Thursday, December 15, 2016

ಗೊಂಚಲು – ಎರಡು ಸೊನ್ನೆ ಒಂದು...

ನೆನಪು ಹುಣ್ಣಿಮೆ.....
(ಹಂಗೇ ಎಲ್ಲ ನೆನಪಾಯಿತು - ಒಂದಿಷ್ಟನ್ನ ಅಕ್ಷರದಲಿ ಹೆಪ್ಪಾಕಿಟ್ಟೆ...)

ಆ ಗುಡ್ಡದ ನೆತ್ತಿಯ ಬೋಳು ಮರಕಿಷ್ಟು ನೀರು ಹೊಯ್ಯಬೇಕಿತ್ತು ಎಂದು ಬಯಸಿದ್ದು...
ಅಪರಿಚಿತ ಹಕ್ಕಿಯ ಕುಕಿಲಿಂದ ಹಾಡೊಂದ ಕಡ ತಂದು ಅನುಕರಿಸಿದ್ದು...
ಕಟ್ಟಿರುವೆಯ ಸಾಲನ್ನು ಎಂಜಲಾಗಿಸಿ ಅವರ ಪಂಕ್ತಿ ಮುರಿದದ್ದು...
ಅದರ ಚಂದದ ಗೂಡಿಂದ ನೆಲಗುಬ್ಬಿಯನ್ನು ಆಚೆ ತಂದು ಅಂಗೈಯ್ಯಲ್ಲಿಟ್ಟುಕೊಂಡು ಆ ಕಚಗುಳಿಗೆ ಕಂಪಿಸಿದ್ದು...
ಬಸವನ ಹುಳವ ಮುಟ್ಟಿ ಉಂಡೆ ಆಗಿಸಿ ತಂಗಿಯ ಮಡಿಲಿಗೆ ಹಾಕಿ ಅಳಿಸಿದ್ದು..
ಕಾಗೆ ಮುಟ್ಟಿ ಅಕ್ಕ ಮುಟ್ಟಾಗುತಿದ್ದ ಪರಿ ಹುಟ್ಟಿಸಿದ್ದ ಬೆರಗು...
ಸಮವಸ್ತ್ರದ ಮೇಲೆಲ್ಲ ಸಳ್ಳೆ ಹಣ್ಣು, ಸಂಪಿಗೆ ಹಣ್ಣು, ಹಲಗೆ ಹಣ್ಣುಗಳ ರಸದ ಬಣ್ಣದ ಚಿತ್ತಾರ...
ಅವಳಾಸೆಯ ಸೀತಾ ದಂಡೆಯ ಹೂವು ನನ್ನ ಕೈಯಿಂದ ಅವಳ ಮೋಟು ಜಡೆಯ ಅಲಂಕರಿಸಿದ್ದು...
ಶ್ರೀಲಂಕಾ ನಕಾಶೆಯಂಥ ಮುರುಗನ ಹುಳದ ಗೂಡಿಗೆ ಕಲ್ಲೆಸೆದು ಓಡುವಾಗ ಎಡವಿ ಬಿದ್ದು ಬೆರಳು ಒಡೆದು, ಹುಳ ಕಚ್ಚಿ ಮುಖ ಊದಿ – ಉಫ್...
ಮರೆತು ಹೋಗುವ ಮಗ್ಗಿಗೆ ಮರೆಯದಿರಲು ಯಾವ್ಯಾವುದೋ ದೇವರಿಗೆ ಕಪ್ಪ ಕಾಣಿಕೆಯ ಆಮಿಷ...
ಕಡ್ಡಿ ಮುರಿದ ಕೊಡೆಯೊಳಗೆ ನೆನೆಯದಿದ್ದುದು ತಲೆಯೊಂದೇ...
ಸುಳ್ಳೇ ಬರುವ ಹೊಟ್ಟೆ ನೋವು – ಶಾಲೆಗೆ ಚಕ್ಕರ್ ಆಟಕೆ ಹಾಜರ್...
ಕುತ್ರಿ ಒಕ್ಕುವಾಗಿನ ನಡು ರಾತ್ರಿಯ ಅವಲಕ್ಕಿ ಗೊಜ್ಜು, ಉದ್ದಿನ ದೋಸೆಯ ಕಂಬಳದ ರುಚಿ...
ಬಿರು ಬೇಸಗೆಯ ಮೂರು ಸಂಜೆಯ ಹೊತ್ತಲ್ಲಿ ಇದ್ದಕ್ಕಿದಂಗೆ ಗೆದ್ದಲ ಹುಳುಗಳೆಲ್ಲ ಗೂಡಿಂದಾಚೆ ಬಂದು ಪಟಪಟನೆ ರೆಕ್ಕೆ ಕಟ್ಟಿಕೊಂಡು ಆಗಸಕೆ ಹಾರಿ ಮಳೆಯ ಕರೆಯುವ ಪರಿಗೆ ಬೆರಗಾಗಿದ್ದು (ಇಂದಿಗೂ ಅದು ಬೆರಗೇ)...
ಉಂಬಳದ ಹಲ್ಲು, ನೊರ್ಜಿನ ರೆಕ್ಕೆಗಳ ಹುಡುಕಲು ಹರಸಾಹಸ...
ಹಿಡಿದು ದಾರ ಕಟ್ಟಿ ಹಾರಿಬಿಟ್ಟ ಬಿಂಬಿರಿಯ ಜೀವಂತ ಗಾಳಿಪಟ...
