Thursday, July 4, 2019

ಗೊಂಚಲು - ಮೂರು ಸೊನ್ನೆ ಐದು.....

ಅಸುನೀಗಿದ ಕವಿತೆ.....  

ಜನ್ಮಕ್ಕಂಟಿದ ಶಾಪ ಮತ್ತು ಬದುಕು ಕೊಟ್ಟ ಕೆಟ್ಟ ಉಡುಗೊರೆ...
#ಅಪ್ಪ_ಮತ್ತು_ದೇವರು...
^^^!!!^^^

ಸುಖದ ಒಂದು ಹನಿ ವೀರ್ಯ 'ಅಪ್ಪ'ನ ಪಟ್ಟ ಕೊಟ್ಟುಬಿಡಬಹುದು... ಆದರೆ "ಅಮ್ಮ" ಅನ್ನಿಸಿಕೊಳ್ಳೋಕೆ ಕನಿಷ್ಟ ನವಮಾಸ ಬಸಿರು ಹೊತ್ತು ಹೆರಿಗೆ ಬೇನೆಯ ಹಾದಿ ಸವೆಸಬೇಕು...
ಪ್ರೀತಿಯದಲ್ಲ ವಿಷಯ - ಜವಾಬ್ದಾರಿಯದ್ದು... ಕೊಡಲಾಗದೇ ಹೋದರೆ ಅದು ಅ‌ಸಹಾಯಕತೆ - ಅದಕ್ಕೆ ಮಾಫಿ ಇದೆ; ಆದ್ರೆ ಬುಧ್ಯಾಪೂರ್ವಕ ಕೊಡದೇ ಹೋದರೆ ಅದು ಅಪ್ರಾಮಾಣಿಕ ಶಕ್ತಿಯ ವಂಚನೆ - ಅದಕ್ಕೆ ಕ್ಷಮೆ ಅಷ್ಟು ಸುಲಭ ಅಲ್ಲ...
ಅನುಭವಕ್ಕೆ ನೇರ ದಕ್ಕೋ ಕೆಲ ಸತ್ಯಗಳು ತುಸು ಜಾಸ್ತಿಯೇ ಕಠೋರ...
#ಅಪ್ಪನ_ದಿನದಂದೂ_ಅಮ್ಮನನೇ_ನೆನೆಯುತ್ತೇನೆ...
#ಹೇಳಬಾರದಿತ್ತೇನೋ_ಹೇಳಿಯಾಯಿತು...
^^^!!!^^^

ನಾನೋ ಇದ್ಬದ್ದ ಕ್ರೌರ್ಯವನೆಲ್ಲ ರಕ್ಕಸ ಸಂತತಿ ಅಂತ ಆರೋಪಿಸಿ ಗುಡುಗುತ್ತೇನೆ - ಆದರಿಲ್ಲಿ ತನ್ನದೇ ಸೃಷ್ಟಿಯ ಕೂಸಿನ ಒಡಲಲೆಷ್ಟೋ ವೈಕಲ್ಯಗಳ, ಅಸಹಾಯಕತೆಯ ಬೇಗುದಿಯ ತಾನೇ ತುಂಬಿ, ಅವನೆಲ್ಲ ಮೀರಲು ತನ್ನನೇ ಭಜಿಸು ಎಂದು ತಣ್ಣಗೆ ನಗುತ್ತ ಕೂತಿದ್ದಾನೆ ದೇವರೆಂಬೋ ಕರುಣಾ ಮೂರುತಿ...
ಹಣೆಬರಹ ಗೀಚಿ ಹಣೆ ಹಚ್ಚಿಸಿಕೊಳ್ಳೋ ದರ್ಪವ ಏನಂತ ಕೂಗಲಿ...
#ಕರುಳಹಿಂಡಿ_ತೊಟ್ಟಿಲತೂಗಿ...
#ತೇನವಿನಾ...🙂
^^^!!!^^^

