ಪ್ರಾಯ ಹನ್ನೊಂದು.....
(ಮಡಿಲ ಬುಟ್ಟಿಯ ತುಂಬಾ ಭಾವಾನುಭಾವದ ಜೀವಂತ ಹೂಗಳು... 😍 )
ಮೃದುಲ ಮೋಹವೇ -
"ತುಟಿಗೆ ತುಟಿ, ಕಟಿಗೆ ಕಟಿ..."
ಛಳಿ ಋತುವಿನ ರಸಿಕ ಶಾಸನವಾಗಬೇಕು...
____ ವಿರಹದುರಿ/ಲಿ...
💬💭💬
ಕತ್ತಲ ದಾಂಟಲು ದೀಪವಾಗಬೇಕು - ಕತ್ತಲನೇ ಜೀವಿಸುವುದಾದರೆ ದೆವ್ವವೇ ಆಗಬೇಕು...
ಕತ್ತಲನು ಸುಡುವ ದೀಪ ಸಾಮರ್ಥ್ಯ, ಕತ್ತಲನೇ ಜೀರ್ಣಿಸಿಕೊಂಬ ನಿಶಾಚರ ವೀರ್ಯ ಎರಡೂ ಎನ್ನೆದೆಯ ಕೋಶದ ಪ್ರೀತಿಯ ಆವೇಶವಾಗಲಿ...
____ ವಿಕ್ಷಿಪ್ತ...
💬💭💬
ಹೆಣೆವ ಬೇಲಿಗೂ ಒಂದು ಬೇಲಿಯಿರಲಿ...
ಹಸಿರು ಹಾವೊಂದು ಬಯಲ ಕಥೆ ಹೇಳಲು ಒಳಗಿಣುಕುವಷ್ಟಾದರೂ ಕಿಂಡಿ ಇರಲಿ...
____ ಭಾವ ಬಂಧ ಸಂಬಂಧ ಮತ್ತು ನಡುವೆ ಒಡನಾಡೋ ಕನಸು...
💬💭💬
ನಿನ್ನ ಸೇರುವುದೆಂದರದು ನಿನ್ನ ಸೂರು ಸೇರುವುದಲ್ಲ,
ನಿನ್ನ ಸೇರುವುದೆಂದರೇ ಅದು ನೀನೇ ಆಗುವುದು...
ಇಲ್ಲಿನ ತೊರೆಯೊಂದು ಅಲ್ಲಿಗೋಡಿ ಶರಧಿ ಸೇರಿ ಕಡಲೇ ಆದ ಹಾಗೆ...
____ ಲೆಕ್ಕ ಕೂಡುವುದಲ್ಲ; ಚೊಕ್ಕ ಸೇರುವುದು...
💬💭💬
ಕೇಳು -
'ಎನ್ನಂಥಾ ಪರಮ ಸುಖಿ ಯಾರಿಲ್ಲ' ಅಂದುಕೊಂಡು ಸುಖದ ವ್ಯಾಖ್ಯಾನಗಳ ಮೂಲವನ್ನೇ ಆಡಿಕೊಂಡು ನಕ್ಕು ದಿನ ದೂಡುವುದೊಂದು ದಿವ್ಯ ಸುಖ ಇಲ್ಲಿ...
ಹೇಳು -
ಬದುಕಿಗೇ ಉದ್ದೇಶವೆಂಬುದಿಲ್ಲದವನ ಬದುಕಲ್ಲಿ ನೋವಿಗಾದರೂ ಅಸ್ತಿತ್ವ ಎಲ್ಲಿ...
ನೋಡು -
ನೋವಿಗೂ ನಲಿವಿಗೂ ನಗೆಯದೇ ಪರಿಪಾಕ ಅಲ್ಲಿ...
_____ ವಿಕ್ಷಿಪ್ತ...
💬💭💬
ನಗೆಯ ದೀಪವ ಆರಿಸಲೆಂಬಂತೆ ಆ ಉರಿಗೆ ಮೈಯ್ಯೊಡ್ಡಿ ರೆಕ್ಕೆ ಸುಟ್ಟುಕೊಂಡ ನೋವ ಪತಂಗಗಳೆಲ್ಲ ಚಿಮಣಿಯ ಬುಡದ ಕತ್ತಲಲಿ ಕಣ್ಣ ತೋಯಿಸಿಕೊಳ್ಳುತ್ತವೆ...
