ಬೆಳಗೆಂಬ ಶುಭಾರಂಭ..... 🍬
ಎದೆಯ ಭಾವದಲಿ ಆಪ್ತತೆಯ ಬೆಳಕ ನೆಟ್ಟವರ ಶುಭ ನುಡಿಯೊಂದು ಬೆಳ್ಳಂಬೆಳಗಲಿ ನೆತ್ತಿ ಸವರಿದರೆ, ದಿನಕೆಲ್ಲ ಮಿಗುವಂತೆ ನಗೆಯು ಬೊಗಸೆ ತುಂಬಿದಾಂಗೆ, ಪ್ರೀತಿ ಹೆಗಲನೇರಿದಾಂಗೆ... 🍬
ಶುಭದಿನ... 🤝
🦜🦜🦜
ಅದೇ ನಗುವಿನ ಹೊಸ ಪರಿಚಯ - ಇನ್ನೊಂದು ಬೆಳಗು... 🤝🫂
🦜🦜🦜
ಬೆಳಗೆಂದರೆ, ಹೂ ದುಂಬಿಗಳ ಒಲವ ನಿತ್ಯ ಜೀವೋತ್ಸವಕೆ ಮುಫತ್ತಾಗಿ ಬೆಳಕಿನ ವಿನ್ಯಾಸದ ಬಲ, ಬೆಂಬಲವನೀವ ದಿವ್ಯ ರಸಿಕತೆ...🌾🦋
ಶುಭದಿನ... 🫂
🦜🦜🦜
ಬರುವ ಬೆಳಗನ್ನು ನಂಬಿ ಇರುಳ ಹೊದ್ದು ಮಲಗಿದ್ದ ಕೋಟಿ ಕೋಟಿ ಜೀವಭಾವಗಳನೆಲ್ಲ ಮೆಲ್ಲ ತಟ್ಟಿ ತಟ್ಟಿ ಎಬ್ಬಿಸುವ ನಂಬಿಕೆಯ ಬಂಟ ಬೆಳಕಿನ ಅಗಾಧ ಕರುಣೆಗೆ ಯಾವ ಹೋಲಿಕೆ...
ಬೆಳಗನ್ನು ಕಾಣದೇ ಇರುಳಲ್ಲೇ ಉಸಿರು ಕರಗಿ ಹೋದವರ ಬೆಳಕು ಬೇರೆಯೇ ಇದ್ದೀತು...
ಶುಭದಿನ... 🤝🍬
🦜🦜🦜
ನನ್ನೊಳಗೆ ನಾನರಳಲೆಂದು ಊರೆಲ್ಲಾ ಬೆಳಕ ಬಿತ್ತಿದ ಬೆಳಗು... 🍬🌱
ನೀ ಕಂಡೆ, ನಗು ಮೂಡಿತು, ಇನಿತು ನೇಹ ಸೊಬಗು... 🤝
🦜🦜🦜
ಹೂ ಹಾದಿಯ ಎದೆ ಮೇಲೆ ಪಾದಚಾರಿಯ ಕನಸ ಗುರುತು...
ಬೆರಗು - ಬೆಮರು - ಹೂ ಹಗಲು... 🥀🪻
ಬಣ್ಣ ಬೆಡಗಿನ ಬೆಳಗು... 🌈
🦜🦜🦜
ಬೆಳಗಾಯಿತು...
ಬೆಳಕಾಗಬಹುದು...
ತೆಗೆದೇ ಇಡುವುದೊಳಿತು ಎದೆಯ ಬಾಗಿಲು... 🌈
🦜🦜🦜
ಇರುಳ ಬಣ್ಣಗಳನೆಲ್ಲ ನಿದ್ದೆಯಲೇ ಕರಗಿಸಿ ಹೊಸತೇ ಬಣ್ಣಗಳ ಕಣ್ಣಲಿ ತುಂಬುವ ಬೆಳಗೊಂದು ಬೆರಗಿನ ಕವಿತೆ...
ಶುಭದಿನ... 🌈🎉
🦜🦜🦜
ಬೆಳಗೆಂದರೆ ಬೆಳಕು ನುಡಿವ ಶುಭ ಶಕುನ ಕೂಜನ... 🦜
🦜🦜🦜
ಅಂಗಳದ ತುಳಸಿಯ ಹಾದು ಜಗುಲಿಯ ಧೂಳ ತುಳಿದು ಮೆಲ್ಲ ಮೆಲ್ಲನಡಿಯಿಡುವ ಕೊರವಂಜಿ ಹಗಲು...
ಶುಭವ ಹಾಡಿ ನಗೆಯ ಹರಸಲೀ ಬೆಳಕಿನ ಕೊರಳು...
ಶುಭದಿನ... 🧚
🦜🦜🦜
ಬೇರು ಬಿಡುವ ಬಿಸುಪಿಗೂ, ಹೂವರಳುವ ಸದ್ದಿಗೂ, ಬೆಳಕಿಳಿಯುವ ಪ್ರೀತಿ ಹಗಲು...
ಶುಭದಿನ... 🌱🌻🌤️
🦜🦜🦜
ಕಾಡು ಹಕ್ಕಿಯ ಗೂಡಿಗಿಣುಕಿ ರೆಕ್ಕೆ ಸವರುವ ಬೆಳಕಿನೆದೆಯಲಿ ಭಾಷ್ಯವಿಲ್ಲದ ಪ್ರೀತಿ ಕನಕ...
ಶುಭ ಸುಪ್ರಭಾತ... 🤗
🦜🦜🦜
ಹಾದಿಯ ಮೈಗಾಯಗಳನೆಲ್ಲ ತೊಳೆದೊಮ್ಮೆ
ಚೂರು ಭರವಸೆಯ ಮುಲಾಮು ಬಳಿದು
ಹೊಸ ಹೆಣಗಾಟಕಣಿಗೊಳಿಸಲು ಉದ್ದಕೂ ಇನಿತಿನಿತಾಗಿ ಬೆಳಕು ಹರಡಿತು - ಬೆಳಗಾಯಿತು...
🦜🦜🦜
ಚಿಗುರು ಕನಸಿಗೆ ಅಮೃತವೆ ಆಗಿ ಇಳೆಯನೆಲ್ಲ ಸರಸರನೆ ಹರಡಿಕೊಳುವ ಕಾವು ಬೆಳಕು - ಬೆಳಗಾಯಿತು... 🌱
🦜🦜🦜
ಶುಭದ ನಿರೀಕ್ಷೆಗಳ ಕಿರು ಪರೀಕ್ಷೆಯಂತೆ ಮತ್ತೆ ಬೆಳಗಾಯಿತು...
ಶುಭದಿನ... 🥀
🦜🦜🦜
ಬಾಗಿಲಿಗೆ ಬಂದ ಬೆಳಕೆಂಬ ಕೊರವಂಜಿ ಶುಭದ ