Saturday, October 12, 2024

ಗೊಂಚಲು - ನಾಕ್ನೂರ್ನಲ್ವತ್ತರಮೇಲ್ಮೂರು.....

ಮಾತು ಮೌನಗಳ ಜುಗಲ್ಬಂಧಿ.....

ನಂದಿನ್ನೂ ಮಾತು ಮುಗಿದೇ ಇರಲಿಲ್ಲ - ಅವಳು ಮಹಾಮೌನಕೆ ಜಾರಿದಳು...
ನಾನಿನ್ನೂ ವಟವಟ ಹಲುಬುತ್ತಲೇ ಇದ್ದೇನೆ - ಅವಳ ಗಾಢ ಸುಷುಪ್ತಿಯಲೂ ನನ್ನ ದನಿಯವಳನು (ಕೂ)ಕಾಡಬಹುದೆಂಬ ಭ್ರಮೆಯಲೂ ಹಿತವಿಹುದು...
ಮಾತು ಜಾರಿಯಿರುತ್ತದೆ ಶತಾಯಗತಾಯ - ಅವಳೆದುರು ಹಚ್ಚಿಟ್ಟ ದೀಪದೆದುರು ಅವಳು ಹಚ್ಚಿದ ದೀಪ ಸೋಲಬಾರದೆಂಬ ಹಠವೂ ಇರಬಹುದು...
ನೂರು ನಶೆಗಳಲಿ ದೊಡ್ಡ ನಗೆ ನಕ್ಕು ಮರೆತೇನು ಅಂದುಕೊಂಡೆ - ಇದೆಲ್ಲ ನಗೆಯ ನೆರಳಲೂ ನನ್ನ ಹರಕೆಯಿದೆ ಮಾಣೀ ಅಂದಂತಾಗಿ ನೆನಪಾದಳು...
____ ಉಳಿದಷ್ಟೂ ಬದುಕಿನ್ನು ಅವಳೊಡನೆಯ ಮಾತು ಮೌನಗಳ ಜುಗಲ್ಬಂಧಿಯೇ...


ಎಲ್ಲರೂ ದೇವರ ಕಾಣಲು ದೀಪ ಬೆಳಗುತ್ತಿದ್ದಲ್ಲಿ ನಾನು ಮಳ್ಳನಂತೆ ಅವರನೇ ನೋಡುತ್ತಾ ನಿಂತಿದ್ದೆ... 🤐
___ ಕೈಮುಗಿಯೋ ಅಂತ ಬೈಯ್ಯಲು ಈಗ ನನ್ನ ದೇವಿಯೂ ಸ್ವರ್ಗಸ್ಥೆ...
&&&

ರುದಯದ ದಿನವಂತೆ...
ಚಂದಗೆ ಕಾಯ್ದುಕೊಳ್ಳುವಾ ನಮ್ಮ ನಮ್ಮ ಹೃದಯವ...
ಸಣ್ಣ ರಂಧ್ರಕೂ ದೊಡ್ಡ ನೋವಿದೆ ಅಲ್ಲಿ...
ಹೃದಯ ಅನಗತ್ಯ ದೊಡ್ಡದಾದರೆ ಸಣ್ಣ ಸಣ್ಣ ನೋವುಗಳ ಮೂಟೆಯೇ ಬರುತ್ತೆ ಜೊತೆಗೆ...
ಇರಲಿ,
ಆದಾಗ್ಯೂ ಆದಷ್ಟೂ ನಗೆಯನೇ ತುಂಬಿಕೊಳ್ಳೋಣ - ಪುಟ್‌ಪುಟಾಣಿ ಖುಷಿಗೂ ದೊಡ್ಡ ಸಂಭ್ರಮ ಕೂಡಾ ಇದೆ ಅಲ್ಲಿ...
ನೋವಾದರೆ ಹಂಚಿಕೊಂಡಷ್ಟೂ ಹಸನಾಗುವ, ಪ್ರೀತಿಯಾದರೆ ಮೊಗೆದು ಸುರಿದಷ್ಟೂ ತುಂಬಿ ತುಳುಕುವ ಮಾಯಾ ಜೋಳಿಗೆಯೂ ಹೌದು ಅದು...
ಹಾಗಾಗಿ,
ಪ್ರೀತಿಯಿಂದ ಪ್ರೀತಿಯೊಂದಿಗೆ ನಡೆಯೋಣ, ಪ್ರೀತಿಯಾಗೋಣ/ಪ್ರೀತಿಯೇ ಆಗೋಣ...
ಶುಭಾಶಯ - ಪ್ರಿಯ ಹೃದಯಗಳಿಗೆ... 💞
___ ೨೯.೦೯.೨೦೨೪
&&&