ಪಕ್ಕದ ಮನೆಯ ತೋಟದಿಂದ ಕದ್ದ ಮಾವು, ಕೋಕೋ, ಗೇರು ಹಣ್ಣು, ಸೌತೆಕಾಯಿಗಳ ರುಚಿಯೇ ಬೇರೆ (ಅವರ ಮನೆಯ ಮಕ್ಕಳೊಂದಿಗೇ ಹಂಚಿ ತಿನ್ನೋದು)...
ನಮ್ಮ ಊಟಕ್ಕಾಗಿ ಹಸಿವನೆ ನುಂಗುತಿದ್ದ ಅತ್ತೆ, ಅಮ್ಮ – ಅವರುಗಳ ಕನಸಲೂ ಕಾಡುತಿದ್ದ ನಮ್ಮ ಹಸಿವಿನ ಗುಮ್ಮ...
ಹಲಸಿನ ಹಸಿ ಹಪ್ಪಳ ಜೊತೆಗೊಂದು ಕೊಬ್ಬರಿ ತುಂಡು, ಹುಳಿಸಪ್ಪು ಸಣ್ಣ ಮೆಣಸು ಸಕ್ಕರೆ ಸೇರಿದ ಗುಡ್ನ (ಚಟ್ನಿ) - ಈಗಲೂ ಬಾಯಲ್ಲಿ ನೀರೂರುತ್ತೆ...
ಅಗಾಧ ಕೌತುಕ ಮೂಡಿಸ್ತಿದ್ದ ಅಂಗಳದ ಮೂಲೆಯ ನಾಯಿಗಳ ಮೈಥುನ ಮತ್ತು ದಣಪೆಯಾಚೆಯ ದನಗಳ ಮಿಲನ...
ಅರ್ಥವಾಗದೇ ಹೋದರೂ ಮೊಗದಿ ನಾಚಿಕೆ ಮೂಡಿಸುತಿದ್ದ ಹಿರಿಯರ ಪೋಲಿ ಪೋಲಿ ಮಾತು...
ಬದುಕ ಎದುರಿಸದೇ ಮಧ್ಯದಲ್ಲೇ ಎದ್ದು ಹೋದವರು ನಮ್ಮಲುಳಿಸಿ ಹೋದ ಕಂಗಾಲು ಮತ್ತು ಎಂದೂ ತುಂಬದ ಎದೆಯ ಖಾಲಿತನ...
ತಮ್ಮ ಲೋಲುಪತೆಗೆ ನಮ್ಮ ಖುಷಿಗಳ ಉಂಡು ತೇಗಿದವರು ಹಣೆಯ ಮೇಲೆ ಕೆತ್ತಿಟ್ಟು ಹೋದ ಶಾಶ್ವತ ಅವಮಾನಗಳ ಮಚ್ಛೆ...
ತುಪ್ಪ ಮತ್ತು ಕಡಬು ಕದಿಯೋಕೆ ಹೆಣಗಾಡಿ, ಸಾಹಸದ ಕಥೆ ಹಂಚಿಕೊಳ್ಳೋಕೆ ವೇದಿಕೆ ಆಗ್ತಾ ಇದ್ದ ಬೂದಗಳು ಹಬ್ಬ...
ಹೆಕ್ಕಿ ತಂದ ಮುಳ್ಳು ಹಂದಿಯ ಅಂಬು ಪಾಟೀಚೀಲವ ತೂತು ಮಾಡಿದ್ದೀಗ ನಗೆಯ ನೆನಪು...
ಭಯ ಹುಟ್ಟಿಸುತಿದ್ದ ಕಣಕು ನೀರಿನ ಹಳ್ಳ, ಕೊಳ್ಳಿ ದೆವ್ವದ ಕಥೆ, ಓಡು ನಡಿಗೆಯ ಕತ್ತಲ ಹಾದಿ...
ರಾತ್ರಿ ಪಯಣದಲಿ ಕೈಯಲ್ಲಿನ ಸೂಡಿಯ ಬುರು ಬುರು ಶಬ್ಧವೇ ಭಯದ ಮೂಲವಾಗಿದ್ದು, ಬೆಳದಿಂಗಳಲಿ ಬೆಳ್ಳಗೆ ಹೊಳೆವ ಸತ್ತ ಮರದ ತೊಗಟೆ ಭೂತವೆನಿಸಿದ್ದು...
ಆಟದ ಮನೆಯ ಸಂಸಾರದಲ್ಲಿ ಸೂರು ಹಾರುವ ನಗು...
ಒಡೆದ ಬೆರಳು, ತರಚಿದ ಮಂಡಿಗೆಲ್ಲಾ ಕಾಂಗ್ರೆಸ್ ಗಿಡದ ಎಲೆಯ ರಸವೇ ಮದ್ದು...
ಅಣ್ಣ ಬಳಸಿ ಬಿಟ್ಟ ಅಂಗಿ – ಚಡ್ಡಿಗಳೇ ನನಗೆ ಹೊಸ ಬಟ್ಟೆ, ಅವನ ಚಿಗುರು ಮೀಸೆ ನನಗೂ ಕನ್ನಡಿಯನ್ನ ನೆಂಟನನ್ನಾಗಿಸಿದ್ದು...
ಅಜ್ಜನ  ಕಣ್ಣಂಕೆಯ ನೆರಳು, ಅಮ್ಮನ ಹಳೆ ಸೀರೆಯ ಘಮಲು, ಒಡಹುಟ್ಟಿನ ನಗೆಯ ಅಮಲು ಒಟ್ಟು ಸೇರಿದ ಮಮತೆ...
ಬಿಟ್ಟೂ ಬಿಡದ ಸೋನೆ, ಅಂಗಳದ ಕಿಚಡಿ ಮಣ್ಣು, ಯಾರೆಲ್ಲರ ವಾತ್ಸಲ್ಯದ ತೊಟ್ಟಿಲಲ್ಲಿ ಅರಳಿದ್ದಿದು ಬದುಕು...

