Monday, April 1, 2013

ಗೊಂಚಲು - ಅರವತ್ತೆಂಟು.....

ಕನಸೇ -
ನನ್ನೀ ಮನಸೆಂಬುದು ಒಂದು ಬಂಡೆ...
ನಾನು ನೀನಿಲ್ಲದೆಯೂ ಬದುಕಬಲ್ಲೆ ಎಂದು ಹಮ್ಮಿನಿಂದ ಮಾತಾಡಿದ್ದೆ ಅಂದು ನಿನ್ನೊಂದಿಗೆ...
ಬದುಕಿ ಬಿಟ್ಟೀಯ ನಾನಿಲ್ಲದೆಯೂ - ಆದರೆ ಹೊತ್ತು ಮುಳುಗೋ ಹೊತ್ತಲ್ಲಿನ ನಿಗಿ ನಿಗಿ ಏಕಾಂತದಲ್ಲೂ ವಿನಾಕಾರಣ ಸ್ವಚ್ಛಂದ ನಗುವ ನಗುತಿದ್ದೆಯಲ್ಲ ನಿನ್ನೊಳಗೇ ನೀನು - ಆ ನಗುವ ಜೀವಿಸಬಲ್ಲೆಯಾ ನಾನಿಲ್ಲದೆಯೂ ಅಂತ ಕೇಳಿದ್ದೆ ನೀನು...
ಹಾಗಂದು ನನ್ನ ಹಮ್ಮನ್ನು ಕೊಲ್ಲಲೆಂದೇ ಬಿಟ್ಟು ಹೊರಟೆಯಾ ನೀ ಕರುಣೆ ಕಳಚಿ...
ಹಮ್ಮು ಕೊಲ್ಲಲು ಇಷ್ಟು ದೊಡ್ಡ ಶಿಕ್ಷೆಯಾ...:(
ಒಪ್ಪುತ್ತೇನೆ ನನ್ನೊಳಗಣ ಆ ಸ್ವಚ್ಛ ನಗು ಅಧಿಕೃತವಾಗಿ ಸತ್ತು ಹೋಗಿ ಅದಾಗಲೇ ನಲವತ್ತೊಂದು ಮಾಸಗಳು ಸರಿದು ಹೋದವು ಸದ್ದಿಲ್ಲದೆ....
ಹುಂಬ ನಾನು ಈಗಲೂ ನಗುತ್ತೇನೆ ಬಾಯ್ತುಂಬ...
ಆದರೆ ನಗುವ ಮೊಗದ ಹಿಂದಣ ಮನದ ದನಿಗೆ ಕಿವಿಯಾದರೆ ಅಲ್ಲಿ ನಿನ್ನ ಸಾವಿನ ಚರಮಗೀತೆಯ ರಿಂಗಣ ಮಾತ್ರ ಕೇಳುವುದು ಘೋರವಾದರೂ ಸತ್ಯ...
ತುಂಬ ಪ್ರೀತಿಸುವ ಹುಣ್ಣಿಮೆ ಚಂದಿರನಲ್ಲೂ ಯಾಕೋ ಈಗೀಗ ಕಲೆಯೇ ದೊಡ್ಡದಾಗಿ ಕಾಣಿಸ್ತಿದೆ...
ನಗುವ ಕೋಟಿ ತಾರೆಗಳೆಲ್ಲ ನಿನ್ನ ನೆನಪೊಂದಿಗೆ ಬೆಸೆದು ನಗುವ ಮರೆತಂತೆ ಭಾಸವಾಗಿ ಮನದಾಳವ ಹಿಂಡುತಿವೆ...
ನನ್ನಲೇ ಅರಳಬಹುದಾದ ಪ್ರೇಮದಿಂದ ಎಷ್ಟೇ ದೂರ ಓಡಿದರೂ - ಅಲ್ಲೆಲ್ಲೋ ಯಾರ್ಯಾರ ನಡುವೆಯೋ ನಗುವ ಪ್ರೇಮವ ಕಂಡಾಗ ಯಾಕೋ ಎದೆಗೆ ನಾಚಿಕೆ ಮುಳ್ಳು ಚುಚ್ಚಿದ ಸಣ್ಣ ನೋವಿನ ಭಾವ ಕಾಡುತ್ತೆ ಒಮ್ಮೊಮ್ಮೆ...
ನನ್ನದಲ್ಲದ ಊರಲ್ಲಿ, ನನ್ನದಲ್ಲವೇ ಅಲ್ಲದ ಕಾರ್ಯಕ್ಷೇತ್ರದಲ್ಲಿ, ನನ್ನ ಮಿತಿಗೂ ಮೀರಿ ಮಿರಿ ಮಿರಿ ಮಿಂಚುತ್ತ ಹಲ್ಲುಗಿಂಜುವಾಗ - ಎಲ್ಲೋ ಮನದಾಳದಲ್ಲಿ 'ಆರುವ ದೀಪ ಅತಿಯಾಗಿ ಉರಿಯುವ' ಭಾವ ಮತ್ತೆ ಮತ್ತೆ ಚುಚ್ಚುವುದೇಕೆ...
ನಗುವ ಹಂಬಲವ ಕಳಚಿಕೊಳ್ಳಲಾಗದೇ - ಮನದುಂಬಿ ನಗಲೂ ಆಗದೇ ಒಳಗೊಳಗೇ ನರಳಿ ಸೋತು ಶರಣಾಗಿ ನಿನ್ನೆದುರು ಮಂಡಿಯೂರಿದ್ದೇನೆ...
ಒಂದೇ ಒಂದು ಕ್ಷಣ ಎದೆ ಬಾಗಿಲಲಿ ನಕ್ಕು, ಕೈಯಾಸರೆ ನೀಡಿ ಬದುಕಿಗೆ ಜೀವ ತುಂಬುವೆಯಾ...
ಬರುವೆಯಾದರೆ ಮತ್ತೆ ಒಂದು ಹೆಜ್ಜೆ ಜೊತೆಯಾಗಿ - ನಾ ನಂಬದಿದ್ದ ಜನ್ಮಾಂತರಗಳನ್ನೂ ಕಣ್ಮುಚ್ಚಿ ನಂಬಿಯೇನು...
ನೀ ಬರುವ ಆ ಘಳಿಗೆಗಾಗಿ...
ಆ ಒಂದು ಕ್ಷಣದ ನಗುವಿಗಾಗಿ ಈ ದೇಹದುಸಿರ ಸಾವನ್ನೂ ಪ್ರೀತಿಯಿಂದಲೇ ಎದುರುಗೊಂಡೇನು...
ಜೀವ ಅಳಿವ ಮುನ್ನ ಬಂದು ಹೋಗೊಂದು ಘಳಿಗೆ ಕರುಣೆ ತೋರಿ ನನ್ನೆಡೆಗೆ - ಮನದುಂಬಿ ಜೀವಿಸುವ ಓ ನನ್ನ ಕನಸೇ...

