ದಂಡೆ, ದಾರಿಗಳ ಎದೆಯ ದಿವ್ಯ ಧ್ಯಾನ.....
ಕತ್ತಲ ಬೇಲಿಯ ಮುರಿದು ಬೆಳಕು ತೆರೆದಾಗ ಪ್ರೀತಿ ಕಣ್ಣಾ
ಜಗವೆಲ್ಲ ಜಗಮಗದ ತರತರದ ಬಣ್ಣ ಬಣ್ಣಾ...
ಒಲವು ಬೆಳಗುವ ಬೆಳಗು...
ಶುಭದಿನ... 🤝🫂
ಬೆಳಗೆಂಬ ಕಡಲ ಕೊರಳಿನ, ಕಾಡು ಕರುಳಿನ ಪ್ರೇಮೋಪಾಸನೆಯ ಕಾವ್ಯ ಕಲಾಪ...
ದಂಡೆ, ದಾರಿಗಳ ಎದೆಯ ದಿವ್ಯ ಧ್ಯಾನ...
ಶುಭದಿನ... 🤝🫂
ಯಾವ್ಯಾವುದೋ ಅಮೂರ್ತ ಭರವಸೆಗಳ ನೊಗವ ಹೆಗಲಿಗೇರಿಸಿಕೊಂಡು, ಹಲ್ಮೊಟ್ಟೆ ಕಚ್ಚಿ, ಬೇತಾಳನ ಹೊತ್ತ ವಿಕ್ರಮನಂತೆ ಒಂದೊಂದೇ ಹೆಜ್ಜೆ ಜೋಡಿಸುವುದು - ಬದುಕು ಮಾಡುವುದಕ್ಕಾಗಿ...
ಸೋಲನೊಪ್ಪದ ನಡಿಗೆ - ನಗೆ ಬೆಳಕಿನ ಕಡೆಗೆ...
ಶುಭದಿನ... 🤝🫂
ಕಣ್ಣ ಕೊಳದಲ್ಲಿ ನಗೆಯ ತಾವರೆಯೊಂದು ಸದಾ ತೇಲುತಿರಲಿ...
ನಿನ್ನೆಯ ಬಗ್ಗಡಗಳೆಲ್ಲ ತಳ ಸೇರಿ ಬೇರಿನ ಶಕ್ತಿ ಸಾರವಾಗಲಿ...
ಪ್ರತೀ ಬೆಳಗಿನ ಹೊನ್ನ ಬೆಳಕ ಹೊನಲಿಗೂ ಪ್ರೀತಿ ಸ್ವಾಗತವಿರಲಿ...
ಮುಂಬೆಳಗಿಗೆ ಮುಗುಳ್ನಗೆಯ ಮುಂದಾಳತ್ವ...
ಶುಭದಿನ... 🤝🫂
ಬೆಳಕರಳಿ ನಕ್ಕ ನಗೆಯ ಬಿಸುಪಿಗೆ ನನ್ನೆದೆಯ ಕಿರು ನಗೆಯ ಒನಪ ಬೆರೆಸಿ ಸಮ್ಮೋಹ ಸಂಪದ ಬೆಳಗು...
ಶುಭದಿನ... 🫂🍬
ಬೆಳಕಿನ ಕಿರು ಸ್ಪರ್ಷಕೆ ಆತ್ಮದಾಳದವರೆಗೆ ಮೈಯ್ಯೆಲ್ಲಾ ಬಿರಿದು ನಿಂತ ಹೂವಿನದು ಪ್ರೀತಿಯ ಭೇಟಿಗಾಗಿ, ಪ್ರೀತಿಯಲಿ ಕರಗಿಹೋಗಲು, ಪ್ರೀತಿಯಿಂದ ಪ್ರೀತಿಯ ಹುಟ್ಟುಹಾಕಿ, ಪ್ರೀತಿಯದೊಂದು ಹೊಸ ನಾಕದ ಗೂಡು ಕಟ್ಟಲು ಅದೆಂಥ ಗಾಢ ಸಿದ್ಧತೆ...!!!
ಹೂವಾಗಲಿ ಮನಸು - ಬೆಳಕನೆದುರುಗೊಂಬುವಾಗ...
