Monday, May 12, 2014

ಗೊಂಚಲು - ನೂರರ ಮೇಲೆ ಹದಿನೆಂಟು.....

ಒಳಮನೆಯ ಮೌನದ ಮಾತು.....
(ಆಗೀಗ ಅನ್ನಿಸಿದ್ದು...)

ಅಮ್ಮನೆಂದರೆ ಸೆರಗಲಡಗಿಸಿಕೊಂಡು ಗುಮ್ಮನಿಂದ ನನ್ನ ದೂರವಿಡುವ ತಂಪು ಕಂಪಿನ ಮಡಿಲು...

ನಿನ್ನೆಯದೇ ಹಾಡು ಹಾಡುವ ಇಂದೆಂಬ ಹೊಸ ಬೆಳಗು ಬೈಗಾಗುವ ಹೊತ್ತಿಗೆ ಅದೇ ಹಾಡು ಇನ್ಹೇಗೋ ಅರ್ಥವಾಗಿ ಒಂದಷ್ಟು ಕನಸುಗಳು ಮೈನೆರೆದಿರುತ್ತವೆ - ಇನ್ನಷ್ಟು ಕನಸುಗಳು ಸಾವಿಗೆ ಮೈಮಾರಿಕೊಂಡು ಕಳೆದೂ ಹೋಗಿರುತ್ತವೆ...

ಕನಸುಗಳ ಹೆಣ ಕಾಯುವವಗೆ ನಿನ್ನೆಯ ನೆನಪುಗಳೇ ಕೂಲಿ...
ನಿನ್ನೆಗಳಲಿ ಮಾಧುರ್ಯವಿದ್ದುದೇ ಆದರೆ ಹೆಣ ಕಾಯುವುದು ಇಷ್ಟೇ ಇಷ್ಟು ಸುಲಭ...

ಅಲೆಮಾರಿ ಕನಸುಗಳೆಲ್ಲ ಜವರಾಯನ ಮನೆಯೆದುರು ಬದುಕ ಭಿಕ್ಷೆಯ ಬೇಡುತಿವೆ...
ಅವನೋ ಒಂದು ಕ್ಷಣವನೂ ಹಿಗ್ಗಿಸದ, ಪಾವಲಿ ಕಾಸಿನ ನಗೆಯನೂ ಕೈಯೆತ್ತಿ ನೀಡದ ಮಹಾ ಕೃಪಣ...

ದಿನ ದಿನವೂ ಸವೆಸಿಯೂ ಅಪರಿಚಿತವಾಗಿಯೇ ಉಳಿವ ಹಾದಿ ಬೀದಿಗಳಲಿ - ಸಾವಿರ ಮುಖಗಳ ಸರಿದಾಟದ ನಡುವೆಯೂ ಒಂಟೊಂಟಿಯಾಗಿ ಪ್ರೇತದಂತೆ ಅಲೆವ ಸುಖವ (?) ಹೇಗೆ ಬಣ್ಣಿಸಲಿ...
ನನ್ನ ಬಂಧಗಳೂ ಹಾಗೇ - ನಾ ನಡೆವ ಹಾದಿಯ ಹಾಗೆ...
ಕಾಲು ಸೋತ ಮೇಲೂ ಹಿಂಗದ ನನ್ನ ನಡೆವ ಹಸಿವಿನ ಹಾಗೆ...

ನನ್ನೀ ಮನಸೆಂಬುದು ಬಚ್ಚಲು ಮನೆ - ನಾನೇ ಕೈಯಾರ ಆಗೀಗ ತಿಕ್ಕಿ ತೊಳೆಯುತಿರಬೇಕದನು...
ಹೊರಮನೆಯ ಕೊಳೆಯನೆಲ್ಲ ತೊಳಕೊಳ್ಳುವ ಒಳಮನೆ ಶುದ್ಧವಿರದಿದ್ದರೆ ಒಳಮನೆಯ ಗಬ್ಬು ಅಂಗಳದವರೆಗೂ...
ಪ್ರಜ್ಞೆಯ ಬ್ರಶ್‌ನಿಂದ ಉಜ್ಜಿ ತೊಳೆಯದೇ ಹೋದಲ್ಲಿ ನಾನೇ ಬೆಳೆಸಿಕೊಂಡ ಅಲ್ಲಿಯ ಹಾವಸೆ ನನ್ನ ಕಾಲನೇ ಜಾರಿಸಿ, ನಡು ಮುರಿದು ಕೂರಿಸಿಬಿಡುತ್ತೆ ಒಮ್ಮೊಮ್ಮೆ...
ಮನಸೂ ನನ್ನದೇ - ಪ್ರಜ್ಞೆಯೂ ನನ್ನದೇ - ಹಾವಸೆಯೂ ನನ್ನಿಂದಲೇ - ತೊಳೆದರೆ ತಾರೆಯಂತೆ ಹೊಳೆಯುವವನೂ ನಾನೇ... 
ಹೊಳೆಯುವುದಾ...?
ಕೊಳೆಯುವುದಾ...??

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)

3 comments:

  1. ತನ್ನನ್ನು ತಾನು ತಿದ್ದಿಕೊಳ್ಳುವವ ಇಷ್ಟಿಷ್ಟಾಗಿ ಹೊಳೆಯುತ್ತಾ ಹೋಗುತ್ತಾನೆ.....
    ತನ್ನ ತಪ್ಪಿನಲ್ಲಿ.... ತನ್ನ ಮನಸ್ಸಿಗೂ ದ್ರೋಹ ಬಗೆದು ಹೊರಗೆ ಹೊಳೆಯಬಯಸುವವನು
    ಒಳಗಿನಿಂದ ಕೊಳೆಯತೊಡಗುತ್ತಾನೆ.................

    ಒಳ್ಳೆಯ ಬರಹ............

    ReplyDelete