Monday, April 22, 2013

ಗೊಂಚಲು - ಏಳು X ಹತ್ತು.....


ನಿನ್ನ ಸ್ನೇಹದ ನೆನಪ ಗುಂಗಲ್ಲಿ.....

ಈ ಮರಳು ತೀರದಲಿ, ಸಂಜೆ ಸವೆಯುವ ಹೊತ್ತಲ್ಲಿ, ಅಲೆಗಳು ಪಾದ ತೋಯಿಸುತಿದ್ದರೆ...
ಹೆಜ್ಜೆಗೆ ನಿನ್ನ ಗೆಜ್ಜೆ ದನಿಯ ಜತೆಯಿದ್ದಿದ್ದ - ಪಕ್ಕ ಕೂತು ಸಾಗರ ಮತ್ತು ಬಾನು ಸಂಧಿಸುವ ಬಿಂದುವಿನಲಿ ಕಣ್ಣ ನೆಟ್ಟು ನಗೆಯ ಕನಸ ಹೊಸೆಯುತಿದ್ದ - ಆ ದಿನಗಳ ನೆನಪಾಗುತ್ತೆ ಗೆಳತಿ...

ಬೆಳಕ ಹುಡುಕಿ ಹೊರಟೆ - ಕತ್ತಲ ಸೊಬಗು ದಕ್ಕಿತು...
ನಿನ್ನನರಸಿ ಅಲೆದೆ - ನನ್ನೆ ನಾ ಕಂಡುಕೊಂಡೆ...

ಕತ್ತಲಲ್ಲು ಸೊಬಗಿತ್ತು - ನನ್ನೊಳಗೂ ಒಂದಿಷ್ಟು ಖುಷಿಯಿತ್ತು...
ಆದರೂ ಬದುಕಿಗೆನೋ ಕೊರತೆ...
ನೀನಿಲ್ಲ ಮತ್ತು ಬೆಳಕಿಲ್ಲ...

