ಆಯಿ ಎಂಬೋ ಅಶ್ವತ್ಥ.....
ಕನಸು ನೇಯೋದು ಮತ್ತು ಗೂಡು ಕಟ್ಟೋದು ಎರಡೂ ಬೇರೆ ಬೇರೆಯದೇ ಕ್ರಿಯೆಗಳಿರಬೇಕು ಅವಳಿಗೆ ಅಥವಾ ತೆರೆದರೆ ಎರಡನೂ ಒಂದಾಗಿಸೋ ಬಾಗಿಲ ಭದ್ರಪಡಿಸಿ ಬುಧ್ಯಾಪೂರ್ವಕ ಕೀಲಿಕೈ ಮರೆತಿದ್ದಿರಬೇಕು ಅವಳು...
ಕನಸು ನೇಯೋದು ಮತ್ತು ಗೂಡು ಕಟ್ಟೋದು ಎರಡೂ ಬೇರೆ ಬೇರೆಯದೇ ಕ್ರಿಯೆಗಳಿರಬೇಕು ಅವಳಿಗೆ ಅಥವಾ ತೆರೆದರೆ ಎರಡನೂ ಒಂದಾಗಿಸೋ ಬಾಗಿಲ ಭದ್ರಪಡಿಸಿ ಬುಧ್ಯಾಪೂರ್ವಕ ಕೀಲಿಕೈ ಮರೆತಿದ್ದಿರಬೇಕು ಅವಳು...
ಹೊಲಿಗೆ ಬಿಟ್ಟೋದ ಕನಸ ದೋತರಗಳೆಲ್ಲ ಗೂಡ ಬೆಚ್ಚಗಿಡೋ ದುಪ್ಪಟಿಯಾಗುತ್ತವೆ, ಇಲ್ಲಾ ಕಿಟಕಿಯ ಬೆಳಕ ತಡೆಯುವ ಬಣ್ಣದ ಪರದೆಗಳಾಗ್ತವೆ ಅವಳಲ್ಲಿ...
ಮೋಡಕ್ಕೆ ರೆಕ್ಕೆಯ ಹುಡಿ ಸೋಕಿಸುತೇನೆ ಅಂತ ಅಂಗಳದಿಂದ ಸಬಂದು ಆಗಸಕೇ ಚಿಮ್ಮುತ್ತಾಳೆ - ಬಾಗಿಲ ವಾಡೆಯಲಿ ಮಗು ಮಿಸುಗುತ್ತೆ - ರೆಕ್ಕೆ ಇದ್ದದ್ದು ಬಯಲ ಅಳೆಯೋದಕ್ಕಲ್ಲ ತೊಟ್ಟಿಲ ಹಸಿವ ಹರಿಯೋದಕ್ಕೆ ಅಂತ ದುಗುಣೀ ವೇಗದಲಿ ಗೂಡು ಸೇರಿ ಕಣ್ಹನಿ ಬೆರೆತ ಬೆವರಲ್ಲಿ ಅಕ್ಕಿ ತೊಳೆದು ಅನ್ನಕ್ಕಿಡ್ತಾಳೆ...
ಕನಸಾದರೋ ಎದೆಯಿಂದ ನೇಯ್ದದ್ದು, ಕಣ್ಣೀರಲ್ಲಿ ಬಳಿದುಬಿಡಬೋದು ಮತ್ತು ಬಳಿದೂಬಿಡ್ತಾಳೆ - ಗೂಡು ಹಾಗಲ್ಲ, ಕರುಳಿಂದ ಕಟೆದು ಎದೆಯ ಸುತ್ತ ಬಂದೋಬಸ್ತಾಗಿ ಕಟ್ಟಿದ ಕಲ್ಲು ಮಂಟಪ; ಹಾಗೆಂದೇ ಕಣ್ಣೀರ ಕಣ್ಣಲ್ಲೇ ಇಂಗಿಸಿಯಾದರೂ ಕಾಯುತ್ತಾಳೆ...
ಕೊಡುವುದೇ ಆದರೆ ಎಷ್ಟು ಕೊಟ್ಟೇನು, ತೂಗಿದರೆ ಎಷ್ಟು ಪ್ರೀತಿ ಸಮ - ಗೂಡು ಕಾಯಲು ತನ್ನದೇ ಕನಸುಗಳ ಹೆಣಗಳ ಬೇಲಿ ಕಟ್ಟುವವಳಿಗೆ...
"ಹೆಸರು ಬೇಕಿಲ್ಲ ಅವಳಿಗೆ; ಕರುಳಿಂದ ಬೆರಳ ಬೆಸೆದವಳಿಗೆ..."
#ಆಯೀ...
ಮೊಲೆ ಹಾಲ ಅಮೃತ ಕುಡಿಸಿ ಬೆಳೆಸಿದವಳು, ಆದರೂ ಅವಳಿಗೆ ಬೇರೆ ಪ್ರಶ್ನೆಗಳೇ ಗೊತ್ತಿಲ್ಲ...
