Saturday, April 12, 2014

ಗೊಂಚಲು - ಒಂದು ಸೊನ್ನೆ ಒಂದು ನಾಕು.....

ಹೀಗೆಲ್ಲ ಕಾಡುತ್ತವೆ.....

“ಜಗದೆಲ್ಲ ಮಹಾಕಾವ್ಯಗಳಿಗಿಂತ ನನ್ನದೇ ಡೈರಿಯಲಿ ನಾ ಬರಕೊಂಡ ನನ್ನ ಬದುಕಿನೆಡೆಗಣ ಎರಡು ಪ್ರಾಮಾಣಿಕ ಸಾಲು ದೊಡ್ಡ ಕಾವ್ಯ ಅಂತನ್ನಿಸುತ್ತೆ ನಂಗೆ...
ಕಾರಣ –
ಬದುಕಿಗಿಂತ ದೊಡ್ಡ ಕಾವ್ಯ ಇದೆಯಾ..??
ಡೈರಿಯ ಆ ಎರಡು ಸಾಲಲ್ಲಿ ನನ್ನದೇ ಬದುಕ ಕಾಣ್ಕೆ (ಕಾಣಿಕೆ) ಇದೆ...”

ನನ್ನ ಮನಸೇ -
"ನಿನ್ನಲ್ಲಿ ಎಲ್ಲಾರೂ ಇರಬಹುದು ನೀನು ಎಲ್ಲರಲ್ಲೂ ಇರಲಾಗದು ಎಂಬ ಸತ್ಯ ಗೊತ್ತಿದ್ದೂ, ಎಲ್ರೂ ಅವರವರು ಎಲ್ಲೆಲ್ಲಿ ಇಟ್ಟಿದಾರೋ ಅಲ್ಲಿ ಇರಲಾಗದೇ ಸುಮ್ಮನೇ ನನಗಿಲ್ಲೇ ಸ್ಥಾನಬೇಕಂತ ಬಡಿದಾಡೋದರ ಒಳಗುಟ್ಟೇನು....
ಮತ್ತು
ಆತ್ಮೀಯರಿಗೆಲ್ಲಾ ನಾನಿಲ್ಲದೂರಲ್ಲೂ ಖುಷಿಯಾಗಿರಿ ಅಂತ ಖುಷಿಯ ಆಶಿಸೋ ನೀನು ಅಮಿತವಾದ ಖುಷಿಗೋಸ್ಕರವೇ ನಿನ್ನಿಂದ ಅವರು ದೂರಾದಾಗ ಯಾಕೆ ಕಂಗಾಲಾಗ್ತೀಯೋ....
ಅರಿವಾಗುತ್ತಿಲ್ಲ ನಿನ್ನ ಮಾಯಕಗಳು..."

"ಇರುಳಿಗೆ ಬಣ್ಣ ಬಂದಂತಿದೆ...
ಕನಸ ಹೋಳಿಯ ಸಂಭ್ರಮದಲ್ಲಿ ನಿದ್ದೆಗಿನ್ನೆಷ್ಟು ಕಾಲ ರಜೆಯೋ...
ಆಗಿದ್ದಿಷ್ಟೇ –
ನಿನ್ನೆ ಮುಸ್ಸಂಜೆಯಲಿ ಆ ದಾರಿ ತಿರುವೊಂದರಲಿ ಅವಳ ಕಿರುಬೆರಳು ನನ್ನ ಕಿರುಬೆರಳೊಂದಿಗೆ ಜತೆ ನಡೆವ ಮಾತಾಡಿತು...
ಕಂಗಳ ಆರ್ದ್ರತೆ ಅದಕೆ ಸಾಕ್ಷಿಯಾಯಿತು..."

