Tuesday, July 3, 2018

ಗೊಂಚಲು - ಎರಡ್ನೂರಾ ಅರ್ವತ್ನಾಕು.....

ಪ್ರೇಮ - ಹೊಕ್ಕುಳ ಬೆಂಕಿ..... 

ಕಿರು ಬೆರಳ ಮರಿ ಮಚ್ಛೆಗೂ ಒಲವ ಉಣಿಸಿದವಳೂ - ಕುಡಿ ಮೀಸೆ ಅಡಿಯ ಅರೆಬರೆ ನಗೆ ಬಿಗಿಯಲೇ ಕನಸ ಕದ್ದವನೂ...
ಮೊದಲಾಗಿ -
ಇರುಳ ಜೋಳಿಗೆಗೆ ಕುದಿ ಎದೆಯ ಮಾಯಕದ ಪುಳಕಗಳ ತುಂಬಿಕೊಳ್ಳುತ್ತಾ, ಸಾಗರನೇರಿಯ ಗುಂಟ ಹೆಜ್ಜೆ ಲಜ್ಜೆ ಜೋಡಿಸುವಾಗ ಭಾವ ಸ್ವಾಮ್ಯದ ಮೃದುಲ ಸ್ಪರ್ಷದಿ ಅಧರಾಧರ ಜೇನ್ ಧಾರೆ ಸೇರೆ, ಮಧುರ ಪಾಪದ ಮುನ್ನುಡಿಯ ಘಮಕೆ ಬೆನ್ನ ಹಾಳಿಯ ಮೂಲದಲ್ಲಿ ಅನಂಗ ತಾನ ಮಿಡಿಯಲಾಗಿ.......
ಬೆಳದಿಂಗಳನೆ ಹಾಸಿ ಹೊದ್ದು, ತೋಳ ಉಂಗುರ ಕಾಲಿನಿಕ್ಕಳದಲಿ ಗಾಳಿಯ ಉಸಿರುಗಟ್ಟಿಸಿ, ಸುಖದುತ್ಥಾನದ ಉನ್ಮತ್ತ ಕೇಳಿಗೆ ಶರಣಾದ ನಶೆಯ ಹಾಯಿಯಲ್ಲಿ ಕಣ್ಣು ತೇಲುವಾಗ - ಮೃಗ ಹೊರಳಿಗೆ ಚಿತ್ರ ಚಿತ್ತಾರವಾದ ಮರಳ ಮಲ್ಲಿಗೆ ಇನ್ನಷ್ಟು ಉಪ್ಪಾಯ್ತೆಂದು ನಕ್ಷತ್ರ ಮೀನೊಂದು ತುಂಟ ನಗೆ ನಕ್ಕಿತು - ಮೈಮರೆತ ಯೌವನದ ಸುಖೋತ್ಕನನ ಉತ್ಸಾಹ ಕಂಡು ಅಸೂಯೆಯ ಕಣ್ಬಿಡುವ ತಾರೆಗಳ ದೃಷ್ಟಿ ಆ ಜೋಡಿಗೆ ತಾಕೀತೆಂದು ತುಂಡು ಮೋಡಗಳು ಮಾತಾಡಿಕೊಂಡವು - "ಅವಳ ಕೊರಳ ಕೆಳ ಏರಿಯ ಮೆತ್ತೆಯಲ್ಲೂ, ಅವನ ಬಂಡೆ ಎದೆಯ ಬಿರು ಬಿರುಸಿನಲ್ಲೂ, ಈರ್ವರ  'ಊರು'ಗಂಬದ ಇಳಿಜಾರಿನಲ್ಲೂ ಸ್ವರ್ಗ ಸೀಮೆಗೆ ನೇರ ಜಾರು ದಾರಿಯಿದೆಯಂತೆ" ಅಂತೆಲ್ಲ ಜಡೆ ಹೆಣೆದ ಬೆತ್ತಲ ಬಿಸಿಯಲ್ಲಿ ಮಿಂದು ಹೋದ ಪೋಲಿ ಅಲೆಗಳು ದಡದಿಂದ ದಡಕೆ ರಸಿಕ ಕಥೆ ಹಂಚಿದವು...
ಇರುಳ ರಂಗಸ್ಥಳ - ಚಂದ್ರ ತಾರೆ ದೀಪ ವಿನ್ಯಾಸ - ಹುಣ್ಣಿಮೆಗೆ ಹುಚ್ಚೆದ್ದ ಅಲೆಗಳ ರುದ್ರ ಸಂಗೀತ - ಕಳ್ಳ ಬೆರಕಿ ಹರೆಯದೂರಲ್ಲಿ ಸುರತ ಸೋನೆ ಬೆವರಿನುತ್ಸವ...
***ಜಲಚರಗಳ ರೋಮಾಂಚದ ಪೋಲಿ ಹೇಳಿಕೆಗಳನಿಲ್ಲಿ ದಾಖಲಿಸಿಲ್ಲ... ;)
#ಮುಂಬೆಳಗಿನ_ಕನಸು_ನಿಜವಾಗುವುದಂತೆ...!!!
↶↷⇛⇚↶↷

