Tuesday, April 29, 2014

ಗೊಂಚಲು - ನೂರು + ಹದಿನೈದು.....

ಮತ್ತಿಷ್ಟು ಸಮ್ಮಿಶ್ರ ಭಾವಗಳು.....

ಗೆಳತೀ -
ಯಾರೂ ಪ್ರಶ್ನಿಸಬಾರದ, ಎಲ್ಲ ಪ್ರಶ್ನೋತ್ತರಗಳಾಚೆಯ ಮಮತೆಯ ಮಡಿಲು - ಅದು ನಿನ್ನ ಪ್ರೀತಿ...
---
ರತಿಯ ಸಖೀ -
ನಿನ್ನೊಂದು ಕಿರುಬೆರಳ ಸ್ಪರ್ಶ ಸಾಕಲ್ವಾ ನನ್ನ ಎಂಥ ನಿದ್ದೆಯನೂ ಹಾಳುಗೆಡವೋಕೆ...
ಬಾಕಿ ಉಳಿದ ಇರುಳೆಲ್ಲ ದೇಹ ವೀಣೆಯಲಿ ಮಿಡಿವ ಮನ್ಮಥ ರಾಗ...
---
ನಿನ್ನ ನೋವ ಸಮ್ಮುಖದಲ್ಲಿ ನನ್ನ ಸಾಂಗತ್ಯವಿದ್ದಾಗ ನಿನ್ನ ಕಣ್ಣಲ್ಲಿ ಜಾರೊ ಹನಿಗಳ ಆಯಸ್ಸು ಒಂದು ಘಳಿಗೆ ಕಡಿಮೆಯಾದರೆ – ನಿನ್ನ ನಗೆಯ ಸನ್ನಿಧಿಯಲ್ಲಿ ನನ್ನ ಜತೆಯಿದ್ದಾಗ ನಿನ್ನ ಆ ನಗು ಒಂದು ಕ್ಷಣ ಹೆಚ್ಚು ಜೀವಿಸಿದರೆ ಅಲ್ಲಿಗೆ ಈ ಗೆಳೆತನಕೆ ಬಹುದೊಡ್ಡ ಸಾರ್ಥಕ್ಯ ದಕ್ಕಿದಂತೆ...
ನಗುವನ್ನು ಯಾರಲ್ಲಿ ಬೇಕಾದರೂ ಹಂಚಿಕೊಳ್ಳಲಾದೀತು – ನೋವನ್ನು ಹಂಚಿಕೊಳ್ಳಲು ಮಾತ್ರ ತನ್ನವರೆಂಬ ಆತ್ಮೀಯ ಭಾವ ಬೇಕು...
ಈತನೆದುರು ಕಣ್ಣ ಹನಿ ಕೂಡ ಸಹನೀಯ ಅನ್ನಿಸುವ ಭರವಸೆ ಬೇಕು...
ನೋವ ಹಂಚಿಕೊಳ್ಳಲಾರೆಯಾದರೆ (ಆ ಭರವಸೆ ಮೂಡಿಲ್ಲದಿದ್ದಲ್ಲಿ) ‘ಗೆಳೆಯ’ ಎಂಬ ಪದದ ಮೊದಲು ‘ಆತ್ಮೀಯ’ ಎಂಬ ಪದ ಸೇರಿಸಬೇಡ...
ಆತ್ಮೀಯತೆ ಅಂದರೆ ಬೇಲಿಯ ಹಂಗಿಲ್ಲದ “ಮನದ ಭಾವ ಸಂವಹನ...”
ಅದನ್ನು ಕೇವಲ ನಾಲಿಗೆಯ ಪದವಾಗಿ ಕೇಳುವುದು ಸಹನೀಯವೆನಿಸದು ನನಗೆ...
---
ಸಾವಿಗಿಂತ ತೀವ್ರವಾಗಿ ಕಾಡುವ ಕೆಲ ಸತ್ಯಗಳನ್ನು ಅರಗಿಸಿಕೊಳ್ಳಲಾಗದೇ ಹೊರಳಾಡುವ ನಿದ್ದೆ ಸತ್ತ ಸುದೀರ್ಘ ಒಂಟೊಂಟಿ ಅನಾಥ ಇರುಳಲ್ಲಿ ವಿಶಾದದ ನಗುವ ಬೀರುತ್ತದೆ – ಹೊಟ್ಟೆಯಲ್ಲೇ ಸತ್ತ ಮಗುವ ಹೆತ್ತ ಅಮ್ಮನಂಥ ನನ್ನ ಮನಸು...
---
ನನ್ನೀ ಸೋಲು ನನ್ನ ದೌರ್ಬಲ್ಯದಂತೆ ಕಂಡೀತು... 
ಆದ್ರೂ ಈ ಸೋಲಿನಲ್ಲೂ ನನ್ನೀ ಬದುಕಿಗೆ ಖುಷಿಯಿದೆ ಎಂಬ ಅರಿವು ದಕ್ಕಿದ ಮೇಲೆ ಮನಸಿಂದ ಇಷ್ಟಪಟ್ಟೇ ಸೋತು ಮಂಡಿಯೂರಿದ್ದೇನೆ - ವಿನಾಕಾರಣದ ಪ್ರೀತಿಯ ಮಡಿಲುಗಳೆದುರು, ಬದುಕ ಅಗಾಧ ಕರುಣೆಯೆದುರು ಮತ್ತು ಕೊಟ್ಟ ಕೊನೆಯಲ್ಲಿ ನಿಷ್ಕರುಣಿ ಸಾವಿನೆದುರು... 