ಎದೆ ಬಾಗಿಲ ಪಕ್ಕೆಯ ಮೂಳೆಗಳೆಲ್ಲ ಮುರಿದು ಅಂಗಳಕ್ಕೆ ಬಿದ್ದಿವೆ...
ಚಂದಿರ ಬೆಳುದಿಂಗಳ ನಾಲಿಗೆ ಚಾಚಿ ಮೂಳೆಗಂಟಿದ ಹಸಿ ರಕ್ತ ನೆಕ್ಕುತ್ತಾನೆ...
ನಾನು ನಿನ್ನ ನೆನಪ ತೊಡೆಯ ಬೆಂಕಿಯಲ್ಲಿ ಇಷ್ಟಿಷ್ಟಾಗಿ ಸಾಯುತ್ತೇನೆ...
ಇರುಳ ಕಣ್ಣಲ್ಲಿ ನಗೆಯೊಂದು ಹುಟ್ಟಿ ನನ್ನ ಸಾವನ್ನು ಬದುಕಿನಂತೆ ಅಣಕಿಸುತ್ತದೆ...
ಹಚ್ಚದೇ ಉಳಿದ ಹಣತೆಯ ಎಣ್ಣೆಯಲ್ಲಿ ಬೆಳಕು ಕತ್ತಲೊಂದಿಗೆ ಸುರತದಲ್ಲಿ ಲೀನ...
#ನಾನು_ಅಸುನೀಗಿದ_ಕವಿತೆ...
          ___ಮುಂದುವರಿದೇನಾ...!?
^^^!!!^^^

ಸಾವಿನೊಂದಿಗೆ ಜಗಳವೂ ಸಾಧ್ಯವಿಲ್ಲ - ಮೌನ ಅನುಸಂಧಾನ...
ಜಗಳಕ್ಕೂ ಬದುಕೇ ಬೇಕು - ಪ್ರೀತಿ ಅಂದ್ರೆ ಜೀವಂತ ಸಂವಹನ...
ಮುನಿಸಿನೊಡನೆ ಜಗಳ ಹುಟ್ಟದೇ, ಮೌನದೆದುರು ಪ್ರಶ್ನೆ ನಿಲ್ಲದೇ, ಮಾತೆಲ್ಲ ಸಾವನ್ನು ಒಪ್ಪಿಕೊಂಡ ಮೇಲೆ ಇಲ್ಲಿ ನಾನೂ ನೀನೂ ಬತ್ತಿ ಬರಡಾದ ನದಿಯ ತೀರಗಳು...
ಸಂವೇದನೆಯ ಸೆಲೆ ಒಣಗಿ, ಸಂವಹನದ ರುಚಿ ಸತ್ತಾನಂತರ ಹಬ್ಬಿದ್ದ, ತಬ್ಬಿದ್ದ ಹಾದಿ ಹರಹು ಎಲ್ಲ ನಿಸ್ಸಾರವೇ - ಬದುಕಾದರೂ ಅಷ್ಟೇ, ಬಂಧವಾದರೂ ಅಷ್ಟೇ...
ಅಳದೇ ಅಮ್ಮನೇ ಹಾಲೂಡಿಸುವುದಿಲ್ಲ - ವ್ಯಕ್ತವಾಗದೇ ಪ್ರೀತಿಗೆ ವಿಸ್ತಾರವಿಲ್ಲ...
ಸೋಲುವುದು, ಸೋತ ಸೋಲನ್ನು ಗೌರವಿಸುವುದು ಪ್ರೀತಿಯನ್ನು ಗೆಲ್ಲಲಿಕ್ಕಿರುವ ಹಗೂರದ ದಾರಿ - ಬದುಕಲ್ಲಾದರೂ, ಬಂಧದಲ್ಲಾದರೂ...
'ನಾನು' ಚೂರು ಸೋಲ್ಬೇಕಿತ್ತು... ಉಹೂಂ!! ಅದಾಗಲ್ಲ... ಇಷ್ಟೆಲ್ಲಾ ಹೇಳಿಯೂ ನಾನು ಸೋಲುವುದಿಲ್ಲ... ಯಾವಾಗ್ಲೂ ನಾನೇ ಯಾಕೆ ಸೋಲ್ಬೇಕು? ಸಿರ್ರನೆ ಹುಟ್ಟಿಕೊಳ್ಳೋ ನನ್ನತನದ ಗುತ್ತಿಗೆ ತಕೊಂಡ ಅಡ್ನಾಡಿ ಅಹಂಭಾವ ಸುತಾರಾಂ ಸೋಲಗೊಡುವುದಿಲ್ಲ... ಅಲ್ಲಿಗೆ ಬಂಧಗಳು ಬರ್ಕತ್ತಾಗಲ್ಲ - ಬದುಕಿಂಗೆ ರಸವಿಲ್ಲ...
#ನಾನು_ಮತ್ತು_ಪ್ರೀತಿ... 
^^^!!!^^^

ಎಂಥದ್ದೇ ಜಗಳದಾಚೆಯೂ ಜೊತೆಗಿರ್ತಾರೆ ಅನ್ನೋದು ಸಲಿಗೆ...
ಹೆಂಗೇ ನಡೆಸಿಕೊಂಡ್ರೂ ಬಿದ್ದಿರ್ತಾರೆ ಬಿಡು ಅನ್ನೋದು ಸದರ...
#ಪ್ರೀತಿಮತ್ತುರದ್ದಿ...