_____ ಕರುಣಾಳು ಕತ್ತಲು...
💬💭💬
ಮುಖವಾಡ ಕಳಚಿಟ್ಟೆ ನೋಡೂ - ಸಭ್ಯ ಜಗದ ನಾಟಕದಲ್ಲೀಗ ನಾನು ಅಸ್ಪೃಶ್ಯ...
💬💭💬
ಹಳೆಯದನ್ನು ಯಾರೂ ಕದಿಯಬಹುದು...
ನನಗಾಗಿ ಹೊಸದನ್ನು ಮಾತ್ರ ನಾನೇ ಕೊಳ್ಳಬೇಕು...
ಹಾಗೆಂದೇ
ಹಾದಿ ಕವಲಾದಷ್ಟೂ ಪಯಣಕ್ಕೆ ಹೊಸತೇ ಹದ ಇಲ್ಲಿ...
ಆದರೂ,
ಓಡುವ ಕಾಲನ ಅಂಡಿಗೆ ಬರೆಯಿಡಲು ನಗೆಯ (ಆಟ)ಆಡುವುದ, ನಲಿವನು ಹಾಡುವುದ ಮರೆತು ಕಾಲನ ಹಿಂದೆ ಓಡುವ ಮರುಳ ಜಗವೇ, ಹೆಸರನುಳಿಸಿ ಹೋಗುವ ಹಂಬಲವಿಲ್ಲದ ಎನ್ನಂಥ ತೀರಾ ಸಾಮಾನ್ಯನ ಎದೆಯ ಅಂಗಳದಲಿ ನಿಂತು ಶಾಂತ ನಿದ್ದೆಯ ಕದಡಿ ಕಾಡುವಂಥ ರುದ್ರ ರಮಣೀಯ ಕನಸುಗಳ ಮಾರಲು ಸುಖಾಸುಮ್ಮನೆ ಹೆಣಗಬೇಡವೇ…
ಅವನ ಪಾಡಿಗವನ ಬಿಟ್ಟು ಬಿಡು ಹಸುಳೆ ನಗುವ ಗೆದ್ದುಕೊಂಡು ತಣ್ಣಗೆ ಬಾಳ್ವೆ ಗೈಯ್ಯುವುದೂ ಜೀವ ಜಗದ ಚಂದಾನೆ ಹಾದಿಯೇ ಅಂದುಕೊಂಡವನ...
ಇಲ್ಲಿನ ಎಲ್ಲಾ ಎತ್ತರಗಳೂ ನಿಂತದ್ದು, ನಿಲ್ಲಬೇಕಾದ್ದು ಗಟ್ಟಿ ನೆಲಕಂಟಿಯೇ - ನೆಲ ಹೆಗಲು ಕೊಡದೇ ಎತ್ತರವನಾಳಲಾಗುವುದಿಲ್ಲ...
ಗದ್ದಲ ಮಾಡದೆ ಬದುಕಿ ಸದ್ದಿಲ್ಲದೆ ಸತ್ತು ಹೋದ ನಿರುಪದ್ರವಿಯ ಮಸಣ ಯಾತ್ರೆಯುದ್ದಕ್ಕೂ ಬೀದಿ ನಾಯೊಂದು ಕರುಳ ಸಂಕಟದಿ ಊಳಿಟ್ಟರೆ ಆಶ್ಚರ್ಯಬೇಡ - ಅಂತಃಕರಣದ ಅರಿವು (ಪ್ರೀತಿ)ಅನ್ನ ಉಂಡವರಿಗಷ್ಟೇ ಅರಿವಾಗುವುದು...
ಇವೇ ಇಂಥವೇ
ಈ ತಿಕ್ಕಲು ಭಾವಗಳ ಬರವಣಿಗೆಯ ಮೆರವಣಿಗೆ ಉರವಣಿಗೆ ಹಿಡಿದುಕೊಟ್ಟ ಅಭಿಮಾನದ ನೋಟಗಳೇ ಎನ್ನೆದೆಯ ಬಾಗಿಲ ನಗೆಯ ದೀಪಗಳಾಗಿ ಮಿನುಗುತ್ತಾ ಬೆಚ್ಚಗಿಟ್ಟಿವೆ ಇಂದು ಈ ಬದುಕನು...
ನನ್ನ ಬರವಣಿಗೆ ಕೂಡಾ ಇಂದೀಗ ನನ್ನ ಒಂದು ಹುಚ್ಚು ಗೀಳು...