ಗೆಳತೀ -
ಕಣ್ಣಲ್ಲಿ ಕಣ್ಣಿಡದೆ, ಕನಸುಗಳೊಂದಿಷ್ಟು ಅದಲುಬದಲಾಗದೇ, ನಾನಿಲ್ಲಿ ನೀನಲ್ಲಿ ನಮ್ಮಲ್ಲಿ ನಾವಿರದೇ, ಅಕಾರಣವೆಂಬಂತೆ ಮಿಡಿವ ಕಣ್ಣ ಹನಿಗೆ ಸಿಗದ ಅರ್ಥ ಹುಡುಕುತ್ತ ಸಂಜೆಗಳ ಕೊಲ್ಲುವುದು ಅದೇನು ಚಂದವೇ ....
ನೆನಪುಗಳೊಂದಿಗೆ ಒಂಟಿ ನಡಿಗೆ ಸಾಕಾಗಿದೆ - ಕಿರುಬೆರಳ ಹಿಡಿದು ನಾಕು ಹೆಜ್ಜೆ ಜೊತೆ ನಡೆವ ಬಾ...
ಸಂಜೆಯಿದು ಶೃಂಗಾರದ, ಜೊತೆಗೂಡಿ ಗೂಡ ಕಟ್ಟುವ, ಬದುಕ ಸವಿ ಬೆಲ್ಲವಾಗಿಸುವ ಕನಸುಗಳ ಸಗ್ಗವಾದೀತು...

ಒಲವೇ ನೀನೊಂದು ಮಹಾಸಾಗರ...
ನಿನ್ನ ಸೇರಬೇಕೆಂದರೆ ಪ್ರೀತಿಯ ನದಿಯಾದರೂ ಆಗಬೇಕಿತ್ತು ನಾ...
ಆದರೆ ನಾನೊಂದು ಪುಟ್ಟ ಕೊಳ...
ನಾ ನಿನ್ನ ನೇರವಾಗಿ ಸೇರಬಲ್ಲ ಶಕ್ತಿ ಮತ್ತು ಮಾರ್ಗವೇ ನನಗಿಲ್ಲ...
ಆವಿಯಾಗಿ ಮೋಡ ಸೇರಿ ಹನಿಯಾಗಿಯಾದರೂ ನಿನ್ನ ಸೇರಲಾದೀತಾ...
ಬಯಕೆಯ ಮಿಡಿತ ಮನದಲ್ಲಿ...
ಅಲ್ಲೂ ಗಾಳಿಯ ಬೆಂಬಲ ಸಿಕ್ಕಿ ಮೋಡ ನಿನ್ನ ಮೇಲೆಯೇ ಹನಿಯಾಗಿ ಸುರಿವುದಕ್ಕಾಗಿ ಪ್ರಾರ್ಥಿಸಬೇಕಲ್ಲವಾ ನಾನು... ನಾನೆಂಥ ನಿಸ್ಸಹಾಯಕ ಜೀವಿ ನೋಡು...
ಆದರೂ ನಿನ್ನೆಡೆಗೆ ನನ್ನದು ಹಿಂಗಲಾರದ ತುಡಿತ ನಿರಂತರ...


ಗೊತ್ತು – ಅಂದ, ಗಂಧಗಳಿಂದ ಶೋಭಿಸೋ ಹೂಗಳ ಎದುರು ನಾರು (ದಾರ) ಕ್ಷುದ್ರವೇ...
ಆದರೆ ಹೂಗಳು ಮಾಲೆಯಾಗಿ ಹೆರಳು, ಕೊರಳುಗಳಲಿ ಶೋಭಿಸುವಲ್ಲಿ ನಾರಿನುಸಿರ ಸಾರ್ಥಕ್ಯ...
ನಾರಾದರೂ ಆಗಬಹುದಿತ್ತೇನೋ ಬಯಕೆ ಮನಕೆ...
ಹಾಗಾದರೂ ಹೂಗಳ ಸಂಸರ್ಗ ದಕ್ಕುವಂತಿದ್ದಿದ್ದರೆ...

ನೆನಪು ಪ್ರತಿಕ್ಷಣದ ಊಟ ನನಗೆ...
ಅಮೂರ್ತ ಶಕ್ತಿ ನಂಗೆ ಇಂದೀಗ ಆ ನೆನಪುಗಳು...
ನಿನ್ನೆ ಜತೆಗಿದ್ದ ಊಟ ನಾಳೆಯೂ ಜತೆಗಿದ್ದೇ ಇರುತ್ತೆ... 
ಯಾರಿಲ್ಲದ ಊರಲ್ಲೂ ಅದು ಜತೆಗಿದ್ದೇ ಇರುತ್ತೆ...
ನಾನಿಲ್ಲದ ಊರಲ್ಲೂ ಇದ್ದೀತು ಉಳಿದವರಲ್ಲಿ...

