Thursday, June 15, 2023

ಗೊಂಚಲು - ನಾಕ್ನೂರಾ ಹನ್ನೊಂದು.....

ಕಪ್ಪು ಹುಡುಗಿಯ ಕಾವ್ಯ...

'ನಾನು' ಅಂಬುದು ಆತ್ಮವಿಶ್ವಾಸ...
'ನಾನು ಮಾತ್ರ' ಅಂದರೆ ಅಹಂಕಾರ...
 ___ ಪ್ರೀತಿ ಪ್ರೇಮ ಪ್ರಣಯ...
&&&


ಮೋಹದುತ್ತುಂಗದಲೆನ್ನ ತುಟಿಯ ಒಡೆದ ಹುಡುಗಿ 'ನೀನು ಪಪ್ಪಿ ಕೊಟ್ಟೇ ಇಲ್ಲಾ' ಅಂತ ಮೂಗು ಮುರಿದು ಮುಸಿ ಮುಸಿ ನಗುವಾಗ ಸಂಜೆಯೊಂದು ಬೆರಗಿನಿಂದ ಇರುಳ ಸೆರಗಲಡಗಿತು...
ಅವಳ ತೋಳಲ್ಲಿ ಬೇಶರತ್ ಸೋತವನನ್ನು ಎದೆ ಕಣಿವೆಯಲಿ ಅಡಗಿಸಿಕೊಂಡು ಅವಳೇ ಸಂತವಿಸುತ್ತಾ, ನೀ ಗಟ್ಟಿ ತಬ್ಬದೇ ದಿನವೆಷ್ಟಾಯಿತು 'ನಿಂಗೆ ಪ್ರೀತಿಯೇ ಇಲ್ಲಾ' ಅಂದವಳು ಕುರುಳ ಬಗೆದು, ಬೆವೆತ ಹೆಗಲು ಕಚ್ಚುವಾಗ ಇರುಳು ಕೊರಳ ತಬ್ಬಿ ಹಿತವಾಗಿ ಆಕಳಿಸಿತು...
____ ಕಪ್ಪು ಹುಡುಗಿಯ ಕಾವ್ಯ...
&&&

ಕೊಟ್ಟು ಕೊಟ್ಟು ತುಂಬಿಕೊಳ್ಳಬೇಕಿತ್ತು, ತಾಳಿಕೊಳ್ಳಬೇಕಿತ್ತು...
ಪಡೆದು ಪಡೆದು ಖಾಲಿಯಾದೆ, ಖೂನಿಯಾದೆ...
____ ಪ್ರೀತಿ ವೃತ್ತಾಂತ...
&&&

ಉಸಿರ ಗೂಡಿನ ಪ್ರೀತಿಯೇ -
'ನನ್ನೇ ನಾನು' ಹುಡುಕಿಕೊಂಡು ಒಮ್ಮೆ,
'ನನ್ನೊಳಗೇ ನನ್ನ' ಕಳೆದುಕೊಂಡು ಒಮ್ಮೆ,
'ನಾನು ನಾನು' ಎಂದುಕೊಂಡು ಒಮ್ಮೆ,
ಕೈಬೀಸಿಕೊಂಡು ಬಿಡುಬೀಸಾಗಿ ಹಾಯುತ್ತೇನೆ ಈ ತಿಕ್ಕಲು ಬದುಕಿನ ಕತ್ತಲ ಹಾದಿಯ...
___ "ನೀನಿರುವ ಕಾರಣಕ್ಕೆ........"
&&&