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)

ಗೊಂಚಲು - ಮೂರು ಸೊನ್ನೆ ನಾಕು.....

ಉರಿಉರಿ ಮೋಹ..... 

ಮಿಂದು ಬಂದ ಆಸೆ ಹೆಣ್ಣು ಒದ್ದೆ ಮುಡಿಯ ಹನಿ ಸಿಡಿಸಿ ಜನುಮಗಳ ಹಸಿವು ಸಾಕಿಕೊಂಡ ನನ್ನ ಗುಂಡಿಗೆಯ ಬಿಚ್ಚು ನಗೆಯಲೇ ಮಿಡಿವಳು...
ಮೋಡ ಮುಸುಕಿದ ಮಧ್ಯಾಹ್ನದ ಆಲಸ್ಯವ ಅವಳ ಕಂಕುಳ ಘಮದ ನಶೆಯಲ್ಲಿ ನೀಗಿಕೊಂಡು, ಎದೆ ಗೊಂಚಲ ಮಿದುವಲ್ಲಿ ಉಸಿರು ಕಳಕೊಂಡವನ ಬೊಗಸೆಯಲೆತ್ತಿ ತುಟಿ ಜೇನ ಅಮೃತವನೂಡಿ ತೋಳ ತುಂಬಿಕೊಂಬಳು...
ಮತ್ತೆ ಮತ್ತೇರಿ ಹೆಣ್ಮೈಯ್ಯ ತೀರಗಳನಾಳಲು ಹೊರಟ ಗಂಡುಸಿರು ಅವಳ ನಾಭಿ ಕಮಲದ ಕೊರಳಲ್ಲಿ ಮೈಮರೆಯಲು, ಬೆನ್ನ ಸೀಳಿ ಬಾಚಿ ಸೆಳೆದು ನೀಳ ತೊಡೆಗಳ ಹಸಿ ಬಿಸಿ ಬಿರುಸಿನಿಕ್ಕಳದಲ್ಲಿ ಪೀಠಸ್ಥವಾಗಿಸಿ ಜೀವರಸ ಕಡೆದು ಕುಡಿದು ಪ್ರಕೃತಿ ಧರ್ಮವ ಮೆರೆಸುವಳು...
ಹಾಡಹಗಲೇ ಹರೆಯ ಸೊಕ್ಕಿ ಉಕ್ಕುಕ್ಕಿ ತೊಯ್ಯುವಾಗ ಕಡಲೂ ತುಸು ನಾಚೀತು.‌‌..
ಬೆನ್ನಿಂದ ಜಾರೋ ಬೆವರ ಹನಿಗಳಲಿ ಸುಖದ ಸುಸ್ತಿನ ಕಾಮನ ಬಿಲ್ಲು...
ಕರಡಿ ಪ್ರೇಮಕ್ಕೆ ಮೈಯ್ಯ ಮಡಿಯೆಲ್ಲ ಕರಗುವ ನಡು ಹಗಲಿಗೆಲ್ಲ ಅವಳದೇ ಹೆಸರು - ಇನ್ನು ಇರುಳ ಕಥೆ ಇರುಳಿಗೇ ಗೊತ್ತು...
#ಅವಳೆಂದರೆ_ಜನುಮಗಳ_ಹಸಿವು #ಉಂಡು_ತೀರದ_ದಾಹ...
↼↺↰↱↻⇀

