Wednesday, February 7, 2024

ಗೊಂಚಲು - ನಾಕ್ನೂರಿಪ್ಪತ್ತಾರು.....

ಇದು ನಿನ್ನ ತಿಂಗಳು.....
(
ನೀ ನಿನ್ನ ನಗೆಯ ಮರೆಯಬಹುದೇ - ತೊರೆದದ್ದು ಹೇಗೆ ನೀನು...?!)

ನನ್ನ ಸಿಟ್ಟು ನಿನ್ನ ಬದುಕ ಎಷ್ಟು ಸುಟ್ಟಿತ್ತೋ - ನಿನ್ನ ಸಾವೀಗ ನನ್ನ ಸುಡುತಿದೆ....
ನೀನೀಗ ಪಂಚಭೂತಗಳಿಗೆ ಅನ್ನವಾದವಳು - ತರ್ಪಣ ಬಿಟ್ಟವನು ನಾನೇ...
ಪಂಚಭೂತಗಳನೇ ಬಳಸಿ ನಾನಿನ್ನೂ ಬದುಕುತಿರುವುದು - ಉಸಿರಿತ್ತು ಹೋದವಳು ನೀನೇ...
ಅದೇ ಹಳೆಯ ರಾಗದಲ್ಲಿ ಹೊಸ ಹಾಡು ಗುನುಗಿದಂತೆ, ಅದೇ ಉರಿ ನೆನಪಿನಲ್ಲಿ ಹೊಸ ಕನಸ ನೇಯುವಂತೆ ಬದುಕ ಹೊಸೆಯುತ್ತೇನೆ ನಾನು - ಮತ್ತದನು ಕಲಿಸಿದ್ದು ನೀನು...
ಸುಡುಮಣ್ಣಲ್ಲಿ ಮೊಗೆ ಬಳ್ಳಿಗೆ ಭರಪೂರ ಫಲ ಅಂತ ನಂಬಿದವಳು ನೀನು - ಸುಟ್ಟ ಎದೆಯಲ್ಲಿ ಹುಟ್ಟೋ ನಗುವಿಗೆ ಒಂಟಿ ಸಲಗದ ಅಬ್ಬರ ಎಂಬುದ ನಿನ್ನಲ್ಲೆ/ನಿನ್ನಿಂದಲೆ ಕಂಡವನು ನಾನು...
ನೆನಪನ್ನು ಜೀವಂತವಿಟ್ಟು ನಗುವ ಎನ್ನ ನೋಡಿ ನಗಬೇಡ ನೀನು...
ಹುಟ್ಟಿಗೆ ಶುಭಕೋರಿ ಸಾವನು ಮರೆಯಬಹುದಾ!! ಎಂದು ಕೇಳಿಕೊಳ್ಳಲೊಲ್ಲೆ ನಾನು...
ಹಾಗೋ ಹೀಗೋ ಒಂದಿನ ನಿನ್ನನ್ನೂ ಮರೀತೇನೆ - ನನ್ನೇ ಮರೆತ ಮಾರ್ನೇ ದಿನ; ಅಲ್ಲಿಯ ತನಕ ಈ ಎಲ್ಲಾ ದಿನ, ನಿನ್ನದೇ ದಿನ......
____ ನನ್ನ ಪಾಲಿನ ಶುಭವೇ, ನಿನಗೆ ಶುಭಾಶಯ...

ನೀ ನಿನ್ನ ನಗೆಯ ಮರೆಯಬಹುದೇ...?!

