Tuesday, March 19, 2013

ಗೊಂಚಲು - ಅರವತ್ತು + ಐದು.....


ಜನ್ಮಕ್ಕಂಟಿದ.......

ನೆನಪಿದ್ದ ಖುಷಿ ಅದೊಂದೆ.
ಆಗೆಲ್ಲ ನೀ ಅಜ್ಜನ ಮನೆಗೆ (ನಾನು, ಅಮ್ಮ, ಅಕ್ಕಂದಿರೆಲ್ಲ ಬದುಕಿದ್ದೇ ಅಲ್ಲಿ ಮತ್ತು ಆ ಮನೆಯ ಪ್ರೀತಿಯಿಂದ ಆಗ) ಬರ್ತಿದ್ದೆ. ಶಾಲೆಯಿಂದ ನಾ ಬರೋ ಹೊತ್ಗೆ ದೇವರ ಮುಂದೆ ನೀನು ಮೂಗು ಮುಚ್ಕೊಂಡು ಪ್ರತಿಷ್ಠಾಪಿತ. ಆಗದು ಯಾವುದೇ ಜಿಜ್ಞಾಸೆಗಳಿಲ್ಲದ ಎಲ್ಲ ಸೊಗಸಾಗಿ ಕಾಣುತಿದ್ದ ವಯಸು ನಂದು. ನೀ ದೇವರೆದುರು ಕೂತಿದ್ರೆ ನಿನ್ನ ಪಕ್ಕದಲ್ಲಿ ಒಂಥರಾ ಸ್ಪ್ರಿಂಗ್ ನಂತಹ ಬೆಲ್ಟ್ ಇರೋ ನಿನ್ನ ವಾಚು ಇರ್ತಿತ್ತು. ಸುಮ್ನೆ ಅದನ್ನೆತ್ತಿಕೊಂಡು ಹೋಗಿ ನನ್ನ ಕೈಗದನ್ನು ಕಟ್ಕೊಂಡು ಖುಷಿ ಪಡ್ತಿದ್ದೆ. ಅದೊಂದೇ ಖುಷಿ ನಿನ್ನಿಂದ ಸಿಕ್ಕಿದ್ದು ನಂಗೆ. ಹಾಗೆ ನಿನ್ನ ವಾಚು ಕಟ್ಟಿಕೊಂಡು ವಾರಗೆಯ ಮಕ್ಕಳೆದುರು ಕೆಲಕ್ಷಣ ಮೆರೆದಿದ್ದಕ್ಕೆ ಬೈದಿಲ್ಲ ಅನ್ನೋ ಒಂದೇ ಕಾರಣಕ್ಕೆ ನಾನು ನಿಂಗೆ ಋಣಿಯಾಗಿರಬೇಕಿದೆ...

ಅಲ್ಲಿಂದಾಚೆ ನನ್ನ ಬುದ್ಧಿ ಬಲಿತಂತೆಲ್ಲ ನಿನ್ನ ಮನದ ಕ್ರೌರ್ಯದ ಮುಳ್ಳು ಹೆಜ್ಜೆ ಹೆಜ್ಜೆಗೂ ಚುಚ್ಚಿ ಘಾಸಿಗೊಳಿಸಿದ್ದೊಂದೇ ಸತ್ಯ...

ನನ್ನ ಮತ್ತು ಅಮ್ಮ, ಅಕ್ಕಂದಿರೆಲ್ಲರ ಎಲ್ಲ ಸಾಮಾಜಿಕ ಅವಮಾನಗಳಿಗೆ ನೀನೇ ಪ್ರಮುಖ ಕಾರಣನಾಗಿ ಬಿಸಿತುಪ್ಪವಾದದ್ದು ನಮ್ಮ ದೌರ್ಭಾಗ್ಯ...
ನಿನ್ನ ನೆವದಿಂದ ನನ್ನ ಕೆಣಕಿ ಕಾಡೋ ಸಮಾಜ ಅದೇ ನಿನ್ನ ಮೆರೆಸುವುದ ಕಂಡು ಕನಲಿಹೋಗಿದ್ದೇನೆ ಎಷ್ಟೋ ಬಾರಿ...