ಖುಷಿ, ರುಚಿ, ಕುತೂಹಲ, ಎಲ್ಲವನೂ ಒಳಗೊಳ್ಳುವ ಲವಲವಿಕೆಗಳೇ ಆದ್ಯತೆಯಾಗಿದ್ದ ಆ ದಾರಿಯಲ್ಲಿ ಮತ್ತೊಮ್ಮೆ ನಡೆಯಬೇಕಿತ್ತು ಅದೇ ಹಚ್ಚ ಹಳೆಯ ಭಾವದಲ್ಲಿ...

ಹೌದು - ಬಾಲ್ಯವೆಂದರೆ ಬರೀ ನಗೆಯ ನೆನಪಷ್ಟೇ ಅಲ್ಲ...
ಆದರೆ ಸ್ವಚ್ಛಂದ ಹಾಗೂ ಪ್ರಾಮಾಣಿಕ ನಗೆಯ ನೆನಪಷ್ಟೂ ಅಲ್ಲಿಯೇ ಗುಡಿಯ ಕಟ್ಟಿಕೊಂಡಿದೆ...
ನಗುವಿನೆಡೆಗೊಂದು ಮಂಗ ಹಿಡಿತದ ಒಲವ ಸಲಹಿಕೊಂಡರೆ ಎಂಥ ಗಾಯದ ನೋವನೂ ಸಲೀಸಾಗಿ ದಾಟಬಹುದು ಎಂಬ ಸರಳ ಸತ್ಯವ ಹೇಳಿಕೊಟ್ಟದ್ದೂ ಅದೇ ಬಾಲ್ಯವೇ...
ಬೆಳೆದೆನೆಂದು ಬೀಗುತ್ತಾ ತೋಳೇರಿಸೋ ಹೊತ್ತಲ್ಲಿ ಅಲ್ಲಿಯೇ ಬಿಟ್ಟು ಬಂದ ಮುಗ್ಧತೆಯ ಮತ್ತೆ ನೆನೆದು ಒಂಚೂರು ಮನುಜರಾಗೋ ಸೌಜನ್ಯ ಮತ್ತು ಮಗು ಭಾವದ ನಗುವೊಂದು ಎಲ್ಲರ ಎದೆಯಲೂ ಅರಳಲಿ...

*** ಈ ಬರಹ "ಪ್ರತಿಲಿಪಿ ಕನ್ನಡ" ಇ-ಪತ್ರಿಕೆಯಲ್ಲಿ ಪ್ರಕಟವಾಗಿದೆ...
ವಿಳಾಸ: http://kannada.pratilipi.com/shrivatsa-kanchimane/nenapu-hunnime

2 comments:

  1. Excellent words.... ಬಾಲ್ಯದ ಬೆಚ್ಚನೆಯ ಬುತ್ತಿ ತೆರೆದಿಟ್ಟಿದ್ದು... ಮತ್ತು ಉಣಬಡಿಸಿದ್ದು

    ReplyDelete
  2. Excellent words.... ಬಾಲ್ಯದ ಬೆಚ್ಚನೆಯ ಬುತ್ತಿ ತೆರೆದಿಟ್ಟಿದ್ದು... ಮತ್ತು ಉಣಬಡಿಸಿದ್ದು

    ReplyDelete