Saturday, December 14, 2013

ಗೊಂಚಲು - ಒಂದು ಸೊನ್ನೆ ಸೊನ್ನೆ.....

ನೂರರ ಭಾವಗಳು.....
(ನಮನಗಳೊಂದಿಗೆ...)

ಎಮ್ಮೆ, ನಾಯಿ, ಬೆಕ್ಕುಗಳೇ ಅವಳ ನಿಜದ ಸಂಗಾತಿಗಳು - ತನ್ನವರೆಂಬುವ ಮನುಷ್ಯ ಜೀವಿಗಳು ಯಾರೂ ಇಲ್ಲದ ಮನೆಗೆ ತಾನೇ ಮಹಾರಾಣಿ ಎಂಬುದು ಅವಳ ವೇದನೆ... 
ಒಂದಷ್ಟು ಕಾಲ ನಾನಾಳಿದ್ದ, ನನ್ನದಾಗಿದ್ದ ಮನೆಗೆ ನಾನೇ ಇಂದು ಅಥಿತಿ ಎಂಬುವುದು ನನ್ನ ರೋದನೆ...
ಅವಳ ಕಣ್ಣಲ್ಲಿ ಕಣ್ಣಿಟ್ಟರೆ ಎಲ್ಲಿ ಅವಳ ಕಣ್ತುಂಬಿದ್ದು ಕಾಣಸುತ್ತೋ ಅನ್ನೋ ಧಾವಂತದಲ್ಲಿ ಕಣ್ತಪ್ಪಿಸುತ್ತೇನೆ...
ಅವಳ ತುಂಬಿದ ಕಂಗಳು ನನ್ನ ಕಂಗಳನೂ ತುಳುಕಿಸಿಬಿಟ್ಟರೆ ಎಂಬುದು ಭಯ...
ನನ್ನ ಕಂಗಳಲಿ ಹನಿಜಾರಿದ್ದು ಅವಳಿಗೆ ಕಂಡುಬಿಟ್ಟರೆ ಅವಳಿನ್ನೆಂದೂ ನಗಲಾರಳೆಂಬುದು ನಿಜವಾದ ಭಯ...
ಮನದ ಭಾರ ಹನಿಯಾದದ್ದು ಅವಳಿಗರಿವಾಗಬಾರದೆಂದು ನಾನೂ, ನನಗರಿವಾಗಬಾರದೆಂದು ಅವಳೂ ಒಬ್ಬರಿಗೊಬ್ಬರು ಗೊತ್ತಾಗದಂತೆ ಕಣ್ಣೊರೆಸಿಕೊಳ್ಳುತ್ತೇವೆ – ಪ್ರತಿ ವಿದಾಯದಲ್ಲೂ... ಅವಳು ಆಯಿ ನಾನವಳ ಕಂದ...

***

ಬದುಕೊಂದು ನಗೆ ಮಂಟಪ – ನಾನೊಬ್ಬ ವಿದೂಷಕ – ಆದರೆ ನನ್ನೊಳಗೆ ನಗು ಮರೀಚಿಕೆ – ನನ್ನಭಿನಯ ನೋಡಿ, ನನ್ನ ಮಾತ ಕೇಳಿ ಒಂದು ಕ್ಷಣ ನೀವಾದರೂ ನಕ್ಕರೆ ಅಷ್ಟೇ ಸಾರ್ಥಕ್ಯ ಬದುಕಿದ ಈವರೆಗಿನ ಬದುಕಿಗೆ...

***

“ನಗುವೇ ಬದುಕಾಗಲಿ” ಎಂಬುದು ಎಲ್ಲರಿಗೂ ನನ್ನ ಎಂದಿನ ಹಾರೈಕೆ...
ಆದರೆ ನಾ ರೂಢಿಸಿಕೊಂಡ ಬದುಕ ರೀತಿ, ಅತಿವಾಸ್ತವಿಕವಾದ ನನ್ನ ವರ್ತನೆ ಮತ್ತು ನನ್ನ ನೆನಪು ನನ್ನವರ ಕಣ್ಣಲ್ಲಿ ಹನಿ ಮೂಡಿಸುತ್ತೆ ಸದಾ...
ಅಕ್ಷಿಗಳ ಕಕ್ಷೆಯಲಿ ಹನಿದುಂಬಿ ಹರಿಯುವುದು ಅಭಿಮಾನದ ಆತ್ಮಸಂತೋಷದಿಂದಲೂ ಆಗಬಹುದಿತ್ತು; ಆದರದು ಎಲ್ಲ ಸಲವೂ ಅರ್ಥವಾಗದ ವೇದನೆಯಿಂದಲೇ ಆಗಿರುತ್ತೆ...
ಈ ವಿಪರ್ಯಾಸಕ್ಕೆ ನಿಮಗಿರಲಿ ನನಗೇ ನಾನು ಸಮಝಾಯಿಶಿ ಕೊಟ್ಟುಕೊಳ್ಳಲೂ ಆಗದೇ ಸೋತಿದ್ದೇನೆ...

