Friday, May 1, 2020

ಗೊಂಚಲು - ಮುನ್ನೂರ್ಮೂವತ್ತೊಂದು.....

ಅಂಕಿತನಾಮವ ಬೇಡದ ಕವಿತೆ.....

ನನ್ನ ಭಾವ ಸಂವಾದವೇ ಇಲ್ಲದೆ ತನ್ನ ಸುಖದ ಕೊನೇಯ ಹನಿಯನ್ನೂ ನನ್ನುದರಕೆ ಸುರಿದು ಮಗ್ಗುಲಾದವನ ಗಡುಸು ಬೆನ್ನಲ್ಲಿ ಪ್ರೇಮವ ಹುಡುಕುವ ಸಾಹಸದಲ್ಲಿ ಕಣ್ಣು ಮಳೆಯಾಗುತ್ತದೆ...
ಭಾವಗಳ ಎದೆಯ ಮೇಲೆ ರಕ್ತದ ಕಲೆ ಉಳಿಯುವುದಿಲ್ಲ - ಪ್ರೇಮದ ಶವಪರೀಕ್ಷೆಯಲ್ಲಿ ಇರುಳ ಕಣ್ಣೀರಿನ ಕಲೆ ಸಾಕ್ಷಿಯಾಗುವುದಿಲ್ಲ...
#ಶುಷ್ಕ_ಸಂಬಂಧ...
↜↰↱↝

ನಂದು, ಕೇವಲ ನಂದ್‌ನಂದೇ, ನಾನು ಅಧಿಕಾರದಿಂದ ಅನುಭವಿಸಬಹುದಾದ ವ್ಯಾಪ್ತಿಯದ್ದು ಅಂತೆಲ್ಲ ಮೆರೆಯುವ, ಒಟ್ನಲ್ಲಿ ಈ ಸ್ವಂತ ಅನ್ನೋ ಭಾವದ ಹಪಹಪಿ ಭದ್ರತೆಯ ಕಟ್ಟಿ ಕೊಡೋಕಾ ಅಥವಾ ನಮ್ಮ ಅಹಂ ಅನ್ನು ತುಂಬಿ ಕೊಡೋಕಾ...!?
#ಪ್ರೇಮ_ಕಾಮ_ಬಂಧ_ಬಂಧನ_ಇತ್ಯಾದಿ...
↜↰↱↝

ಅಸಮ ಜೀವ ಭಾವಗಳ ಕೊಡುಕೊಳ್ಳುವಿಕೆಯನು ತಕ್ಕಡಿ ಸಮನಾಗಿ ತೂಗಲಾದೀತೇ...!?
ಪರಿಹಾಸ ಅಂದರೆ,
ಸಮಭಾವ ಕೋಡಿ ಕೂಡಿ ಜೀವಜೇನು ಕೊಂಡಾಟವಾಡೋ ಪರಮ 'ಪರಾವಲಂಬಿ' ದಿವ್ಯ ಸುಖಗಳವು...
#ಪ್ರೇಮ_ಕಾಮ_ಇತ್ಯಾದಿ...
↜↰↱↝

ಉಸಿರಿಗೆ ಬಿಸಿ ತುಂಬದ ಯಾವ ಭಾವವೂ ಉತ್ಕಟ ಅನ್ನಿಸದಿರುವ ಪಾಪಿ ಪ್ರಾಣಿ ನಾನು...
ಪವಿತ್ರತೆಯ ಹಂಗಳಿಯದ ಪ್ರೇಮವ ಮಾತಾಡಲಾರೆ...
ಕಾಮದ ಪಾವಿತ್ರ್ಯವ ಪ್ರಕೃತಿ ಎದುರು ಪ್ರಶ್ನಿಸಲಾರೆ...
ಪ್ರಾಕೃತಿಕ ಸಹಜತೆಯನುಳಿದು ಇನ್ಯಾವ ಔನ್ನತ್ಯವನ್ನೂ ಒಪ್ಪಲಾರೆ...
#ಪ್ರೇಮವೂ_ಒಂದು_ಕಾಮವೇ...
↜↰↱↝