ಛೆ -
ನಾನು ಆ ಕವಿತೇನ ಬರೆಯಲೇಬಾರದಿತ್ತು...
ಬರೆದರೂ ಅಲ್ಲಿಯ ಪಾತ್ರಕ್ಕೆ ನಿನ್ನ ಗುಣಗಳ ಆವಾಹಿಸಬಾರದಿತ್ತು...
ಆದರೇನ ಮಾಡಲಿ ನಾನೂ ಮನುಷ್ಯನೇ ತಾನೆ...ಸಾಮಾನ್ಯರಲ್ಲಿ ಸಾಮಾನ್ಯ...
ಸಂಗಾತಿಯನರಸುವಷ್ಟು ಬೆಳೆದ ಮನಸೊಂದು ತನ್ನ ಸಂಗಾತಿಯ ಕನಸಿಗೆ ಜೀವ ತುಂಬುವಾಗ ತನ್ನದೇ ಸುತ್ತಲಿನ ಜೀವಗಳ ಗುಣಗಳನ್ನು ಆ ಸಂಗಾತಿಯ ಕನಸಿಗೂ ತುಂಬುವುದು ಸಹಜ ಮತ್ತು ಸಾಮಾನ್ಯ...
ನಾನು ಗಂಡು ಪ್ರಾಣಿ.. ಹಾಗಾಗಿ ಅಮ್ಮನ ಮಮತೆ, ತಂಗಿಯ ಕೀಟಲೆ, ಅಕ್ಕನ ಅಕ್ಕರೆ, ಅತ್ತೆಯ ಆಪ್ತ ನಗು ಮತ್ತು ನಿನ್ನ ಸರಳ ಪ್ರಶಾಂತ ಹಾಗೂ ಮೌನದಿಂದಲೆ ಬಂಧಗಳ ಸಲಹಿಕೊಂಬ ಗುಣಗಳ ನನ್ನ ಸಂಗಾತಿಯ ಕನಸಿಗೆ ಆವಾಹಿಸಿದ್ದು ತಪ್ಪಾ...
ಎಂಥ ಚಂದದ ಗೆಳೆತನವೊಂದು ಹಬ್ಬಿ ನಿಂತಿತ್ತು ನಮ್ಮಿಬ್ಬರ ನಡುವೆ...
ಎಲ್ಲ ಹೇಳಿಕೊಳ್ಳಬಹುದಾದ, ಹೇಳದೆಯೂ ನೋವುಗಳ ಅರಿಯಬಹುದಾದ, ನೋವಿಗೂ - ನಲಿವಿಗೂ ಹಂಚಿಕೊಳ್ಳಲು ಇನ್ನೊಬ್ಬರಿಲ್ಲವೇನೋ ಎಂಬಂತೆ ಒಬ್ಬರನ್ನೊಬ್ಬರು ಅಂಟಿಕೊಂಡಂತ ಸ್ವಚ್ಛ ನಗೆಯ ಗೆಳೆತನ...
ಈವರೆಗೆ ನಾವು ಆಡದ ಮಾತು, ಹಂಚಿಕೊಳ್ಳದ ಮೌನ ಹೇಳಿಕೊಳ್ಳಲೊಂದಾದರೂ ಇದೆಯಾ...
ಎದುರಿಗಿಲ್ಲವಾದಾಗಲೂ, ಇತರ ಸಾವಿರ ಜನರೊಟ್ಟಿಗಿದ್ದಾಗಲೂ ನಿನ್ನ ಮನಸು ನನ್ನೊಂದಿಗೇ ಮಾತಾಡುತ್ತಿರುತ್ತದೆಂಬುದು ನಂಗೂ ಗೊತ್ತು ಮತ್ತು ನನ್ನ ಮೌನವೂ ನಿನ್ನೊಂದಿಗೆ ಹರಟುತ್ತಲೇ ಇರುತ್ತೆ ಸದಾ ಎಂಬುದು ನಿಂಗೊತ್ತು...
