Wednesday, January 25, 2012

ಗೊಂಚಲು - ಇಪ್ಪತ್ತಾರು....

ಅಕ್ಷರ ಸಂಹಾರಕ್ಕೀಗ ಒಂದು ಸಂವತ್ಸರ...


ಸ್ನೇಹಿತರೇ -


ಬರವಣಿಗೆ ಗೊತ್ತಿಲ್ಲ - ಆದರೆ ಅಕ್ಷರ ವ್ಯಾಮೋಹಿ ನಾನು...
ಓದು ನನ್ನ ಆಸಕ್ತಿ - ಆದರೂ ಅಷ್ಟೊಂದು ಓದಿಕೊಂಡಿಲ್ಲ...
ಮಾತೆಂದರೆ ಅತಿ ಪ್ರೀತಿ - ಹಾಗಂತ ಒಳ್ಳೆಯ ಮಾತುಗಾರನೇನಲ್ಲ...

ಕಾವ್ಯವಂತೆ - ಕವನವಂತೆ...
ಗದ್ಯವಂತೆ - ಪದ್ಯವಂತೆ...
ನವ್ಯವಂತೆ - ನವೋದಯವಂತೆ...
ಇನ್ನೂ ಏನೇನೋ ವಿಧವಿಧದ ವಿಚಾರಗಳಂತೆ - ಎಲ್ಲ ಸೇರಿ ಸಾಹಿತ್ಯವಂತೆ...
ಆದರೆ ಅವೆಲ್ಲ ನನ್ನ ಬುದ್ಧಿಯ ನಿಲುಕಿನವಲ್ಲ.


ಬದುಕಿನ ವಿಚಿತ್ರ ವೈರುಧ್ಯಗಳು - ಸಾವಿನ ನಿಗೂಢತೆ - ಪ್ರಕೃತಿಯ ಹರಹು ಮತ್ತು ಚೆಲುವು - ಓದಿದ ಓದು - ನೋಡಿದ ನೋಟ - ಯಾರು ಯಾರೋ ನೀಡಿದ ನಿಷ್ಕಾರಣ ಒಲವು - ಬದುಕು ಕರುಣಿಸಿದ ವೈವಿಧ್ಯಮಯ ಅನುಭವಗಳೆಲ್ಲ ಸೇರಿ ಮನದಿ ಗಿಜಿಗುಡುವ ಭಾವಗಳಾಗಿ ರೂಪು ತಳೆದು - ಒಳಗೆ ಭಾವಗಳ ಒತ್ತಡ ತಾಳದಾದಾಗ - ಆ ಭಾವಗಳನೆಲ್ಲ ಅಭಿವ್ಯಕ್ತಿಸಲು ಅಕ್ಷರದ ಮೊರೆ ಹೋದದ್ದಿದೆ...
ಮನಸಿಗೆ ತೋಚಿದ್ದನ್ನ ಕಾಗದದಿ ಗೀಚಿದ್ದಿದೆ...


ಹಾಗೆ ತೋಚಿದ್ದು - ಗೀಚಿದ್ದನ್ನೆಲ್ಲ ಈಗೊಂದು ಸಂವತ್ಸರದ ಹಿಂದೆ ಸಾರ್ವಜನಿಕ ಡೈರಿಯಂಥ ತಾಣ ಬ್ಲಾಗ್ ನ ಮಾಲೀಕನಾಗಿ ಅದರಲ್ಲಿ ಬರೆದು ಪ್ರಕಟಿಸುವ ಹಂಬಲವಾಯ್ತು.
ಹಾಗೆ ಬ್ಲಾಗ್ ಪ್ರಾರಂಭಿಸುವಾಗ ಖಂಡಿತ ಅಂದುಕೊಂಡಿರಲಿಲ್ಲ - ನಾನು ಇಷ್ಟೊಂದು ದಿನ ಬರೆದೇನು,ಅದನ್ನು ಇಷ್ಟೆಲ್ಲ ಜನ ಓದಿಯಾರೆಂದು.
ಬರೆದ ಬರಹಗಳಲ್ಲಿ ಹೆಚ್ಚಿನವು ಬರೀ ಜೊಳ್ಳೆಂದು ನಂಗೂ ಗೊತ್ತು...
ಎಷ್ಟೋ ಬಾರಿ ನಾ ಬರೆದದ್ದು ನನಗೇ ಅರ್ಥವಾಗದೇ ಹೋದದ್ದಿದೆ...
ಹೇಳಬೇಕಾದದ್ದನ್ನ ಸ್ಪಷ್ಟ ಮತ್ತು ಪೂರ್ಣವಾಗಿ ಹೇಳಿಲ್ಲ ಅನ್ನಿಸಿದ್ದಿದೆ...
ಬರಹಾನ ಬರೀ ದ್ವಂದ್ವ ಕಾಡಿದ್ದಿದೆ...  
ಏನೋ ಬರೆಯ ಹೋಗಿ ಇನ್ನೇನೋ ಬರೆದದ್ದಿದೆ... 
ಆದರೂ ಬರೆಯುವ ಹಂಬಲ ಕಡಿಮೆಯಾಗಿಲ್ಲ...
ಕಾರಣ - 
ಮನಸನ್ನು ಬೆತ್ತಲಾಗಿಸಿ ನನ್ನೊಳಗನ್ನು ತೋರುವ ಹಂಬಲವಾ.? 
ಗುರುತಿಸಿಕೊಳ್ಳಬೇಕೆಂಬ ಚಡಪಡಿಕೆಯಾ.? 
ಅಕ್ಷರ ವ್ಯಾಮೋಹವಾ.? 
ಅಥವಾ ಇವೆಲ್ಲ ಸೇರಿದ ಇನ್ಯಾವುದೋ ಭಾವದ ಒತ್ತಡವಾ.?
ಗೊತ್ತಾಗುತ್ತಿಲ್ಲ...