ಮಾತಂದ್ರೆ ಸಿಟ್ಟು, ಮಾತಂದ್ರೆ ವಾಕರಿಕೆ, ಮಾತೆಂದರೆ ಅಸಹ್ಯ ಅಂತಾರೆ...
ಅರೇ ಮಾತೆಂದರೆ ಪ್ರೀತಿ ಕೂಡ ಅಲ್ಲವಾ...
ಇಂದು ಸಹ್ಯವೆನಿಸುತಿಲ್ಲದ ಇಂಥದೇ ಮಾತುಗಳು ಅಂದು ಬಂಧವ ಬೆಸೆದ ಕೊಂಡಿ ಕೂಡ ಹೌದು ಅನ್ನಿಸುವಾಗ ಸಣ್ಣ ವಿಷಾದವೊಂದು ಮೂಡುತ್ತೆ...
ಹೌದು ಮೌನ ಕೂಡ ಇದೆಲ್ಲ ಆಗಬಹುದು...
ಆದರೆ ಮೊದ ಮೊದಲು ಬಂಧ ಬೆಸೆಯಲು ಮಾತೇ ಮೂಲಾಧಾರ...
ಮೌನದ ಮಾತು ಅರ್ಥವಾಗದ ನನಗಂತೂ ಮಾತೇ ಮಾಣಿಕ್ಯ...
ಅದು ಈವರೆಗಿನ ಅನುಭವ...
ನನ್ನ ಮಟ್ಟಟಿಗೆ ಇಷ್ಟಾದರೂ ಬದುಕ ಪ್ರೀತಿ ದಕ್ಕಿದ್ದು ಇದೇ ಮಾತಿಂದ...
ಅದಕೇ ಮಾತೆಂದರೆ ಬರೀ ಪ್ರೀತಿ ನಂಗೆ...
ಕಹಿಯೆಲ್ಲ ಕರಗಿ ಹೋಗಿ ಬಂಧವೊಂದು ಮರಳಿ ಕೂಡುವುದಾದರೆ ಮಾತಿನ ಜಗಳ ಕೂಡ ಹಿತವೇ ಅನ್ನುತ್ತೇನೆ ಅದಕೇ...
ಮೌನ ನನ್ನೊಳ ಭಾವವಾಗಿ ಸೇರಿದ ಸುದ್ದಿ ಎಲ್ಲೂ ಸುದ್ದಿಯಾಗದಿರಲಿ...
ಕಾರಣ ಮೌನವೆಂದರೆ ಸಾವು ನಂಗೆ...

ಅದ್ಯಾವುದೋ ದಾರಿಯ ತಿರುವಿನಲ್ಲಿ ಅವಳ ಆ ಮೈಮಾಟ ನನ್ನ ಕಣ್ಣಲ್ಲಿ ಇಷ್ಟಿಷ್ಟೇ ಚಿತ್ರವಾಗಿ ಪಡಿಮೂಡುವ ಹೊತ್ತಲ್ಲಿ ಅವಳ ಅಪರಿಚಿತತೆ ಮನವ ಚುಚ್ಚುತ್ತದೆ...
ಜಂಗಮವಾಣಿಯ ಮೂಲಕ ಕಿವಿಯಲಿ ರಿಂಗಣಿಸುತಿರೋ ಶೃಂಗಾರ ಗೀತೆಯಲೂ ಸಣ್ಣ ವಿಷಾದ ಭಾವ ಮತ್ತು ಪೋಲಿ ಮನಸಲ್ಲಿ ಇಷ್ಟೇ ಇಷ್ಟು (ಅಭಾವ) ವೈರಾಗ್ಯ ನುಸುಳಿಬಿಡುತ್ತದೆ... ;)

ಬೇರೆ ಬೇರೆ ನೆಲಗಳಲ್ಲಿ ಹತ್ತಾರು ಬಾರಿ ಸೋತ ಮೇಲೂ ಮತ್ತೆ ಮತ್ತೆ ಸೋಲಲೆಂದೇ ಹೂಡುವ ಯುದ್ಧವಿರಬಹುದಾ ಪ್ರೇಮವೆಂದರೆ...
ಮನಸು ಆ ಯುದ್ಧದ ಶಾಶ್ವತ ಅವಿರೋಧ ದಂಡನಾಯಕ...
ಈ ಮನಸೋ –
ವಾದ – ವಿವಾದ – ವಿಮರ್ಶೆ – ವಿವೇಚನೆ - ವಾಸ್ತವ ಪ್ರಜ್ಞೆ - ಅದೂ – ಇದೂ – ಹಾಳು – ಮೂಳು ಎಲ್ಲವನ್ನೂ ಬಡಿದು ಬಾಯಿಗಿಟ್ಕೊಂಡು ತನ್ನಿಚ್ಛೆಯ ತೀರಿಸಿಕೊಳ್ಳೋ ಮಹಾ ಮರ್ಕಟ...