ಮಧುರ ಪಾಪಗಳಿಗಿಷ್ಟು ಮಾಫಿ ಇದ್ಯಂತೆ ಅವಳಲ್ಲಿ - ಮುಸ್ಸಂಜೆಯ ಪಿಸುನುಡಿಯ ಸಂಭ್ರಮವ ಹೇಗೆ ಹೇಳಲಿ ಇಲ್ಲಿ...
ಹೇ ಇರುಳೇ ತುಸು ಉದ್ದುದ್ದವಾಗು - ಅವಳ ವಯ್ಯಾರದ ತಿರುವುಗಳಲಿ ನನ್ನ ಕಣ್ಣ ನಶೆ ಹಾದಿ ತಪ್ಪುವಾಗ, ಉಸಿರಿಗುಸಿರು ತೀಡಿ ಜೀವದಾದ್ಯಂತ ಬೆಂಕಿ ಹೊತ್ತುವಾಗ; ತೆಕ್ಕೆ ಬಿಗಿಯಲ್ಲಿ, ಬೆವರ ಹೊಳೆಯಲ್ಲಿ ಜನ್ಮಗಳ ಹಸಿವು ಕಳೆದೋಗುವಾಗ...
#ಉರಿಉರಿ_ಮೋಹ...
↼↺↰↱↻⇀

ನನ್ನೊಳಗಿನ ನಿನ್ನಿರುವಿಕೆಯೇ ಕವಿತೆ...
#ಬದುಕಿನ_ಸಮಗ್ರ_ಸಂಪುಟ...
↼↺↰↱↻⇀

ಮುಸ್ಸಂಜೆ:
ಅಪರಿಚಿತಳಾಗುಳಿದೇ ನಗೆಯ ಪರಿಚಯಿಸಿದವಳೇ -
ಸತ್ಯವಾ ಈ ನಗು - ನಂಗೊತ್ತಿಲ್ಲ; ನೀ ಬಿತ್ತಿ ಹೋದ ನಗೆಯ ನೀನೇ ಮೇಯಬೇಕು...
ಇರುಳು:
ನುಗ್ಗೆ ಹೂವಿನ ಘಮಕೆ ಉಸಿರು ನಜ್ಜುಗುಜ್ಜಾಗುವಾಗ - ಶುದ್ಧ ಸುಭಗನ ಪೋಲಿ ಕನಸೊಂದು ಮುಂಜಾನೆಗೂ ಮೂರು ಘಳಿಗೆ ಮುನ್ನ ಕನಸಲ್ಲೇ ಸ್ಖಲಿಸುತ್ತದೆ...
ಆಗಾಗ ಹಾದಿ ತಪ್ಪಬೇಕು ಹೀಗೆ - ತಪ್ಪು ಹಾದಿಯ ತಿರುವಲ್ಲೇ ಮಧುರ ಪಾಪಗಳ ಬೆಚ್ಚನೆ ಅರವಟಿಕೆಗಳು ಸಿಗೋದು ಅಂತಂದು ಕಂಪಿಸುತ್ತದೆ ಛಳಿಯ ತೆನೆ...
ಹಂಬಲದ ಹಾದಿ:
ಇನ್ನೀಗ ಒಂಟಿ ಅಲೆಯಬೇಕು ನಾನು ನಿನ್ನ ದಿಟ್ಟಿ ಪಾತಳಿಯಲ್ಲಿ - ಗುಂಪಿನಲ್ಲಿ ಕಂಗಳವು ಚಂದ ಚಂಚಲ...
ಸುತ್ತ ಹಿಂಡು ಗದ್ದಲವ ಕಟ್ಟಿಕೊಂಡಲೆವವನು ಕಣ್ಣಿಂದ ಎದೆಗಿಳಿದು ನೆಲೆಯಾದಾನು ಹೇಗೆ - ಮೋಹವೇ ಆದರೂ ಎದೆಗಿಳಿದು ಕಾವು ಕೂರದೇ ಆಸೆ ನಡು ಬಾಗಿಲು ತೆರೆದೀತು ಹೇಗೆ...
#ಬೆಳದಿಂಗಳ_ನೆಳಲಲ್ಲಿ_ಸ್ವಪ್ನಸ್ಖಲನ...
↼↺↰↱↻⇀

ಜುಮುರು ಮಳೆಯಲ್ಲಿ ನೆಂದು ಬಂದ ಗಾಳಿ ಕಿವಿಯಲೇನೋ ಉಸುರಿ ಮೈಮನದಿ ಸುಡು ಬಿಸಿಯ ಭಾವಗಳ ತುಂಬುವ ತಂತುವಿಗೆ ನೀನೆಂದು ಹೆಸರು...
#ಕಪ್ಪುಹುಡುಗಿಯೆಂಬ_ಉಸಿರ_ನೆಳಲು...
↼↺↰↱↻⇀

