Friday, October 30, 2015

ಗೊಂಚಲು - ನೂರಾ ಅರವತ್ತೈದು.....

ಹೀಗಿಷ್ಟು ಮಾತು ಬಾಕಿ ಇತ್ತು.....
(ನನ್ನೊಂದಿಗೇ ನಾ ಆಡಿಕೊಳ್ಳಬೇಕಿದ್ದುದು...)

ಆತ್ಮೀಯತೆ : ಮನಸೊಂದು ಮತ್ತೊಂದು ಮನಸೊಂದಿಗೆ ಬೆಸೆದುಕೊಂಡ ಉನ್ನತ ಭಾವ ಸಾನ್ನಿಧ್ಯ...

ಆತ್ಮ ಸಾಂಗತ್ಯ : ಸುತ್ತಲಿನೆಲ್ಲ ಅಂಕೆಗಳ ಮೀರಿ ಆ ಮಡಿಲಿಗೋಡೋ ತುಡಿತವ ಹುಟ್ಟು ಹಾಕುವ, ಆ ಸನ್ನಿಧಿಯಲ್ಲಿ ನನ್ನತನದ ಹೆಸರಲ್ಲಿ ನಾನೇ ಕಟ್ಟಿಕೊಂಡ ಎಲ್ಲ ಗೋಡೆಗಳೂ ಉರುಳಿ ಬೀಳುವ, ಅಳುವಿಗೂ – ನಗುವಿಗೂ ಭರವಸೆಯ ಬೆಂಗಾವಲಾಗಿ ಮನಸ ಕಾಯುವ ಸ್ನೇಹದ ಹೆಗಲು...

ಆತ್ಮೀಯತೆ ಆತ್ಮದ ಸೌಂದರ್ಯ – ಸುಕ್ಕಾಗೋ ದೇಹದ ಹೊರ ಶೃಂಗಾರವಲ್ಲ...

ಅದು ಎದುರಿನವರ ದೂರ, ಆದರಗಳ ಹಂಗಿನಲ್ಲಿಲ್ಲ – ಪರಿಭಾವಿಸಿಕೊಂಡದ್ದು ನಾನು, ಕಾಲವೂ ಸಲಹಿಕೊಳ್ಳಬೇಕಾದದ್ದೂ ನಾನೇ...

ಸ್ನೇಹದ ದೀಪಕೆ ಗಾಳಿಗೆದುರಾಗಿ ಪ್ರೀತಿ ಬೊಗಸೆಯ ಆಸರೆ, ಬತ್ತಿಗೆ ಭಾವದೆಣ್ಣೆಯ ಪೂರೈಕೆ ನನ್ನಿಂದಲೇ ಆಗಬೇಕಲ್ಲವಾ – ನನ್ನ ಕರುಳ ಹಸಿವಿನ ಕೂಸಿನ ಆರೈಕೆಯ ಹೊಣೆ ನನ್ನದೇ ಅಲ್ಲವಾ...

ನನ್ನೊಳಗೆ ಹುಟ್ಟಿದ್ದು ನನ್ನೊಳಗೇ ಸಾಯಬೇಕು – ನನ್ನಾಳದ ಭಾವ ತೀವ್ರತೆ ಒಂದೇ ಅದರ ಮಾನದಂಡ...

ಈ ಅರಿವಿನೊಳಗೆ ಹುಟ್ಟಿದ ಆತ್ಮ ಸಖ್ಯತೆ ಅಡಿಗಡಿಗೂ ಎದುರಾಗೋ ಭಾವ ಭಿನ್ನತೆ, ದುಗುಡ, ಕಿತ್ತಾಟ, ಹುಚ್ಚಾಟಗಳ ನಡುವೆಯೂ ಅದೇ ತನ್ಮಯತೆಯ ಪ್ರಶಾಂತಿಯೊಂದಿಗೆ ಹರಿಯುತಿರಬಲ್ಲದು – ಅದು ಎದೆಯ ಮಂದಾಕಿನಿ...

ಅಂದಿನ ತೀವ್ರತೆ ಇಂದಿಲ್ಲ, ಮೋಹದ ಹಾಡಿಗೆ ಮೋಸವಾಯಿತು ಅನ್ನಿಸಿದರೆ ತಪ್ಪು ನನ್ನದೇ ಅನ್ನಬೇಕು – ಆ ದಾರಿಯ ಆಯ್ದುಕೊಂಡ ಪಥಿಕ ನಾನೇ ತಾನೆ...

ಅಹುದು, ಮನಸಿನ ಆತುರ ಆಯ್ಕೆಯ ಮೇಲೆ ಪ್ರಭಾವ ಬೀರದಿರಲಿ ಎಂಬುದು ಪ್ರಜ್ಞೆಯ ಮಾತು – ಅದನೂ ಮೀರಿ ಮನಸು ಆ ಕ್ಷಣವನಾಳಿದರೆ ಮಧುರ ಅನಾಹುತಗಳಿಗೆ ಬದುಕ ಮುಡಿ ಕೊಟ್ಟು ಸೆಳವು ಎಳೆದಂತೆ ತೇಲಿಬಿಡುವುದೊಳಿತು ಖುಷಿಯ ಹಸಿವಿಗೆ ಸೋತು...