ಮೋಡದ ಜೋಳಿಗೆ ತುಂಬಾ ನೆನಪ ಹನಿಗಳೇ - ಮೈಯೊಡ್ಡಿದರೆ ಮಳೆಗೆ ಮೈಯ್ಯೊಂದಿಗೆ ಮನಸೂ ಒದ್ದೆ ಮುದ್ದೆ - ಮಳೆ ಮನಸ ತೊಳಸುವಾಗ ತುಳುಕೋ ಕಣ್ಣ ಹನಿಯ ಮಾತು ಬಿಡಿ - ಅದು ಖುಷಿಯ ದ್ಯಾಸಕ್ಕೂ ನೋವ ವ್ಯಾಸಕ್ಕೂ ಎದೆಯ ಏಕೈಕ ಅಂತಿಮ ಮಿಡಿತ...
ಅದಿರ್ಲಿ - ವಿಷ್ಯಾ ಏನೂಂದ್ರೆ - ಇಂದು ಸಂಜೆ ಮಳೆಯೊಂದಿಗೆ ತುಸು ಹೆಚ್ಚೇ ಮಾತುಕತೆಯಾಯ್ತು - ಎಲ್ಲ ನೆನಪಾಯ್ತು - ಕಳಕೊಂಡದ್ದರ ತಂಟೆ ಬೇಡ, ಪಡೆದದ್ದರ ಹೀಗಿಷ್ಟು ಮೆಲ್ಲುವ ಆಸೆಯಾಯ್ತು....
ಹಸಿರು ಸೊಕ್ಕಿ ಮೆರೆವ ಕಾಡ ನಡುವೆಯ ಬೀಡಿನ, ಹರೆಯ ಉಕ್ಕಿ ಹರಿವ ಉಡಾಳ ಪೋರನ ಎದೆಗೆ ಆಷಾಢದ ಮಳೆಯಂತೆ ಹೊಕ್ಕ ಕನಸು ನೀನು...
ನೆಲ ಬಿರಿದು ಹೊರಬಂದ ಕಳಲೆ ಮರಿ ನೋಡ ನೋಡುತ್ತಲೇ ಬೆರಳೆಣಿಕೆ ದಿನಗಳಲಿ ಬಿದಿರ ಮೆಳೆಯಾಗಿ ಮೋಡದ ಚವರಿಯಂತೆ ಬೆಳೆವುದು ನೀ ಎನ್ನ ಎದೆಯಲ್ಲಿ ಬೆಳೆದ ವೇಗಕ್ಕೆ ಸಣ್ಣ ಹೋಲಿಕೆ...
ರಚ್ಚೆ ಹಿಡಿದ ಮಳೆಗೆ ಬಿಚ್ಚು ಎದೆಯೊಡ್ಡುವ ನನ್ನ ಹುಚ್ಚು ಮಿತಿ ಮೀರಿದ್ದು ನಿನ್ನ ಮೋಹದ ಸುಳಿಯ ಸಿಹಿ ಫಲವೇ...
ಇಂದು ಆ ಊರ ತೊರೆದ ದಶಕೋತ್ಸವದ ನಂತರವೂ ನಿನ್ನುಸಿರ ಆ ಬಿಸಿ ನನ್ನ ಹಸಿ ಹಸಿಯಾಗಿ ಸೋಕುವುದು ಮಳೆಯ ಬಳ್ಳಿಯ ತಂಪಲ್ಲೇ...
ನೆನೆದು ಮರಗಟ್ಟಿದ ಮೈಗೆ ಅಬ್ಬಿ ಒಲೆಯ ಜಂಬೆ ಕುಂಟೆಯ ಉರಿಗೆ ಕಾದ ಸುಡು ಸುಡು ಹಂಡೆ ನೀರ ಸುರಿದುಕೊಂಡರೆ ಬಿಸಿ ನೀರು ಹರಿದ ಒರಟು ಬೆತ್ತಲೆಯ ಗಂಡು ಬೀದಿಯಲಿ ಮತ್ತೆ ಅದೊಂದು ಸುಖದ ಸೆಳಕು: ಆ ಕಳ್ಳ ರಾತ್ರಿಯಲಿ ಬುಸುಗುಡುವ ಉಸಿರ ಸದ್ದನೂ ನಾಭಿ ನಾಳಿಯಲಿ ಹುಗಿದು ಮೊಟ್ಟ ಮೊದಲ ಬಾರಿಗೆ ಸೆರಗ ಪಹರೆಯ ಮುರಿದು ಕುಪ್ಪಸ ಖಿಲ್ಲೆಯಲಿ ಜೋಪಾನ ಮಾಡಿದ ನಿನ್ನ ಹರೆಯದೂರಿನ ಸೌಂದರ್ಯ ನಿಧಿ ಜೋಡಿ ಬೆಣ್ಣೆ ಮುದ್ದೆಯ ರುಚಿಯ ಮತ್ತೆ ಮತ್ತೆ ಲೂಟಿ ಮಾಡಿದ ರೋಮಾಂಚದ ಮೆಲುಕು - ಆಹ್...
ಮತ್ತೆ, ಆಗ್ಲೇ ಹೇಳಿದ್ನಲ್ಲಾ - ಈ ಸಂಜೆ ಈ ಊರಲ್ಲಿ ಗುಡುಗು ಗಾಳಿ ಮಿಂಚಿನ ತಂಟೆಯ ನಡುವೆ ಮಳೆಯ ಹುಯಿಲೆದ್ದಿದೆ...
ನಾನೋ ಮನೆಯ ತಾರಸಿಯೇರಿ ಬರಿ ಎದೆಗೆ ಭರಪೂರ ನಿನ್ನ ತುಂಬಿಕೊಂಡೆ - ಇನ್ನು ಈ ಇರುಳು ನಿನ್ನ ಹೆಸರಿಗೆ...
#ಮಳೆಗೆ_ಹರೆಯ_ಸೋತ_ಕಥೆಗಳು...
↶↷⇛⇚↶↷

