Friday, February 13, 2026

ಗೊಂಚಲು - ನಾಕ್ನೂರೆಂಬತ್ತಾ ಮೂರು.....

ಯಾವ ಜನುಮದ(ಕೆ) ಗುರುತೋ.....

ವತ್ಸಾ -
ನಡೆವ ಪಾದದ ಒಡೆದ ಗಾಯವನು ಉಪ್ನೀರಲ್ಲಿ ತೊಳೆದಂಗೆ ನಿನ್ನ ಮಾತು ಮತ್ತು ಮೌನ...
ಹೂಂ,
'ಮಾತು' ಇರಿಯದಿರಲೀ ಎಂದು ನಾಲಿಗೆ ಕಚ್ಚಿ ಹಿಡಿದು ಅತ್ತ ತಿರುಗಿದರೆ 'ಮೌನ' ಮಸಣವನೇ ತನ್ನ ಮನೆ ಮಾಡಿಕೊಂಡಿತ್ತು...
ಅಷ್ಟೇ,
ಮಾತು ಕೊಂದ ಬಂಧಕ್ಕೆ ಮೌನ ಗೋರಿ ಕಟ್ಟಿ ನಕ್ಕಿತ್ತು...
ಆದ್ರೂ ಏನ್ಗೊತ್ತಾ,
ನಾನೋ ನೀನೋ ಆಡಿದ್ದಾಗಲೀ, ನುಂಗಿದ್ದಾಗಲೀ, ನಾನೂ ನೀನೂ ಗ್ರಹಿಸಿದ್ದು ಹೆಂಗೆ ಎಂಬುದರ ಮೇಲೆ ಪರಿಣಾಮ ನಿಶ್ಚಯ - ಕೈಹಿಡಿದು ನಡೆಸುವುದಾ ಅಥವಾ ಯೆದೆಬಗೆದು ಕೊಲ್ಲುವುದಾ ಯೆಂಬುದು...
___ ಬಂಧ - ಬಡಿವಾರ...
&&&

ಕೇಳೇ -
ಮೋಹ ಮದಕೆ ಮನಸೋತು, ಸುಖದ ಅಗ್ಗಿಷ್ಟಿಕೆಯಲಿ ಮತ್ತೆ ಮತ್ತೆ ಅರಳಿ ಹೊರಳಿ ಬೆಮರಿ ಮೈಮರೆವ ಕೊಂಡಾಟದಾಸೆಯ ಈ ಇರುಳ ಬಾಗಿಲ ಛಳಿಯ ಬೇಗೆಯ ಹೊತ್ತಿಗೆ, ಸುಳ್ಳೇ ಆದರೂ 'ಸಾಕು ಸಾಕೆಂಬ' ನಿನ್ನ ಬಿಗುಮಾನದ ಮಾತಿಗಿಂತ ಅರಸಿಕ ಉರಿ ಸುಂಗು ಬೇರೊಂದಿಲ್ಲವೇ - ಕಮ್ಮಗೆ ಸುತ್ತ ಸುಳಿದು, ಸುಮ್ಮನೇ ಮುಂಗುರುಳ ಕಿವಿಗೆ ಮುಡ್ಕೊಂಡು, ಅಯಾಚಿತದಲಿ ಸೆರಗ ಸರಿ ಮಾಡ್ಕೊಂಡು, ನಿನ್ನನೇ ನೀ ಕಣ್ಣಲೇ ತೀಡಿಕೊಂಡು ಒಳಗೊಳಗೇ ನಕ್ಕು ನನ್ನ ಕೆಣಕುವ ನಿನ್ನ ಅಣಕೂ, ನಿನ್ನ ಒದ್ದೆ ಕೊರಳಿಂದ ಜಾರುತಿದ್ದ ಒಂಟಿ ಹನಿಯಲಿ 'ಕಾಮನ' ಬಿಲ್ಲು ಮು(ಡಿ)ರಿದ ಹಳೇಯದೊಂದು ನೆನಪೂ ಮೈತುಂಬಾ ಬಿಸಿ ಉಸಿರ ಹರಿದಾಟದ ಪುಳಕ ತುಂಬುವಾಗ...
___ ಮಾಗಿಯಲಿ ರಸಿಕ ತೋಳ ಬೆತ್ತಲೆಯ ಕೊರೆದ ಪ್ರಣಯೀ ದಂತಚಿತ್ರದ ಗಾಯಗಳು ಮಾಯಗೊಡಬಾರದು...
&&&

ಹೇ!! ಮೋಹಾರಾಗ ಮಂಜರೀ -
ಎದೆಯ ಕಮರಿಯಲೊಂಚೂರು ತಾವು
ತೋಳ ಬಿರುಸಿನಲಿಷ್ಟು ಕಾವು
ನಡುವ ಮಿಡಿತಗಳಿಗಿಷ್ಟು ಮೇವು
ಕಸರಿಲ್ಲದೇ ಕೊಸರಾಡದೇ ಕೊಟ್ಟುಬಿಡು
ಈ ಛಳಿಯ ಕಾಲವ ಬೆಚ್ಚಗೆ ದಾಟಿಕೊಳ್ಳುತ್ತೇನೆ...
___ ಪ್ರಣಯವಿಲ್ಲದೇ ಮಾಗಿಯಲಿ ರಸಿಕನಿಗೆ ಶಾಪ ವಿಮೋಚನೆಯಿಲ್ಲ...
&&&