ಪೊರವ ಹೊಣೆಯೀಗ ಅವುಗಳದ್ದೇ ಮತ್ತು ಅವುಗಳದ್ದು ಮಾತ್ರ...
---
ಮೇಲೆ ನಗೆಯ ನೀರ್ಗಲ್ಲು – ಅದರಡಿಗೆ ಅಂತರ್ಗತ ನೋವ ಗಂಗೆಯ ಪ್ರವಾಹ...
ಯಾವುದು ಸತ್ಯ, ಯಾವುದು ಮಿತ್ಯ..?
ಎರಡೂ ನಿರಂತರ ಎಂಬುದು ಆಂತರ್ಯದ ಕಟು ಸತ್ಯ...
---
ಬದುಕ ಕರುಣೆ ತಪ್ಪಿದ ಮೇಲೆ ಅರಿವಾಗುತ್ತಿದೆ ಅಷ್ಟಿಷ್ಟು – ನಾ ಒಂಟಿಯಾಗಿ ಸವೆಸಬೇಕಾದ ಈ ಬದುಕ ದಾರಿಯಲಿ ಎದುರಾಗೋ ಎಷ್ಟೋ ಪ್ರಶ್ನೆಗಳಿಗೆ ಒಳಗುದಿಯ ಮುಚ್ಚಿಟ್ಟು ನಾ ಬೀರಲೇಬೇಕಾದ, ಎಲ್ಲರಿಂದ ಚಂದ ಅಂತ ಹೊಗಳಿಸಿಕೊಳ್ಳುವ ನನ್ನ ದೊಡ್ಡ ನಗುವೊಂದೇ ಹೆಚ್ಚು ಸ್ಪಷ್ಟ ಉತ್ತರ...
---
ಮನಸಿಗೂ ಪ್ರಜ್ಞೆಗೂ ಪ್ರತಿದಿನವೂ ಶೀತಲ ಸಂಘರ್ಷ...
ಅಂತಿಮವಾಗಿ ಪ್ರಜ್ಞೆಯನ್ನೇ ಗೆಲ್ಲಿಸಬೇಕಾದ್ದು ಈ ಬದುಕಿನ ಅಸಹಾಯ ಸೋಲು...
ಚಂದ್ರಂಗೂ ಮೋಡಕ್ಕೂ ನಡುವೆ ಸಣ್ಣ ಜಗಳ...
ಚಂದ್ರ ನನ್ನ ಅತೀ ಆತ್ಮೀಯ ಸ್ನೇಹಿ – ಮೋಡ ಕರಗಿಯೇ ಮಳೆ ಮತ್ತು ಮಳೆಯೆಂದರೆ ಜೀವದಾಯಿನಿ...
ಯಾರ ಪಕ್ಷ ವಹಿಸಲಿ..?
ಮನಸಾ ಅಥವಾ ಪ್ರಜ್ಞೆಯಾ..??
---
ಪಡೆದುಕೊಂಡದ್ದೇ ಭ್ರಮೆಯಾಗಿರುವಾಗ ಕಳೆದುಕೊಂಡೆ ಎಂಬುದು ಸತ್ಯ ಹೇಗಾದೀತಲ್ಲವಾ...
ಎದೆಯ ಗೂಡಲ್ಲಿ ಕೂತ ಅನಾಥ ಭಾವಗಳೆಲ್ಲ ತೀರದ ದಾಹದಿಂದ ಚೀರುತ್ತವೆ...
ಅವಕೆಲ್ಲ ಒಲವ ಹನಿಯನುಣಿಸಿ ಸಲಹುವ ನದಿಯಷ್ಟೇ ಅಲ್ಲ ನದಿಯ ಒರತೆಯ ಮೂಲವೇ ಬತ್ತಿ ಹೋದಂತಿದೆ...
ಹೊಸ ನದಿಯೆಡೆಗೆ ವಲಸೆ ಹೋಗೋಣವೆಂದರೆ ಮನಸ ಹಕ್ಕಿಯ ರೆಕ್ಕಯೊಂದೇ ಅಲ್ಲ ಪುಕ್ಕಗಳೂ ಉದುರಿ ಹೋಗಿವೆ...
---
*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)

1 comment:

  1. ತುಂಡು ಭಾವಗಳಲ್ಲಿ ಜಗತ್ತಿದೆ...

    "ಈತನೆದುರು ಕಣ್ಣ ಹನಿ ಕೂಡ ಸಹನೀಯ ಅನ್ನಿಸುವ ಭರವಸೆ ಬೇಕು..." ಕಾಡುವ ಸಾಲು..
    ನಿನ್ನ ಭಾವಗಳು ಇಷ್ಟ...

    ReplyDelete