Wednesday, June 6, 2018

ಗೊಂಚಲು - ಎರಡ್ನೂರಾ ಅರವತ್ತೊಂದು.....

ಹರಿದ ಚಿತ್ರಗಳು..... 

ಬದುಕೂ ಏನೂ ಹೇಳಿಲ್ಲ - ಕೇಳಿಲ್ಲ
ಸಾವೂ ಏನೂ ಕೇಳಿಲ್ಲ - ಹೇಳಿಲ್ಲ
ಅಲ್ಲಿಗಲ್ಲಿಗೆ ಚುಕ್ತಾ....
#ಕಥೆ...
⇱⇲⇚⇛⇱⇲

ತುಂಬಾ ತುಂಬಾ ಪುಟ್ಟ ಪರಿಧಿಯ ಬದುಕು - ತುಂಬಾ ತುಂಬಾ ಉದ್ದ ಹಾದಿ ಅನ್ನಿಸುವುದು ದುರಂತ...

ಭೋರ್ಗರೆವ ಅಲೆಗಳ ಮಾತೇ ಮಾತು - ಅಗಾಧ ಅನಾದಿ ಮೌನದ ದಂಡೆ - ಅಭೇದ್ಯ ಸಾಮರಸ್ಯ...!!! ಹೇಗೆ...??

ತಿಳಿನೀರ ಕೊಳದಲ್ಲಿ ಕಾಲಿಟ್ಟು ಕೂತವನ ಎದೆಯಲ್ಲಿ ಸಮುದ್ರ ಸಂವೇದ - ನಿರಂತರ ಸಂಘರ್ಷ... ವಿಕ್ಷಿಪ್ತ...

ಚಂದ್ರ ತಾರೆ ಆಕಾಶ ಅವಕಾಶಗಳ ಪ್ರೀತಿಸುವವನ ಎದೆಯಲ್ಲಿ ಬಯಲಾಗುವ ಭಯ ವಿಪರೀತ - ವಿಪರ್ಯಾಸ...

ಸಾವು ಮುಟ್ಟದ ಮುಹೂರ್ತವಿಲ್ಲ - ಹುಟ್ಟಿಗೆ ಜಾತಕದ ನಂಟು ಬೆಸೆದರೆ ಶಾಂತಿಯಂತೆ... ಸೋಜಿಗ...

ಬದುಕಿನೊಂದಿಗೆ ಸ್ನೇಹ ಅಂದರೆ ಸಾವಿನೊಂದಿಗೆ ಯುದ್ಧವಲ್ಲ - ಸಹಯಾನ... ವಿಚಿತ್ರ ಸತ್ಯ...

ಬದುಕ ಉಳಿಸಿಕೊಳ್ಳುವ ಹುತಾತ್ಮ ಬಡಿವಾರದಲ್ಲಿ ನನ್ನೊಳಗಣ ಬೆರಗು ಕಳೆದೋದ ತಿರುವ್ಯಾವುದು ತಿಳಿಯಲೇ ಇಲ್ಲ - ಹೀನಾಯ ಸೋಲು...
                             ___ ಹರಿದ ಚಿತ್ರಗಳು...
⇱⇲⇚⇛⇱⇲