ಅನಿರೀಕ್ಷಿತಗಳ ನಿರೀಕ್ಷೆಯ ನಿನ್ನ ಮೋಹಾ ಮೋದದ ಕನಸುಗಳು ಎನ್ನ ಛಳಿ ಇರುಳ ಸಖಿಯಾಗಿ ತಬ್ಬುತ್ತದೆ;
ಮತ್ತು
ನಾನು ಮಾಗಿಯ ಯೆದೆ ನೋವನ್ನು ಮಜವಾಗಿ ದಾಟಿದ ಹುಕಿಯಲ್ಲಿ ಸುಖವಾಗಿ (ಕೆ)ನರಳುತ್ತೇನೆ...
ಭಾವದಲಿ ಬೇಲಿಗಳ ಮುರಿದು ಮೈಛಳಿಯ ಬಿಟ್ಟ ಕನಸಲ್ಲಿ ನಾ ರಾಣಿ ಜೇನ ಎದೆ ಗೊಂಚಲನಾಳಿ(ಡಿ)ದ ಅಂತಃಪುರದ ಆಳಾಗುತ್ತೇನೆ;
ಹಾಗೇ
ಬೆವೆತ ನನ್ನುಸಿರಲ್ಲಿ ನಿನ್ನ ಕಂಕುಳಲಿ ಸಿಡಿದ ಆಸೆ ಸ್ವೇದ ಗಂಧದ ಸೆಳಕೊಂದು ಸುಳಿದಂತಾಗಿ ಮತ್ತೆ ಮತ್ತೆ ಕಮ್ಮಗೆ ಕನಲುತ್ತೇನೆ...
___ ಯಾವ ಜನುಮದ(ಕೆ) ಗುರುತೋ...

ಬಟ್ಟೆಯ ಬಡಿವಾರದಲಿ ಕಣ್ಣು ಮಿಂಚುವ ಅವಳ ಪ್ರಸಾದನ ಸೌಂದರ್ಯದ್ದೊಂದು ತೂಕವಾದರೆ,
ಇವಳ ಚೆಲುವಾದ ಬೆತ್ತಲೆಯು ಮೈಮನಕೆ ಬಡಿಸುವ ಅಸೀಮ ಆನಂದಾಲಂಕಾರದ್ದೇ ಇನ್ನೊಂದು ತೂಕ...
___ ಕತ್ತಲಿಲ್ಲದ ಮನಸಿನ ಬೆತ್ತಲೆ ಮೈಯ್ಯಲ್ಲಿ ಈಜಿ (ತ)ದಣಿಯುವುದು ಶಬ್ದಕೆ ನಿಲುಕದ ಕಾವ್ಯಾಲಂಕಾರ...
&&&

ಕೇಳೇ -
ರಣ ಅಮಾಸೆ, ಮತ್ತದರ ಹಿಂಚು ಮುಂಚಿನ ರಾತ್ರಿಗಳಲೂ ಕೂಡಾ ಬೆಳ್ದಿಂಗಳ ಕುಡಿದು, ಬೆವರ ಮೀಯುವ ಆಸೆ ವಿಪರೀತ - ಒದಗಿ ಬರ್ತೀಯಾ ಅಲ್ವಾ ಸಹಚಾರಿಯಾಗಿ...?
ಇರುಳ ಬಳಸಿ ಬರೆವ ಶೃಂಗಾರಾಲಂಕಾರ ಸಂಹಿತೆಗೆ...!!
ಈ ಚರ್ಚರೀ ಛಳಿಯ ಮಡುವಲ್ಲಿ ಉರಿದುರಿದು ಮಿಡಿಯಲಿ ನಡು ನಾಡಿ ಯುಗಳ ಗೀತ...
___ ಪರಮ ಪೋಲಿಯ ಅಂತಃಪುರದ ಪಿಸುಮಾತು... 

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು... :) 

ಗೊಂಚಲು - ನಾಕ್ನೂರೆಂಬತ್ತಾ ಎರಡು.....

ಎದ್ದೇಳು - ಬೆಳ್ಗಾತು.....

ಕಣ್ಣ ಕಾವಳದಲಿ ಸೂರ್ಯನುದಯಿಸುವ ಹೊತ್ತು...
ಬೆಳಗಾಯಿತು - ಬೆಳಕ ಬಳ್ಳಿ ಕಣ್ಣ ಚಪ್ಪರದಿಂದ ಯೆದೆಗೂಡಿನ ಮಾಡಿಗೆ ಹಬ್ಬಲಿ...
ಶುಭದಿನ... 💞🤝

ಬೆಳಗು ಕಣ್ಣಿಂದ ಮಾತಾಗುವಾಗ ಯೆದೆ ತೆರೆದು ಕೇಳು ಕಂದಾಽಽ - ನಿಸರ್ಗದ ನಿರ್ವ್ಯಾಜ ಅಕಳಂಕ ಪ್ರೀತಿ ಬೆಳಕು ಕರುಳ ತೊಳೆದೀತು...

ಶುಭವಾಗುವುದೆಂದರೆ ಯೆದೆಯ ದುರ್ಬೀನಿನಿಂದ ಯೆಲ್ಲೆಡೆಯೂ ಶುಭವನೇ ಕಾಣುವುದು...
ಶುಭದಿನ... 🤝🫂

ಶುಭ ನುಡಿಯೆ
ಬೆಳಕೆಂಬೋ ಶಕುನದ ಹಕ್ಕಿ
ಯೆದೆಯಂಗಳದಿ ಅರಳದೇ
ನಗೆ ಮುಗುಳ ಚಿತ್ತಾರ ಚುಕ್ಕಿ...
ಕೊರಳ‌ ಬಳಸುವ ಪ್ರೀತಿ ಹೂವಿನ ಘಮ - ಬೆಳಗು...
ಶುಭದಿನ... 🤝🫂

ಮನದ ಮೋಹದ ತಾಪದಲಿ ಮುಸುಕಿನೊಳಗೆ ಮೈಯ್ಯಿ ಮೈಯ್ಯ ಕಡೆದು ಉಸಿರ ಅಗ್ಗಿಷ್ಟಿಕೆ ಹಚ್ಚಿ ಮೂರೂ ಲೋಕವ ಮರೆಯದೇ ಈ ಮಾಗಿಯ ಬಾಗಿಲ ದಾಟುವುದಾಗದು ಅನ್ನಿಸುವ ಹೇಮಂತದ ಮುಂಜಾವು...
ತಂಗಾಳಿಯೆಡೆಗೆ ಹುಸಿ ಕೋಪ ತೋರಿ ಹಸಿ ಬಿಸಿ ಕನಸು, ನೆನಪು, ವಿರಹ, ಪ್ರೇಮಗಳ ತಬ್ಬುವ ಪಡ್ಡೆ ಪ್ರಣಯೀ ಬೆಳಗು...
ಶುಭದಿನ... 🤝🫂

