ಮರಣ ಸುಖ.....
ಮಾತು ಸೋತ ಹೊತ್ತಿನಲ್ಲಿ -
ನಿನ್ನ ಕಾಡದಂತೆ ನನ್ನ ನಾನು ಸಂಭಾಳಿಸಿಕೊಳ್ಳಬೇಕಾದಲ್ಲಿ ಸುಮ್ಮನಿದ್ದುಬಿಡಬೇಕು...
ಸುಮ್ಮನೆದ್ದುಬಿಡುವ ನಿರಾಕರಣೆಗಿಂತ ತುಸು ಸುಮ್ಮನಿದ್ದು ನೀರೆರೆಯಬೇಕು...
____ನೇಹ, ಪ್ರೀತಿ, ನೆನಹು, ಇತ್ಯಾದಿ...
⇱↺↹↻⇲
ಶ್ರೀ ಇಲ್ಕೇಳೋ -
ರಾಧಾ ಕೃಷ್ಣರನ್ನ ಆ ಪರಿ ಆರಾಧಿಸೋ ನಾವುಗಳೇ ಒಲವೆಂಬೋ ಬಯಲ ಗಂಧವನ್ನ ಡಬ್ಬೀಲಿ ತುಂಬಿ, ಮುಷ್ಟೀಲಿ ಹಿಡ್ಕೊಂಡು, ವಿಧವಿಧ ಹೆಸರಲ್ಲಿ ಕೇವಲ ನಂದ್‌ನಂದೇ ಆಗಿ ಪಳಗಿಸ್ಕೊಂಡು ಆಳ್ತೀನೀ ಅಂತ ಹೊರಡ್ತೀವಿ ನೋಡು; ಚೋದ್ಯವೇ ಅಲ್ವಾ...!!
ಎಲ್ಲಾ ಋತು ರಾಗಗಳಿಗೂ ಎದೆಯೀಯದ ಭಾವಗಳೆಲ್ಲಾ ಮಣ್ಣ ಗೋಲಕದೊಳಗೆ ಕೂಡಿಟ್ಟ ಪುಡಿಗಾಸಿನಂಗೇ ಅನ್ಸಲ್ವಾ...
______ ಪ್ರೀತಿ, ಪ್ರೇಮ, ಪ್ರಣಯ ಇತ್ಯಾದಿ ಇತ್ಯಾದಿ...
⇱↺↹↻⇲
ಈ ಅಪರ ಹೊತ್ತಿನ ಮಳೆಯಲ್ಲಿ ನೆನಪುಗಳೆಲ್ಲಾ ತೊಳೆದು ಹೋಗಬೇಕು - ನಿಮ್ಮೊಳಗಿನ ನನ್ನೆಡೆಗಿನದು...
ಗುರುತುಗಳುಳಿಯಬಾರದು ಈ ಊನ ಪಾದದ್ದು...
_____ ಸತ್ಯ ರುಚಿಸುವುದಿಲ್ಲ ಭಾವೋನ್ಮಾದಿ ಮನಸಿಗೆ...
⇱↺↹↻⇲
ಭಾವ ಪ್ರವಾಹ/ಪರವಶತೆ ಒಮ್ಮುಖವಾದರೂ ನಗುತಲೇ ಸ್ವೀಕರಿಸಿ ಸೈರಿಸಬಹುದು - ಅಂತರಂಗದ ಅನುಸಂಧಾನದಲಿ ನನ್ನ ಪ್ರೀತಿಸಿಕೊಂಡಂತೆಯೇ ನಿನ್ನನೂ ಪ್ರೀತಿಸಿಕೊಂಡಿರಲಾದೀತು...
ಆದರೋ,
ನೇರ ಸಂವಹನದ ಹಾದಿ ಒಮ್ಮುಖದಲಿ ಸವೆಯುವುದಾದರೆ ಮಾತ್ರಾ ತುಂಬ ಕಾಲ ಒಡನಾಟ ಸಹನೀಯವಾಗಿ ಒಡಂಬಡುವುದು ಕಷ್ಟ ಕಷ್ಟ - ಅಲ್ಲಿ ಸ್ವಯಂ ಅವಮಾನದ ಭಾವ ಒಳಗೊಳಗೇ ಕಾಡದೇ ಉಳಿವುದು ದುರ್ಲಭ...
_____ ಭಾವ - ಬಂಧ - ಸಂಬಂಧ ಇತ್ಯಾದಿ ಇತ್ಯಾದಿ...
⇱↺↹↻⇲
ಒಳಗೆ ಗದ್ದಲ ಗುಡುಗುಡಿಸುವಾಗ ಹೊರಗಿನ ಸದ್ದು ಕಿವಿಯ ಅಂಟುವುದಿಲ್ಲ...