ಆ ತುಟಿಗಳು ಮೀಸೆಯಂಚನು ತೀಡಿ ಈ ತುಟಿಗಳ ಹಸಿವ ಕೆಣಕುವ ಮೋದ...
ಉಸಿರಿಂದ ಉಸಿರ ಉಜ್ಜಿ ಆ ಬಿಸಿಯಲ್ಲಿ ಮೈ ಖಾಯಿಸಿಕೊಳುವ ಚಂದ...
ತುಟಿಗಳು ತುಟಿಗಳ ಮುತ್ತುವ ಈ ಮುತ್ತಿನಲ್ಲೇನಿಷ್ಟು ಮತ್ತು, ಮೈಮರೆತು ಮೈತುಂಬ ಮುತ್ತು ಬಿತ್ತುವ ಉನ್ಮತ್ತಿಯ ಕರಾಮತ್ತು...
ಮುತ್ತು ಬಿತ್ತಿದ ಒದ್ದೆ ತುಟಿಗಳಲಿ ಶರಧಿ ಸೇರುವ ಸರಿ ಹೊತ್ತಲ್ಲಿ ನದಿಯ ಮುಖಕೆ ಮೆತ್ತಿದ ಚಿಟಿಕೆ ಉಪ್ಪಿನ ರುಚಿಯ ಗಮ್ಮತ್ತೇ ಗಮ್ಮತ್ತು... 
ಮುತ್ತೆಂದರೆ ಸಾನುರಾಗ ನಾಂದಿ - ಪ್ರಣಯ ನಾವೆಯ ಸಾಗರಕಿಳಿಸುವ ಸಂಕಲ್ಪ ಹೋಮ...
ಮತ್ತಲ್ಲದೇ,
ಈ ಮುತ್ತು ಮತ್ತದರ ಮತ್ತು - ಜೀವ ಹಿಂಡುವ ಹಸಿವಿಗೂ, ಉಂಡು ತೇಗಿದ ತೃಪ್ತಿಗೂ ಪ್ರೀತಿ ಒತ್ತುವ ಆಪ್ತ ಮುದ್ರೆ...
____ ಮೋಹದ ಮೇನೆಯ ತುಟಿಗಳಿಂದ ತುಟಿಗಳಿಗೆ...
&&&

ಹೇ ಬಲು ಗಡಿಬಿಡಿಯ ಹುಡುಗೀ -
ನೀ ತೊಟ್ಟ ಗೆಜ್ಜೆಯಿಂದ ಕಳಚಿಬಿದ್ದ ಪುಟ್ಟ ಗಿಲಕಿ - ಉಸಿರು ನೀಡಿದೆ ನನ್ನ ಉಸಿರ ಗೂಡಲ್ಲಿ ಉಸಿರುಗಟ್ಟಿ ಮಲಗಿದ್ದ ಕನಸೊಂದನು ಹುಡುಕಿ...
ಪ್ರೀತಿಯಿಟ್ಟು ಕೂಸ ಕಾಯಲು ನಿನ್ನೆದೆಯ ಕಾವು ಬೇಕಿದೆ - ನಿನ್ನ ಕಣ್ಣ ಕನ್ನಡಿಯಲೊಮ್ಮೆ ನನಗೆ ನಾನೇ ಸಿಗಬೇಕಿದೆ...
ಬಾ
ನಿನ್ನಾ ಪಾದಕಂಟಿದ ಸಂಜೆ ಮಳೆಯ ಹಣ್ಣು ಹನಿಗಳು ಎನ್ನ ಎದೆಯ ನೆನೆಸಲಿ...
ನಿನ್ನೊದ್ದೆ ಕೊರಳು ಈ ಬಿಸಿ ತುಟಿಗಳ ಪೋಲಿ ಪೋಲಿ ಮಾತ ಕದಿಯಲಿ...
ಗೆಜ್ಜೆ ನುಡಿವ ಲಜ್ಜೆಯಲ್ಲಿ ಒಡಲು ಅರಳಲಿ... 
ಲಾಲಿಗಾಗಿ ಜೋಲಿ ಕಟ್ಟೋ ಕರುಳ ಹಂಬಲು ಮಡಿಲ ತುಂಬಲಿ...
ಕನಸು ಕನಸು ತೋಳ ತಬ್ಬಿ ಪ್ರೇಮವಾಗಲಿ...
____ ಕಪ್ಪು ಹುಡುಗಿ - ಬೆಳ್ಳಿ ಹೆಜ್ಜೆ...
&&&