ಪ್ರೇಮ ಕಲಹದ ಕತ್ತಲನು ಪ್ರಣಯ ದೊಂದಿಯಲಿ ಕರಗಿಸಿ ಮಾಗಿ ಛಳಿಯನು ಸಲೀಸು ಗೆದ್ದು,
ಹೊದ್ದು ಮಲಗಿದ ನಿನ್ನನು ಬದಿ ಸರಿಸಿ ಹಗಲಾಯಿತೆಂದು ಎದ್ದು ಬರುವುದು ಬಲು ಸಾಹಸವೇ ಜೀವವೇ...
ಇದು -
ಮಾರ ತಾ ಒಂಟಿ ಪಡ್ಡೆಗಳ ಕೆಣಕಿ ಕುಹಕದಿ ನಗುವ ಥಂಡಿ ಥಂಡಿ ಕಾಲದ ಬೆಳಗು...
ಕೇಳು -
ನಿನಗೆ ನಾನು ನನಗೆ ನೀನು ಛಳಿಯ ಕಾಲದ ಮಲೆಕಾನ ಜೇನು...
ಶುಭದಿನ... 🤝🫂

ಬೆಳಗು ಧರೆಗಿಳಿದಂತೆ
ಬೆಳಕು ಎದೆಗಿಳಿಯಲಿ...
ತೆನೆಗಟ್ಟಲಿ ನಗೆಯು ಕಣ್ಣಲಿ
ಕೆನೆಗಟ್ಟಲಿ ಪ್ರೀತಿ ಯೆದೆಯಲಿ...
ಶುಭದಿನ... 🫂🤝

ಶುಭ ಸುರಿಯೇ ಬೆಳಕಿನ ಕಿಡಿಯೇ
ಬೆಳಗು ಉತ್ಥಾನವ ಸಾರಲಿ...
ಪ್ರೀತಿಯ ತಾಯ್ಬೇರು ಎದೆಗಿಳಿಯಲಿ...
ನಗೆಯ ಬಣ್ಣ ಬೆಡಗಿಗೆ ಕಣ್ಣರಳಲಿ...
ಶುಭದಿನ... 🫂🤝

ಪ್ರೀತಿ ಹೆಗಲನಾತು ಬೆಳಕಿಗಭಿಮುಖವಾಗಿ ನಗೆಯ ನೂರು ನೂರಾರು ತೀರಗಳನೆಲ್ಲ ಮೆಲ್ಲ ಅಲೆವ ಹಂಬಲದ ಸವಿ ಹಗಲು...
ನೀನೆಂಬ ಶುಭದ (ಬಿ)ಹಸಿ ಕನಸನುಣಿಸುವ ಛಳಿ ಛಳಿಯ ಮುಂಜಾವು...
ಶುಭದಿನ... 🫂🤝

ಬೆಳಕು ಬಾಗಿಲಿಗೆ ಬಂದಾಗ ಮತ್ತೇಂತಾ ಶುಭವ ಹುಡುಕುವುದು...
ಬೆಳಕೇ ಸ್ವತಃ ಅಸೀಮ ಶುಭವಹುದು...
ಬೆಳಕೊಂದು ನಗೆಯ ಹಾಯಿ - ಬೆಳಗಿಗೊಂದು ನಗೆಯ ಹಾಯ್...
ಶುಭದಿನ... 🤝🫂

ಹುಡುಕಿ ಹೊರಟ ಪ್ರೀತಿ ಪಡಿ ಬಾಗಿಲಿಗೇ ಬಂದಂತೆ ಬೆಳಕಿಳಿದು ಬರುವುದು - ಹಂಗೆ ಬೆಳಗಾಗುವುದು...
ನಗೆಯ ಮುಡಿ ಕೊಟ್ಟು ಬೆಳಕ ಯೆದೆಗೆ ಬರಮಾಡಿಕೊಳ್ಳುವುದು - ಅಂದ್ರೆ ಪ್ರೀತಿಗೆ ಪ್ರೀತಿಯನೇ ಕೊಟ್ಟು ಎದೆ ತುಂಬಿಕೊಳ್ಳುವುದು...
ಶುಭದಿನ... 🫂🤝

ಬೆಳಗನು ಕುರಿತು ನಾ ದಿನಾ ಬರೆವ ಸಾಲುಗಳಲಿ ಬೆಳಕನು ಹುಡುಕಲು ಹೋಗಿ ಹೀನಾಮಾನ ಸೋಲುತ್ತೇನೆ...
ಮತ್ತೆ
ನನ್ನೆಲ್ಲಾ ಬಡಬಡಿಕೆಗಳ ಕೆನ್ನೆ ಹಿಂಡಿ ನೀ ಬೀರುವ ಕಕ್ಕುಲಾತಿಯ ನಗುವಲ್ಲಿ ಆಹಾ! ಬೆಳಕು ಸಿಕ್ಕಿತೆಂದು ಬೀಗುತ್ತೇನೆ...
ಹಾಗೇ
ಬೆಳಗೆಂದರೂ, ಬೆಳಕೆಂದರೂ ನಗುವಲ್ಲದೇ ಮತ್ತಿನ್ನೇನೆಂದು ಯಾರೂ ಕೇಳದ ಪ್ರಶ್ನೆಗೆ ನಾನೇ ಉತ್ತರಿಸಿ ಬೆನ್ತಟ್ಟಿಕೊಳ್ತೇನೆ...
ನಿನ್ನ ನಗು - ನನ್ನ ಬೀಗು - ಚಂದ ಬೆಳಗು...
ಶುಭದಿನ... 🫂🤝

