Saturday, August 1, 2015

ಗೊಂಚಲು - ಒಂದು ನೂರಾ ಅರವತ್ತೆರಡು.....

ಈ ದಿನಕ್ಕೊಂದು ಮಾತು.....
(ಬದುಕಿನ ಮತ್ತೊಂದು ವರುಷ - ಸಾವಿನೆಡೆಗೆ ಇನ್ನೊಂದು ಹೆಜ್ಜೆ...)


ಒಡೆದ ಮನಸು – ಬಾಡಿದ ಭಾವಲೋಕ – ಮಡಿದ ಕನಸುಗಳ ಮಸಣದ ಮೂಲೆಯಲಿ ನಿಂತ ಕ್ರುದ್ಧ ಕಬೋಜಿ...
ಒಂದು ಹೆಜ್ಜೆ ಆಚೆ ಒಲವ ಶರಧಿ – ನಡುವೆ ನನ್ನದೇ ಕೂಸಾದ “ನಾನೆಂಬ” ಕಗ್ಗಲ್ಲ ಗೋಡೆ...

ದೇಹವೆಂಬುವದಿದು ಆಸೆಗಳು ಹರೆಯದ ಮದದಿಂದ ಕುಪ್ಪಳಿಸಿ ಕುಣಿವ ದೊಡ್ಡ ಇಮಾರತ್ತಿನ ಮನೆ – ಹೃದಯವೆಂಬೋ ಕೋಳ ಕಂಬಕ್ಕೆ ಗೆದ್ದಲು...

ಸತ್ತ ಬಂಧಗಳ ರಾಶಿಯೆದುರು ಶವ ಪರೀಕ್ಷೆಗೆಂದು ಕೂತರೆ ಎಲ್ಲ ಸಾವಿಗೂ ನನ್ನ ವ್ಯಕ್ತಿತ್ವದ ವೈಕಲ್ಯವೇ ಕಾರಣ ಅನ್ನಿಸಿ ಒಮ್ಮೊಮ್ಮೆ ಮೈಲೆಲ್ಲ ನಡುಕ...
ಬದ್ಧತೆ ಇಲ್ಲದ ಭಂಡ ಬಾಳು ನಿನ್ನದು ಎಂದು ಹಳಿಯುವವರೂ, ಬದುಕ ಹೊಸ ಕೋನದಲಿ ನೋಡುವುದ ಕಲಿಸಿದವ ನೀನು ಎಂದು ಕಂಣ್ತುಂಬಿಕೊಳ್ಳುವವರೂ ಇಬ್ಬರೂ ನನ್ನವರೇ...
ಕೆಲವೊಮ್ಮೆ ಆ ಎರಡೂ ಮಾತು ಒಬ್ಬರಿಂದಲೇ ಬಂದಿದ್ದಿದೆ - ಕಾಲದ ಸಮಾಧಿಯಲಿ ಎಂತೆಂಥ ವೈಪರೀತ್ಯಗಳೋ...
ಹಾಗಾಗಿ ಹೊಸ ಪ್ರೀತಿ ಕೈ ಹಿಡಿಯಲು ಹಳೆಯದರ ಕೃಪೆಯ ಹಂಗಿಲ್ಲ ಎಂಬ ನನ್ನ ಹುಂಬತನ ಮತ್ತು ಸಕಲಕ್ಕೂ ಸಾವು ಪೂರ್ವ ನಿಶ್ಚಿತ ಎಂಬ ಸಿದ್ಧ ಸೂತ್ರವನ್ನು ಮತ್ತೆ ಮತ್ತೆ ನಂಬಿಕೊಂಡು ನನ್ನೇ ನಾನು ಸಮಾಧಾನಿಸಿಕೊಳ್ಳಬೇಕು...