ಉಂಡ್ಯಾ...? ಅರಾಮಿದ್ಯಾ...?? ಅದೆರಡೇ...
ಕಾಯುತ್ತಾ ಕೂತ ಕಣ್ಣುಗಳ ನೀರು ಬತ್ತದ ಹಾಗೆ ಕಾಯ್ದು ಕೊಡುವ ಗರ್ಭಸ್ಥ ಮೋಡ "ಅವಳು..."
ಹಬ್ಬವೆಂದರೆ "ಅವಳ" ನಗು... ☺️
#ಅಂತರಂಗದ_ನೀರಾಂಜನ...
ಬಸುರಿ ಮೋಡದ ಮೌನ...
ಕರುಳ ಗಂಟಿನ ನಂಟು...
ಹಾಡು ಹಾದಿಯ ಧ್ಯಾನ...
ಹೂವ ಹಿಗ್ಗಿನ ಬೇರು...
ಕನಸ ಬೀದಿಯ ದೀಪ್ತಿ...
ಕಾಯ ಕೆತ್ತುವ ಮಣ್ಣು...
ಉರಿವ ಉಸಿರಿನ ಆಜ್ಯ...
ನನ್ನ ಹಕ್ಕಿನ ಮಡಿಲು...
#ಅವಳ_ಪ್ರೀತಿ...
#ಆಯಿ...
ಒಳಗಡಿಯಿಡಲು ಯಮನಿಗೂ ಭಯವಾಗುವಂತೆ ಬದುಕ ಆವರಿಸಿಕೊಳ್ಳೋ ದೃಢ ಜೀವನ್ಮೋಹಕ್ಕೆ ನಿನ್ನದೇ ಹೆಸರು...
#ಆಯೀ...
ತನ್ನನೇ ಅನ್ನವಾಗುಣಿಸಿ ನನ್ನ ಕೆತ್ತಿದವಳು...
ಎದೆಯ ಅಮೃತ ಹನಿಸಿ ಉಸಿರನೂಡಿದವಳು...
ತನ್ನೊಳಗೆ ತಾ ನಗಬೇಕೆನಿಸಿದಾಗಲೆಲ್ಲ ನನ್ನ ಸಿಂಗರಿಸಿ ನೆಟಿಗೆ ಮುರಿದವಳು...
ಆಯಿ ಎಂಬ ಮಮತೆ ಅಗುಳು...
"ಇಂದು ಅವಳು ಜಗಕೆ ಕಣ್ದೆರೆದ ದಿನ..."
ಅವಳು ಅವಳಮ್ಮನ ಮಡಿಲ ತುಂಬಿದ ಶುಭದಿನ...
ಏನಂತ ಬರೆಯಲಿ ಅವಳೆಂಬ ದಿವ್ಯವ - "ಆಯಿ" ಅಂದರೇ ಒಂದು ಮಹಾ ಕಾವ್ಯ...
ಜಾತ್ರೆಯ ಕೆಂಡ ಹಾಯ್ದಷ್ಟು ಸುಲಭವಲ್ಲ ಬದುಕಿನ ಹಳವಂಡಗಳ ದಾಟುವುದು...
ಸೋಲು, ನೋವು, ಅವಮಾನಗಳ ಹೆಡೆಮುರಿ ಕಟ್ಟುವ ಅದೆಂತಾ ಸೊಕ್ಕು ನಿನ್ನಲ್ಲಿ - ಯಾವ ನೀರು ಕುಡಿದರೆ ಆ ಧಾಡಶೀತನ ಮೈಗೂಡೀತು ಹೇಳು...
ಕರಡಿಯಂತೆ ಬದುಕನಪ್ಪಿ ಎಪ್ಪತ್ತೆರಡು ಗ್ರೀಷ್ಮಗಳನು ತುಟಿಕಚ್ಚಿದ ನಗೆಯಲ್ಲೆ ಪ್ರಸಾದದಂತೆ ನುಂಗಿ ವಸಂತದಂತೆ ಮೆರೆದ ಮಗುಮನದ ಹುಚ್ಚು ಹುಡುಗೀ - ಪ್ರೀತಿ ಪಪ್ಪಿಯೊಂದಿಗೆ ಮುದ್ಮುದ್ದು ಶುಭಾಶಯ ಕಣೇ...
ಪ್ರೀತಿ ಪ್ರೀತಿ ಮತ್ತು ಪ್ರೀತಿಯಷ್ಟೇ...
ಲವ್ ಯೂ ಸುಂದ್ರೀ... 😘😘
ಅದ್ಭುತ..!
ReplyDeletesuch a wonderful piece of writing ಓದುತ್ತಾ ಹೋದಂತೆ manadaladalli ಏನೇನೋ ಭಾವನೆಗಳು, mandsmita, naduve sannage gantalubbi kanna haniyondu horage barade amman nenapalli summnagatte. ❤️❤️❤️❤️❤️
ReplyDelete