ಕಂದಾ -
ಬೆಳಕು, ಬೆಳಗಾಯಿತೇಳೂ ಅನ್ನುತ್ತಾ ಸುಮ್ನೆ ಒಳಬರುತ್ತೆ ಅಷ್ಟೇ...
ಹಾಗೆ ತೆರೆದಿಟ್ಟ (ಯೆದೆ) ಕಿಟ್ಕೀ, ಬಾಗ್ಲೂ, ಸಂದಿಗೊಂದಿಯಿಂದೆಲ್ಲ ಒಳತೂರಿ ಬರೋ ಬೆಳಕಿನ ಹೆಗಲ ಬಳಸಿ ನಾವು ಹೊರಗಡಿಯಿಟ್ಟು ನಮ್ನಮ್ಮ ಹಂಬಲದ ಶುಭವನು ನಾವ್ನಾವೇ ಗೆದ್ದು ತಂದು ಪಳಗಿಸಿಟ್ಕೋಬೇಕು...
ಬೆಳಗೆದ್ದು ಬೆಳಕೆಂಬ ಮುಫತ್ತು ಶುಭದ ಹೆಗಲೇರಿ ಉಳ್ಕಿ ಎಲ್ಲಾ ತುಟ್ಟೀ ಶುಭಗಳ ಕಾಣ್ಬೇಕು...
ಎದ್ದೇಳು - ಬೆಳ್ಗಾತು...
ಶುಭದಿನ... 🤝🫂

ಜಗದ ಜೀವ ಜಾಲಕೆಲ್ಲ ಮುಫತ್ತಾಗಿ ಪ್ರೀತಿ ಹಂಚೋ ಕಾರುಣ್ಯದ ಜಾಡು - ಬೆಳಗು...
ಅದೇ ಬೆಳಕನು ಕುಡಿದು ಬೆಳೆದ ಶಿಶುವೇ ಆದರೂ, ಕೊಟ್ಟು ಕೊಟ್ಟು ಸೋತೆನೆಂದು ಬೀಗುವ, ಇಷ್ಟು ಕೊಟ್ಟು ಅಷ್ಟು ಬೇಕೆನ್ನುವ ಕಟ್ಟುನಿಟ್ಟು ಲೆಕ್ಕಾಚಾರದ ಭಂಡ ವ್ಯಾಪಾರ ನನ್ನ ಹಾಡು...
ಕಲಿಸೋಕೆ ನಿಂತದ್ದು ದೇವರೇ ಆದರೂ ಕಲಿಯುವುದು 'ನಾನೇ' ಆದಾಗ ಕಲಿಕೆ ಸುಲಭವಲ್ಲ - ಅಲ್ಲಿಗೆ, ಹೂಗಿಡವ ನೆಟ್ಟೆಯಾದರೂ ನೀ ಹೂವಾಗಲಾರೆ ಎಂದ ಬೆಳಕು...
ಸುಳ್ಳೇ ಹಠವ ಬಿಟ್ಟು ಬಾಳೆನ್ನುವ ಪ್ರೀತಿ ಪಾಠ ಬೆಳಗು...
ಶುಭದಿನ... 🤝🫂

2026 -
ಪುಟ ತಿರುವಿಕೊಂಡ ದಿನದರ್ಶಿಕೆ ನಿನ್ನೆಗಳ ಅಶುಭದ ಕಿಡಿಗಳನೆಲ್ಲ ಅಲ್ಲಿಯೇ ಕೊಡವಿಕೊಂಡು, ಹೊಸತೇ ಶುಭದ ಮುಹೂರ್ತಗಳನಷ್ಟೇ ಮೈದುಂಬಿಕೊಂಡು ನಗಲಿ...
ಶುಭ 'ವರ್ಷ'ವಾಗಲಿ...
ಮುದವಾಗಿ ನಕ್ಕುಬಿಡಿ - ಹದವಾಗಿ ಹರವಿಕೊಂಡ ಬೆಳಕ ನಗೆಯ ಮುನ್ನುಡಿಯಾಗಲೀ ಮೊದಲ ಹಗಲು...
ಶುಭದಿನ - ಶುಭಾಶಯ... 🤝🫂

ಹಂಚಿಕೊಂಡು ಪ್ರೀತಿ ಹುಗ್ಗಿ
ಸುತ್ತೆಲ್ಲ ನಗೆಯ ಸುಗ್ಗಿ...
ಯೆದೆಯ ಕುಂಭದಿ ತುಂಬಿ ಬೆಳಕು
ಸಗ್ಗ ಸಂಪದ ಸಂಕ್ರಾಂತಿ...
ಆಗಲಾಗಲಿ ಪ್ರೀತಿ ನಗೆಯ ಪರ್ವಕಾಲ
ಎಳ್ಳು ಬೆಲ್ಲದ ರುಚಿಯ ಬೆಳಗು...
ಶುಭದಿನ - ಶುಭಾಶಯ... 🍬🍫

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು... :) 

Saturday, February 7, 2026

ಗೊಂಚಲು - ನಾಕ್ನೂರೆಂಬತ್ತಾ ಒಂದು.....

ಸಾವಿತ್ರೀಽಽಽ........
ಇಂದಿನದು ನಿನ್ನ ಹುಟ್ಟಿನ ತೇದಿಯಂತೆ - ಹುಟ್ಟಾಗಿ, ಬದುಕಾಗಿ, ಸಾವಾಗಿ ನಿನ್ನ ಘನತೆಯ ನೆನಪಷ್ಟೇ ಈಗ ನನ್ನ ಗಳಿಕೆ, ಉಳಿಕೆ... 

ಶಣ್ಣಿ -
ನನ್ನ ಜ್ವರದ ರಾತ್ರಿಗಳಲಿ ಘಳಿಗೆಗೊಮ್ಮೆ ಎದ್ದು ಜಗ್ಳಿಗೆ ಬಂದು ನಿದ್ದೆ ಹೋಗಿದಾನಾ ಇಲ್ವಾ ಅಂತ ಇಣುಕಿ ನೋಡಿ ಹೊದಿಕೆ ಸರಿಮಾಡಿ ಸಮಾಧಾನಗೊಳ್ಳುತಿದ್ದ ಪಾಪದ ಹುಡ್ಗಿ; ಈಗ ತಾಸಿಗೊಮ್ಮೆ ನಾನೆದ್ದು ಗೊಣಗುತಿದ್ದರೂ ಕೇಳದವಳ ಹಂಗೆ ಗೋಡೆ ಮೇಲೆ ಚಿತ್ತಾರದ ಚಿತ್ರವಾಗಿ ನಗ್ತಿದಾಳೆ...
ಪಾಪ ನಾನು - 
ಎಷ್ಟು ಜನುಮದ ಪಾಪ ಬಾಕಿ ಇದ್ಯೋ ತೊಳೀಲಿಕ್ಕೆ; ಅವಳೂ ತೊರೆದು, ಜವನೂ ಮರ್ತು ಮತ್ತೂ ಬದುಕು ಸವೆಸಲಿಕ್ಕೆ...
ಸಾವಿತ್ರೀ -
ಮನಸು ಸೋತು ಶೀತಲವಾದಾಗಲೆಲ್ಲಾ ನಿನ್ನ ನೆನಪಿನ ಕಾವು ಹೆಚ್ಚು ನೋಡು...
ಮೊನ್ನೆ ಯಾವತ್ತೋ ನೀ ಮಣ್ಣಾದ ಜಾಗಕ್ಕೆ ಹೋಗಿದ್ದೆ ಕಣೇ - ನಿನ್ನ ಗುರುತಾಗಿ ನೆಟ್ಟ ಕಲ್ಲು ಹಂಗೇ ಇದೆ...
ಹೇಳೇ - 
ಸಾವಾಗುವುದೆಂದರೆ ಇಲ್ಲಿನೆಲ್ಲಕೂ ಕಲ್ಲಾಗುವುದಾ...!!! 
ಆದ್ರೂ -
ನಿನ್ನ ಧ್ಯಾಸ ಕಾಯುವಾಗ ನನ್ನ ಜೀವ, ಭಾವ ಕಲ್ಲಾಗುವುದು ಹೇಗೇ... 
___ ನೀ ಪ್ರಾರ್ಥಿಸಿದಂಗೇ ಇರಲಿ ನನ್ನ ಬದುಕು... 
&&&

ಪ್ರೀತಿಯೊಂದನೇ ಬಾಳಿ ಬದುಕಿದ ಮಡಿಲು ನೀನು... 
ಪ್ರೀತಿಯನ್ನೂ ಪ್ರೀತಿಯಿಂದ ಹೇಳಲು ಬಾರದ ಹೆಡ್ಡ ನಾನು... 
ಮೌನದಲೇ ಮನದ ನೂರು ಕಂಗಾಲುಗಳ ನುಂಗಿ ಮಂದಹಾಸವ ಜೀವಿಸಿದಾಕೆ ನೀನು...
ಸಾಮಾನ್ಯ ಮೌನವನೂ ಭರಿಸಲಾಗದೇ ಭಂಡಬಿದ್ದು ಬಡಬಡಾಯಿಸುವ ಖಾಲಿಪೀಲಿ ಬಡಾಯಿ ನಾನು...
ನನ್ನ ಐಬುಗಳನು ಜಗದ ಕಣ್ತಪ್ಪಿಸಿ ಮಡಿಲಲ್ಲಿ ಮಡಚಿಟ್ಟು ಕಾಳಜಿಯಿಂದ ಸರಿದೂಗಿಸಲು ನೀನೂ ಇಲ್ಲದ ಈ ಹೊತ್ತನು ಸಲೀಸು ಹಾಯುವುದು ಹೇಗೆ ಹೇಳು... 
ನಿನ್ನ ಹರಿದ ಹಳೆ ಸೀರೆಗಳನು ಹಾಸಿ ಹೊದ್ದು ಮಲಗಿ ನಿದ್ದೆಗೆ ಮಡಿಲ ಕಂಪನುಣಿಸಬಹುದಷ್ಟೇ - ಆದ್ರೆ, ಕಾಣೋ ಕನಸಿಗೆ ಒಡಲ ಭದ್ರತೆಯ ಕರುಳ ಕಾರುಣ್ಯದ ಸೂತ್ರವನೆಲ್ಲಿಂದ ತರಲೇ...
ಭಟ್ರಿಗೆ ಆಟಿಕೆಯ ದೋಣಿಯನು ದಾನ ಕೊಟ್ಟು ನಿನ್ನನು ವೈತರಣಿಯ ದಾಟಿಸಿದೆ ಅಂದುಕೊಂಡು ನನ್ನ ಬದುಕಿನ ಹುಟ್ಟನು ಕಳಕೊಂಡ ಕರ್ಮ ನನ್ನದು...
____ ಈ ಬಯಲ ಬಿಸಿಲಿಗೆ ನಿನ್ನ ನೆನಪ ನೆರಳಷ್ಟೇ ಸಾಲುತಿಲ್ಲ ಕಣೇ... 
&&&

ನೀನಿಲ್ಲಾ ಅನ್ನೋ ನೋವೂ ಖಾಲಿಯಾಗಿಬಿಟ್ಟರೇ ಎಂಬ ಭಯದಲ್ಲೇ ನಿನ್ನ ನೆನೆಯುತ್ತೇನೆ - ನೀನಿಲ್ಲದ ಈ ಹಾದಿಯ ಧೂಳಲ್ಲಿ ಹೂತಿರುವ ಹಕ್ಕಳೆದ್ದ ನಗುವನ್ನು ಹೆಕ್ಕುವಾಗ... 
___ ಭಂಡ ತುಂಡು ಬದುಕಿಗಾಗಿ... 
&&&