ಹಾದಿಯ ಕಲ್ಲು ಮುಳ್ಳುಗಳಿಗೆ ಅಂಜಿದರೆ, ಸಣ್ಣ ಪುಟ್ಟ ಕವಲುಗಳಿಗೆಲ್ಲ ಕಂಗಾಲಾಗಿ ಹಿಂದಡಿಯಿಟ್ಟರೆ ಗಿರಿಯ ನೆತ್ತಿಯ ತಾಕಿ, ಮೋಡಕೆ ಮುತ್ತಿಕ್ಕಿ, ಇಬ್ಬನಿಯ ಮುಡಿಗೇರಿಸಿಕೊಂಡು ಖುಷಿಯ ನಿತ್ತರಿಸಿಕೊಳ್ಳಲಾಗದೇ ಬಿಕ್ಕುವುದು ಸಾಧ್ಯವಾ...

ಸ್ಪಂದನೆಗೆ ಒಡನಾಡೀ ಪ್ರತಿಸ್ಪಂದನೆ ಇಲ್ಲದೇ ಬಂಧ ನಗುವುದು ಹೇಗೆ, ಅದು ಬಂಧನವಾಗದೇ ಅನ್ನಿಸಿತು ಒಮ್ಮೆ; ಗೋಕುಲದಲ್ಲುಳಿದೇ ಒಲವನಾಳಿದ ರಾಧೆ, ಮಥುರೆಯ ರಾಜಕಾರಣಗಳ ನಡುವೆಯೂ ಕೊಳಲ ನಾದವ ಅವಳಿಗೆಂದೇ ಎತ್ತಿಟ್ಟ ಶ್ಯಾಮ, ಇಬ್ಬರೂ ಅಳಿದ ಮೇಲೂ ಅವರ ಸಾಂಗತ್ಯದ ಕಥೆ ಹೇಳುತ್ತ ಹರಿಯುತಲೇ ಇರುವ ಯಮುನೆ ಎಲ್ಲ ನೆನಪಾದರು...

ಸಾಂಗತ್ಯವೊಂದು ಭಾವವ ತಬ್ಬಿದಷ್ಟೇ ಉತ್ಕಟವಾಗಿ ಒಡನಾಟಕ್ಕೂ ದಕ್ಕಲಿ ಎಂದು ಬಯಸಿದರೆ ಅದು ಬರೀ ದುರಾಸೆಯಲ್ಲ ಹುಚ್ಚು ಮನಸಿನ ದುರಂತ ಕೂಡ ಅನ್ನುವುದು ಹಸಿ ಹಸಿ ಅನುಭವದ ಅಸಲೀ ಅರಿವು... 

ಹಾಗೊಂದುವೇಳೆ ಅಂಥದ್ದೇ ಒಡನಾಟವೂ ದಕ್ಕಿ ಬಿಟ್ಟರೆ; ಉಹುಂ ಅಂಥ ಬಾಂಧವ್ಯದ ನೆರಳು ಸೋಕಿದರೂ ಸಾಕು ನೋವೆಲ್ಲ ಶೇಷವುಳಿಯದಂತೆ ಭಾಗವಾಗಿ, ನಗುವು ತನ್ನಷ್ಟಕ್ಕೆ ತಾನು ಗುಣಿಸಿಕೊಂಡು ಬದುಕಿದು ಸ್ವರ್ಗವೂ ನಾಚುವ ನಾಟ್ಯ ಮಂಟಪವೇ ಸರಿ...

ನನ್ನ ಮಟ್ಟಿಗೆ ಆತ್ಮದೊಂದಿಗೇ ಸಖ್ಯ ಬೆಳೆಸಿಕೊಂಡ ಭಾವಕ್ಕೆ ಆಯಸ್ಸು ಆತ್ಮದಷ್ಟೇ – ಹಿರಿಯರ್ಯಾರೋ ಆತ್ಮ ಅವಿನಾಶಿ ಅಂದಂತೆ ಕೇಳಿದ ನೆನಪು... 

ಇದೀಗ ಅಲ್ಯಾರೋ ಆತ್ಮ ಸಾಂಗತ್ಯವೊಂದು ಸತ್ತು ಹೋಯಿತು ಅಂದರೆ ನಕ್ಕು ಬಿಡುತ್ತೇನೆ ಮತ್ತು ನನ್ನ ಎದೆಗೂಡಿನಲ್ಲಿ ಕಾಪಿಟ್ಟುಕೊಂಡ ಆತ್ಮೀಯ ಸಾಂಗತ್ಯಗಳನೆಲ್ಲ ಒಮ್ಮೆ ಮಾತಾಡಿಸಿ ಬರುತ್ತೇನೆ...

ಎಲ್ಲರ ಹಾದಿಗೂ (ನನ್ನಷ್ಟಲ್ಲದಿದ್ದರೂ) ಅಂಥ ಒಂದಾದರೂ ಸ್ನೇಹದ ಜಲಬಿಂದುವಿನಾರೈಕೆ ದಕ್ಕಿ ಬದುಕ ಹಸಿರಾಗಿಸಲಿ...

1 comment: