದ ಜೀವಂತ ಅಳುವನ್ನೂ ನಿನ್ನೆದೆಯ ಒಲವ ದಾರದಲ್ಲಿ ಕಟ್ಟಿ ಮಾಲೆಯಾಗಿಸಿ ಮುಡಿವ ನಿಸ್ವಾರ್ಥ ಮತ್ತು ತಂತಿ ಹರಿದ ವೀಣೆಯಿಂದ ಜೀವೋನ್ಮಾದದ ಮೇಘ ಮಲ್ಹಾರದ ನಾದ ಹೊಮ್ಮಿಸುವ ಹುಚ್ಚು ಹಂಬಲ ನಿನ್ನೊಳಗೆ ಮೂಡಿದ್ದು ಹೇಗೆ ಮತ್ತು ಏಕೆ..?? 
ಈಗಲೂ ಸೋಜಿಗವೆನಗೆ... 
ನೀನು -
ನಾ ಅರಿಯಲಾರದೆ ಹೋದ, ಬರೆಯಲಾಗದೆ ಸೋತ ಒಂದು ಮಹಾ ಕವಿತೆ...

ನಗುವಿಲ್ಲದ ಸ್ಮಶಾನ ಮೌನ - 
ಒಲವಿಲ್ಲದ ಪಿಶಾಚ ಧ್ಯಾನ - 
ರೆಪ್ಪೆಗಳು ಒಂದಾಗದ ಪರಿತ್ಯಕ್ತ ಕಾರಿರುಳು - 
ಒಂದಾದರೂ ಘನ ಕನಸು ಹುಟ್ಟದ ದರಿದ್ರ ಹಗಲು - 
ಆತ್ಮಗಳ ಬೆಸೆದು ಬೆಳಗದ ಶವ ಸಂಭೋಗದಂಥ ಕ್ಷುದ್ರ ಮಿಲನ - 
ಕೋಟಿ ಆಸೆಗಳ ಸಂಚಯಿಸೋ ಬಣ್ಣದ ಕಿರಣಗಳ ಹೊತ್ತು ಪ್ರತಿಫಲಿಸೋ ಮುಂಜಾವಿನ ಮಂಜಿಗೂ, ಪ್ರೇಮದ ನಂಜೇರಿ ಶೃಂಗಾರ ರಂಗೇರಬೇಕಿದ್ದ ಚುಮು ಚುಮು ಮುಸ್ಸಂಜೆಗೂ ಸ್ಪಂದನೆಯ ಹಂಗೇ ಇಲ್ಲದಂತೆ ಮುಖ ತಿರುವಬೇಕಾದ ಅಸಹಾಯ ಮನಸು - 
ಉಸಿರಿದ್ದೂ ಸಾಯುವುದೆಂದರೆ ಇಷ್ಟೆ ತಾನೆ... 
ಅಂಥ ಬದುಕುಗಳನ್ನು ಘೋರಿಯೊಳಗಣ ಬದುಕುಗಳೆನ್ನಬಹುದೇನೋ ಅಲ್ಲವಾ...........  

ಅವಳ ಸ್ನೇಹದ ಕಣ್ಣಂಚಿಂದ ಭರವಸೆಯ ಕಿಡಿಯೊಂದ ಬಸಿದುಕೊಂಡೆ... 
ಕಂಪಿಸೋ ಕಿರುಬೆರಳಿಂದ ಹೃದಯಕ್ಕೆ ಜೀವ ಸಂಚಾರ...
ಹೊತ್ತಿದ ಹೊಸ ಉತ್ಸಾಹದ ಉರಿಯ ಸುತ್ತ ಬದುಕಿನದೀಗ ಸಂಭ್ರಮದ ತಕಧಿಮಿತ...

ಹೊಟ್ಟೇಲಿ ಕರುಳ ಕೊಯ್ಯುವಷ್ಟು ಹಸಿವನಿಟ್ಟು - ತಟ್ಟೇಲಿ ರುಚಿಯಾದ ಅನ್ನವನಿಟ್ಟು - ಮೂಗು, ಕಣ್ಣುಗಳ ಸ್ವೇಚ್ಛೆಯಾಗಿ ಬಿಟ್ಟು - ಉಣ್ಣಲು ಬೇಕಾದ ಬಾಯಿ ಮತ್ತು ಕೈಗಳನು ಕಟ್ಟಿ - ಸಾವಿನ ಮನೆಯ ಜೀತಕ್ಕೆ ಅಟ್ಟಿದ ‘ಕರುಣಾಳು’ ಬದುಕಿನೆಡೆಗೆ ಯಾಕೋ ಸಣ್ಣ ಅಸಹನೆ ಈಗೀಗ...
ಕಸಿದುಕೊಂಡ ಸ್ವಾತಂತ್ರ‍್ಯವನೆಲ್ಲ ಮರಳಿ ಕೊಡೆಂದು ಕೊರಳ ಪಟ್ಟಿ ಹಿಡಿದು ಕೇಳೋಣ ಅಂದುಕೊಂಡರೆ - ಕ್ಷಣ ಕ್ಷಣಕೂ ಬಣ್ಣ ಬದಲಿಸೋ ಮೂಲ ಸ್ವಭಾವದ ಊಸರವಳ್ಳಿಯನ್ನು ಹಿಡಿದು ಪಳಗಿಸಿಕೊಳ್ಳುವುದಷ್ಟು ಸುಲಭವಾ...???

ಎನ್ನಾತ್ಮಲತೆಯೇ -
ನೀ ನನ್ನೀ ಬದುಕ ತಬ್ಬಿದ ಪರಿಗೆ ಎದೆಯ ಚಿಪ್ಪಿನಲ್ಲಿ ಒಲವು ಗರ್ಭಧರಿಸಿದೆ...
ಹುಟ್ಟಲಿರೋ ಹೊಸ ಕನಸ ಕಂದಮ್ಮನಿಗಾಗಿ ಕಣ್ಣ ಪಾಪೆಯಂಚಲಿ ತೊಟ್ಟಿಲು ಕಟ್ಟಿ ಕಾಯುತ್ತಿದ್ದೇನೆ...

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)

1 comment:

  1. ಹಿಂಡುವ ಭಾವಗಳ ಸಮರ್ಥ ವಿಶ್ಲೇಷಣೆ.

    ReplyDelete