ತುಂಬಾ ನೋವಿನಲ್ಲಿದ್ದೆ - ನಗುವನ್ನು ಬೆಳೆದುಕೊಳ್ಳದೇ ಬದುಕನ್ನು ಕೊಂದುಕೊಂಡರೆ ದೇವರು ಮೆಚ್ತಾನಾ, ಎದ್ದು ಕಣ್ಣು ತೊಳಕೊಂಡು ಮುಂದಿಂದೇನೋ ನೋಡು ಹೋಗು ಅಂದ್ಳು ತಲೆ ಸವರಿ... 
ಸಾವಿನ ಮನೇಲೂ ನಗ್ತಾ ಕೂತಿದ್ದೆ - ಅಳುವನ್ನು ಮರೆತು ಕಲ್ಲಾಗ್ಬೇಡ್ವೋ, ದೇವ ಮೂರುತಿಯೂ ಬರೀ ಶಿಲೆಯಷ್ಟೇ ಅನ್ನಿಸಿದರೆ ಹಳಿಯಲೊಂದು ನಾಮವೂ ಇಲ್ಲದಂತಾಗಿ ನಾಳೆಗೆ ನಗು ಅನಾಥವೆನಿಸಿ ಮನ್ಸಿಗೆ ಭಾಳಾ ಸುಸ್ತಾಗುತ್ತೆ ಕಣೋ ಅಂತಾಳೆ ಹೆಗಲು ತಬ್ಬಿ... 
____ ಅಳುವ ಅಳಿಸಲು ನಗಬೇಕು - ನಗುವ ಉಳಿಸಲೊಮ್ಮೆ ಅಳಬೇಕು... 
&&&

ಬದುಕು ಎದುರಿಗಿಡುವ ನೂರು ನೋವುಗಳಿಗೂ ಹುಡುಕಿದರೆ ತುಸು ದೂರದಲ್ಲಾದರೂ ಒಂದಿಲ್ಲೊಂದು ನಿವಾರಕ ಮದ್ದಿದೆ ಅಥವಾ ಮರೆಸುವ ನಶೆಯಿದೆ; ಹಲ್ಮೊಟ್ಟೆ ಕಚ್ಚಿ ಸಾವರಿಸಿಕೊಂಡು ಎದ್ದು ನಿಂತರೆ ಮಗ್ಗುಲಲ್ಲೆಲ್ಲೋ ಒಂದು ನಗೆಯ ಜಾಡಿದೆ - ಕಾರಣ, ಹಂಗೋ ಹಿಂಗೋ ಬದುಕಿನೊಂದಿಗೆ ಅಲ್ಲೊಂದು ತಂತು ಕಡಿಯದ ಒಡನಾಟವಿದೆ... 
ಆದರೆ, 
ಕರುಳಿಗೆ ಹತ್ತಿರದ ಸಾವು ತಂದಿಡುವ ಸ್ಥಬ್ದತೆಗೆ, ಅದು ಮುಂದಿಡುವ ನಿರ್ವಾತಕ್ಕೆ, ಅರ್ಥವೇ ಆಗದ ಅಥವಾ ಅರ್ಥವೇ ಇಲ್ಲದ ಅಪರಾಧೀ ಭಾವವೊಂದು ಕಾಲವೂ ಕಾಡಿ ಹಿಂಡುವ ಹತಾಶೆಯನು ನಿವಾಳಿಸುವ ಯಾವ ಕಷಾಯವೂ ಇಲ್ಲ, ಕಾಷಾಯದಲೂ ಅದಕೆ ಉತ್ತರವಿಲ್ಲ; ಏನೇ ಸುಳ್ಳು ಸಮಾಧಾನಗಳ ಹೆಣೆದರೂ ಕರುಳ ಉರಿ ಪೂರಾ ಆರುವುದೇ ಇಲ್ಲ - ಕಾರಣ, ಸಾವಿನೊಂದಿಗೆ ಸಾಂಗತ್ಯದ ಸಂವಹನವೂ ಸ್ವರ್ಗಸ್ಥವೇ... 
____ ಕರುಳ ಕೋಶಕ್ಕಂಟಿದ ಚಿತಾ ಭಸ್ಮವ ಕಣ್ಣ ಹನಿಯ ಹೊಳೆಯೂ ತೊಳೆದೊಯ್ಯುವುದಿಲ್ಲ... 
&&&

ನನ್ನಲ್ಲಿ
ಕಳಚಿ ಹೋದ ಅವಳ ಮಮತೆಯ ನೆನಪೂ ಸತ್ಯ 
ಕೂಡಿಯಾಡೀತೆಂಬ ಇವಳ ಮೋಹದ ಕನಸೂ ನಿತ್ಯ 
ಎರಡೂ
ಎನ್ನ ಉಸಿರ ದೀಪವ ಜೀವಂತವಿಟ್ಟ ಈ ಬದುಕಿನ ಕಾರುಣ್ಯದ ಬೊಗಸೆಗಳು... 
ಹಾಗೆಂದೇ 
ನಾ ನೆನಕೆಗಳ ಬೆನ್ನಿಗಾತುಕೊಂಡು ಕನಸುಗಳ ತಬ್ಬಿ ಸುಖಿಸುತಿದ್ದರೆ
ಇಳಿವ ಕಣ್ಣ ಹನಿಯು 
ಯೆದೆಯೊಡೆದ ಗಾಯದ ಹೈಣವಾ ಅಥವಾ ಯೆದೆಗೆದೆ ತೀಡಿ ಮೆರೆದ ಬೆಮರಿನ ಲಾಸ್ಯವಾ ಯೆಂದೆನ್ನ ಕೇಳಬೇಡಿ...
ಇಲ್ಕೇಳೀ -
ನೆನಹು ಕಾಡದ, ಸ್ವಪ್ನ ಕೂಡದ ದಿನವೊಂದಿದ್ದರೆ
ಆ ಕೊನೇಯ ಶುಭ ದಿನ
ನಾ
ಅವಳೊಡಲ ಮತ್ತೆ ಸೇರಿದೆನೆಂದು ಬಗೆಯಿರಿ... 
ಮತ್ತು 
ಶ್ರದ್ಧಾಂಜಲಿಯ ಮೌನದಲಿ ನನ್ನ ಹೆಸರಿನ ನಗುವೊಂದ ಮೆತ್ತಿಕೊಳ್ಳಿ...