ಭಾವಗಳ ಸಹಜ ಝರಿ ಬತ್ತಿ ಎಷ್ಟೋ ಕಾಲ ಸಂದಮೇಲೂ ಬರೆಯುತ್ತಲೇ ಇದ್ದೇನಲ್ಲ, ಅಭ್ಯಾಸವಾಗಿ ಹೋದ ಬರವಣಿಗೆ ಬರೆಯದೇ ಇರಲಾಗದೆಂಬ ಭ್ರಮೆಯ ಹುಟ್ಟು ಹಾಕಿದೆಯಾ ಅನ್ನಿಸುತ್ತೆ ಒಮ್ಮೊಮ್ಮೆ...
ಇಷ್ಟಾಗಿಯೂ ಈ ಬರವಣಿಗೆ ತುಂಬಿ ತಂದ ಹಗುರತೆ, ನೇಹ ನಂಟುಗಳಿಂದ ದೂರ ನಿಲ್ಲಲಂತೂ ಆಗಲಿಕ್ಕಿಲ್ಲ...
ಹಾಗೆಂದೇ ಹನ್ನೊಂದು ಸುಧೀರ್ಘ ವರ್ಷಗಳ ಹಾಯ್ದು ಹನ್ನೆರಡನೆಯ ಪ್ರಾಯಕ್ಕೆ ಎದೆ ತೆರೆಯುತ್ತಿದೆ ಈ ನನ್ನ ಬ್ಲಾಗ್ ಎಂಬ ಭಾವ ಪೆಟ್ಟಿಗೆ...
ನಿಮ್ಮಗಳ ಅಕಾರಣ ಪ್ರೀತಿ ಮುಂದೆಯೂ ಬರೆಸೀತು...
ಇಲ್ಲಿ ನಾ ಚೆಲ್ಲಿದ ಭಾವಗಳ ಮೊಗೆದು ನಿಮ್ಮೆದೆಯ ಹಸಿ ನೆಲಕೆರೆದುಕೊಂಡಿರಿ...
ಗಟ್ಟಿ ಕಾಳಾಗಿ ನಿಮ್ಮೊಳಗೆ ಹೊಸ ಹಸಿರ ಸೂಸಿದವೆಷ್ಟೋ, ಜೊಳ್ಳಾಗಿ ತುಸು ಗೊಬ್ಬರವಾದವದೆಷ್ಟೋ...
ಲೆಕ್ಕ ಹಾಕುವ ಹುಂಬತನ ತೋರದೇ ನಿಮ್ಮ ನೇಹದ ಆದರವನಷ್ಟೇ ಬಾಚಿಟ್ಟುಕೊಂಡು ಬೆಚ್ಚಗಿದ್ದೇನೆ...
ಇಂತೆಯೇ -
ಪ್ರೀತಿಯಿಂದ ಪ್ರೀತಿಯ ಕಾಯ್ದುಕೊಳ್ಳುವಾ...
ಇದೇ ಅಭಿಮಾನದ ಪ್ರೀತಿ ಕಾಲನ ದಿನದರ್ಶಿಕೆಯ ಯಾವುದೋ ತೇದಿಯಲಿ ನಮ್ಮನು ಮುಖಾಮುಖಿಯಾಗಿಸೀತು - ಹಾಂಗೆ ಸಿಕ್ಕಾಗ ಅಕ್ಕರೆಯ ನಗುವೊಂದು ನಡುವೆ ಒಡನಾಡಿದರೆ ಈ ಭಾವಗೊಂಚಲು ಸಾರ್ಥಕ್ಯದ ತೀರ್ಥವ ಮಿಂದಂತೆ ಲೆಕ್ಕ...
ಹನ್ನೊಂದಕ್ಕೊಂದು ಶುಭಾಶಯ - ಎನ್ನ ಬೆನ್ನಿಗೆ ಎನ್ನದೇ ಮೊದಲ ಚಪ್ಪರಿಕೆ...
ನಿಮ್ಮ ಅಕಾರಣ ಪ್ರೀತಿಗೆ ಇಲ್ಲಿಂದಲೇ ಶಿರಸಾ ನಮಾಮಿ...
ಪ್ರೀತಿ ಕಾಯುತ್ತದೆ, ಕಾಯಲಿ ಸದಾ...
ಧನ್ಯವಾದ... ಲವ್ಯೂ ಆಲ್... 💞💞
*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು...:)
No comments:
Post a Comment