ಯಾವುದೋ ನೋವಲ್ಲಿ, ತುಂಬ ಪ್ರೀತಿಸುವ ಹುಣ್ಣಿಮೆ ಚಂದಿರನ ಬಗೆಗೂ ಯಾಕೋ ಒಮ್ಮೊಮ್ಮೆ ಬೇಸರ ಮೂಡುತ್ತೆ ಕಣೇ ನಗುವ ಕೋಟಿ ತಾರೆಗಳ ಮಿನುಗೋ ಖುಷಿಯ ಒಂದಿಷ್ಟು ಕಿತ್ತುಕೊಂಡನೇನೋ ಈ ಚಂದಿರ ತನ್ನ ಬೆಳದಿಂಗಳ ಚೆಲ್ಲಿ ಅನ್ನೋ ಭಾವ ಕಾಡುತ್ತೆ ಅಂದಾಗ ನಾನು; ಅಮಾವಾಸ್ಯೆ ಪೂರ್ತಿ ಮಿನುಗೋ ತಾರೆಗಳಿಗಾಗಿಯೇ ಕಣೋ ಇರೋದು ಅಂತ ಸಂತೈಸುತಿದ್ದವಳು ನೀನು...
ರಂಪಾ ರಂಪ ಜಗಳ ಮಾಡಿ ಮುಖ ತಿರುಗಿಸಿಕೊಂಡು ಕೂತು ಐದೇ ನಿಮಿಷಕ್ಕೆ ‘ನಂಗಿನ್ನೂ ಸಿಟ್ಟು ಹೋಗಿಲ್ಲ, ನಾನು ಮಾತಾಡಲ್ಲ’ ಅಂತ ಮೆಸೇಜ್ ಮಾಡ್ತಾ ಇದ್ದೋಳು ನೀನು - ಮತ್ತದು ನಂಗೆ ನೀ ಮಾತಾಡಬಹುದು ಎಂಬುದರ ಸೂಚನೆ ಆಗಿರುತ್ತಿತ್ತು - ಪಕ್ಕದಲ್ಲೇ ಕೂತು ಮೆಸ್ಸೇಜಲ್ಲಿ ಸಿಟ್ಟಿನ ಮಾತಾಡೋ ನಿನ್ನ ಕಂಡು ನಕ್ಕು ನಕ್ಕು ಕಣ್ಣೀರಾದ ಸಂಜೆಗಳೆಷ್ಷೋ...
ಅಂಥದ್ದು ಇಂದಿಗೆ ಅದೆಷ್ಟು ಸಂಜೆಗಳು ಸರಿದು ಹೋದವು ಈ ನದಿಯ ತೀರದಲಿ ನಿನ್ನ ಪಾದದ ಗುರುತು ಕಾಣದೆ...
ಎಲ್ಲ ಕಳೆದು ಹೋದ ಭಾವ - ಮಾತುಗಳೆಲ್ಲಾ ಮೌನದ ಮೊರೆಹೋಗಿ ಮನಸು ಮೂಕ ಮೂಕ - ಜಾರಲಾರದು ಕಣ್ಣ ಹನಿ, ಅದಕೂ ಗಂಡಸೆಂಬ ಅಹಂಕಾರ - ಹಿಂಡುವ ತುಂಡು ಭಾವಗಳೆಲ್ಲಾ ಭಂಡ ಮನಸಲ್ಲೆ ಬಂಧಿ...
ಅಲ್ವೇ - ನನ್ನೊಳಗನೆಲ್ಲ ನನ್ನಷ್ಟೇ ಚೊಕ್ಕವಾಗಿ ತಿಳಿದವಳು ನೀನು...
ಯಾರನೂ ಪ್ರೇಮಿಸಲಾರದ ನಾನು ವಿನಾಕಾರಣ ನನ್ನೊಳಗೆ ಮೂಡಿ ನಿಲ್ಲೋ ಪ್ರೇಮದ ಕನಸಿನ ಆಲಾಪಗಳನ್ನು ವಿಶ್ವಾಸದ ಗೆಳತಿಯಾದ ನಿನ್ನೊಂದಿಗಲ್ಲದೆ ಇನ್ಯಾರೊಂದಿಗೆ ಹಂಚಿಕೊಳ್ಳಲೇ...
ಒಂದಿಷ್ಟು ಕೀಟಲೆಗೆ ನೀನೆ ನನ್ನ ಪ್ರೇಮಿಕೆ ಎಂಬಂತೆ ಮಾತಾಡಿದ್ದು ತಪ್ಪಾ..?
