Monday, May 22, 2017

ಗೊಂಚಲು - ಎರಡ್ನೂರಿಪ್ಪತ್ತೆರಡು.....

ನೋವು - ನಲಿವು - ಮಸಣವಾಸಿ - ಬದುಕು.....

ಎತ್ತರವ ಏರಲಾಗದ ಏದುಸಿರು ಎದೆಯ ಹಿಂಡುವಾಗ ಫಕಫಕನೆ ನಕ್ಕುಬಿಡ್ತೇನೆ...
ನೋವನ್ನು ನಗೆಯಾಗಿ ಧರಿಸಿ ನೋವಿನ ಅಸ್ತಿತ್ವವವನೇ ಅಲುಗಾಡಿಸಿದ ಭಾವ...
ನೋವಿಗೀಗ ನಗೆಯ ಬಣ್ಣ...
ಕತ್ತಿಗೆ ಸುತ್ಕೊಂಡ್ರೆ ಹಾವೂ ಹಾರವೇ ಅಂತೆ...
ವಿಷ ಕೊರಳಿನ ವಿಶೇಷ ಬಣ್ಣ ಆಯ್ತಲ್ಲ...
ಬದುಕು ನೀಡಿದ ಕೈತುತ್ತು ಕಹಿ ಅಂತ ಮುಖ ತಿರುವಿದರೆ ಹಸಿದು ಮಲಗಬೇಕಾಗುತ್ತೆ...
ಹಸಿವಿಗಿಂತ ಕಹಿ ಸಹನೀಯ ಅಲ್ವಾ...
ನೋವು ಬದುಕಿನ ನೆರಳಾ...?
ಬದುಕು ಸಾವಿನ ಒಕ್ಕಲಾ...??
ಎಲ್ಲಾ ತಳಕಂಬಳಕ...
ಸಾವು, ನೋವುಗಳೆಲ್ಲ ಬಾಗಿಲು ಬಡಿದು, ಕಾದು, ತೆರೆಯದೇ ಹೋದರೆ ಕಿಟಕಿಯಿಂದಲಾದ್ರೂ ಒಳ ಬಂದು ಆಥಿತ್ಯ ಸ್ವೀಕರಿಸ್ತಾವೆ...
ನಗುವಿನದೇ ಸಮಸ್ಯೆ - ಮಹಾ ಕೊಬ್ಬು; ಬಾಗಿಲು ತೆರೆದಿಟ್ಕೊಂಡು, ನಾವೇ ಕಾದು ರಾಜೋಪಚಾರ ಮಾಡಿ ಬರಮಾಡಿಕೊಳ್ಳದೇ ಹೋದರೆ ಅಂಗಳಕ್ಕೂ ಕಾಲಿಡದ ಸ್ವಾಭಿಮಾನಿ...
ಇಂತಿಪ್ಪಲ್ಲಿ ಮನಸು ಬುದ್ಧಿ ಜತೆಗೂಡಿ ಈ ಬದುಕನ್ನ ಶಿವನಾಗಿ ಗೆಲ್ಬೇಕು...
ಗಂಗೆಯ ಮುಡಿಗಟ್ಟಿ, ಅಗ್ನಿಯ ಹಣೆಗಿಟ್ಟು, ಚಂದಿರನ ಕಂದೀಲ ಬೆಳಕಲ್ಲಿ ಶವದೆದುರು ತಾಂಡವವಾಡಬಲ್ಲವ ಮಾತ್ರ ಮಸಣದಲ್ಲೂ ನಗೆ ಗೌರಿಯ ತಬ್ಬಿ ಸಂಸಾರ ಹೂಡಬಲ್ಲ...
#ಮಸಣವಾಸಿ_ಬದುಕು...
/\/*\/\_/\/*\/\

ಬದುಕೇ -
ತುಸು ಹೆಚ್ಚೇ ಹುಚ್ಚ ನಾನು,
ಜಿಗುಟು ಜಿಗುಟು ಕನಸು ನೀನು...
ಆದರೂ,
ಅನುಭಾವಿಸಿಕೊಂಡರೆ ನಿನ್ನ ಹರಿವು ತುಂಬುವ ಅನುಭವಗಳಿಗಿಂತ ಮಿಗಿಲಾದ ಗುರುವು ಬೇಕೇ...
ಪ್ರಾರ್ಥನೆ:
ನಾ ಹಾಯುವ ಹಾದಿ ತುಂಬಾ
ಉಳಿಯಲಿನಿತಿನಿತು ಹುಚ್ಚು ನಗೆಯ ಹಾಯಿ ಬಿಂಬ...
#ಅರಿವಿನ_ನದಿಯ_ಹಾದಿ...
/\/*\/\_/\/*\/\

ಕನಸಿಗೆ ಬಳಿಯಲು ಚಿಟಿಕೆಯಷ್ಟೂ ಬಣ್ಣವೇ ಸಿಗುತ್ತಿಲ್ಲ ಕಣೇ...
ಬಿಡು ವತ್ಸಾ, ಎಲ್ರೂ ಬದುಕನ್ನ ಕಾಣೋದು ಕಪ್ಪು ಬಿಳಿಯ ಕಣ್ಣಗುಡ್ಡೆಯಿಂದಲೇ; ಅವೆರಡೇ ಗಟ್ಟಿ ಬಣ್ಣಗಳು - ಅವುಗಳಿಂದಲೇ ಉಳಿದ ಬಣ್ಣಗಳಲ್ವೇನೋ...
ಅರೇ ಹೌದಲ್ವಾ, ನೋವು ನಗುವಾಗಿ ಹೊರಳೋದು ಎಷ್ಟು ಸುಲಭ...!!!
#ಪುಟ್ಟ_ಮನಸು_ಬೆಟ್ಟ_ಭರವಸೆ...
             __ಜೊತೆ ಮಾತು: ಸ್ವಾತಿ ಕಶ್ಯಪ್
/\/*\/\_/\/*\/\

ದೃಶ್ಯದಿಂದ ದೃಶ್ಯಕ್ಕೆ ದಾಟುವ ನಡುವಿನ ನಿಶ್ಶಬ್ಧವನ್ನು ಮಾತಾಡಿಸು - ನಾಟಕದ ರುಚಿಯೇ ಬೇರೆ - ಪರದೆ ಎಳೆದ ಮೇಲೂ ಅಂಕದ ತುಂಬಾ ನೀನೇ ನೀನು...

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)

1 comment:

  1. "ಬದುಕೇ -
    ತುಸು ಹೆಚ್ಚೇ ಹುಚ್ಚ ನಾನು,
    ಜಿಗುಟು ಜಿಗುಟು ಕನಸು ನೀನು..."
    "ಎತ್ತರವ ಏರಲಾಗದ ಏದುಸಿರು ಎದೆಯ ಹಿಂಡುವಾಗ ಫಕಫಕನೆ ನಕ್ಕುಬಿಡ್ತೇನೆ...
    ನೋವನ್ನು ನಗೆಯಾಗಿ ಧರಿಸಿ ನೋವಿನ ಅಸ್ತಿತ್ವವವನೇ ಅಲುಗಾಡಿಸಿದ ಭಾವ..."
    ಇದ್ಯಾಕಿಲ್ಲಿ ಅಸಂಬದ್ಧ ಅನ್ನಿಸಿದರೂ ನಿಜವನ್ನು ತೆರೆದಿಡುವ ಪಕ್ಕಾ ಪದ್ಧತಿ.. nice ..

    ReplyDelete