ಸಾವಿತ್ರೀ -
'ಕಪ್ಪು' ಹುಡುಗಿ ನನ್ನ ಕಾವ್ಯ ಕನ್ನಿಕೆ ಅಂತೇನೋ ಮತ್ತೆ ಮತ್ತೆ ಬರೆದು ಬೀಗುತ್ತಿದ್ದವನಿಗೆ; 
'ಕಾಗೆ'ಯೊಂದು ಪ್ರಿಯವೆನಿಸಲು ನಿನ್ನ ಹೆಸರಲಿ ತರ್ಪಣದ ಎಡೆಯಿಟ್ಟು  ಹೋಯ್ ಕರೆಯಬೇಕಾಯ್ತು...
ಮಾತಿಗೆ ಮೊದಲು ಉಂಡ್ಯಾ ಅಂತ ಕೇಳಿ, ಸರೀಮಾಡಿ ಹೊತ್ತೊತ್ತಿಂಗೆ ಊಟ ಆಸ್ರು ಮಾಡು ಅಂತ್ಹೇಳಿ ಮಾತು ಮುಗಿಸುತ್ತಿದ್ದ ನಿನ್ನ ಕರುಳ ತಳಮಳಕೆ ಉಡಾಫೆಯ ಮಾರುತ್ತರವೇ ಇತ್ತು ಸದಾ ಎನ್ನದು ಆಗ...
ಕಾಕ ರಾಜ ಬಲಿ ಬಾಳೆಯ ಕುಕ್ಕಿದರೆ ನಿನಗೆ ವರುಷದ ಊಟವಾಯ್ತು ಅಂತ ಸುಳ್ಳೇ ಹಗುರಾಗ್ತೇನೆ ಈಗ...
ಒಂದು ಘಳಿಗೆ ನಿಂತು ಸಾಗಲು ನಿನ್ನ ಮಡಿಲಿಲ್ಲ, ನೂರು ಕನಸ ಗೆದ್ದು ಬೀಗಲು ನಿನ್ನ ಹೆಗಲಿಲ್ಲ - ಆಗಸದ ಬೀದಿಯಲಿ ನಿನ್ನ ಹೆಸರಿನ ತಾರೆಯ ಹುಡುಕಲು ಇರುಳಿಗಾಗಿ ಕಾಯ್ತೇನೆ...
ನೀನೋ ಇದ್ದಾಗ ಬದುಕಿ ತೋರಿದ್ದರದ್ದು ಒಂದು ದಡೆಯಾದರೆ, ಎದ್ದು ಹೋಗಿ ಕರುಣಿಸುತಿರುವ ಬದುಕಿನ ಕಾಣ್ಕೆಯದ್ದೇ ಇನ್ನೊಂದು ದಡೆ...
___ ಬೆನ್ನಾದ ಮೇಲೂ ಮಡಿಲ ನಗುವಾಗಿಯೇ ನೆನಪಾಗ್ತೀಯ ನೋಡು ನೀನು, ಜೀವಂತವಿದ್ದೇನೆ ಅನ್ನಿಸುವುದೇ ಆಗ ನನಗೆ ನಾನು...

ನಿನ್ನ ಹೊರತು ಈ ಬದುಕಿಗೊಂದು ಉದ್ದೇಶವೇ ಇಲ್ಲ ಅಂದು ಊರೆಲ್ಲ ಹಲುಬಿದವನು ಅಂದು...
ನೀನೆದ್ದು ಹೋಗಿ ವರುಷ ಕಳೆವ ಹೊತ್ತಿಗೆ - ಉದ್ದೇಶವಿಲ್ಲದ ಈ ಬದುಕು ಇಷ್ಟು ಹಗುರ ಹೇಗಾಯ್ತು...!!!
ತರಗೆಲೆಯ ನಿಶ್ಚಿಂತೆ ಮತ್ತು ಬೀಡಾಡಿ ದನದ ಉನ್ಮತ್ತ ಸೊಕ್ಕಿನಲಿ ಅಂಡಲೆಯುತಿದ್ದೇನೆ...
____ ನಾನೆಂಬ ನನ್ನ ತಣ್ಣನೆ ಮನದ ಸುಡು ಸುಡು ಕ್ರೌರ್ಯ...

ಸುಖ ಮರಣವಂತೆ ನಿನ್ನದು - ನೆಮ್ಮದಿ...
ನೆಮ್ಮದಿ ಮರಳದಂತೆ ನನ್ನದು - ಸುಖ...
ಹಿಂತಿರುಗಿ ನೋಡಬೇಡ, ನೀ ನಂಗೆ ಅಳುವುದ ಕಲಿಸಿಲ್ಲ...
ಆದರೂ,
ನಿಜ ನಗುವೀಗ ಪಟದೊಳಗಿನ ಸ್ಥಿರ ಚಿತ್ರ ನಿನ್ನದು; ನನ್ನದೂ...

ತೊರೆದದ್ದು ಹೇಗೆ ನೀನು...?!
ನಿನ್ನ ಬಗ್ಗೆ ಬರೆದು ಬರೆದು ಮುಗಿಯದೇ ಸೋಲುವಂಗೆ ನೀ ಬದುಕಿದ್ದು ಮತ್ತು ಎರಡು ಮಾತು ಬರೆಯಲೂ ಸೋಲುವಷ್ಟು ನಾ ನಿನ್ನ ಅರಿತದ್ದು, ಮರೆತದ್ದು...
___ ಸಾವು ನಿನ್ನೊಬ್ಬಳದೇನಾ - ಮತ್ತೀಗ ನಾನು ಬದುಕಿದ್ದೀನಾ...?!