ಇಷ್ಟಕ್ಕೂ ಎದುರಾ ಎದುರು ನಾವಿಬ್ಬರೂ ಅದೆಷ್ಟು ಬಾರಿ ಹಾಗೆ ಮಾತಾಡಿಲ್ಲ....
ಅಂದರೆ ಮಾತಾಡಿದ್ದು ತಪ್ಪಲ್ಲ ಹಾಗೆ ಬರೆದು ಪ್ರಕಟಿಸಿದ್ದು ತಪ್ಪು ಅಥವಾ ನಿನ್ನ ಗುಣಗಳ ಇನ್ಯಾರಿಗೋ ಆವಾಹಿಸಿದ್ದು ತಪ್ಪಾ...?
ಅಷ್ಟು ಸಣ್ಣ ಸಲಿಗೆ ಇಷ್ಟು ಕಾಲದ ನಮ್ಮ ಗೆಳೆತನವ ಕೊಂದೀತಾ...?
ಕವಿ ಮನದಲ್ಲಿ ಕಲ್ಪನೆಯ ಕೂಸು ಅರಳಿ ಕವನವಾಗಿದ್ದೇ ತಪ್ಪಾಗಿಹೋಯಿತಾ..?
ಕಾರಣವೇನು ಈ ಪರಿಯ ಕೋಪಕ್ಕೆ...?
ನಿಜದ ಕಾರಣವಾದರೂ ಹೇಳಿ ಒಂದು ಜಗಳವನ್ನಾದರೂ ಮಾಡು ಬಾ ಒಮ್ಮೆ...
ಕಣ್ಣ ಹನಿಯೊಂದಿಗೆ ಭಾವಗಳು ಕರಗಿ ಮನಸು ಹಗುರಾಗುವುದಾದರೆ ಅತ್ತು ಬಿಡು ತಪ್ಪಿಲ್ಲ - ಕಾಡುವ ನೆನಪುಗಳೊಂದಿಗೆ ಅಳು ನಿರಂತರವಾಗದಿರಲಿ ಮತ್ತು ಖುಷಿಗಳಿಗೊಂದಷ್ಟು ಕಣ್ಣ ಹನಿಗಳು ಬಾಕಿ ಇರಲಿ ಅಂತ ನಿನಗಂದು ಹೇಳಿದ್ದ ನಾನೇ ಇಂದು ಇಲ್ಲಿ ಖುಷಿಯಿಲ್ಲದೇ ಅಳುವ ನಿತ್ತರಿಸಿಕೊಳ್ಳಲಾರದೇ ತತ್ತರಿಸುತಿದ್ದೇನೆ...
ಬಿಡು ಅಂದರೆ ಬರಹವನ್ನೇ ಬಿಟ್ಟೇನು - ಈ ದೂರ ಸಹಿಸಲಾರೆ - ಇನ್ನೆಂದೂ ನಿನ್ನಿಷ್ಟಕ್ಕೆ ವಿರುದ್ಧವಾಗಲಾರೆ - ನಿನ್ನಿಷ್ಟವೆ ನನ್ನಿಷ್ಟ ಕೂಡಾ - ಆ ಇಷ್ಟವೆ ಇಷ್ಟೆಲ್ಲಾ ಸಲಿಗೆ, ಸ್ವಾತಂತ್ರ್ಯ್ವ ಕೊಟ್ಟದ್ದು - ನಿನ್ನ ಕೆಣಕಿ ಕಾಡುವ ಖುಷಿಯ ಮೂಲ ಕಣೆ - ಪುಟಾಣಿ ಗೆಳತೀ ಈ ಜೀವದಲ್ಲಿ ಉಸಿರಿರುವವರೆಗೂ ನೀ ನನ್ನ ಪಾಲಿಗೆ ಜೀವದ ಗೆಳತಿ ಅಷ್ಟೇ - ಭಯ ಬೇಡ ಉಳಿದೆಲ್ಲ ಗೌಣ... 
ಗೆಳೆತನ ಮತ್ತೆ ನಗುವ ಕ್ಷಣಕಾಗಿ ಕಾಯುತ್ತ ಕಾಯುತ್ತ - ನೀ ಎದ್ದು ಹೋದ ಜಾಗದಲ್ಲೇ ಕೂತಿದ್ದೇನೆ...
ವಿಶ್ವಾಸ ನಗಲಿ ಮತ್ತೆ...