ಈ ಇವಳ ಮೈಯ್ಯ ಘಮದಿ 
ಆ ಅವಳ ಪ್ರೇಮವ ಹುಡುಕಿ 
ಉಳಿಯಬಹುದೇ ನಾನು ನನಗೆ 
ಅವಳು ಪರಿಚಯಿಸಿದ ಹಾಗೇ...
ಅಲ್ಲಿ ಸಿಗದ ಕಿಚ್ಚಿಗೆ 
ಇಲ್ಲಿ ಉರಿವ ಹುಚ್ಚಿಗೆ
ತಣಿಯಬಹುದೇ ಅವಳ ಬಿಸಿ
ಈ ಕರುಳ ಕಾಂಡದೊಳಗೆ...
___ ತಾಳ ತಪ್ಪಿದ ತ್ರಿಶಂಕು ಸುಖ...
&&&

ನನ್ನ ಪಾಲಿನ ಶುಭ್ರ ಶುಭವೇ -
ನೆತ್ತಿ ಮೇಲಿನ ಚಂದಮ ಬೆಳುದಿಂಗಳ ಕೈಯಿಟ್ಟು "ಶುಭದ ತೋಳಲ್ಲಿ ಸರಸ ಯೋಗ" ಅಂದು ಹರಸಿ ಕಳಿಸಿದ...
ಬೇಗ ಬರಬಾರದೇ (ಬಾsss) - ಈ ಉಸಿರಿಗಾಗಲೇ ಉಗ್ಗು ರೋ(ವೇ)ಗ...
ಮಧುಮಂಚದ ಮಂದ ದೀಪಕೆ ತುಂಟ ತೂಕಡಿಕೆ...
ಇರುಳಿಗಾಗಿ ಕಂಡ ಕನಸು ಇನಿತಿನಿತೂ ನಿಜವಾಗಲಿ - ನಿನ್ನ ಹೊದ್ದು ಮೆದ್ದ ಮುದ್ದು ಲೆಕ್ಕ ತಪ್ಪಿಹೋಗಲಿ...
___ ಶುಭರಾತ್ರಿ ಅಂದವರಿಗೆಲ್ಲಾ ಶುಭವೇ ಆಗಲಿ...
*** ನಾಳೆ ಅಮಾವಾಸ್ಯೆ, ನಿಂಗೆ ಈಗೆಲ್ಲಿ ಚಂದ್ರ ಕಾಣಿಸ್ದ ಅಂತೆಲ್ಲಾ ಅರಸಿಕ ಪ್ರಶ್ನೆ ಕೇಳಂಗಿಲ್ಲ... 😜
&&&

ಉದಿ ಆದಾಗಿಂದ ಕೊರಳು ಗುನುಗಿದ ರಸಿಕ ಹಾಡೊಂದು ಇರುಳ ಬಾಗಿಲಲಿ ನಿನ್ನುಸಿರ ಬಿಸುಪ ಬಯಸಿ, 
ನೀನೀಗ ಈ ಕಂಗಳು ಮುಡಿದ ಮಧುರ ಮೋಹದ ಪೋಲಿ ಪೋಲಿ ಕನಸು...
ನಿನಗೂ ಶುಭರಾತ್ರಿ... 🥰
&&&

ಈ ಬದುಕು ಒಂಥರಾ ಹಸ್ತಮೈಥುನದ ಸುಸ್ತಿನಂಗೆ...
ಸುಖವಾ ಅಂದ್ರೆ ಸುಖವೇ - ಆದ್ರೆ, ತೃಪ್ತಿಕರವಾ ಅಂತ್ಕೇಳಿದ್ರೆ ಮಾತ್ರ ಪರಮ ಗಲಿಬಿಲಿ...
____ ಅತೃಪ್ತ ಸುಖ ಸಾಗರ...
&&&

"ಪೋಲಿ ರುದಯದ ಪ್ರಾಯ ಕಳೆಯುವುದೇ ಇಲ್ಲ..."
___ ಹಿತ ಮತ್ತು ನೋವು...

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು... :)

No comments:

Post a Comment