ನಡು ಗೋಡೆಯ ಮೇಲಿನ ನಿನ್ನ ಪಟದ ನಗುವ ಕಾಣುವಾಗಲೆಲ್ಲಾ ನಿನ್ನ ಹುಟ್ಟನ್ನು ನೆನೆಯುತ್ತೇನೆ...
ಮತ್ತು
ಮೊದಲ ತುತ್ತು ಕೈಗೆತ್ತಿಕೊಳ್ಳುವ ಮುನ್ನ ಒಮ್ಮೆ ಪಟವ ನೋಡುತ್ತೇನೆ...
ಋಣ ತೀರುವುದಿಲ್ಲ - ಉಸಿರಿದು ನೀನಿಟ್ಟ ಅಗುಳು...
___ ಇದು ನಿನ್ನ ತಿಂಗಳು - ನೀ ನನ್ನ ನಿತ್ಯದ ತಿಂಗಳು....

ಹಂಗೇನೇ ನಿಂಗೂ ನೆನಪಿರಲಿ - ಒಂದೊಮ್ಮೆ ನೀನಿಲ್ಲಿ ಬದುಕಿದ್ದವಳು, ಕನಸುಗಳ ನೆಟ್ಟಿದ್ದವಳು, ನೆನಪುಗಳ ಎದೆಗಿಟ್ಟು ಕನಸಾಗಿ ಹೋದವಳು... 
ಕನಸಿಗಾದರೂ ಬಂದು ಹೋಗುತಿರು ಮಾರಾಯ್ತೀ - ಸುಮಾರು ಜಗಳ ಹಂಗೇ ಉಳಿದೋಗಿದೆ...
ಹಕ್ಕಿ ನರಸಣ್ಣನ ತಾಳೆಗರಿಯ ನಡುವೆ ನಮಗಾಗಿ ಶುಭ ಶಕುನದ ಹಾಡಿರಬಹುದು - ಕೇಳುವುದು ಬಾಕಿ ಇದೆ...
ಹೂವ ಕಾಯುವ ಮುಳ್ಳು ಚುಚ್ಚಿದರೆ ಪಾಪವಿಲ್ಲ - ಕೆಲವೆಲ್ಲ ಗಾಯಗಳು ಮಾಯಬಾರದು ಕಣೇ - ಎದೆಯ ಚುಚ್ಚಿದ ಮುಳ್ಳು ನಿನ್ನ ಸಾವಾದರೆ, ಕಣ್ಣ ತುಂಬಿದ ಹನಿ ಹನಿಯೂ ಬದುಕು ನಂಗೆ - ಮರೆತೆಂದೂ ಹೋಗದಿರು, ನಿನ್ನ ಇರುವಿಕೆಯ ರೂಹನೆಂದೂ ಅಳಿಸದಿರು...
ಗೊತ್ತು, ಹುಟ್ಟನ್ನು ನೆನೆದರೆ ಸಾವೇನೂ ಸುಳ್ಳಾಗಲ್ಲ; ಆದರೂ ಜೀವಂತ ಭಾವಗಳ ನೆನಪು ನಗುತಲೇ ಇರುವಲ್ಲಿ ಸಾವಿಗೆ ಅಂಥ ದೊಡ್ಡಸ್ತಿಕೆಯೂ ಉಳಿದಿಲ್ಲ...
ಸಾವನ್ನು ಒಪ್ಪಿಕೊಳ್ಳುತ್ತಲೇ ಹುಟ್ಟಿನ ನೆನಪಿಗೆ ಶುಭಕೋರುತ್ತೇನೆ ನಿಂಗೆ...
ಹುಟ್ದಬ್ಬದ್‌ ಪೀತಿ ಪೀತಿ ಪೀತಿ ಶುಭಾಶಯ ಶಣ್ಣೀ... 💕
ಲವ್ಯೂ ಕೂಸೇ... 😘😘
&&&

ಅಮಾವಾಸ್ಯೆಯ ಇರುಳ ಹಾದೀಲಿ ಚಂದಿರನೂ ಕುರುಡು ಅಂದೆ, ಎಡವಿದ ಕಾಲ್ಬೆರಳಿಗೆ ಉಸಿರ ಊದುತ್ತಾ...
ಯೆದೆಯಾರ ನಗುತಿದ್ದರೆ ನಿನ್ನೊಳಗೆ ನೀನೇ, ನಿನಗೆ ನೀನೇ ಬೆಳಕು ಅಂದಿತೊಂದು ಪುಟಾಣಿ ನಕ್ಷತ್ರ...