ಮತ್ತೇನಿಲ್ಲ 
ಜಗದ ಹುಚ್ಚುಗಳೆಲ್ಲಾ ತುಸು ಹೆಚ್ಚೇ ನನ್ನಲ್ಲಿ... 
ಅವಳ ದೇವರ ಹುಚ್ಚುಗಳಿಗೆ ಸಾಲು ಸಾಲು ಸವಾಲು 'ನಾನು...' 
&&&

ಕಳೆಕಳೆಯಾದ ಅವಳ ನಗುವಿತ್ತು
ಮತ್ತಾಗ
ಬಡವನ ಮನೆಗೂ ಜೀವವಿತ್ತು... 
ಸೂತಕದ ಕಳೆಯೀಗ ದೇವರ ಪೀಠಕೂ
ಮತ್ತವಳ
ಮಡಿಲ ಕಳಕೊಂಡ ಬಾಗಿಲ ಬೀಗಕೂ... 
"ಹತ್ತಾರು ಪ್ರಸಾದನಗಳಿಂದಲ್ಲ ಮನೆ ಚಂದವೆನಿಸುತಿದ್ದದ್ದು - ಒಳಹೊರಗಾಡುವ ಅವಳ ಪ್ರೀತಿ ಸರಬರವೇ ಮನೆಯನು ಚಂದವಿಟ್ಟದ್ದು; ಅವಳ ಮಮತೆಯೇ ಮನೆಗೆ ನೂರು ಸಿರಿ ಸಿಂಗಾರ ಅಲಂಕಾರ ಕೊಟ್ಟದ್ದು" ಎಂಬುದೆನಗೆ ತಿಳಿಯಲು ಅವಳು ಮಸಣವ ಮನೆ ಮಾಡಿಕೊಳ್ಳಬೇಕಾಯಿತು... 
ಈಗ
ಕಳೆಸತ್ತ ಅಂಗಳದಲಿ ಕಣ್ಮುಚ್ಚಿ ನಿಂತ ಎನಗೆ ಖಾಲಿ ಕೊಟ್ಟಿಗೆಯಲಿ ಅವಳು ಕರುವಿನೊಂದಿಗೆ ಗೊಣಗಿದಂಗೆ ಕೇಳಿಸಿದರೆ ನಾನಿನ್ನೂ ಜೀವಂತ... 
____ ಸಾವಿತ್ರೀಽಽಽ........ 

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು... :) 

Friday, January 30, 2026

ಗೊಂಚಲು - ನಾಕ್ನೂರೆಂಬತ್ತು.....

ಸುಡುಗಾಡಿನ ಬೆಂಕಿ ಉರಿಯ ಬೆಳಕು ನನ್ನ ಮಾತು.....

ಬುರುಡೆ ತುಂಬಾ ತುಂಬಿಕೊಂಡ ಬುಡುಬುಡುಕೆಗಳೆಲ್ಲ ಖಾಲಿಯಾಗಲೆಂದು ಬರೆಯುತ್ತಾ ಹೋದೆ - ಕಳೆಕಳೆಯಾಗಿ ಎನ್ನೆದೆಯ ಕಣಜವ ತುಂಬಿಕೊಂಡ ನಸುನಗುವಿನ ರಾಶಿಯೆದುರು ಎನಗೇ ತುಂಬು ಬೆರಗು ಈಗ...
ನಿನ್ನೊಳಗೆ ನೀನು ಬೆಳಗುವಾಗಲೆಲ್ಲ ಮಗುವಾಗುತೀಯ ಅಂದಿದ್ದಳು ಆಯಿ - ಹಂಚುತ್ತಾ ಮಗುವಂಗೆ ನಗೆಬೆಲ್ಲ...
ನನ್ನೆದುರು ನಾನೇ ನಗುತ್ತ ನಿಂತದ್ದು ಕನಸಲ್ಲವಲ್ಲ...!!
ಬೆರಳ ಹಿಡಿದು ನಡೆದು ಬಂದ ಪ್ರೀತಿ ಗಂಧ... 
ಉಸಿರಿಗಂಟಿದ ನೆರಳ ಹಾಡು...
___ ಪ್ರೀತಿಯ ನೆನಪುಗಳ ಸೃಷ್ಟಿಸಿಕೊಳ್ಳಬೇಕು ಪ್ರೀತಿಯಿಂದ... 

ನಿನ್ನೆ ಮೊನ್ನೆಯಷ್ಟೇ ಹದಿನಾಕು ತುಂಬಿತು ಇಲ್ಲಿನೀ ಅಕ್ಷರ ಸಾಂಗತ್ಯಕ್ಕೆ - ಪಾವನ ಪಯಣಕ್ಕೆ... 
ತೇದಿ 25 ಜನವರಿ 2026ಕ್ಕೆ... 

ನನ್ನಲ್ಲಿ ಹೊಸತಾಗಿ ಬರೆಯಲು ಏನೂ ತೋಚದೇ ಇರುವಷ್ಟು ಬುದ್ಧಿ ಬರಡಾದಾಗಲೂ, ಹಳೆಯ ಪಾಡನ್ನೇ ಹೊಸ ರೂಪರಾಗದಲಿ ನೆನೆನೆನೆದು ಹಾಡಿ, ಹೊಸತೇ ಆಗಿ ನಗುವಾಗಿ ಬೆರೆತು, ಯೀ ಯೆದೆಯ ಭಾವಾಭಿಮಾನ/ಭಾವಾತಿರೇಕಗಳಿಗೆ ಜೊತೆಯಾದ ಅಕ್ಷರ ಪ್ರೀತಿಯ ತಂತುಗಳಿಗೆಲ್ಲ ನನ್ನ ಪ್ರೀತಿ ಪ್ರೀತಿ ಪ್ರೀತಿ... 💞🤝🫂
&&&

ವತ್ಸಾ -
ನಿನ್ನ ನೀನು ಕಳೆದುಕೊಂಡು ಕಂಗಾಲಾದಾಗ 'ಅಯ್ಯೋ ಮಂಗಾ ಇಲ್ಲೇ ಇದೀಯೋ' ಅಂತಂದು ತೋಳು ತಿವಿದು ತಬ್ಬಿ ಯೆದೆ ಬಡಿತದ ಮಿಡಿತಗಳ ದಾಟಿಸಿ ಜೀವದುಂಬಿ ನಗಲು/ನಗಿಸಲು ಒಂದೇ ಒಂದು ಬೆಚ್ಚಾನೆ ಹೆಗಲಿದ್ದರೂ ನಿನ್ನೀ ಬದುಕಿಗೆ ಜೊತೆಯಾದಂತೇ ಲೆಕ್ಕ ನೂರು ಸಿರಿ ಸಂಪದ...
___ ನೇಹ ನಾಲೆ...
&&&

ನಿತ್ಯವೂ -
ನಗು ಕನಸಾಗಿ ಯೆದೆಯ ಕಾಡುತ್ತದೆ... 
(ಸಾ)ನೋವು ನೆನಪಾಗಿ ಕರುಳ ಕದಡುತ್ತದೆ... 
___ ಕಣ್ಣ ಹನಿಯ ಹಾಡುವಾಗ ಭಾಷೆ ಬಡವಾಗುತ್ತದೆ... 