ಕಪ್ಪು ಹುಡುಗೀ -
ಬಿರು ಬೇಸಿಗೆಯ ಮಟ ಮಟ ಮಧ್ಯಾಹ್ನದ ದಾಹವನು ಇನ್ನಷ್ಟು ಕೆಣಕುತ್ತವೆ ಆ ನಿನ್ನ ಒದ್ದೊದ್ದೆ ಕಂದು ತುಟಿಗಳು...
ಮಳ್ಳ ನಾನು ಉಸಿರ ವೇಗ ನೀಗಲು ಅರಸುತ್ತೇನೆ ಮತ್ತದೇ ನಿನ್ನ ಪುಟ್ ಪುಟಾಣಿ ಎದೆ ಕಣಿವೆಯ ತೆಳು ನೆರಳು...
ನಿನ್ನ ಸಂಗಾತವ ನೆನೆಯುತ್ತೇನೆ ಅರಳಿ ಮಿಡಿವ ನಡು ನಾಡಿಗಳ ಝೇಂಕಾರ, ಹೂಂಕಾರಗಳಿಗೆ ಶರಣಾಗಿ ಜಗ ಮರೆಯಲು...
ಸಹಚಾರಿಯಾಗು ಬೆಸೆದು ಹೊಸೆವ ಮೈಯ್ಯ ತಿರುವುಗಳಿಂದ ಸುರಿವ ಬೆವರ ಮಳೆಯಲಿ ಬೇಸಿಗೆಯ ತೀರಗಳ ಸುಖದ ಜಾಡು ಮೀಯಲು...
ಕಡು ಮೋಹದಲ್ಲಿ ಬೆರೆತು ಮಾತು ಮರೆಯುವ ಮೈಮನದ ಮಧುರ ರೋಮಾಂಚದಲ್ಲೇ ಅಲ್ಲವಾ ಜೀವರಾಗಗಳ ಯೌವನದ ವೈಭವ ಇರುವುದು...
ಅಡಿಮುಡಿಯೆಲ್ಲ ಸಿಡಿದು ಕಡಲಂತೆ ಮೊರೆವ ಆಸೆ, ನದಿಯ ಬಾಹುಗಳ ಸೆಳೆದು ಬಳಸಿ ಕರಗಿ ಕಡಲಾಗಿ ಮೊರೆವ ಆಸೆ ಎದೆತುಂಬಿ ಬಲಿಯುವುದು...
____ ಸಜ್ಜೆಮನೆಯ ವಸಂತೋತ್ಸವ ನೀನೇ ಹುಡುಗೀ...
&&&

ಸದಾ ತಕರಾರು ಅವಳದ್ದು: 
ನಾ ಮಾತು ಮಾತಿಗೆ ನಿಂಗೆ ಪ್ರೀತಿ ಹೇಳ್ತೇನೆ, ಆದ್ರೆ ನೀನು ಮಾತ್ರ ಒಮ್ಮೆಯೂ 'ನಾನೂ ನಿನ್ನ ಪ್ರೀತಿಸ್ತೇನೆ' ಅಂತ ಬಾಯ್ಮಾತಿಗೂ ಹೇಳಲ್ವಲ್ಲೋ, ಎಷ್ಟು ಕಾಯ್ತಿರ್ತೀನಿ ಗೊತ್ತಾ ಪ್ರತಿ ಸಾರಿ ನಿಂಗೆ 'ಐ ಲವ್ಯೂ' ಅನ್ನೋವಾಗ್ಲೂ...
ಸುಮ್ಮನೆ ನಕ್ಕು ಎಳೆದು ತಬ್ಬಿಕೊಳ್ತೇನೆ, ಎದೆಯಲಿ ಎದೆ ಇಂಗುವ ಹಾಗೆ...
ಅಷ್ಟೇ,
ಕಣ್ಮುಚ್ಚಿ ಗದ್ದಕೆ ಹಲ್ಲೂರಿಸಿ ಒದ್ದೆ ಗಂಟಲಲ್ಲಿ ಮತ್ತೆ ಮತ್ತೆ ಪಿಸುನುಡಿಯುತಾಳೆ "ರಾಶಿ ರಾಶಿ ಲವ್ಯೂ ಲವ್ಯೂ ಲವ್ಯೂ ಕಣೋ ಪಾಪೀ..."
____ ಪ್ರೀತಿ ಹೇಳದೆ ಇರುವುದು ಹೇಗೆ - ಕೇಳಿಸ್ತಿಲ್ಲಾsss ಅನ್ನುವ ಹುಸಿ ಕೋಪವ ಮುದ್ದಿಸದೇ ಇಪ್ಪೂದಾದರೂ ಹೆಂಗೆ...
&&&

ತಿಳಿ ಬೆಳದಿಂಗಳು ಸುರಿವಾಗ ಅಂಗಳದ ಪ್ರಖರ ದೀಪಕ್ಕೆ ಹನಿಗಂಗಳ ಶಾಪ...
___ ಕಾಡು ವಿರಹಕ್ಕೆ ನಿನ್ನ ಹೆಸರು...