***

ಆ ಕೋಣೆಯ ಎದುರಿನ ಜಗುಲಿಯಲ್ಲಿ ಸಾಲಾಗಿ ಅಷ್ಟೆಲ್ಲ ಜನರಿದ್ದಾರೆ... 
ಯಾರಿಗೂ ಕೆಲಸ ಇಲ್ಲ ಅಲ್ಲಿ... 
ಆದರೂ ಎಲ್ಲರಿಗೂ ಗಡಿಬಿಡಿ... 
ಎಲ್ಲರ ಮನಸಲ್ಲೂ ಬದುಕಿಗಿಂತ ಸಾವೇ ಸನಿಹವಾಗಿ ಬದುಕಿನ ದಿಕ್ಕೇ ಬದಲಾಗುವಂಥದ್ದೇನೋ ಆದೀತೆಂಬ ತೀವ್ರ ದುಗುಡ... 
ನಗು ಕೂಡ ಅಳುವಿನಂತೆ ಕೇಳುತ್ತೆ ಅಲ್ಲಿ... 
ಒಂದಾನುವೇಳೆ ನೀವು ಕೋಣೆಯಿಂದ ನಗುತ್ತ ಆಚೆ ಬಂದಿರಾದರೆ ಸಾವಿನ ನೆರಳ ಹೊತ್ತ ಕಣ್ಣುಗಳ ಸ್ವಾಗತ... 
ಹೌದು ಅದು ದೊಡ್ಡಾಸ್ಪತ್ರೆ... 
ಅಲ್ಲಿ ಹೋದಾಗಲೆಲ್ಲಾ ಬದುಕೂ ಒಂಥರಾ ದೊಡ್ಡಾಸ್ಪತ್ರೆಯೇ ಅಂತನ್ನಿಸುತ್ತೆ...

***

ಮನದ ಭಾವಗಳಿಗೆ ಪದಗಳ ಪೊಣಿಸುತ್ತ ಹೋದೆ... 
ಭಾವಗಳ ಗೊಂಚಲು ನೂರಾಯಿತು... 
ಸಾಧಿಸಿದ್ದೇನೆಂದರೆ :
ಮನಸು ಅಷ್ಟಿಷ್ಟು ಹಗುರಾಯಿತು...
ಅದಕೂ ದೊಡ್ಡ ಸಾಧನೆಯೆಂದರೆ ನಿಮ್ಮಗಳ ಸ್ನೇಹ ಬಂಧವ ದಕ್ಕಿಸಿಕೊಂಡ ಹೆಮ್ಮೆಯಿಂದು ಜೊತೆಯಾಗಿದೆ...
ಒಂದಷ್ಟು ಹೊಸ ಭಾವಗಳು - ಹೊಸ ಬಂಧಗಳು ಈ ಬದುಕ ದಾರಿಗೆ ಜೊತೆಯಾಲು ಈ "ಭಾವಗಳ ಗೊಂಚಲು" ಕಾರಣವಾಯಿತು...
ಏನು ಬರೆದೆ ಎನ್ನುವುದಕಿಂತ ಬರೆದುದರಿಂದ ಏನ ಪಡೆದೆ ಎಂಬುದು ಮುಖ್ಯವಾಗುವ ಹೊತ್ತಿಗೆ ಇದಕಿಂತ ಹೆಚ್ಚಿಗೆ ಇನ್ನೇನು ಬೇಕು ಬದುಕಿಗೆ ಅನ್ನುತ್ತೇನೆ...
ಈ ಬದುಕ ಮೇಲೆ ತುಂಬ ಅಂದರೆ ತುಂಬಾನೇ ಪ್ರೀತಿಯಾಗುತ್ತಿದೆ ಮತ್ತೆ ಮತ್ತೆ...
ನಿಮ್ಮಗಳ ಸ್ನೇಹಕ್ಕೆ - ನೀವು ನೀಡೋ ವಿನಾಕಾರಣದ ಪ್ರೀತಿಗೆ ಈ ಮೂಲಕ ನೂರು ನೂರು ನಮನ ನಿಮಗೆ...
ಪ್ರೀತಿಯಿರಲಿ - ವಿಶ್ವಾಸ ವೃದ್ಧಿಸಲಿ... 