ಏಳು ಹೆಜ್ಜೆ ನಿನ್ನೊಂದಿಗೆ ನಡೆದದ್ದು ಮತ್ತು ಒಂದು ಕರಿ ದಾರಕ್ಕೆ ನಿನ್ನೆದುರು ತಲೆಬಾಗಿದ್ದಕ್ಕೆ ಅಮ್ಮ ಕಟ್ಟಿದ ಕಂದಾಯ ಒಂದಿಡೀ ಜನ್ಮದ ಜೀವಂತ ನಗು...
ಬಂಧ ಬೆಸೆಯಬೇಕಿದ್ದ ಹೋಮದ ಸುತ್ತ ಸುತ್ತುತ್ತಲೇ ಅಮ್ಮನ ಬದುಕ ಆಹುತಿಗೆ ಮುನ್ನುಡಿ ಬರೆದದ್ದು ನೀನು...
ರಾತ್ರಿಗಳ ನಿನ್ನ ತೆವಲಿನ ಕ್ರೌರ್ಯಕ್ಕೆ ಅಮ್ಮನ ಮಡಿಲು ತುಂಬಿತ್ತು...(ಬಹುಶಃ ಮಡಿಲು ತುಂಬಿದೆ ಅನ್ನೋ ಒಂದೇ ಕಾರಣಕ್ಕೆ ಅಮ್ಮ ನಿಂಗೆ ಋಣಿಯೇನೋ)

ಕೊಟ್ಟ ದೇಹಕ್ಕೆ ಅನ್ನವಿಕ್ಕದಿದ್ದರೂ ನಾನಿಂದು ನಿನ್ನ ದೂರುತ್ತಿರಲಿಲ್ಲ..
ದೇಹದೊಳಗಣ ಮನದ ಹಸಿವಿಗೆ ಒಂದೇ ಒಂದು ತುತ್ತು ಪ್ರೀತಿ ಉಣಿಸಿದ್ದಿದ್ದರೆ...

ನಾವು ಕ್ರೂರ ಪ್ರಾಣಿ ಅಂತನ್ನೋ ಚಿರತೆ ಕೂಡ ತನ್ನ ಮರಿಗಳು ತಮ್ಮ ಅನ್ನವನ್ನು ತಾವೇ ಸಂಪಾದಿಸಿಕೊಳ್ಳುವವರೆಗೆ ಸಲುಹಿ ಆನಂತರವಷ್ಟೇ ಕೈಬಿಡುತ್ತಂತೆ...
ನಿನ್ನ ಮನಸು ಚಿರತೆಗಿಂತ ಕ್ರೌರ್ಯವಂತ ಹೇಗೆ..???

ದಿನದ ಹದಿನೈದು ಘಂಟೆ ನೀ ನಡೆಸುವ ಡಂಭಾಚಾರದ ದೈವ ಭಕ್ತಿಯ ಕಂಡಿದ್ದೇ ಇದ್ದೀತು ದೇವರೆಡೆಗಿನ, ಆಚರಣೆಗಳೆಡೆಗಿನ ನನ್ನ ಜಿಗುಪ್ಸೆಗೆ ಮೂಲ ಕಾರಣ...

ನೀ ಪೂಜಿಸೋ ದೇವರು, ನೀ ನಂಬೋ ಧರ್ಮ ಹೇಳಿದ ನೀ ನನಗೆ ನೀಡಲೇಬೇಕಿದ್ದ ‘ಸಂಸ್ಕಾರ’ಗಳೆಡೆಗೆ ಕಣ್ಣೆತ್ತಿಯೂ ನೋಡದ ನಿನ್ನ ’ಕೊನೆಯ ಸಂಸ್ಕಾರ’ ಮಾಡಲೂ ನನ್ನ ಕೈ ಹೇಸುತ್ತೆ...
ಇನ್ನು ನಿನ್ನ ಇಳಿವಯಸಲಿ ಸೇವೆ ಎಲ್ಲಿಂದ ಮಾಡಲಿ...
ತನ್ನ ‘ಕೊನೆಯ ಸಂಸ್ಕಾರ’ದವರೆಗೆ ಮಗ ಬದುಕಿದ್ದರೆ ಸಾಕು ಅಂದೆಯಂತಲ್ಲ - ಸಂಸ್ಕೃತಿಯನ್ನು ಕಲಿಸದ ನಿನಗೆ ‘ಸಂಸ್ಕಾರ’ ಮಾಡ್ತೀನಿ ನಾನು ಅಂತ ಹೇಗೆ ನಂಬ್ತೀಯ...