ಆಷಾಢದ ಬೆಳಗಿನ ವಿರಹಿ ಮಳೆ, ಗ್ರೀಷ್ಮದ ನಡು ಮಧ್ಯಾಹ್ನ ಸುಡುವ ಬಿಸಿ, ಹೇಮಂತ ಸಂಜೆಯ ತಂಪು ಈ ಎಲ್ಲಾ ಘಳಿಗೆಗಳಿಗೂ ಸಾಕ್ಷಿಯಾಗಿರುವ ನಿನ್ನೆಗಳ ಹಂಗಿಲ್ಲದೆ ಬದುಕೋದು ಸುಲಭವಿಲ್ಲ - ಹಾಗಂತ ನಿನ್ನೆಗಳಲೇ ಹೊರಳಾಡುತ್ತಿರೋದರಲ್ಲಿ ಅರ್ಥವಿಲ್ಲ...
ಕೈಯಾರೆ ನಗುವ ಗೆದ್ದು ತಂದು ತುಂಬಿಕೊಳ್ಳುವ ಆತ್ಮ ಚೈತನ್ಯದ ಒಲವಿನಾರೈಕೆಯಿಂದ ಪ್ರೇರಿತವಾದ ಹೊಸ ಭರವಸೆ, ಹೊಸ ಸಾಧ್ಯತೆಗಳ ತುಡಿತದ ನಾಳೆಗಳ ಕನಸಿಲ್ಲದೇ ಬದುಕಿಗೆ ಬಲವಿಲ್ಲ - ಆದರೆ ನಾಳೆಗಳಲಿ ನಾನಿದ್ದೇನಾ ಎಂಬುದು ನಿಶ್ಚಿತವಲ್ಲ...
ನಿನ್ನೆಯ ನೆನೆವಂತಿಲ್ಲ, ನಾಳೆಯ ನಂಬುವಂತಿಲ್ಲ ಅಲ್ಲಿಗೆ ನನಗುಳಿದದ್ದೇನು..?
ಉತ್ತರ : ಈ ಕ್ಷಣ...
ಅಂದರೆ: ನನ್ನ ನಗು – ನಲಿವು, ದುಗುಡ – ದುಮ್ಮಾನ, ಎದೆ ಶರಧಿಯ ಪ್ರೇಮದುಬ್ಬರ – ನಾಭಿ ಮೂಲದಲಿ ಕಿಡಿ ಸೋಕಿ ದೇಹದ ಕಾಡನೆಲ್ಲ ಆವರಿಸಿ ಅಬ್ಬರಿಸೋ ಕಾಮದ ಬೆಂಕಿ, ಕಣ್ಣ ಹನಿ – ಖುಷಿಯದ್ದೂ ಅಥವಾ ನೋವಿಂದೂ, ನೆತ್ತಿಯ ಕಾವೇರಿಸೋ ಹಸಿ ಹಸಿ ಕನವರಿಕೆಗಳನೆಲ್ಲ ಒಳಗೊಂಡ ಈ ಕ್ಷಣ, ಅವನೆಲ್ಲ ಹಾಗೆ ಹಾಗೇ ತೀವ್ರವಾಗಿ ಅನುಭವಿಸಲು ನಾ ಸಾಕಿಕೊಂಡ, ನನ್ನೊಳಗೆ ಉರಿಯುತ್ತಲಿರೋ ಮೃಗೋನ್ಮಾದದ ಈ ಪುಟ್ಟ ಪುಟ್ಟ ಘಳಿಗೆಗಳು ಇವು ಮಾತ್ರ ನನ್ನವೆನ್ನಿಸುತ್ತೆ – ಸಂಪೂರ್ಣ ನನ್ನವು...
ಮರಣದ ಗೂಡು ಸೇರಿ ಬಾಗಿಲು ಮುಚ್ಚುವ ಹೊತ್ತಲ್ಲಿ ಎದುರಿನ ವಿದಾಯವ ನುಡಿವ ಕೆಲ ಕಣ್ಣುಗಳಲ್ಲಿ ಮೂಡಿ ನಿಲ್ಲುತ್ತಲ್ಲ – ಪ್ರೀತಿ, ಕರುಣೆ, ಅಸಹನೆ, ಹಿಂಸೆ, ನಿರಾಳತೆ, ನಿಟ್ಟುಸಿರು, ಆಕ್ರೋಶ (ಅಸಹಾಯತೆಯಲ್ಲಿ ಹುಟ್ಟಿದ್ದು) ಅವೆಲ್ಲ ಖಂಡಿತಾ ನನ್ನವೇ...

ಬದುಕ ಕೌದಿಯೊಳಗೆ ಇನ್ನೆಷ್ಟು ಕ್ಷಣಗಳು ನನ್ನವಾಗಿ ದಕ್ಕಲು ಮುಗುಮ್ಮಾಗಿ ಮಲಗಿವೆಯೋ... 
ಕಳೆದದ್ದಷ್ಟನ್ನು ಮಾತ್ರ ಎಣಿಸಲು ಶಕ್ತ ನಾನು... 

ಈಗೊಂದಿಷ್ಟು ವರ್ಷಗಳ ಹಿಂದೆ ಜನ್ಮ ತಳೆದ ಈ ಜೀವ ನಿನ್ನೆಗಳ ದಾಟುತ್ತಾ, ಸುಭೀಕ್ಷ ನಾಳೆಗಳ ಭೇಟಿಗೆ ಕನವರಿಸುತ್ತಾ ಇಂದನ್ನು ಮರೆಯದಿರುವಂತೆ ಮನಸ ಅಣಿಗೊಳಿಸಿಕೊಂಡದ್ದೇ ಈ ಜೀವದ ಮಹಾ ಸಾಧನೆ... 
ಈ ಸಾಧನೆ ನಿರಂತರವಾಗಲೆಂದು ಮತ್ತೆ ಮತ್ತೆ ಬಯಸುತ್ತೇನೆ... 
ಹರಸಿ ಬಿಡಿ ನೀವೂ ಒಮ್ಮೆ ಹಾಗಂತ ಇಂದು – ಈ ಜನುಮ ದಿನದಂದು – ಉಸಿರ ಒಡನಾಟ ತಪ್ಪುವ ಹೊತ್ತಲ್ಲೂ ನಗೆಯ ಒಡನಾಟ ತಪ್ಪದಿರಲೆಂದು...

ಬೆಳುದಿಂಗಳ ತೋಟದ ಮೂಲೆಯಲಿ ಮಾತಿನ ಸಮಾಧಿ ಕಟ್ಟಿ - ಮೌನದ ಮುಂಗುರುಳ ಹಿಡಿದು ಜೀಕುತ್ತಾ - ಸುಳಿದಿರುಗಿ ಸುಳಿವ ನೆನಪುಗಳ ಕುಳಿರ್ಗಾಳಿಯಲಿ ಪೊರೆ ಕಳಚಿಕೊಂಡು ಮನಸು ಬತ್ತಲಾಗುವ ಹೊತ್ತಿಗೆ - ಪೂರ್ವದ ಮೋರೆಗೆ ಹೊಸ ಕನಸಿನ ಕೆಂಪಿನ ನಂಜೇರಲಿ...

                                                  ವಿಶ್ವಾಸ ವೃದ್ಧಿಸಲಿ – ಶ್ರೀವತ್ಸ ಕಂಚೀಮನೆ

No comments:

Post a Comment