8 comments:

 1. ನಾನೊಬ್ಬ ಕಳ್ಳ ಚಿತ್ರದ "ಕೋಪವೇತಕೆ ನನ್ನಲ್ಲಿ ಹೇಳು ಬಾ ಪ್ರೇಯಸಿ... ಹೇ ನನ್ನ ಬಂಗಾರದ ಜಿಂಕೆಯೇ... ಏಕೆ ಓದುವೆ ನನ್ನ ನೋಡದೆ.. ಮಾತನಾಡದೇ ಪ್ರೀತಿ ತೋರದೆ ಹಾಡು ನೆನಪಿಗೆ ಬಂತು"
  ಭಾವದ ಜಲಪಾತ ಸರಾಗವಾಗಿ ಧುಮುಕಿದೆ ಪದಗಳಲ್ಲಿ!

  ReplyDelete
 2. ಸ್ನೇಹದ ನೆನಪಿನ ಗುಂಗಲ್ಲಿ ಮೂಡಿದ ಚಿತ್ತಾಕರ್ಷಕ ಬರಹ . ಅಧಮ್ಯ ಗೆಳೆತನದ ಸೂಕ್ಷ್ಮಗ್ರಾಹಿ ಭಾವನೆಗಳು ನಿಮ್ಮ ಬರಹದಲ್ಲಿ ಹರಡಿಕೊಂಡು ಬರಹಕ್ಕೆ ಮತ್ತಷ್ಟು ಮೆರುಗು ಕೊಟ್ಟಿದೆ ...

  ReplyDelete
 3. ಶ್ರೀ..
  ಬರೆದ ಅಷ್ಟೂ ಸಾಲುಗಳನ್ನೂ ಓದುಗನ ಎದೆಯೊಳಗೆ ಇಳಿಸಿ ಕಾಡಿಸುತ್ತಿಯಲ್ಲ ಇಂತಹ ಕಲೆ ಬಹುಶಃ ನಿನ್ನ ಬರಹಕ್ಕೆ ಮಾತ್ರವೇ ಬರುವುದೋ ಏನೋ.. ಭಾವನೆಗಳೊಂದಿಗೆ ಮಾತನಾಡುತ್ತಿ.. ಪದಗಳಲ್ಲಿ ಮೋಡಿ ಮಾಡುತ್ತಿ.. ಕೊನೆಗೆ ಓದುಗ ಮಾತ್ರ ಮೂಕ ಮೂಕ.. ನೀ ಹೇಳಿದ ಸ್ನೇಹ ನಿನಗೆ ದಕ್ಕಲಿ ಎಂದಷ್ಟೇ ಹಾರೈಸಬಲ್ಲೆ..

  ಬಹಳವೇ ಎನ್ನುವಷ್ಟು ಇಷ್ಟವಾದ ಸಾಲುಗಳು-
  -ನನ್ನ ಮೌನವೂ ನಿನ್ನೊಂದಿಗೆ ಹರಟುತ್ತಲೇ ಇರುತ್ತೆ ಸದಾ
  -ಅಂಥದ್ದು ಇಂದಿಗೆ ಅದೆಷ್ಟು ಸಂಜೆಗಳು ಸರಿದು ಹೋದವು ಈ ನದಿಯ ತೀರದಲಿ ನಿನ್ನ ಪಾದದ ಗುರುತು ಕಾಣದೆ...
  -ಜಾರಲಾರದು ಕಣ್ಣ ಹನಿ, ಅದಕೂ ಗಂಡಸೆಂಬ ಅಹಂಕಾರ - ಹಿಂಡುವ ತುಂಡು ಭಾವಗಳೆಲ್ಲಾ ಭಂಡ ಮನಸಲ್ಲೆ ಬಂಧಿ...
  -ನಿಜದ ಕಾರಣವಾದರೂ ಹೇಳಿ ಒಂದು ಜಗಳವನ್ನಾದರೂ ಮಾಡು ಬಾ ಒಮ್ಮೆ...
  -ನಾನೇ ಇಂದು ಇಲ್ಲಿ ಖುಷಿಯಿಲ್ಲದೇ ಅಳುವ ನಿತ್ತರಿಸಿಕೊಳ್ಳಲಾರದೇ ತತ್ತರಿಸುತಿದ್ದೇನೆ... (ಅಬ್ಬಾ..! ಎಂತಹ ಪದಗಳ ಮೋಡಿ )
  -ಕೊನೆಯ ನಾಲ್ಕು ಸಾಲುಗಳು ಮತ್ತಷ್ಟು ಇಷ್ಟವಾಯಿತು..

  ಹೀಗೆ ಬರಿತಾ ಇರು.. ನಾವು ಖುಷಿ ಪಡ್ತೀವಿ..

