Monday, May 5, 2014

ಗೊಂಚಲು - ನೂರಾ ಹದಿನಾರು.....

ಸುಮ್ಮನೇ ಒಂದಷ್ಟು.....

ಈ ಮಬ್ಬು ಸಂಜೆಯಲಿ ಬಾನು ಚಿಮುಕಿಸುತಿರೋ ಪನ್ನೀರ ಹನಿಗಳಂತೆ ಮಳೆಯ ಹನಿಗಳು ಮೈಯ ಮುದ್ದಿಸುವಾಗ ಪಕ್ಕನೆ ಮರೆಯ ಸೇರಲು ಎಲ್ಲರಂತೆ ಓಡಲಾಗದ ನನ್ನ ಅಸಹಾಯಕತೆಯೂ ನಂಗೆ ಚಂದವಾಗೇ ಕಾಣ್ತಿದೆ...
- ಹೆಳವನೊಬ್ಬನ ಮನದ ಮಾತು.

ನಗೆಯ ನೃತ್ಯಕ್ಕೆ ನೋವ ಹಿನ್ನೆಲೆ ಸಂಗೀತ...
ಕ್ಷಮಿಸಮ್ಮ ಗೆಳತೀ –
ನೃತ್ಯದ ಸೊಬಗ ಉಣಿಸಲಾಗದಿದ್ದರೂ ನಾ ನಿರಂತರ ಸಂಗೀತದ ಚರಣಗಳ ನುಡಿಸುತಿರುತೇನೆ ನಿನ್ನ ಮನದೆ...
- ನಗು ನೀಡಲಾರದವನ ಆಲಾಪ.

ರಾತ್ರಿಗಳು ಕಳೆದರೂ ಕತ್ತಲು ಕಳೆಯಲಾರದು...
ನಿಗಿ ನಿಗಿ ಬೆಳಕ ಬಯಲಲ್ಲಿ ನಿಂತಿದ್ದರೂ ನನ್ನ ಒಳಗೆಲ್ಲ ಬರೀ ಚುಚ್ಚುವ ಕಾರ್ಗತ್ತಲು...
- ಮನಸ ಕಣ್ಣು ಇಂಗಿಹೋದವನ ಹಳವಂಡ.

ಒಂಚೂರು ನಗೆ ಹಬ್ಬದಡಿಗೆಯ ಹಂಬಲದ ಗೆಳೆತನಗಳಿಗೆ ನೋವ ಸೂತಕದೂಟವ ಬಡಿಸಿದ್ದೇ ಬಡಿಸಿದ್ದು...
ಮನೆಗೆ ಕರೆವಾಗ ನಿಮಗೆ ನಗೆಯ ಕೊಡುವೆನೆಂದಿರಲಿಲ್ಲ ಎನ್ನುವಾಗ ನಾನು – ನೋವನೂ ಕೊಡುತೀನೆಂದಿರಲಿಲ್ಲ ಅಲ್ವಾ ನೀನು, ಭರಪೂರ ಅಳುವನೇ ಕೊಟ್ಟದ್ಯಾಕೆ ಎಂಬ ಅವರ ಪ್ರಶ್ನೆಗೆ ನಿಜಕೂ ತಲೆ ಎತ್ತಲಾರದ ನಿರುತ್ತರಿ ನಾನೀಗ...
- ಪ್ರೀತಿ ಕೊಡಲರಿಯದೇ ಬಣ್ಣದ ಮಾತ ಕೊಟ್ಟವನ (?) ಸೋತ ಮನದ ಗೋಳು.


*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)

3 comments:

  1. ’ನನ್ನ ಒಳಗೆಲ್ಲ ಬರೀ ಚುಚ್ಚುವ ಕಾರ್ಗತ್ತಲು...’ ಇಷ್ಟವಾಯಿತು.

    ReplyDelete
  2. ಸತ್ಯ ದರ್ಶನ ಮಾಡಿಸುವ ಅನಿಸಿಕೆಗಳು! ಚೆನ್ನಾಗಿವೆ, ನನ್ನ ಬ್ಲಾಗ್ ಗೆ ಸ್ವಾಗತ.

    ReplyDelete
  3. ಪ್ರತಿಯೊಂದು ತುಂಡು ಭಾವಗಳಿಗೂ 'ಸಾವಿ'ರದ ಅರ್ಥಗಳು..
    ನೀ ಕೊಟ್ಟ ಖುಷಿಗಳು, ನೋವಲ್ಲೂ ಸಂತವಿಸಿದ ಬಗೆ.. ಅದೇ ಗೆಳೆತನದ ಉಸಿರು.. ಅದಕ್ಕೆ ಸಾವಿಲ್ಲಾ..

    ನೋವಿನ ಭಾವಗಳ ಇಷ್ಟವೆನ್ನುವುದು ಕಷ್ಟ.
    ನೀ ಮನಸ್ಸ ಹರವಿಡುವ ಬಗೆ ಇಷ್ಟವಾಯಿತು ಎನ್ನಬಹುದಷ್ಟೇ ನಾನು..
    ನಗುತಿರು ಸದಾ..

    ReplyDelete