Sunday, February 7, 2016

ಗೊಂಚಲು - ನೂರಾ ಎಂಬತ್ಮೂರು.....

ಎದೆಯ ಹಾಲಿನ ಋಣ...
- ಹೌದು ಇದು ನಿನ್ನದೇ ಕನವರಿಕೆಯಲ್ಲಿ.....

...ಕರುಳ ಗಂಟಿನ ಗೆಳತೀ -
ಎದೆಯ ಕಳವಳವನೆಲ್ಲ ಕಣ್ಣು ಕಥೆಯಾಗಿ ಹೇಳುವಾಗ ನಿನ್ನ ಹೆಗಲ ದೃಢತೆಯ ನೆನಪಾಗುತ್ತೆ...

ಬೆಳದಿಂಗಳ ದಾರಿಯಲೂ ಆನೇ ಎನ್ನ ನೆರಳಿಗಂಜಿ ಹೆಜ್ಜೆ ನಡುಗುವಾಗ ನಿನ್ನ ಮಡಿಲ ತಂಪಿನ ನೆನಪಾಗುತ್ತೆ...

ಬೆಳಕ ಪ್ರಖರತೆಯಲ್ಲಿ ಹಾದಿ ತಪ್ಪಿ ಎಡವಿದ ಭಾವಗಳ ಗಾಯ ಚುರ್ರೆನ್ನುವಾಗ ನೀ ಒಳಮನೆಯಲಿ ಗುಣುಗುತಿದ್ದ ಮಾತಿನ ಸತ್ಯ ಅರಿವಾಗುತ್ತೆ...

ಮೌನದೆತ್ತರದ ಅರಿವಿದ್ದೂ ಮಾತಿನ ಮೋಹದಲಿ ಬಿದ್ದು ಹೊರಳುವಾಗ ನೀನಲ್ಲಿ ಸದಾ ಸವೆಸುವ ಒಂಟಿ ದಾರಿಯ ನೆನಪಾಗಿ ದಿಗಿಲಾಗುತ್ತೆ...

ಇರುಳ ಹೊದಿಕೆಯೊಳಗೆ ಸುಖದ ಹಸಿವಿನಿಂದ ನಾಭಿಯಾಳದ ನಾಡಿ ಸಿಡಿದು ಚಡಪಡಿಸುವಾಗ ನಿನ್ನ ಪರಿತ್ಯಕ್ತ ಬದುಕಿನ ಶುಭ್ರತೆ ನನ್ನೊಳಗಿನ ಅಲ್ಪತೆಯನ್ನ ಎತ್ತಿ ತೋರುತ್ತೆ...

ನೆನಪುಗಳ ಮೆಟ್ಟಿ ಕೇವಲ ನನ್ನ ಇಂದಿನ ನಗುವಿಗಷ್ಟೇ ನಾ ತುಡಿಯುವಾಗ ಎಲ್ಲ ಇದ್ದೂ ಅನಾಥವಾದ ನಿನ್ನ ಕನಸುಗಳ ನಿಟ್ಟುಸಿರ ಬಿಸಿ ಕಿವಿಯ ಸುಡುತ್ತೆ...

ಒಂದೇ ಒಂದು ನೇರ ನುಡಿಗೆ ಭಾವ ಭಿನ್ನತೆಯ ಹೆಸರಲ್ಲಿ ಸದ್ದೇ ಇಲ್ಲದೆ ಎದ್ದು ಹೋಪುವರ ನಡುವೆ ನಿನ್ನೆಲ್ಲ ನಿಲುವುಗಳ ಜೊತೆ ಕಿತ್ತಾಡಿ ಹೊರಟು ಸೋತು ಮರಳಿದಾಗಲೂ ಮತ್ತದೇ ಮೆಲುನಗೆಯಿಂದ ಮುದ್ದಿಸೋ ನಿನ್ನ ಬೇಶರತ್ತಾದ ಮಮತೆಯ ನೆನಪಾಗುತ್ತೆ...

ಕೊನೆಯ ಮಾತೊಂದ ಹೇಳಲಾ -
ಈ ಬದುಕ ಮುನ್ನಡೆಯ ಎಕೈಕ ಉದ್ದೇಶ ನೀನು; ಬದುಕಿಗೆ ಮುನ್ನುಡಿ ಬರೆದವಳು - ನಿನ್ನೊಡನೆಯ ಮಾತು ಮಾತಿನ ಜಗಳ, ಮರಳಿ ಮರಳಿ ತೋರುವ ಮರುಳ ಮನಸಿನ ಮುನಿಸು ಎಲ್ಲವೂ ನಿನ್ನೆಡೆಗಿನ ಪ್ರೀತಿಯ ಮತ್ತೊಂದು ಮಗ್ಗುಲಷ್ಟೇ...

ಲವ್ ಯೂ ಕಣೇ ಹುಡುಗೀ...
ಜಗದ ಚೆಲುವೆಲ್ಲ ಇವಳ ಕಣ್ಣಲ್ಲೇ...

ಹ್ಯಾಪಿ ಹುಟ್ದಬ್ಬ ಆಯೀ...

2 comments:

  1. soopero Anna (Y).. Ninnayige nan kade indanu shubhashaya helbidu (Y)

    ReplyDelete
  2. ಶುಭಾಶಯಗಳು ನಿಮ್ಮಿಬ್ಬರಿಗೂ.
    ಎನ್ನ ಬದುಕಿನಲ್ಲಿ ಸುಖವಿದೆಯೇ ? ಎಂಬ ಪ್ರಶ್ನೆ ಕೇಳಲೂ ಪುರುಸೊತ್ತಿಲ್ಲದಂತೆ ಕೇಳಿಕೊಂಡರೂ ತಮ್ಮ ಮೌನದಲ್ಲಿ ಎಲ್ಲವನ್ನೂ ಅಡಗಿಸಿಟ್ಟುಕೊಂಡವರಂತೆ ಬದುಕುವ ಅಮ್ಮಂದಿರಿಗೆ ಚಂದದ ಸಾಲುಗಳು ಶ್ರೀವತ್ಸ ಬರೆಯುತ್ತಿರಿ

    ReplyDelete