9 comments:

  1. congrats vatsa :) nooru saaviravaagali :)

    ReplyDelete
  2. :-) :-) ಶುಭಾಶಯಗಳು ವತ್ಸಣ್ಣ :-) ಚೆಂದ ಇದ್ದು ಬಿಡಿ ಬಿಡಿ ಭಾವಗಳು.. ಆಯಿಯ ಭಾವ ಯಾಕೋ ಹೆವಿ ಕಾಡ್ತು..

    ReplyDelete
  3. "ಎಮ್ಮೆ, ನಾಯಿ, ಬೆಕ್ಕುಗಳೇ ----------------------------
    ------------------------------ ಅಥಿತಿ ಎಂಬುವುದು ನನ್ನ ರೋದನೆ..."
    ೆಷ್ಟೋ ಬಾರಿ ಯೋಚಿಸಿದಾಗ ಅಂದುಕೊಳ್ಳುತ್ತೇನೆ.... ಅತಿಥಿಯಾಗುವುದಕ್ಕಿಂತ
    ಇಂದಿಗೂ ನೀನು ರಾಜನಾದರೇ... ರಾಜನಾಗಿ ಮೆರೆದರೇನೇ ಸಮಂಜಸವೇನೋ ಅಂತ...

    ಸಿಂಹಾಸನ ಇಂದಿಗೂ ಖಾಲಿಯಾಗೇ ಇದೆ....
    ರಾಜ್ಯವೂ ಸುಭಿಕ್ಷವಾಗಿದೆ..... ಎಷ್ಟು ಸುಭಿಕ್ಷವಾಗಿದ್ದರೇನು ರಾಜನಿಲ್ಲದಿದ್ದರೆ...
    ರಾಜನಿದ್ದೂ ಇಲ್ಲದಿದ್ದರೆ....????

    ನೂರು ಮತ್ತೊಮ್ಮೆ ನೂರಾಗಲಿ....

    ReplyDelete
  4. :) ಮನದ ತುಮುಲಗಳನ್ನು ಎಳೆಯೆಳೆಯಾಗಿ ಬಿಚ್ಚಿಡುವ ನಿಮ್ಮ ಚೆಂದದ ಬರಹಗಳಿಗೆ ನಮ್ಮದೊಂದು ಧನ್ಯವಾದ..ಹೀಗೆ ಸಾಗಲಿ ಪಯಣ :)

    ReplyDelete
  5. Noorugalu nooraraagali... abhinandanegalu...
    .
    .
    .
    .
    .
    .
    .
    .
    ..
    .
    .
    Noorara kushige party beku party... ;)

    ReplyDelete
  6. ಒಂದು ಸೊನ್ನೆ ಸೊನ್ನೆ ಅಂತ ಯಾಕೆ ಬರೀತೀರಿ ಗೆಳೆಯ.
    ನಿಮ್ಮ ಬ್ಲಾಗಿನ ಬರಹ 100 ಅದು 100ಏ!
    ಅಭಿನಂದನೆಗಳು.

    ReplyDelete
  7. ಗೆಳೆಯಾ .. ನೂರಕ್ಕೊಂದು ಪ್ರೀತಿಯ ನಮನ .. ಹಾಗೆ ಒಂದು ಶುಭಾಷಯ ...
    ಭಾಗಳ ಗೊಂಚಲಲ್ಲಿ ಇನ್ನಷ್ಟು.... ಮತ್ತಷ್ಟು.... ಮಗದಷ್ಟು.... ಮೊಗೆದಷ್ಟು .. ಮುತ್ತುಗಳು ಸಿಗುವಂತಾಗಲಿ...

    ನೀ ಚೆಲ್ಲಿದ ನಗೆಮಲ್ಲಿಗೆಯ ಕಂಪು ನಿನ್ನೊಳಗೂ ಹರಿಯಲಿ ...

    ReplyDelete