Thursday, June 15, 2023

ಗೊಂಚಲು - ನಾಕ್ನೂರಾ ಹತ್ತು.....

ಉಪ್ಪುಪ್ಪು ತುಟಿಯ ಅಲಂಪಿನ ನಗು.....

ಹೇಯ್ -
ಎದೆಯ ಆಪ್ತ ಭಾವಾವೇಗವ ಸರಾಗ ಹರವಿಡಬಲ್ಲ ಈ ಮುಕ್ತತೆ ಎಷ್ಟು ಚಂದ ಮಾರಾಯ ನಿನ್ನೊಂದಿಗೆ...
ಅಲ್ವೇ -
ನಿರಾಳವಾಗಿ ಪ್ರೀತಿಯನ್ನು ಹೇಳುವ ಸಲುಗೆ ಕೊಟ್ಟದ್ದಕ್ಕೇ ಅಲ್ಲವಾ ಯಮುನೆ ಸೆರಗಿನ ಜೀವಜಾಲಕೆಲ್ಲ ಕರಿಯ ಪ್ರೀತಿಯ ಕೊಳಲಾಗಿ ಪ್ರಿಯನಾದದ್ದು ಎದೆಯ ಕನಸೊಂದಿಗೆ...
___ ಸಖ ಸಖೀ ಸಾಂಗತ್ಯವೆಂಬ ಆತ್ಮದ ತಂಪು ಕಂಪು...
&&&

"ಪ್ರೀತಿಯಲ್ಲಿ ಸೋತು, ಪ್ರೀತಿಯಿಂದ ಸೋತು, ಪ್ರೀತಿ ಸೋಲದಂತೆ ಕಾಯಬೇಕಿತ್ತು; ಆದರೆ - ಗೆಳೆಯನಾಗಿ, ಪ್ರೇಮಿಯಾಗಿ, ಗಂಡನಾಗಿ ಪ್ರೀತಿಯನ್ನು ಗೆಲ್ಲಬಹುದಾಗಿದ್ದಲ್ಲೆಲ್ಲ ಗಂಡಸಾಗಲು ಹೋಗಿ ಸೋತದ್ದಲ್ಲವಾ ನೀನೂ..."
ನೆನಪಿದ್ಯಾ, 
ಸಮಾಧಾನಕರ ಬಹುಮಾನ ಅಂತ ಕೊಡ್ತಾ ಇದ್ರು ಶಾಲೇಲಿ ಸಮಾಧಾನಕ್ಕೆ; ಹಾಗೆ ನಿನ್ನ ಸೋಲನ್ನೂ ಗೆಲುವಿನಂತೆ ಬಣ್ಣಿಸ್ತೇನೆ ನಾನು ನನ್ನ ಸಮಾಧಾನಕ್ಕೆ...
ಯಾಕ್ಹೇಳು, 
ನೀನು ಸೋತೆ ಅಂತ ಹೇಳಿದ್ರೆ ನಾನು ನನ್ನ ಆಯ್ಕೆಯ ಸೋಲೊಪ್ಪಿಕೊಂಡಂಗಲ್ಲವಾ; ನಿನ್ನ ಅಹಂಕಾರವ ಮುರಿವ ಹಂಬಲಕ್ಕಿಂತ 'ನನ್ನ ಆಯ್ಕೆ' ಎನ್ನುವ ನನ್ನ ಅಹಂ ಅನ್ನು ಮೆಚ್ಚಿಸಿಕೊಳ್ಳುವ ಹುಚ್ಚು ದೊಡ್ಡದಿರತ್ತೆ ನೋಡೂ...
ಮನವ ಅಡವಿಟ್ಟು ಎದೆಯ ಅಂತರಾಳವ ಗೆಲ್ಲಬೇಕಾದವನು ಮೈಯ್ಯ ಬಿಚ್ಚಿಟ್ಟು ಸೋತು ಬಳಲಿ ಎದೆಯ ಉಬ್ಬಿನ ಮೇಲೆ ಬುಸುಗುಡುತ್ತಾ ಮಲಗಿರುವಾಗ ಕತ್ತಲು ಸಂತೈಸಬೇಕಿದ್ದದ್ದು ನಿನ್ನನ್ನಾ ಅಥವಾ ನನ್ನನ್ನಾ...?
ಕೆಲವು ಪ್ರಶ್ನೆಗಳನ್ನು ಕೇಳಬಾರದೇನೋ, ಕೇಳಿಕೊಳ್ಳಲೇಬಾರದೇನೋ; ಉತ್ತರಕ್ಕೆ ಉಸಿರೇ ಇಲ್ಲವೇನೋ...!?
___ ಕಥೆಯಾಗದೇ ಉಳಿದ ಪಾತ್ರಗಳ ಕಣ್ಣ ಮೌನ ಮಾತಾಡುತ್ತದೆ...
&&&