ಸುತ್ತ ಸಮುದ್ರಾನೇ ಇದೆ – ಗುಟುಕು ದಾಹವೂ ನೀಗಲಾರದು...
ಶರಧಿಯ ನಡುವೆಯ ಬಂಡೆ ಮೇಲೆ ಕೂತು ಒಂದೇ ಒಂದು ಹನಿ ಮಳೆಗಾಗಿ ಹಂಬಲಿಸೋ ಚಾತಕಪಕ್ಷಿಯ ಬವಣೆ ನನ್ನೀ ಮನಸು...
ಪಕ್ಷಿಯಾಗುವ ಬದಲು ಆ ಬಂಡೆಯಾಗಿರುತ್ತಿದ್ದಿದ್ದರೆ...
ದಾಹ – ಮೋಹಗಳ ಹಂಬಲದ ಹಂಗಿಲ್ಲದೇ ಬದುಕಿಬಿಡಬಹುದಿತ್ತಲ್ಲವಾ...
ಬಂಡೆಯ ನಿರ್ಲಿಪ್ತಿಯ ಮೇಲೆ ಬಹಳವೇ ಪ್ರೀತಿಯಾಗುತ್ತಿದೆ...

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)

4 comments:

 1. ’ಅಂದ, ಗಂಧಗಳಿಂದ ಶೋಭಿಸೋ ಹೂಗಳ ಎದುರು ನಾರು (ದಾರ) ಕ್ಷುದ್ರವೇ...’ ಸರಿಯಾಗಿ ಹೇಳಿದಿರಿ.

  ReplyDelete
 2. ನಿನ್ನ ಬರಹ ಓದ್ತಿದ್ರೆ ಅದು ಲೇಖನವಾ, ಕವನವಾ ಗೊತ್ತಾಗದೇ ಮಾಯಕ, ಆದ್ರತೆ( ಆದೃತೆ ಹೇಳಾಗಿದ್ದು ಮುದ್ರಣದೋಷ ಅಂದ್ಕತ್ತಿ) ಹೇಳೋಪದಪ್ರಯೋಗಗಳಲ್ಲಿ ನಾನು ಎಲ್ಲೋ ಕಳೆದು ಹೋಗ್ಬುಟ್ತಿ ಮಾರಾಯ.. ಮತ್ತೆ ವಾಪಾಸ್ ಬರಕೆ ಸ್ವಲ್ಪ ಹೊತ್ತೇ ಬೇಕು.. NIce

  ReplyDelete
 3. ಕೆಲವು ಪ್ರಾರಬ್ಧಗಳಿಗೆ ಕಾಲವೇ ಉತ್ತರವಾಗಬೇಕು......
  ನಾವು ತೀರಾ ನೆಚ್ಚಿಕೊಂಡಿದ್ದು ಆಗದಿದ್ದಾಗಲೇ ನೂರು ಪ್ರಶ್ನೆಗಳು
  ಜನ್ಮ ತಾಳೋದು..
  ಮತ್ತು ಮೂಲ ನಮ್ಮ ನಂಬಿಕೆಗಳು ತಿಕ್ಕಾಟಕ್ಕೆ ಬೀಳೋದು....
  ನಮ್ಮ ಮಂಗಾಟಗಳು... ಸಣ್ಣ ಪುಟ್ಟ ಖುಷಿಗಳು....
  ಸುಮ್ ಸುಮ್ನೇ ಆಗೋ ಮೂಡ್ ಆಫ್ ಗಳೆಲ್ಲ slide show ಗಳು....

  ಚಂದವಿದೆ ದೋಸ್ತ್.......

  ReplyDelete
 4. ಇಷ್ಟವಾಯಿತು ಶ್ರೀ...

  ReplyDelete