Monday, March 4, 2013

ಗೊಂಚಲು - ಅರವತ್ಮೂರು.....

ಆ ಕಪ್ಪು ಹುಡುಗಿಯ ಬಗ್ಗೆ.....



ಕಪ್ಪೆಂದು ಹಳಿಯದಿರಿ
ಅವಳ ಮನದ ಒಪ್ಪವನರಿಯದೆ...
ನನ್ನೆಡೆಗೆ ತುಡಿಯುತಿಹ ಅವಳ ಕಡುಗಪ್ಪು ಕಣ್ಣಲ್ಲಿ
ಒಲವ ಬೆಳದಿಂಗಳಿದೆ...

ಅಂದಿದ್ದೆ ನಾನಂದು -
ನನ್ನೆಲ್ಲ ತಪ್ಪುಗಳ ಮರೆತೊಮ್ಮೆ ನನ್ನೆಡೆಗೆ ನಗುವ ಚೆಲ್ಲು
ನನ್ನ ಸಾವಿಗೂ ಬಣ್ಣ ಬಂದೀತು ನಿನ್ನ ಒಲವಿಂದ...
ನಿನ್ನ ಬದುಕ ಬಣ್ಣವಾಗುವ ಬಯಕೆ ನನ್ನದು 
ಕನಸಲೂ ಸಾವು ಸನಿಹ ಸುಳಿಯದಂತೆ...
ಅಂದದ್ದು ಆ ಕಪ್ಪು ಹುಡುಗಿ...

ನನ್ನ ಮನದ ಕತ್ತಲೆಯನೆಲ್ಲ 
ತನ್ನ ನಗುವ ಕಣ್ಣ ಬೆಳಕಲ್ಲೆ 
ದೂರ ಸರಿಸಿದ್ದು ಆ ಕಪ್ಪು ಹುಡುಗಿ...

ಮುಸ್ಸಂಜೆ ತಂಪಲ್ಲಿ
ಮೌನದ ತೇರಲ್ಲಿ
ಹೊಸ ಬದುಕ ಕನಸಿಗೆ ತೋರಣವ ಕಟ್ಟಿ
ಕಣ್ಣಲ್ಲೆ ಒಲವ ಭಾವಗೀತೆಯ ಹಾಡಿದ್ದು
ಆ ಕಪ್ಪು ಹುಡಿಗಿ...

ಬಡವ ನಾನು ಕೊಡುವುದಿಷ್ಟೇ
ಮುತ್ತಿನುಂಡೆಯ ಭೂರಿ ಭೋಜನ
ನಿತ್ಯ ಅವಳ ಮೃದು ಅಧರಕೆ...
ನಿನ್ನ ತೋಳ್ಬಲೆಯೆ ಇಂದ್ರನೋಲಗವೆಂದು
ತೃಪ್ತ ನಗೆಯಿಂದುಲಿವಳೆನ್ನಯ 
ಆ ಕಪ್ಪು ಹುಡುಗಿ...

ಕಪ್ಪಾದರೂ ಅವಳು
ಕಪ್ಪಲ್ಲ ಅವಳ ಒಲವು...
ನನ್ನ ನಲಿವಲ್ಲಿ ಅವಳ ನಗುವಿದೆ...
ಅವಳ ನಗುವಲ್ಲೆ ನನ್ನ ಉಸಿರಿದೆ...
ಬದುಕ ಹಸಿರಿನ ಹೆಸರು
ಆ ಕಪ್ಪು ಹುಡುಗಿ...

ಚಿತ್ರ ಕೃಪೆ : ಚಿತ್ರಸಂತೆಯಲ್ಲಿ ಸೆರೆಹಿಡಿದ ಚಿತ್ರ...ಕಲೆಗಾರನ ಹೆಸರು ಗೊತ್ತಿಲ್ಲ...ಕಲೆಗಾರನ ಕ್ಷಮೆಕೋರುತ್ತಿದ್ದೇನೆ...