10 comments:

 1. ಚೆನ್ನಾಗಿದೆ ಬರಹ ಇಷ್ಟವಾಯಿತು.

  ReplyDelete
 2. ಕನಸುಗಳು ಬಿಟ್ಟು ಹೋಗಿಲ್ಲಾ ಶ್ರೀ... ನಿಮ್ಮೊಳಗೆ ಮೌನವಾಗಿ ಕೂತಿದೆ. ಒಮ್ಮೆ ಕಣ್ಣು ತೆರೆದು ನೋಡಿ ...ಅವುಗಳು ಮಾತಾಡುತ್ತವೆ.
  ಏನೇ ಬರೆದರೂ ಬಹಳಷ್ಟು ಆಪ್ತವಾಗಿ ಬರೆಯುತ್ತಿರಿ..ಆ ನಿಮ್ಮ ಕಲೆಗೊಂದು ಸಲಾಂ...

  ReplyDelete
 3. ಪ್ರೀತಿಯ ಸರೋವರದಲ್ಲಿ ಪುಟ್ಟ ಅಲಾಘಾತಗಳು ಸರ್ವೇ ಸಾಮಾನ್ಯ. ಒಳ್ಳೆಯ ಬರಹ.

  ReplyDelete
 4. ಬಿಟ್ಟರೂ ಬಿಡದಂತೆ ಕಾಡುತ್ತಿರುವ ಕನಸುಗಳ ಬಗೆಗಿನ ಮಾತುಗಳು ಇಷ್ಟವಾದವು ಶ್ರಿ....

  ReplyDelete
 5. ನಗುವ ತಾರೆಗಳೊಂದಿಗೆ ನಿನ್ನ ಬೆಸೆದು ನಗುವ ಮರೆತೆ ನಾನು.....ಸುಂದರ ಸಾಲು ಶ್ರೀವತ್ಸ
  ತುಂಬಾ ಚೆನ್ನಾಗಿದೆ (?)

  ReplyDelete
 6. This comment has been removed by the author.

  ReplyDelete
 7. ಕನಸಿನಲಿ ನೋಡಿದೆನು ಕನವರಿಸಿ ಕೂಗಿದೆನು ಹಾಡು ನೆನಪಿಗೆ ಬಂತು ನಿಮ್ಮ ಬರಹ ನೋಡಿ

  ReplyDelete
 8. tumbaa channaagide shreevatsa....:)

  ReplyDelete
 9. ಓ ಮನಸೇ ...ನೀ ಹೀಗೇಕೇ??
  ಪ್ರಜ್ವಲಿಸೋ ದೀಪ ಆರಲ್ಲ ಕಣೋ ....
  ಮನ ತುಂಬಿ ನಕ್ಕು ಬಿಡು ...ಆ ಸುಂದರ ಮನಕ್ಕೆ ನಗುವ ಶಕ್ತಿಗೆ ಚೈತನ್ಯ ನೀಡೋ ಭರವಸೆ ಸಿಗಲಿ ...
  ಇಷ್ಟ್ವಾಯ್ತು ಬರಹ

  ReplyDelete
 10. ಆರುವ ದೀಪದ ಉರಿ ಹಾಗೂ ಬೆಳಕು ಸುಳ್ಳಲ್ಲ, ಕನಸ ಎಣ್ಣೆ ಮುಗಿಯದಿರಲಿ... ಕ್ಷಣ ಕ್ಷಣದ ಕನಸುಗಳಿಗೆ ಮನಸು ತೆರವುಗೊಳ್ಳಲಿ... ಇಷ್ಟವಾಯಿತು ಬರಹ.

  ReplyDelete