ಮಡಿವಂತರ, ಸಭ್ಯರಾಗಿ ಗುರುತಿಸಿಕೊಂಡವರ ಬದುಕಿನ ಬಹು ದೊಡ್ಡ ಸಮಸ್ಯೆ ಅಂದ್ರೆ "ಪ್ರೇಮವಾಗುವುದು..."
____ ಪ್ರೇಮಿಯನ್ನು ಪ್ರೇಮವೆಂದು ಅಂಟಿಕೊಂಡವರು...
&&&

ಮಾತುಗಳ ಮುಚ್ಚಿಟ್ಟು, ಮೌನ ದೈವೀಕ ಅಂತಂದು, ರಕ್ಷಣಾತ್ಮಕ ಆಟ ಕಲಿತು, ಕತ್ತಲಲ್ಲಷ್ಟೇ ಪ್ರೇಮವ(?) ಸುಲಿದು ತಿಂದು ಸುಭಗರೆಂದು ಹುಳ್ಳನೆ ನಗೆ ನಕ್ಕರು...
ಹುಟ್ಟಾ ಪೋಲಿ ನಾನು, ಬಯಲ ಬೆತ್ತಲಿಗೆ ಮರುಳಾದ ಮೋಹಿ, ದಂಡೆಗೂ/ಬಂಡೆಗೂ ಎದೆನುಡಿಗಳ ತೇವ ಮೆತ್ತುವ ಅಲೆಗಳ ಹೋರಿನ ಪ್ರೀತಿ ನನ್ನದು, ಮಾತೇ ನನ್ನ ಬಂಡವಾಳ, ಮಾತೇ ನನ್ನಲ್ಲಿ ಸುಖದ ಸೀಯಾಳ...
___ ಮಾತಿನ ಗಂಟಲು ಬಿಗಿದಾಗಲೆಲ್ಲ ಮೌನದ ಮೂಗು ಹಿಡೀಬೇಕನ್ನಿಸುತ್ತೆ...
&&&

"ನಾನೇ(ನು)" ನನ್ನ ಸಾವಿಗೆ ಕಾರಣ - ನಿನ್ನೊಳಗೆ...
&&&

ಕೂಸೇ -
ಜಗಕೆ ಬೆನ್ನಾಗಿ ಕೃಷ್ಣನೊಡನಾಡಬಹುದು ಹರಿವಾಗಿ - ಪ್ರಕೃತಿ/ಪ್ರೇಮ...
ಸುಲಭಸಾಧ್ಯವಲ್ಲ ಜಗವ ಧಿಕ್ಕರಿಸಿ ರಾಮನ ಹಿಂದೆ ನಡೆವುದು - ವಿರಕ್ತಿ/ಆದರ್ಶ...
___ ಗುಣಗಳು ಮಾತಾಡುತ್ತವೆ, ಗುಣವೇ ಬಯಲು, ಗುಣವೇ ನೆರಳು...
&&&