ಒಂದು ಹನಿ ವೀರ್ಯ ಚೆಲ್ಲಿ ಈ ದೇಹದ ಜನ್ಮಕ್ಕೆ ನಿಮಿತ್ತನಾದೆ ಎಂಬ ಕಾರಣಕ್ಕೆ ನಿನ್ನೆಲ್ಲ ನೀಚತನಾನ ನಿನ್ನ ವೀರ್ಯಸಂಜಾತರು ಸಹಿಸಿಕೊಳ್ಳಬೇಕೆಂಬುದಾಗಿದ್ದರೆ, ಸೇವೆಗೈಯಬೇಕೆಂಬುದಾಗಿದ್ದರೆ ನಿನ್ನಂಥ ಗಂಡು ಜಂತುಗಳ್ಯಾರೂ ಮದುವೆ - ಸಂಸಾರಗಳಿಗೆಲ್ಲ ಜೋತು ಬೀಳ್ತಲೇ ಇರಲಿಲ್ಲವೇನೋ...
ಕನಿಷ್ಠ ಜವಾಬ್ದಾರಿಯನ್ನೂ ನೀಯಿಸದವನಿಗೆ ನಿರೀಕ್ಷೆಗಳೂ ಇರಬಾರದಲ್ಲವಾ...

ಎಂಥ ಅಪ್ಪನಾಗಬಾರದೆಂಬುದನ್ನು ಅಗತ್ಯಕ್ಕಿಂತ ಸ್ಪಷ್ಟವಾಗಿ ಅರುಹಿದ, ತುಂಬ ಸಭ್ಯರಾದ ಇತರರ ಅಪ್ಪಂದಿರನ್ನೂ ಅನುಮಾನದ - ಪೂರ್ವಗ್ರಹದ ಕಣ್ಣಿಂದ ನೋಡುವಂತೆ ನನ್ನ ಮನಸ ಕೆಡಿಸಿದ, ನಿನ್ನ ಕಾಮಕ್ಕೆ ಬೇಕಾದ ಅಧಿಕೃತತೆಗಾಗಿ ಮದುವೆಯ ಪಾವಿತ್ರ್ಯವನ್ನು ಬಳಸಿಕೊಂಡ (ಸಮಾಜದ ಕಣ್ಣಿಗೆ ಮಣ್ಣೆರಚಲು ಒಂದು ಮದುವೆ..ಆದರೆ ನಿನ್ನ ಕಾಮ ಅದರಾಚೆಯೇ ಹೆಚ್ಚು ವಿಜೃಂಭಿಸಿದ್ದೆಂಬುದು ಸತ್ಯ) ನಿನ್ನೆಡೆಗೆ ನನ್ನಲ್ಲಿ ಇರೋದು ಕೋಪವಲ್ಲ... ಅಪ್ಪಟ ಅಸಹ್ಯ...

ನಾ ಬದುಕುತಿರುವ, ನನ್ನನ್ನು ಪ್ರೀತಿಸೋ ಸಮಾಜದ ಒತ್ತಡಕ್ಕೆ ಮಣಿದು ಎಲ್ಲಿ ನಿನ್ನ ಕೊನೆಗಾಲದಲ್ಲಾದರೂ ನಿನ್ನೆಡೆಗೆ ನಡೆಯಬೇಕಾದೀತೋ ಎಂಬ ಭಯ ನನ್ನಲ್ಲಿ ನಿನಗಿಂತ ನಾನೇ ಮೊದಲು ಅಳಿದು ಹೋಗಿದ್ದರೆ ಚೆನ್ನವಿತ್ತು ಅಂತ ಯೋಚಿಸುವಂತೆ ಮಾಡುತ್ತೆ - ಪ್ರತಿ ಬಾರಿ ನಿನ್ನ ನೆನಪಾದಾಗ...

ದೇಹ ನೀಡಿದ ಕಾರಣಕ್ಕೆ ಹೆಸರಿಗೂ ಅಂಟಿಕೊಂಡು, ಜನ್ಮಕ್ಕಂಟಿದ ಶಾಪದಂತೆ ಕಾಡೋ ನಿನ್ನಂಥ ಅಪ್ಪಂದಿರೆಡೆಗೆ ನನ್ನ ಧಿಕ್ಕಾರವಿದೆ....

12 comments:

  1. ಯಾಕೆ ಗೆಳೆಯ ನಿನ್ನ ಲೇಖನಿ ದಿಕ್ಕು ಬದಲಿಸಿದೆ ...?