ಪ್ರತೀ ಹುಟ್ಟಿಗೂ ಬದುಕೋ ಸ್ವಾತಂತ್ರ್ಯ ಇದೆ - ಸಾವು ಜೀವವ ಬದುಕೋಕೆ ಬಿಟ್ರೆ...
ಪ್ರತೀ ಬದುಕಿಗೂ ತನ್ನಿಷ್ಟದಂತೆ ನಡೆಯುವ ಸ್ವಾತಂತ್ರ್ಯ ಇದೆ - ನಮ್ಮದೇ ನಿಸ್ತಂತು ಭಾವಾಲಾಪಗಳ ಮೀರಿ ಮಾನಾಪಮಾನಗಳ ನೋವನ್ನು ಹೀರುವ ಅಂತಃಶಕ್ತಿ ಗಟ್ಟಿ ಇದ್ದರೆ...
ಇಷ್ಟಾಗಿಯೂ -
ಒಂದಕ್ಕೊಂದು ಒಂದಾನೊಂದು ರೀತಿಯಲ್ಲಿ ಅವಲಂಬಿತವೇ ಆದ ಪ್ರಕೃತಿ ಪಾತ್ರಗಳ ನಡುವೆ ಸ್ವಾತಂತ್ರ್ಯ, ಸ್ವಾವಲಂಬನೆ ಎಂಬುದೆಲ್ಲ ಒಂದು ಚಂದದ ಸುಳ್ಳು ಅಲ್ಲಲ್ಲ ಅರ್ಧ ಸತ್ಯದ ಬಾಹ್ಯ ವ್ಯಾಪಾರ ಅನ್ನಿಸುತ್ತೆ...
ಕೊಟ್ಟದ್ದನ್ನು ಕೊಟ್ಟವನೇ ದಾಖಲಿಸಿದರೆ ಅಹಂಕಾರ - ಇನ್ಯಾರೋ ಹೇಳಿದರೆ ದಾನವೋ, ತ್ಯಾಗವೋ ಏನೋ ಒಂದು - ಯಾರೂ ಹಾಡದೆ ಹೋದರೆ ಇನ್ನೇನೋ ಮಹತ್ತು - ಪಡೆದೆ ಎಂದರೆ ಹೋರಾಟ - ಒಟ್ನಲ್ಲಿ ಇದ್ದದ್ದನ್ನೇ ಕೊಡುವ, ಪಡೆವ, ಹಿಡಿದಿಡುವ ಬೊಬ್ಬೆಗಳಲ್ಲಿ ಪ್ರೀತಿ ಕೂಡ ಪರಾವಲಂಬಿಯೇ ಅನ್ನಿಸುತ್ತೆ...
#ನಾನೆಂಬೋ_ಬರೀ_ಸುಳ್ಳು...
⇱⇲⇚⇛⇱⇲

ಮುದಿ ಹಗಲಿನೊಂದಿಗೆ ಮರಿ ಇರುಳು ಮಾತಿಗಿಳಿವ ಹೊತ್ತು...
ಪ್ರತಿ ನಿಶ್ವಾಸವೂ ಕೊಟ್ಟ ಕೊನೆಯದೇ ಅಂದುಕೊಂಡು ಕಾಯುತ್ತೇನೆ ನಿನ್ನ ಆಗಮನಕ್ಕೆ - ದೇಹದ ಬೆಂಕಿಯಲಿ ಮನವು ಬೇಯದಂತೆ, ಮನದ ಬೇಗುದಿಗೆ ದೇಹ ಸುಡದಂತೆ ಎನ್ನಿಂದ ಎನ್ನ ಕಾಯ್ದುಕೊಡು ಹಂಸೆ - ಬದುಕ ಹೆಸರುಳಿಯಲಿ...
#ಪ್ರಾರ್ಥನೆ...
⇱⇲⇚⇛⇱⇲

'ಮರಕಿಂತ' 'ಮರ' ಎತ್ತರವ ಕಾಣಬೇಕೆಂದರೆ ಮಣ್ಣಾಳಕೆ ಬೇರಿಳಿಸಿ, ಮಳೆ ಗಾಳಿ ಬಿಸಿಲಿಗೆ ಎದೆಯೊಡ್ಡಿ ಆಗಸಕೆ ಬೆಳೆಯಬೇಕು - ಅದು ಪ್ರಜ್ಞೆಯ ಮಾತು; ಆದರೆ ಮನಸು ಕೊಡಲಿ ಕಣೋ -  ಅದಕೆ ನಿನ್ನ ಸುತ್ತ ಏನೂ ಬೆಳೆಯಬಾರದಷ್ಟೇ...
ಬಳ್ಳಿಯೂ ತಬ್ಬುತ್ತೆ, ಗೆದ್ದಲೂ ತಬ್ಬುತ್ತೆ ಮರವ, 'ನಗೆಯ ಹೂವರಳಿಸಿ ಆಳಬೇಕು' - ಅದು ಪ್ರಜ್ಞೆಯ ಆಳ; ಆದರೆ ಮನಸು ಬಂದಳಕ ಕಣ್ರೀ - ಚಿಗುರಿನ ಜೀವರಸವೆಲ್ಲ ನಂಗ್ ನಂಗೇ ಎಂದುಕೊಂಡು ಕುಡಿಯಲು ಹವಣಿಸುತ್ತೆ...
#ಭಾವೋದ್ವೇಗೀ_ಸಂಬಂಧ...
ಹಸಿಯಿಲ್ಲದ ನೆಲ - ಹಸಿರಿಲ್ಲದ ಬಯಲು - ಹಪಹಪಿಯ ನಾನಾವಿಧ ಕ್ರೂರ ಹಸಿವಿನ ಬಿರುಕುಗಳು...
#ಎನ್ನೆದೆಯಂಗಳ...
ಕೊಳಲ ಕಾವ್ಯ, ಪಾಂಚಜನ್ಯದ ದ್ರವ್ಯ ಎರಡನೂ ಪ್ರೀತಿಸಲು ಕೃಷ್ಣನೇ ಆಗಬೇಕು; ಮನವ ಕೃಷ್ಣನೇ ಆಳಬೇಕು...
#ಉಪಸಂಹಾರ...
 ***ಅರ್ಥ ಅರಿಯದ ಸಾಲುಗಳು...
⇱⇲⇚⇛⇱⇲