ಆಳಿದ ಪ್ರೇಮದ ರೂಹನುಳಿಸುವ - ಸುಖದ ಪರುಷಮಣಿ ಶೋಧದಲ್ಲಿ - ಆಗಸವೆ ಪ್ರಣಯ ಪಲ್ಲಂಗವಾಗಿ - ದೇಹವ ಕಡೆಯುವ ಬಿಡುಬೀಸು ಏರು ಹಾದಿಯಲ್ಲಿ - ಬಿಸಿಯೇರಿ ಬಿರುಸಾಗಿ - ಏರಿಳಿದು ಮತ್ತೇರಿ ಹೊಂಕರಿಸಿ - ಸುಖದೋಕುಳಿಯ ಸುರೆ ಕುಡಿಸಿ - ಮೆರೆದ 'ಗಂಡುಸಿರು' - ಸ್ವರ್ಗ ಸೀಮೆಯ ಗೆದ್ದ ಮಿಲನೋತ್ಸವದುತ್ತುಂಗದಲ್ಲಿ - ಸೊಕ್ಕೆಲ್ಲ ಸುಲಿಗೆ ಆದಂತೆ ಗಂಟಲಲ್ಲೇ ಗಂಟಾಗಿ ಸಿಕ್ಕಿ - ತಟಕ್ಕನೆ ತಟಸ್ಥ ಶವವಾಗುವುದಂತೆ....
ಆಹ್!!! ಅವಳ ತೃಪ್ತ ತೋಳಲ್ಲಿ ಸುಖಾಯಾಸದಿ ಸಾವು...
#ಮರುಜನ್ಮಕೆ_ಗಂಡು_ಜೇನ್ನೊಣವಾಗಬೇಕು...
↶↷⇛⇚↶↷

ಬಾನ್ಬೆಳಕ ನೆರಳಿನಂಥವಳೇ -
ಬಾನ ನೀಲಿ ಹಾದಿಯಲಿ ತಾರೆ ಸೆರಗ ಬಳಸಿ ಬಿಳಿ ಮೋಡದ ಚೂರು ಬೆಳದಿಂಗಳ ಮೀಯುತಿದೆ...
ಎದೆಯಿಂದ ಕಳಚಿ ಬಿದ್ದ ಬಿಸಿ ಉಸಿರ ನೆನಪ ಕೆಂಪು ಕೆಂಪು ಗರಿಯೊಂದು ತಂಗಾಳಿಯಲೊಮ್ಮೆ ಜೀಕಿ ನಾಭಿ ಕೊಳಕೆ ಜಿಗಿದು ಪ್ರಣಯ ಬೀಜಾಕ್ಷರಗಳ ಗೀಚುತಿದೆ...
ಡಾಂಬರುಗುಳಿಗೆಯ ಸುತ್ತಿ ಕಾದಿಟ್ಟ ಅಮ್ಮನ ಧಾರೆ ಸೀರೆಯಂಥ ಹಳತಾಗದ ಕನಸೊಂದನು ನೆನಹುಗಳ ಪೆಟಾರಿಯಿಂದ ತೆಗೆದು ಮೆಲ್ಲಗೊಮ್ಮೆ ಮೈದಡವಿ ಮತ್ತೆ ಮಲಗಿಸಿದೆ...
ಹೇ ಕಪ್ಪು ಹುಡುಗೀ -
ನಿನ್ನ ಹೆರಳ ಘಮದ ನೆನಹಿನಾ ಸಾಲಕ್ಕೆ ಇದೋ ಈ ಇರುಳ ತೋಳನು ಹಂಗಂಗೇ ಬರೆದುಕೊಟ್ಟೆ...
#ಹುಣ್ಣಿಮೆ_ಹೊಕ್ಕುಳ_ಬೆಂಕಿ....

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)

No comments:

Post a Comment