  ReplyDelete
 4. "ನೀ ಎದ್ದು ಹೋದ ಜಾಗದಲ್ಲೇ ಕೂತಿದ್ದೇನೆ..." ನಾನೂ ಅಷ್ಟೇ ಸುಮಾರು ವರ್ಷಗಳಿಂದ ಮಕ್ಕಳ ಕೂಟ ವೃತ್ತದಲ್ಲಿ! ಗುಲ್ಮೊರದಡಿಯ ಬೆಂಚಿನ ಒಂಟಿತನದಲ್ಲಿ.

  ನೆನಪಿಸಿ ಕಣ್ಣಂಚಿನಲ್ಲಿ ಹನಿ ಮೂಡಿಸಿದೆ ಗೆಳೆಯ ಕಂಚೀಮನೆ.

  ReplyDelete
 5. ನಿಜ ಕಣೋ ಗೆಳೆಯ ..ಅವಳೆದ್ದು ಹೋದ ಜಾಗದಲ್ಲಿ ಅವಳ ನೆನಪಲ್ಲಿ ಕೂರೋದ್ರಲ್ಲೂ ಎನೋ ಒಂದಿಷ್ಟು ಹೇಳಲಾಗದ .ಅನುಭವಿಸೊ ಮಧುರ ನೆನಪುಗಳಿರುತ್ತೆ ಅಲ್ವಾ
  ಗೆಳತಿ ಮುನಿಸಿಕೊಂಡು ಎದ್ದು ಹೋದ್ರೂ ನಿನಗೆಂದೇ ಶಾಶ್ವತವಾಗಿ ಒಂದಿಷ್ಟು ನೆನಪನ್ನ ಬಿಟ್ಟೇ ಹೋಗಿರುತ್ತಾಳೆ ನಿನ್ನ ಹೆಸರಿಗೆ ...
  ಆ ಖುಷಿ ನಿನ್ನದಾಗಲಿ.....
  ತುಂಬಾ ಇಷ್ಟವಾಗೋ ಭಾವವನ್ನ ಅಷ್ಟೇ ಇಷ್ಟ ಆಗೋ ತರ ಬಿಂಬಿಸೋ ನಿನ್ನ ಕಲೆಗೊಂದು ನಮನ :)
  ಬರೀತಾ ಇರು

  ReplyDelete
 6. ಸುಮ್ ಸುಮ್ನೇ ನಮ್ಗೇ ಗೊತ್ತಿಲ್ದೇನೇ ನಮ್ ಜೊತೆಯಾಗೋ ಸ್ನೇಹ
  ನಮ್ಮನ್ನು ಎಷ್ಟು ಅಪ್ಯಾಯವಾಗಿ ಅಪ್ಪಿಕೊಂಡು ಬಿಡುತ್ತಲ್ವಾ...?
  ಎಷ್ಟು ಗಾಢವಾದ ಅನುಭವ ಅಂದರೆ ... ಹರಟೆ... ಜಗಳ....
  ಪ್ರೀತಿ... ಕೋಪ..... ತಮಾಶೆ.. ಹುಸಿಮುನಿಸು... ಒಪ್ಪಂದ...
  ಹೀಗೆ ಏನೇನೋ.... ಇವುಗಳಲ್ಲಿ ಯಾವುದೇ ಕಡಿಮೆ ಆದರೂ ಏನೋ ಇಲ್ಲದ
  ಅನುಭವ... ಅಂಥಾದ್ದರಲ್ಲಿ ಅವಳೇ ಎದ್ದು ಹೋದ ಮೇಲೆ...

  ಕನಸಿನ ಆಗಾಪಗಳ ಏಕತಾನತೆಯನ್ನು ಹೇಳಿಕೊಳ್ಳಲೊಂದು ಆಪ್ತ ಜೀವ ಅವಳು....