ಯಾವುದೋ ಮಾಯದ ಮಂಕಲ್ಲಿ ಹಸಿ ತುಟಿಯ ತಿರುವನ್ನು ಅನಾಯಾಸದಿ ಕಚ್ಚಿದ ಹಲ್ಲು ನಿನ್ನ ನೆನಪ ತೀಡುತ್ತದೆ...
ಇರುಳ ಬಾಗಿಲ ಕಿಬ್ಬೊಟ್ಟೆಯಲಿ ನಿನ್ನ ಘಮಲಿನುಬ್ಬರ...
ಸಂಜೆ ತಂಪು ಗಾಳಿಯಲ್ಲೂ ಎದೆ ಮೆದುವ ಕಿಬ್ಬಿಗಳಲಿ ಕುಡಿಯೊಡೆವ ಬೆವರ ಹನಿಗಳು ಮೊದಲಾಗಿ ಆಷಾಢವ ಹಳಿಯುತ್ತವೆ...
ನಿನ್ನ ಘಮವೇ ನಿನ್ನಲ್ಲಿ ನನ್ನ ಹಸಿವ ತುಂಬಿ, ನನ್ನ ಘಮವನರಸಿ ನೀ ಹಿಂದಿಂದೆ ಸುಳಿದು ಆವರಿಸಿ ಕತ್ತಲ ಮೂಲೆಗಳಿಗೆ ಉಸಿರ ಬೆಂಕಿ ಹಚ್ಚುತಿದ್ದ ಹುಚ್ಚು ದಿನಗಳ ನೆನಪ ಕಿಡಿಗಳು ಹೊಕ್ಕುಳ ಸುತ್ತ ಕುಣಿಯುತ್ತವೆ...
ನಾಚಿಕೆ ಹರಿದ ಮೂರು ಕ್ಷಣಗಳಾಚೆ ನಿನ್ನ ಒರಟು ಹೂಂಕಾರವ ಬಳಸಿ ಬಂಧಿಸುತಿದ್ದ ಈ ಬೆತ್ತಲೆ ತೋಳು ಕಾಲ್ಗಳು ಇಲ್ಲಿ ತಮಗೆ ತಾವೇ ಬಳ್ಳಿಯಾಗಿ ಬಿಗಿದು ಚಡಪಡಿಸುತ್ತವೆ...
ಕೂತಲ್ಲಿ ನಿಂತಲ್ಲಿ ಘಳಿಗೆಗೊಮ್ಮೆ ದೊಡ್ಡ ಉಸಿರು ಚೆಲ್ಲುವ ನನ್ನೆಡೆಗೆ ಅಮ್ಮ ಗೊತ್ತಾಯ್ತು ಬಿಡು ಅನ್ನುವಂತ ತುಂಟ ನಗೆ ಬೀರುತ್ತಾಳೆ - ಅಪ್ಪನ ಕಣ್ತಪ್ಪಿಸಿ ಓಡಾಡುತ್ತೇನೆ...
ನೀ ಬಳಸಿದ ಹಳೆ ಅಂಗಿಯೊಂದನು ತೊಳೆಯದೆ ಹಾಗೇ ಹೊತ್ತು ತಂದಿದ್ದೇನೆ - ಅದನ್ನು ಹೊದ್ದ ದಿಂಬೋ, ಟೆಡ್ಡಿಯೋ ತೋಳ ಬಿರುಸಿಗೆ ಸಿಕ್ಕಿ ಸುಖಾಸುಮ್ಮನೆ ತಣ್ಣಗೆ ನಲುಗುತ್ತವೆ...
ನನ್ನ ಕಥೆಯೇ ಹಿಂಗಾದರೆ ನಿನ್ನ ಒದ್ದಾಟ ಇನ್ನೆಷ್ಟಿರಬಹುದು - ನೆನೆದು ನಖ ಶಿಖಾಂತ ಕಂಪಿಸಿ ಆ ರೋಮಾಂಚಕ್ಕೆ ಮತ್ತಷ್ಟು ದ್ರವಿಸುತ್ತೇನೆ...
ವಿರಹದ ನಿಟ್ಟುಸಿರ ಉಂಡುಂಡು ಕೊಬ್ಬಿದ್ದಕ್ಕಾ ಈ ಆಷಾಢದ ದಿನಗಳು ಇಷ್ಟೊಂದು ಉದ್ದುದ್ದ...!?
#ಹಸಿಬಿಸಿ_ಆಷಾಢ...
↼↺↰↱↻⇀

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)