ಶೃದ್ಧಾಂಜಲಿಗೆ ಮೌನವೇ ಗಟ್ಟಿ ಆಯ್ಕೆ ಆಗಿದ್ದು ಅದಕ್ಕೇ ಅಲ್ಲವಾ...
⇱↺↹↻⇲
ನಿನ್ನ ಇರುವಿಕೆಯೇ ಒಂದು ವಿಪಿನ ಸೌಂದರ್ಯ - ಚಂದಕೊಂದು ರೂಪಕ...
ನಿನ್ನಂತೆ ನಿನ್ನಲ್ಲಿ ಚಂದವ ಕಂಡೆನಾದರೆ ನಾನೂ ನಿನ್ನಷ್ಟೇ ಚಂದ...
_____ ನಿನ್ನಂತೆ ನೀ ಅದೆಷ್ಟು ಚಂದ ಚಂದ...
⇱↺↹↻⇲
ಮಳೆಯಲಿ ಮಿಂದು ಛಳಿಯ ಸೆರಗ ಹೊದ್ದ ಬೆಳಕಿನ ಕೋಲ್ಗಳು ಹಸಿರ ಮರೆಯಿಂದ ತಿಣುಕುತ್ತಾ ಊರು ಕೇರಿ ಹಾದಿ ಬೀದಿಗಳನು ಮೆಲ್ಲಗೆ ತುಳಿಯುತ್ತವೆ...
ಹೆಸರಿರದ ಹಾಡು ಹಕ್ಕಿಯೊಂದು ರೆಕ್ಕೆ ಕೊಡವಿದ ಸದ್ದಲ್ಲಿ ಕಾಡು ಕತ್ತಲ ನೀರವದ ನಡುವಿನ ಓಂಕಾರ ಕೇಳಿದರೆ ಅದು ನನ್ನೂರು...
_____ಮಲೆ(ಳೆ)ನಾಡು - ಮಬ್ಬು ಹಬ್ಬಿದ ಹಬ್ಬದ ಬೆಳಗು...
⇱↺↹↻⇲
ಉರಿಯುತಿರಲಿ ಕಣ್ಣ ಕಕ್ಷೆಯ ತುಂಬಾ ನಗೆಯ ಹಣತೆ...
ಉಕ್ಕುತಿರಲಿ ಎದೆಯ ಪಾತ್ರೆ ತುಂಬಿ ತುಂಬಿ ಪ್ರೀತಿ ಒರತೆ...
ಬೆಳಕು - ಬೆಡಗಿನ ಶುಭಾಶಯ... 💞🍬
_____ ದೊಡ್ಡಬ್ಬ...
⇱↺↹↻⇲
ಒಂದು ನಗೆಯ ಕಿಡಿಯು ಸಿಡಿಯೆ ಎದೆಯಿಂದ ಎದೆಗೆ
ಪ್ರೀತಿ ಬಣ್ಣದಾ ಹುಗ್ಗಿ ಪರಿಪಾಕವ ಬಡಿಸಿದಂಗೆ ಎದೆಯಿಂದ ಎದೆಗೆ
ಕನಸುಗಳ ಸುಗ್ಗಿ ಹಿಗ್ಗಿನ ಸಗ್ಗವಾಗಲಿ ಎದೆಯ ನೆಲ/ಬಿಲದಾಗೆ...
"ಹುಚ್ಚಾಟದ ಹೆಗಲನೇರಿ ನಡೆವ ಹುಚ್ಚು ನಗೆಯ ಆಂತರ್ಯದಲ್ಲಿ ಹೊತ್ತಿ ಉರಿವ ಜೀವಂತಿಕೆಯ ಹಸಿವು..."
____ ನಗುವೊಂದೇ ಆಯ್ಕೆ, ಆದ್ಯತೆ, ಪ್ರಾರ್ಥನೆ, ಎಲ್ಲ ಎಲ್ಲಾ...
⇱↺↹↻⇲
"ನಾನು ಹೇಳುವುದೆಲ್ಲಾ ಸತ್ಯ, ಸತ್ಯವನ್ನಲ್ಲದೇ ಬೇರೇನನ್ನೂ ಹೇಳುವುದಿಲ್ಲ" ಅಂತಂದು ಅಂತರಾತ್ಮನೆದುರು ಪ್ರಮಾಣ ಮಾಡಬಲ್ಲೆಯಾದರೆ.........
______ ಮರಣ ಸುಖ...
*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)
No comments:
Post a Comment