ಇಲ್ಲಿಂದ ಎದ್ದೋದ ಜೀವಗಳೆಲ್ಲ ಅಲ್ಲಿ ತಾರೆಗಳಾಗ್ತಾರಂತೆ - ನನ್ನ ಮಾತಾಡಿಸಿದ ಮಿಣುಕು ಆಕಾಶ ದೀಪವದು ನೀನೇ ಇರಬಹುದಾ...!!
ನಿನ್ನ ಪ್ರೀತ್ಸುವಲ್ಲಿ ಅಥವಾ ಪ್ರೀತೀನ ತೋರ್ಸುವಲ್ಲಿ, ಅಲ್ಲಲ್ಲ ಪ್ರೀತೀನ ನಿಭಾಯಿಸುವಲ್ಲಿ ಸೋತದ್ದೇ ಹೆಚ್ಚು ನಾನು, ವಾಸ್ತವವ ಬದುಕುವ ಹೊತ್ತಿಗೆ - ಆದ್ರೆ, ಸೋತು ಬರುವ ಮಗುವಿನೆಡೆಗೆ ಮಮಕಾರ ಹೆಚ್ಚಂತೆ ತಾಯ್ಮಡಿಲಿಗೆ...
ನಾ ಮಾತಾಡಿ ಕಳೆದದ್ದನ್ನ ನೀ ಬಾಳಿ ಬದುಕಿ ಬೆಳೆದೆ...
ನಂಗೆ ನೀನೊಂದು ಬೆರಗು ಮತ್ತೆ ಬೆಳಕು ಯಾವಾಗ್ಲೂ...
ಎದೆ ಸಂದೂಕದಲಿ ಮಡಚಿಟ್ಕಂಡ ನೆನ್ಪುಗಳು ಲಡ್ಡಾಗಲ್ಲ - ಅಳುವಾಗ, ನಗ್ವಾಗ ಎಲ್ಲಾ ಅದನೇ ನೆಚ್ಕ್ಯಂಡು, ಹಂಚ್ಕ್ಯಂಡು ಸಮಾಧಾನ ಪಡೋದಷ್ಟೇ ನನ್ ಲಭ್ಯತೆ ಇಂದು ಮತ್ತು ಇನ್ಮುಂದೂ...

ಎದೆ ಗೋಡೆ ಚಿತ್ರ ಆಗಿ, ಭಾವದಾಕಾಶದ್ ನಕ್ಷತ್ರ ಆಗಿ, ಏನೋ ಒಂದು ಒಟ್ನಲ್ಲಿ ಹೆಜ್ಜೆ ಹೆಜ್ಜೆಗೆ ನೆನಪಾಗ್ತಾ, ನನ್ನನ್ನ ಜೀವಂತ ಇಡು ಅಷ್ಟೇ...
ಜಗಳಾಡಿ ಹಗುರಾಗೋಕೆ ನೀನಿಲ್ಲದ ಈ ಹೊತ್ತಲ್ಲಿ ಪ್ರೀತಿ ಕಣ್ತುಂಬೋಕೆ ಅದೊಂದೇ ಪ್ರಾರ್ಥನೆ...
____ ಆಯೀ, ನಿನ್ನ ಬದುಕ ಗೆಲ್ಲುವ ಹಠಗಳ ಯಾದಿಯ ಅವುಡುಗಚ್ಚಿನ ಮೌನದ ಸಾಲುಗಳಷ್ಟಿನ್ನು ನನ್ನ ಪ್ರಜ್ಞೆಯ ದಿಂಬಿನಡಿ ಇಟ್ಟುಕೊಂಡಿದ್ದೇನೆ, ಯಾವ ಬಾಲಗ್ರಹ ಪೀಡೆಯೂ ಎನ್ನೆದೆಯ ಕಾಡದ ಹಾಗೆ...
&&&

ಏನ್ಗೊತ್ತಾ -
ಹಣೆಬರವ ಹಳಿದು ನೋವ ಗೆಲ್ಲುವುದೇ ಖರೆಯಾದರೆ...
ನಿನ್ನ ಆರೋಪಿಸಿ ನೆನಪುಗಳಿಂದ ಕಳಚಿಕೊಳ್ಳಲು ಆಗುವಂತಿದ್ದುದಾದರೆ...
___ ನಾನು ನನ್ನೊಂದಿಗಿರುವುದು ಇಷ್ಟು ಕಷ್ಟವಿರಲಿಲ್ಲ ಬಿಡು...

 *** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು... :)

No comments:

Post a Comment