ಹಸಿದ ತೋಳಲ್ಲಿ ಕಲ್ಲಾಗುವ ಕಾಯ...
ಪ್ರೇಮ ಸತ್ತದ್ದಕ್ಕೆ ಸುಖದ ತಿರಸ್ಕಾರಕಿಂತ ದೊಡ್ಡ ಸಾಕ್ಷಿ ಬೇಕಾ...
#ಮುಗಿದ_ಅಧ್ಯಾಯ...
↜↰↱↝

ಬಂಧ ಸಂಬಂಧಗಳ ನಡೆಯಲ್ಲಿ ಅಧಿಕಾರದ ಬಾಧ್ಯತೆ ಅನ್ನೋದು ಆಪ್ತತೆಯ ಆದ್ಯತೆಯನ್ನೂ ಹಿಂದ್ಹಿಂದೆ ನಿಲ್ಲಿಸುತ್ತೆ...
#ಹಾದಿ_ಕವಲಾದಾಗ...
↜↰↱↝

ಬದುಕಿನ ಒರಟುತನ ಭಾವಕ್ಕೆ ದಕ್ಕದೇ, ಒಗ್ಗದೇ ಹೋಗುವ ಒದ್ದಾಟವೇ ಬಲಹೀನವಾಗಿಸುತ್ತದಾ ಜೀವವ...
ಕರುಳ ಮಡತೆಗಳಲಿ ಮುಚ್ಚಿಟ್ಟ ನೋವುಗಳೆಲ್ಲ ದಿಂಬಿನೊಂದಿಗೆ ಮಾತಿಗೆ ಕೂರುತ್ತವಂತೆ...
ಇರುಳೆಂದರೆ ಎದೆಯು ಸಣ್ಣಗೆ ಬೆಚ್ಚುತ್ತಾ, ಒಂಚೂರೂ ಹಗುರಾಗುತ್ತಾ ನಿಟ್ಟುಸಿರ ಹಾಯಿ ಮೇಲೆ ತೇಲುತ್ತಾ ದಾಟುವ ಕಾಲ...
#ಹೆಸರಿಲ್ಲದ_ಹಾದಿ...
↜↰↱↝

ಬರೆದ ನಗು ನಿನ್ನದೂ ಕೂಡಾ ಅಂತಾದ್ರೆ ನಕ್ಕು ಬೀಗಬಹುದು - ಆದರೆ ನೋವಿಗೆ ನೋವೇ ಉತ್ತರವಾಗಿ ಬರುವ ಸಂದಿಗ್ಧವ ಬರೆದು ಏಗಲಿ ಹೇಗೆ...
#ಅಂತಃಕರಣ...
↜↰↱↝

ನಿನ್ನ ಹಿಂದ್ಹಿಂದೆ ಅಲೆಯೋ ಹುಚ್ಚೇನೂ ಇಲ್ಲ - ನಿನ್ನೊಡಗೂಡಿ ಜೊತೆ ನಡೆವ ಮೋಹಕ್ಕೆ ನೀನಲ್ಲದೆ ಮದ್ದಿಲ್ಲ...
ಮಳೆ ಬರುವ ಗಾಳಿ ಸುದ್ದಿಯಿದೆ - ಕಾಯುವ ಸುಖಕ್ಕೆ ರೆಕ್ಕೆ ಮೂಡಿದೆ...
#ಎರಡು_ಹನಿ...
↜↰↱↝

ಬೆಳಕೇ ಬೆಳಕಾದ ಬಾನ ಬಯಲು ನೀನು - ಅಸೀಮ ಆಪ್ತತೆ...
ಎದೆಯ ಕತ್ತಲ ಭಾರವನಿಳಿಸುವ ದಿವ್ಯ ನೀಲಾಂಜನ ನಿನ್ನ ಪ್ರೀತಿ...
"ಕಳ್ಳ ನಾನು - ಕದಿಯಲಾಗದ ಪ್ರೀತಿ ಅಂದ ನೀನು..."
#ಅಂಕಿತನಾಮವ_ಬೇಡದ_ಕವಿತೆ...

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)

No comments:

Post a Comment