ಕೇಳಿಲ್ಲಿ -
ನಗುವಾಗ ನೂರು ಅಲಂಕಾರಗಳ ಹೆಣೆಯುವ ರಸಿಕ ನಾಲಿಗೆ, ನೋವಿನೆದುರು, ಸಾವಿನೆದುರು ಪದಗಳ ಮರೆತು ಸ್ಥಬ್ದವಾಗುತ್ತದೆ... 
___ ಅಳುವಿಗೆ ವಾರಸಿಲ್ಲ - ಕರುಳಿನ ಗಾಯಕ್ಕೆ ಕಾಲನೂ ಮದ್ದು ಕೊಡಲ್ಲ... 
&&&

ಸುಡುಗಾಡಿನ ಬೆಂಕಿ ಉರಿಯ ಬೆಳಕು ನನ್ನ ಮಾತು... 

ತುಂಬಾ ಬದಲಾಗಬೇಕಿತ್ತು, ಬದಲಾಗಬೇಕಿದೆ - ಬದಲಾಗಲಾಗದೇ ಬಾಕಿ ಉಳಿದೆ... 
___ ನಿಮ್ಮಿಂದ ಮೊಗೆಮೊಗೆದು ಪಡೆದ ಪ್ರೀತಿ ಮತ್ತು ನಿಮ್ಮಗಳಿಗೆ ನಾನೆತ್ತಿ ಕೊಟ್ಟ ನೋವು ಎರಡೂ ನೆನಪಲುಳಿಯಲಿ ಎನಗೆ... 
&&&

ಅಲ್ಲಾ -
ಏನೂ ಕೊಡದೆಯೂ ಎಲ್ಲ ಸಿಗತ್ತೆ ಕೆಲವರಿಗೆ... 
ಏನು ಹೇಳೋಣ ಎಲ್ಲ ಕೊಟ್ಟೂ ಏನೂ ಸಿಗದ ಪಾಪದ ಕೈಗಳಿಗೆ... 
ಪಡೆದೂ ಪಡೆದೂ ಹಿರಿದಾಗದ ರುದಯ... 
ಕೊಟ್ಟೂ ಕೊಟ್ಟೂ ಬರಿದಾಗದ ಕರುಳು...
___ ನಿಮ್ಮ ದೇವರ ಕಾಟಾ ಸರಿ ಇಲ್ಲ ಬಿಡಿ... 
&&&

ಶ್ರೀ -
ಮಾತಿನಿಂದ ಕಟ್ಟಿದ ಸೇತುವೆಯ ಮಾತೇ ಮುರಿದು ಮುಕ್ಕಿತ್ತು... 
___ ಮೌನವು ಮಸಣ ಅಂದ ನಿನ್ನ ಮುಸುಡಿ ನೋಡಬೇಕೀಗ... 

ವತ್ಸಾ -
ಸ್ವಾಭಿಮಾನ, ಸ್ವಾನುಕಂಪಗಳ ಗೆರೆ, ಅರ್ಥ ವಿಸ್ತಾರಗಳ ಅರಿವಾಗುವುದು ತುಂಬಾ ತಡವಾಗಿಬಿಟ್ಟರೆ..... 
ಹಿಂತಿರುಗಿ ನೋಡಿದರೆ ಕಳೆದುಕೊಂಡದ್ದರ ಲೆಕ್ಕ ಸಿಗೂದು ಕಷ್ಟ... 
___ ವಿವೇಕವ ಚಿಂತೆ ಮಣಿಸಿದರೆ.... 
&&&

ದೇವರೇ -
ನಾನು ನೀನಾಗುವ ಸ್ಪರ್ಧೆಯಲಿಲ್ಲ;
ಹೋಗಲಿ,
ನಿನ್ನ ಹೊಂದುವ ಓಟದಲೂ ಇಲ್ಲ... 
ಅದಕೇ,
ಈ ಉಸಿರ ಋಣ ತೀರುವವರೆಗೂ 
ಇಲ್ಲಿನ್ಯಾವ ಭಂಡ ಬಡಿವಾರಗಳ ಬಗೆಗೂ 
ಇನಿತೂ ತಕರಾರುಗಳಿಲ್ಲ... 
___ ನನ್ನ ಸಂಗದಲಿ ನಾ ನಿತ್ಯಸುಖಿ... 
&&&

ಪ್ರಾಮಾಣಿಕತೆ ಕಷ್ಟವಲ್ಲ... 
ಆದರೆ,
ಸಂತೆಯಲಿ ನಿಂತು ತನ್ನ ಶುದ್ಧತೆಯನು ರುಜುವಾತುಪಡಿಸಬೇಕಾದ ಅದರ ಅಸಹಜ ಅನಿವಾರ್ಯತೆ ಇದೆಯಲ್ಲ, ಅದು ಬಲು ಕಿರಿಕಿರಿಯ ಸಂಗತಿ... 
___ ಗುಲಗಂಜಿಯೊಡನೆ ಚಿನ್ನ ವಾದಕಿಳಿಯಬಾರದೇನೋ... 
&&&

ಬೆತ್ತಲಾಗುವುದು ಸುಲಭ -  
ಹಾಂ, ಬೆತ್ತಲಾಗುವುದು ತುಂಬ ಸುಲಭ ಸುಳ್ಳಿಗೆ... 
ಗೂಡು ಅದರದ್ದು ಕತ್ತಲಲ್ಲವಾ...

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು... :)