ಇದೀಗ ನನ್ನೊಳಗಣ ಹುಚ್ಚು ಭಾವಗಳ ಹಂಚಿಕೊಳ್ಳುವ ನನ್ನ "ಭಾವಗಳ ಗೊಂಚಲು" ಬ್ಲಾಗಿಗೆ ಒಂದು ವರ್ಷದ ಪ್ರಾಯ...


ಮೊದಮೊದಲು ಭಯವಿತ್ತು ನನ್ನ ಬರಹದ ಓದುಗ ನಾನೊಬ್ಬನೇ ಆದೇನಾ ಅಂತ...
ಆದರೆ
ನಿಮ್ಮ ಪ್ರೀತಿ ಔದಾರ್ಯ ತುಂಬ ದೊಡ್ಡದು.
ನನ್ನ ಬರಹಗಳನ್ನೂ ಓದಿದ್ದೀರಿ...
ಮೆಚ್ಚಿ ಬೆನ್ತಟ್ಟಿದ್ದೀರಿ...
ಬಹುಶಃ ಇಷ್ಟವಾಗದ್ದನ್ನ ಹೇಳದೇ ಮುಚ್ಚಿಟ್ಟು ಔದಾರ್ಯ ತೋರಿದ್ದೀರಿ...
ನಿಮ್ಮ ಈ ಒಲವ ಔದಾರ್ಯಕ್ಕೆ ನಾನು ಸದಾ ಋಣಿ...

ಅಕ್ಷರ ಪ್ರೀತಿ ನಮ್ಮನ್ನು ಬೆಳೆಸಲಿ...
ಈ ಸ್ನೇಹ ಬಾಂಧವ್ಯ ಸದಾ ಜಾರಿಯಿರಲಿ...

ವಿಶ್ವಾಸ ವೃದ್ಧಿಸಲಿ...
                        
















 ಕೃತಜ್ಞತೆಗಳೊಂದಿಗೆ -
                                                                  ಶ್ರೀವತ್ಸ ಕಂಚೀಮನೆ.         

6 comments:

  1. ಒಂದು ವರ್ಷ ತುಂಬಿದ ಬ್ಲಾಗ್ ಗೆ ಶುಭಾಶಯಗಳು ಮತ್ತು ಅಭಿನಂದನೆಗಳು...
    ಹೀಗೆ ಸಾಹಿತ್ಯದ ಪಯಣ ಸಾಗಲಿ....

    ReplyDelete
  2. ನೂರಾರು ವರುಷ ಬಾಳಲಿ...

    ReplyDelete
  3. ಸ್ವಚ್ಚ ಮನಸ್ಸಿನ, ಸುಂದರ ಬರಹದ, ಅಪಾರ ಜೀವನಾನುಭವ ಹೊಂದಿರುವ, ಬದುಕಿನೆಡೆಗಡ ಸದಾ ಆಶಾಗೋಪುರ ಕಟ್ಟಿಕೊಂಡಿರುವ ನೆಲ್ಮೆಯ ಗೆಳೆಯನ ಒಂದು ವರ್ಷ ತುಂಬಿದ ಬ್ಲಾಗ್ ಗೆ ಅಭಿನಂದನೆಗಳು. ಹೀಗೆ ಸಾಗಲಿ ಬರಹದ ಜಂಜಾಟ...

    ReplyDelete
  4. ನನಗಂತೂ ಖುಷಿ ಇದ್ದೇ ಇದೆ....
    ನಿನ್ನ ಬ್ಲಾಗಿನಲ್ಲಿ ಬರಹ ತುಂಬಿದಷ್ಟು ಖುಷಿ....
    ಬ್ಲಾಗಿಗೆ ಒಂದು ತುಂಬಿದಾಗ ಎರಡರ ಆಸೆ.....
    ಎರಡು ತುಂಬಿದಾಗ ಮೂರರ ಆಸೆ.....
    ಹಾಗೇ ನಾಲ್ಕು ಐದು ಆರು........

    ಎರಡಂಕೆಯ ಆಸೆಯಿದೆ.....

    ReplyDelete
  5. shubhaashayagalu....nimma aksharayaana heege saaguttirali.

    ReplyDelete