ವಿ.ಸೂ. : ಈ ಬರಹ ಇ-ವಾರಪತ್ರಿಕೆ "ಪಂಜು"ವಿನ ಮಾರ್ಚ್ 4ನೇ 2013ರ ಸಂಚಿಕೆಯಲ್ಲಿ ಪ್ರಕಟವಾಗಿದೆ...
ಕೊಂಡಿ : http://www.panjumagazine.com/?p=1178

5 comments:

  1. ಚಂದದ ಸುಂದರವಾದ ಹುಡುಗಿಯರ ವರ್ಣನೆಗಳನ್ನು ಬಾಳ ಎಂಬಷ್ಟೇ ಕೇಳಿದ್ದೇವೆ, ನೋಡಿದ್ದೇವೆ.. ಕಪ್ಪು ಹುಡುಗಿಯ ಬಗ್ಗೆ ಕಂಡಿದ್ದು ವಿರಳ.. ಕಪ್ಪಾದರೂ ಕಪ್ಪಲ್ಲ ಅವಳ ಒಲವು.. ಚಂದದ ಕವಿತೆ ಶ್ರೀ.. ತುಂಬಾ ಇಷ್ಟ ಆಯಿತು ..

    ReplyDelete
  2. ರೂಪಕ್ಕಿಂತ ಗುಣ ಚಂದ ಎಂಬ ಮಾತು ಹೇಳುವ ಕವನ ಚಂದವಿದೆ ... ಜನಪದರ ಹಾಡೊಂದಿದೆ .. ಕಪ್ಪು ಹೆಂಡತಿಯೆಂದು ಕರಕರೆ ಮಾಡಬೇಡ .. ನೆರಾಲ ಹಣ್ಣು ಬಲು ಕಪ್ಪು.. ಕೆಂಪು ಹೆಂಡತಿಯೆಂದು ಸಂತೋಷ ಪಡಬೇಡ ಅತ್ತೀಯ ಹಣ್ಣು ಬಲು ಕೆಂಪು .. ಕವನ ಓದುತ್ತಾ ಈ ಹಾಡಿನ ಸಾಲುಗಳು ನೆನಪಿಗೆ ಬಂದವು ...

    ReplyDelete
  3. ಎಂದಿನಂತೆ ಸೂಪರ ಸಾಲುಗಳ ಜೋಡಣೆ ...ಶ್ರೀವತ್ಸ... :)

    ReplyDelete
  4. ಯಾಕೋ ನಮ್ಮೂರ ಪದ್ದಿ ಮತ್ತು ರೂಕ್ಮಿಣಿ ನೆನಪಾದರು. ಕಪ್ಪು ಬಣ್ಣದ ಅವರ ಮದುವೆಗಳು ತುಂಬಾ ನಿಧಾನವಾದದ್ದು ನೆನಪಾಯಿತು. ಮನಸ್ಸಿನಲ್ಲಿ ನಿಲ್ಲುವ ಕವನವಿದು.

    ReplyDelete
  5. ಕಸ್ತೂರಿ ಕಪ್ಪು, ಕೋಗಿಲೆ ಕಪ್ಪು, ಅಮವಾಸ್ಯೆಯ ಚಂದ್ರ ಕಪ್ಪು, ಇಷ್ಟೇ ಏಕೆ ಶ್ರೀ ಕೃಷ್ಣನು ಕಪ್ಪು. ಹೊರಗಿನ ಬಣ್ಣ ನೆನಪಿನ ನೀರು ಬಿದ್ದರೆ ತೊಳೆದುಹೋಗುತ್ತದೆ. ಮುಖ್ಯವಾಗಿ ಮನಸ್ಸು ಬೆಳ್ಳಗಿರಬೇಕು. ಕಪ್ಪಿನ ಮಹತ್ವ ಹೇಳುತ್ತಲೇ, ಮನಸ್ಸು ಸೆಳೆಯುವ ಕವನಗಳ ಸಾಲು ಇಷ್ಟವಾಯಿತು. ಸುಂದರವಾಗಿದೆ ಶ್ರೀ

    ReplyDelete