Monday, January 9, 2012

ಗೊಂಚಲು - ಇಪ್ಪತೈದು...(ಬೆಳ್ಳಿ ಗೊಂಚಲು)

ನನ್ನ ಬದುಕು...


ವಾಸ್ತವಗಳ ಕಾವಲಿಯ ಅತಿ ಬಿಸಿಗೆ ಸಿಕ್ಕಿ
ಸೀದು ಹೋದ ಚಂದನೆಯ ಕನಸುಗಳು...
ಬತ್ತಿ ಹೋದ ಕಣ್ಣ ಬಿಂದುಗಳು...

ಹಳಿ ತಪ್ಪಿದ ಬದುಕ ಬಂಡಿ
ನಿಷ್ಪಾಪಿ ನಗೆಯ ಕ್ಷಣಗಳ ಸಾವು...
ಹೆಣಗಳ ಗುರುತೂ ಸಿಕ್ಕದಾಗಿದೆ...

ಹೃದಯಕ್ಕೇ ಮುಳ್ಳು ಚುಚ್ಚಿಬಿಟ್ಟಿದೆ...
ಆಚೆ ತೆಗೆಯುವಂತಿಲ್ಲ
ಹಾಗೇ ಬಿಡುವಂತೆಯೂ ಇಲ್ಲ...
ಉಸಿರ ಪ್ರತಿ ಏರಿಳಿತದಲ್ಲೂ ಮೃತ್ಯು ಗಂಧ...


ಸುತ್ತ ಹಸಿರು ನಗುವಾಗ
ಅಳಲಾಗದೆ - ನಗು ಬಾರದೇ ಮಿಡುಕಾಡುವ
ಒಂಟಿ ಒಣಗಿದ ಮರ
ನನ್ನ ಬದುಕು...

ಆದರೂ

ಭರವಸೆಗಳು ಸತ್ತ ಮೇಲೂ
ಬದುಕಿರುವ ಬಯಕೆ
ಭಂಡ ಜೀವಕ್ಕೆ...

ಕಾರಣ

ಯಾವುದೋ ಮೋಹದ ಮಾಯೆ...
ಎಲ್ಲೋ ಅಳಿದುಳಿದ ಸವಿ ನೆನಪುಗಳ ಛಾಯೆ...
ಯಾರದೋ ಒಲವಿನ ಭಾವ ಧಾರೆ...
ಭರವಸೆಯ ಸಮಾಧಿಯ ಮೇಲೂ ಚಿಗುರಬಯಸುವ ಹೊಸತ್ಯಾವುದೋ ಪುಟ್ಟ ಕನಸು...
ಎಲ್ಲ ಸೇರಿ ಕೊರಳ ತಬ್ಬಿ
ಬದುಕುವಾಸೆ ಮನದೆ ಹಬ್ಬಿ
ಮತ್ತೆ ಸಣ್ಣಗೆ ಉಸಿರಾಡಲು ಹವಣಿಸುತ್ತೇನೆ...
ಇನ್ನಷ್ಟು ಕಾಲ ಬದುಕ ಬಯಸುತ್ತೇನೆ...

4 comments:

  1. ಎಲ್ಲರ ಬದುಕಿನಲ್ಲೂ ಕಾಣದ ಮಾಯೆಯ ಕೈಚಳಕವಿದೆ.ಇಲ್ಲದಿದ್ದರೆ..... ನೆನಪಿಸಿಕೊಳ್ಳಲು ಕಷ್ಟವಾಗುತ್ತದೆ.
    ನಿಮ್ಮ ಬೆಳ್ಳಿ ಗೊಂಚಲಿನ ಈ ಕವನ ಚೆನ್ನಾಗಿದೆ.ಅಭಿನಂದನೆಗಳು

    ReplyDelete
  2. ಜೀವನ ಪ್ರೀತಿಯೇ ಹಾಗೆ ಅಲ್ಲವೇ...?
    ಭರವಸೆಗಳು, ಕನಸುಗಳು ಸತ್ತ ಮೇಲೂ ಬದುಕಬಹುದು ಎಂಬುದಕ್ಕೆ ಸಾಕ್ಷಿಯಾಗುತ್ತದೆ...
    ಚೆನ್ನಾಗಿದೆ..

    ReplyDelete
  3. ನಾಳೆ ಎ೦ಬ ಭರವಸೆಯೆ ಹಾಗೆ....ಇ೦ದು ಎಷ್ಟೆ ಕಹಿಯಾಗಿದ್ದರೂ, ನಾಳೆಯಾದರೂ ಸಿಹಿ ಸಿಗುವುದೇನೋ ಎ೦ಬ ಆಸೆ ನಮ್ಮನ್ನು ಉಳಿಸಿಬಿಡುತ್ತದೆ. ಕವನ ತು೦ಬಾ ಚನ್ನಾಗಿ ಮೂಡಿ ಬ೦ದಿದೆ ಇಷ್ಟವಾಯಿತು....:)

    ReplyDelete