ಬೆಳದಿಂಗಳು ಎದೆಯ ಕಚ್ಚಿ ಗಾಯ ಮಾಡುತಿದೆ...
ತಾರೆಗಳು ಹೊಕ್ಕುಳ ಸುತ್ತಾ ಪಿಳಿ ಪಿಳಿ ಕಣ್ಣ ಚಮೆಯ ಆಡಿಸುತಿವೆ...
ಬಿಸಿಲ ದಿನಗಳ ಮಂದ ಗಾಳಿಯಲಿ ಆಸೆಗೆ ತಿಳಿಯಾಗಿ ಬೆವೆತ ಹೆಣ್ಮಯ್ಯ ಕಂಪು...
ತೊಟ್ಟು ಕಳಚಿದ ಎಲೆಗಳಿಂದೆ ಸೆರಗು ಸರಿಯುವ ಸದ್ದು...
ದಣಪೆಯಾಚೆ ನೆಲವ ತುಳಿವ ನೆನಪು, ಕನಸಿನ ಭಾರ ಭಾರ ಗಂಡು ಹೆಜ್ಜೆಗಳಲಿ ಪ್ರಣಯದಾತುರ...
___ ಕಾಡು ಸರಸವ ಹಾಡೋ ವಿರಹಕ್ಕೆ ನಿನ್ನದೇ ಹೆಸರು...

ಮೊದಲ ಮಳೆಯ ಮಿಂದ ಕಾಲಂದುಗೆಯಿಂದ ಮಂದ್ರ ಜಲತರಂಗ...
ಚಾಯ್‌ನ ಬಿಸಿ ಹಸಿ ತುಟಿಯ ಸೋಕಿ ಕರುಳ ಝೇಂಕಾರ...
ಮೃದ್ಗಂಧ ಉಸಿರ ಕಡೆದು ನಾಭಿ ಶೃಂಗಾರ...
ಮೇಘ ಮಲ್ಹಾರ ಕಿವಿಯ ತುಂಬಿ ಹೃದಯ ಮಂದಾರ...
ಮಳೆ ತೊಳೆದ ನೀಲ ಬಯಲ ಬೆಳುದಿಂಗಳು ಕಣ್ಣ ಕೊಳದಲಾಡಿ ಮೈಮನ ಮತ್ತ ಭೃಮರ...
ಬೈರಾಗೀ,
ಕಾಲ ಮೈಮರೆಯಲು ಇಲ್ಲೀಗ ನಿನ್ನಿರುವಿಕೆಯೊಂದೇ ಬಾಕಿ...
___ ಕಾಡು ಹೂವನು ಕಾಡೋ ವಿರಹಕ್ಕೆ ನಿನದೊಂದೇ ಹೆಸರು...
&&&

ನಿನ್ನಿಂದ ನಿನ್ನ ಕದಿಯಲೆಂದೇ ಬರೆಯಲೆಳಸುವ ನಾನು ನನ್ನಿಂದ ಕಳೆದುಕೊಂಡ ನನ್ನನೇ ಹೊಸದೆಂಬಂತೆ ಪರಿಚಯಿಸಿಕೊಳ್ತೇನೆ...
ಪದಗಳ ಬಡಿವಾರದಿಂದ ತಪ್ಪಿಸಿಕೊಂಡವಳಂತೆ ಕಣ್ಬೆರೆಸಿ ನನ್ನನೇ ಓದುವ ನೀನು ನಿನ್ನ ಕಂಡುಕೊಂಡು ಎದೆ ತುಂಬಿಕೊಳ್ಳುತ್ತೀಯ...
___ ಎಂಥ ಚಂದ ನೋಡು ಈ ಬದುಕಿನ ಸಂಕಲನ...

*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು... :)

No comments:

Post a Comment