ಶುಭದಿನ... 🪻🤝🫂
ಬೆಳಗಿನ ಬೆಡಗಿನ ಬಣ್ಣದ ಬೆಳಕಿಳಿಯುವ ಹೊತ್ತು - ಎದೆ ಜೋಪಡಿಯ ಬಾಗಿಲ ತೆರೆದು ಪ್ರೀತಿಯ ಒಳಕರೆದು, ನಗೆ ಬಣ್ಣವ ಮೈಮನಕೆ ಎರೆದುಕೊಳ್ಳುವಾ...
ಹಬ್ಬವಾಗಲಿ ಪೂರಾ ದಿನ - ಶುಭದಿನ... 🤝🫂💞
ಹೊಸ ಪುಸ್ತಕದ ಮೊದಲ ಪುಟ ತೆರೆದು ಪದಗಳ ಹೆಕ್ಕುವ ಮುನ್ನ ಹೊಸತರ ಘಮವ ಉಸಿರಿಗುಣಿಸಿದಂತೆ ಕಣ್ತೆರೆದು ಗಾಢ ಉಸಿರೆಳೆದು ಈ ಬೆಳಗಿನ ಬೆಳಕ ಪ್ರೀತಿ ಕಿಡಿಗಳ ಎದೆಗೊತ್ತಿಕೊಂಡೆ - ಬೆಳಗಾಯಿತು, ಬೆಳಕಾಯಿತು ಒಳಮನೆಯ ತುಂಬಾ...
ಬೆಳಗೆಂಬ ನಗೆ ಹಾಡಿನ ಪಲ್ಲವಿ...
ಶುಭದಿನ... 🤝🫂
ಬೆಳಕು ಕರುಳಿಂದ ಬರೆದ ಹೊಸ ಕವಿತೆ - ಬೆಳಗು...
ಶುಭದಿನ... 🤝🫂
ಅಶುಭದ ಬೆನ್ನ ಮೇಲೆ ಬರೆದ ಶುಭ ವಾರ್ತೆ - ಶುಭವಾಗತೈತೇ...
ಶುಭದಿನ... 🍬🪻
ಶುಭವ ಕನಸಿದೆ
ಶುಭವ ಹಾಡಿದೆ
ಶುಭವನೇ ಕಾಯುತ್ತಾ ಕುಳಿತೆ
ಬೆಳಗಾನ ಬೆಳಕು ಬಾಗಿಲ ರಂಗೋಲಿಯ ತುಳಿದಾಗ ಶುಭದ ಹಂಬಲಕೆ ಶಕ್ತಿ ಸಂಚಾರ...
'ಶುಭವೆಂದರೆ ನನ್ನ ಆದರಿಸೋ ನಿನ್ನೊಳಗಿನ ಬೆಳಕೂ' ಅಂದಿತು ಕಣ್ಣಿಂದ ಎದೆಗಿಳಿದ ಬೆಳಗು...
ಶುಭದಿನ... 🪻🤝🫂
ಇರುಳ ಹೊದ್ದು ನರಳುತಿದ್ದ ಯೆದೆಯ ಆಸೆಗಳಿಗೆಲ್ಲ ಮರಳ ಬಯಲ ಹಾದಿಯಲ್ಲಿ ಸಿಕ್ಕಂತೆ ಚೂರು ನೀರು ಬೆಲ್ಲ - ಖಾಲೀ ಖಾಲಿ ತೋಳ ತೊಟ್ಟಿಲಿಗೆ ಬೆಳಗುಂಜಾವದಲಿ ಅವಳ ಕನಸನಿಷ್ಟು ಕಡ ಕೊಟ್ಟು, ತೂಗಿ ಲಾಲೈಸಿ ನಿನ್ನ ನೀನು ಸಂತವಿಸಿಕೋ ಅಂದ ಮೋಹ ಮಾಯೆ ಬೆಳಗು...
ಮುಂಬೆಳಗಿಗಂಟಿದ ಇಷ್ಟೇ ಇಷ್ಟು ನಗು - ಒಂದೇ ಒಂದು ಶುಭದ ಶಕುನ...
ಶುಭದಿನ... 🧚🪻
ಒಳಮನೆಯ ದೇವರ ಕೋಣೆಯಿಂದ ಅಂಗಳದ ತುಳಸೀ ಕಟ್ಟೆಯವರೆಗೂ ರಂಗೋಲಿ ಹುಡಿಯ ಚಿತ್ರದಲಿ ಪ್ರತಿ ಬಾಗಿಲ ಪಟ್ಟಿಯಂಚನೂ ಸಿಂಗರಿಸುವ ಅಮ್ಮನ ಬೆರಳ ನಟಿಕೆ - ಬೆಳಗಾನ ಬೆಳಕು ಅರಳುವ ಸದ್ದು...