ಮಾಡಕ್ಕೆ ಬದುಕಿಲ್ಲಿಲ್ಲ
ಸಾಯಕ್ಕೆ ಕಸುವೂ ಇಲ್ಲ
ಮಸಣದ ಬಾಗ್ಲಲ್ಲಿ ಹಲ್ಕಿಸ್ಕೊಂಡ್ ಕುಂತಿದ್ದೆ...
ಭಿಕ್ಷೆ ಹಾಕಿ ಶಿವಾ!!
ಬದ್ಕೋಕಾದ್ರೂ ಸೈ, ಸಾವಿಂದಾದ್ರೂ ಸೈ...
___ ಮನ್ಶಂ(ನ್ಸಿಂ)ಗೆ ಪ್ರೀತಿ ಹಸ್ವು...
&&&

ವತ್ಸಾ -
ಕಥೆ(ಗಾಗಿ) ಓದಬೇಡ, ಓದುವುದಾದರೆ ಕಥೆಯೊಳಗಣ ಬದುಕನ್ನ ಆಲಿಸು, ಆಗಷ್ಟೇ ಎಲ್ಲ ಎಲ್ಲರ ಬದುಕಿನೆಡೆಗೆ ಸಂವೇದನೆಯಿಂದ ಸಂವಾದಿಸುವುದು ಎದೆಯ ಧರೆ... 
ಮತ್ತೂ
'ಬದುಕಿನ' ಬಗ್ಗೆ ಜಗದ ಜನರ ಅಭಿಪ್ರಾಯವನೆಂದೂ ಕೇಳಬೇಡ - ಪ್ರೀತಿಯಷ್ಟನ್ನೇ ಹೀರಿಕೋ; ಸಿಕ್ಕರೆ, ಸಿಕ್ಕಷ್ಟು ಮನಸಾರೆ...
ಒಳಿತನ್ನೇ ಹಾಯುವುದಾಗ ನಿನ್ನ ಮನದ ಆರೋಗ್ಯ ಧಾರೆ...
____ ಪರರ ಭಾರಕ್ಕೆ ಎದೆ ತುಂಬಿ ಹೆಗಲು ಹಗುರ ಹಗೂರ... 
&&&

ವತ್ಸಾ,
ಭಯ ಕೊಲ್ಲದ ಹಾಗೆ, ಭಯ ಕಾಯುವ ತೆರದಿ ಬದುಕನೀಸಲು ಬೇಕು...
ಬದುಕಿನ ಚಂದವ ಚಂದ ಸವಿಯಲು ಎದೆಯ ಸಹಜ ಭಯ ರೆಕ್ಕೆಗಳ ಸೋಲಿಸದ ಹಾಗೆ ಭಯವ ಪಳಗಿಸಬೇಕು...
___ ಜೀವ ಜೀವನ ಪ್ರೀತಿಗೆ...
&&&

ಅರ್ರೇ ನಾನಿನ್ನೂ ಬದುಕಿದ್ದೇನೆ...!!!
ನೀರೆಂದರೆ ವಿಪರೀತ ಭೀತಿಯ ಪ್ರಾಣಿಯೊಬ್ಬ ಜಲರಾಶಿಯ ಆಳಕಿಳಿದು ತರಹೇವಾರಿ ಗಾತ್ರದ, ಬಣ್ಣಬಣ್ಣದ ಮೀನುಗಳನು ಮಾತಾಡಿಸಿ ಬಂದ ಕಥೆಯು...
ನೆನಪಿನ ಕೋಶವ ತುಂಬಿಕೊಂಡ ಉಪ್ಪುಪ್ಪು ತುಟಿಯ ಅಲಂಪಿನ ನಗು...
ಈ ಬದುಕು ಕರುಣಿಸಿದ ಪ್ರೀತಿಗೆ ಮತ್ತು ಈ ಬದುಕನು ಕರುಣಿಸಿದ ಅವಳಿಗೆ ನೂರು ನೂರು ನಮನ...
@ ನೇತ್ರಾಣಿ ದ್ವೀಪ_ಮುರುಡೇಶ್ವರ_ಕರ್ನಾಟಕ...
***ವಿಡಿಯೋ‌ದಲ್ಲಿ ಮೀನುಗಳನ್ನು ಮರೆಮಾಚಲಾಗಿದೆ... 😉🫢


*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು... :)

No comments:

Post a Comment