  ಅವಳು ಇದ್ದಾಗಲೂ ನಿನ್ನಿಂದ ಇಂತಹ ಚಂದನೆಯ ಬರಹ ಬರೆಸುತ್ತಿದ್ದಳು
  ಹೇಳದೇ ಎದ್ದು ಹೋಗಿಯೂ ಕೂಡಾ ಅದನ್ನೇ# ಮಾಡಿದ್ದಾಳೆ....

  ಅಂದವಾದ ಬರಹ.....

  ReplyDelete
 7. ಭಾವಗೊಂಚಲಲ್ಲಿ ಧುಮುಕುತ್ತಿದೆ ಭಾವ ಪ್ರಭಾವ..

  ಮಾತಾಡೊಲ್ಲ ಅಂತ ಪಕ್ಕದಲ್ಲೇ ಕುಳಿತು ಮೆಸೇಜ್ ಕಳಿಸೋ ಬಗೆ, ಅವಳ ಕೂತಿದ್ದ ಜಾಗವೆಂದು ನೆನೆದು ಅಲ್ಲೇ ಸಮಯ ಕಳೆವ ಬಗೆ.. ಹೀಗೆ ನೂರೆಂಟು ಕಲ್ಪನೆಗಳು ನಿಮಗೆ ಬರುವುದಾದರೂ ಹೇಗೆಂದು ಯೋಚಿಸುತ್ತಿದ್ದೇನೆ ! ನಿಮ್ಮ ಜೀವನದ ಕಥೆಯಾ ಹೇಗೆ ? !!

  ಇಲ್ಲಿ ಅಪ್ರಸ್ತುತವೆನಿಸಬಹುದೇನೋ.. ಆದರೂ ನಿಮ್ಮ ಸಾಲುಗಳನ್ನೋದುತ್ತಾ ನನಗೆ ನೆನಪಾದ್ದು ನಾಲ್ಕು ಪ್ರಸಂಗಗಳು. ಹಿಂದಿಯ ಮೇರಾ ನಾಮ್ ಜೋಕರ್, ಯಾರಿಗೇಳೋಣ ನಮ್ ಪ್ರಾಬ್ಲಮ್ಮು ಹಾಡು, ಸಿದ್ಲಿಂಗು ಪ್ರೇಮ ಪ್ರಸಂಗ ಮತ್ತು ಮುಸ್ಸಂಜೆ ಮಾತು ಚಿತ್ರ.. ಎಲ್ಲದರಲ್ಲೂ ಭಗ್ನ ಪ್ರೇಮಿಯ ಕಥೆಗಳು.. ಆದರೆ ನಿಮ್ಮ ಕತೆ ಅದ್ಯಾವುದರ ತರವೂ, ದಾರುಣವಾಗದೇ ಭಿನ್ನವಾಗಿ ನಿಂತಿದ್ದು ಕೊಂಚ ಸಂತೋಷ ನೀಡಿತು.

  ನೀವೇ ಹೇಳುವಂತೆ ಬಾಂಧವ್ಯ ವೃದ್ಧಿಸಲಿ, ಶುಭವಾಗಲಿ :-)

  ReplyDelete
 8. ಈ ಮರಳು ತೀರದಲಿ, ಸಂಜೆ ಸವೆಯುವ ಹೊತ್ತಲ್ಲಿ, ಅಲೆಗಳು ಪಾದ ತೋಯಿಸುತಿದ್ದರೆ...
  ಹೆಜ್ಜೆಗೆ ನಿನ್ನ ಗೆಜ್ಜೆ ದನಿಯ ಜತೆಯಿದ್ದಿದ್ದ - ಪಕ್ಕ ಕೂತು ಸಾಗರ ಮತ್ತು ಬಾನು ಸಂಧಿಸುವ ಬಿಂದುವಿನಲಿ ಕಣ್ಣ ನೆಟ್ಟು ನಗೆಯ ಕನಸ ಹೊಸೆಯುತಿದ್ದ - ಆ ದಿನಗಳ ನೆನಪಾಗುತ್ತೆ ಗೆಳತಿ...

  like like and lots of like to this post shri :-)

  ReplyDelete