ಗೊತ್ತು -
ಬೊಗಸೆಯಲಿ ತುಂಬಿದ ಮಳೆ ಮುಷ್ಟಿಯಲಿ ಬರೀ ತೇವ - ಒಳಗೆಳೆದಷ್ಟೇ ಹೊರಬಿಟ್ಟರಷ್ಟೇ ಉಸಿರ ಅಸ್ತಿತ್ವ - ಪ್ರೀತಿ ಅಂದ್ರೆ ಸ್ವಾಧೀನತೆಯಲ್ಲ ಸಹಯಾನದ ಸ್ವಾತಂತ್ರ್ಯ...
ಆದರೆ ನಾನಾದರೋ -
ಎನ್ನೆದೆಯ ಗರ್ಭದಲಿ ನಿನ್ನ ಕೂಡಿಹಾಕದೇ, ಬಯಲ ಬಾನು ಸಲಹಿದಂತೆ ಸಲಹಿಕೊಳ್ಳಲಾಗದ ನನ್ನ ಸೋಲಿಗೆ 'ಎನ್ನ ತೊರೆಯದಿರೋ' ಎಂದು ನಿನ್ನ ಕೈಹಿಡಿದು ಒರಲುತ್ತೇನೆ...
ಮತ್ತು -
ಹರಿವಿಲ್ಲದೇ ನೀ ನಿಲ್ಲಲಾರೆ ಎಂಬುದ ಸಹಿಸದ ಎನ್ನ ಬಡ ಮನದ ಸುಕ್ಕಿನ ಹಳಹಳಿಗೆ 'ನಾ ನಿನ್ನ ತೊರೆಯಲಾರೆ' ಅಂತಂದು ಬಿಕ್ಕಳಿಸಿ ನಿನ್ನ ಕೈಹಿಡಿಯುತ್ತೇನೆ...
ಸಾಗರವ ಕುಂಭದಲಿ ಬಂಧಿಸಲು ಹವಣಿಸುವ ಹುಚ್ಚು ನಾನು - ನನ್ನದೇ  ಮನದ ಎಡಬಿಡಂಗಿ ಅಪಸವ್ಯಗಳಿಗೆ ನಿನ್ನ ಹೆಸರಿಡುತ್ತೇನೆ...
#ನೇಹಾನುಭಾವಬಂಧ...
⇱⇲⇚⇛⇱⇲

ಸಾವನ್ನು ಬರೆದೇ ಬರೆದೆ - ಬದುಕು ಹಗುರಾಯಿತು...
ನಿನ್ನನ್ನು ತುಂಬಿಕೊಂಡೆ - ಸಾವೂ ಕನಸಾಯಿತು...
#ನಾನು...

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)

1 comment:

  1. ತುಂಬಾ ಕಾಡುವ ಸಾಲು-

    ತುಂಬಾ ತುಂಬಾ ಪುಟ್ಟ ಪರಿಧಿಯ ಬದುಕು - ತುಂಬಾ ತುಂಬಾ ಉದ್ದ ಹಾದಿ ಅನ್ನಿಸುವುದು ದುರಂತ...

    ReplyDelete