ನೆನಪ ಸನ್ನಿಧಿ ಬೆಳಗು...
ಶುಭದಿನ... 🤝🫂
ಸಾವಿನೆದೆಯಲೂ ಇಷ್ಟು ಬೆಳಕಿರಬಹುದು
ಅದಕೇ
ನಕ್ಷತ್ರಗಳಿಗಷ್ಟು ಹೊಳಪಿರಬಹುದು...
ನೆನಪು ಬೆಳಕಿನ ಘಮ...
ಶುಭದಿನ... 🫂🫂
ಅಮ್ಮನ ಸೆರಗಿನಂಚಿನ ಬೇಲಿಯ ದಾಟಿ ಬರಲಾಗದ ಕತ್ತಲ ಗುಮ್ಮ ಅವಳ ಕಣ್ಣಂಕೆಯ ಆಜ್ಞೆಯ ನಗೆ ಬೆಳಕಲ್ಲಿ ಕರಗಿ ಅಳಿದುಹೋದ...
ಮಗು ಮನವ ಸಲಹುವ ನಿರ್ಭಯದ ಮಡಿಲು - ಅಮ್ಮ ಮತ್ತು ಅಮ್ಮನಂತಾ ಬೆಳಕು...
ಕತ್ತಲ ಬಿದ್ದೋಡಿಸುವ ಅಮ್ಮನ ನಗುವಿನಂಗೆ ಈ ಬೆಳಗು...
ಶುಭದಿನ... 🤱
ಬೆಳಕಿನ ತೇರನೇರಿ ಶುಭವು ಬಾಗಿಲಿಗೆ ಬರಲಿ...
ಶುಭದಿನ... 🤝🫂
ಶುಭವನೊಂದನೇ ಸುರಿಯುವ ಹಾದಿಯೆಂಬುದೆಲ್ಲೂ ಇಲ್ಲ...
ಹಾಗೆಂದೇ,
ಶುಭದ ಹೊನಲ ರಾಶಿಯ ಹುಡುಕಿ ಹೊರಡುವುದಲ್ಲ,
ಹೊರಟ ದಿಕ್ಕಿನಲೇ ಶುಭವ ಕಾಣುತ್ತ ಹಾಯುವುದು...
ಅಂತಃಕರಣ ಎದೆಯನಾಳುತಿದ್ದರೆ ಎಡವಿದ ಕಲ್ಲು, ತುಳಿದ ಪಾದ ಎರಡರಲ್ಲೂ ಪ್ರೀತಿ ಜೀವತಳೆಯಬಹುದು...
ಎದೆಮುಗುಳ ಚಂದ ಬೆಳಗು...
ಶುಭದಿನ... 🤝🫂
ಹೊರಗೆಲ್ಲ ಬೆಳಗಾಯಿತು -
ಒಳಗೂ ಇಷ್ಟು ಬೆಳಕಾಗಬಹುದೇ...
ಅಗ್ದೀ ಚಂದ ಬೆಳಗಿನೊಂದಿಗೆ ನೋಡುವಾ ನಡೆದು - ಚಂದವಾದೀತು ಹಾಡೂ, ಪಾಡೂ ನಮ್ಮದೂ...
ಶುಭದಿನ... 🤝🫂
ಹತ್ತಾರು ಸಾಧ್ಯತೆ, ಬಾಧ್ಯತೆ, ಭರವಸೆಗಳ ಒಂದು ಹಾದಿ - ಬೆಳಗು...
ಶುಭದಿನ... 🤝🫂
*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು... :)
ಜಗುಲಿಗೆ ಇಣುಕಿದ ಚಂದಿರ; ಮನಮಂದಿರದಿ ಮೂಡಿಸುವ ಭಾವಗಳೆ ಸುಂದರ... ಕ್ಷಣ ಕ್ಷಣಕೂ ಅದಲುಬದಲಾಗುವ ನನ್ನೊಳಗಿನ ನನ್ನದೇ ಭಾವಗಳು ನನ್ನನೇ ಬೆಚ್ಚಿಬೀಳಿಸುತ್ತವೆ ಹಲವೊಮ್ಮೆ...
Wednesday, April 16, 2025
ಗೊಂಚಲು - ನಾಕ್ನೂರಾ ಐವತ್ತು ಮತ್ತೊಂಭತ್ತು.....
Subscribe to:
Post Comments (Atom)
No comments:
Post a Comment