    ReplyDelete
  2. ವ್ಯಕ್ತಿ ಜಾರಿದ ಹಾದಿಯನ್ನು ಅವಲೋಕನೆ ಮಾಡುವ ಶೈಲಿ ಬಲು @#@#$@#$@. ಧರ್ಮಸೆರೆ ಚಿತ್ರದ "ಮೂಕ ಹಕ್ಕಿಯು ಹಾಡುತಿದೆ" ಹಾಡು ನೆನಪಿಗೆ ಬಂತು. ಕ್ರೌರ್ಯದ ಕ್ರೌರ್ಯಕ್ಕೆ ಪದಗಳ ಪೋಷಣೆ ಬಲು ಮೊನಚಾಗಿದೆ!

    ReplyDelete
  3. ಮೂಕನಾಗಿದ್ದೇನೆ....

    ReplyDelete
  4. ಶ್ರೀ.. ಭಾವನೆಗಳು ಒಂದೇ ಆಗಿದ್ದಾಗ ಅದರಲ್ಲಿನ ತೀವ್ರತೆ ಬೇಗ ಅರ್ಥೈಸಿಕೊಳ್ಳಲು ಸಾದ್ಯವಾಗುತ್ತದೆ..
    ಬರಹ ಆಳವಾಗಿ ಚುಚ್ಚುವಂತಿದೆ..
    ಅಪ್ಪನಡೆಗೆ ಪ್ರೀತಿ ಇರಲಿ

    ReplyDelete
  5. ನಾವಿಬ್ಬರು ಒಂದೇ ದೋಣಿಯ ಪಯಣಿಗರು ಅನಿಸುತ್ತಿದೆ ಶ್ರೀ...

    ReplyDelete
  6. ಪ್ರತಿಕ್ರಿಯೆಗಳನ್ನು ಮೂಕವಾಗಿ ಓದುತ್ತಿದ್ದೇನಷ್ಟೇ...
    ಪ್ರತಿಕ್ರಿಯಿಸುವ ಸ್ಥಿತಿ ನನ್ನದಲ್ಲ...

    ReplyDelete
  7. ತೀವ್ರ ಚಿಂತನೆಗೆ ಒಡ್ಡುವ ಬರಹವಿದೆ. ಕಂಚೀಮನೆಯವರ ನಿಜ ತಾಕತ್ತಿನ ಅನಾವರಣ ಇಲ್ಲಿದೆ.

    ReplyDelete
  8. ಮನಕಲಕುವ ನಿಜಜೀವನದ ಸ್ವಾನುಭವ ಬರಹ ಎಲ್ಲಾ ಕಷ್ಟಗಳನ್ನೂ ಸಹಿಸಿಕೊಂಡು ನಗುತ್ತಾ ಸುತ್ತಲಿವರನ್ನು ನಗಿಸುತ್ತಾ ಉರಿದು ಹೋಗುತ್ತಿರುವ ಮೇಣದ ಬತ್ತಿಯಂತಹ ನಿನ್ನ ಜೀವನದಲ್ಲಿ ಜೀವನೋತ್ಸಾಹ ಚಿಮ್ಮಲಿ.............. wish you very pleasure life ahead.

    ReplyDelete
  9. ..............ಉಳಿದಿದ್ದು ಮೌನ ಮಾತ್ರ ಶ್ರೀ ..................

    ReplyDelete
  10. ಪದಗಳಲ್ಲಿ maturity ಇದೆ.ಉಜ್ವಲ ಭವಿಷ್ಯ ಇದೆ ಕಣೊ. ಬರೀತಿರು

    ReplyDelete
  11. ಮನಸು ಬಾರ ಬಾರ. ಹೃದಯ ಗೊಂದಲದ ಗೂಡು. ಅದೆಷ್ಟು ನೋವುಂಡ ಮನವೊ? ಅಪ್ಪಾ ಅಂದ್ರೆ ಆಕಾಶ ಅಂತಾರೆ, ಅಪ್ಪ ಅಂದ್ರೆ ಆತ್ಮ ವಿಶ್ವಾಸ ಅಂತಲೂ ಅಂತಾರೆ. ಅದೆಲ್ಲವೂ ಅಲ್ಲದೆ ಅಪ್ಪಾ ಇನ್ನೇನೋ ಕೂಡ ಆಗಬಲ್ಲ ಎಂಬುದನ್ನು ಈ ಬರಹದಿಂದ ಅರಿತು ಸೋಜಿಗಗೊಂಡಿದ್ದೇನೆ. ಪದಗಳ ಬಳಕೆ, ಭಾವದ ಸಿಂಚನ ಅದ್ಭುತ. ತಪ್ತ ಮನ ಶಾಂತಗೊಳ್ಳಲೆಂಬ ಆಶಯದೊಂದಿಗೆ....

    ReplyDelete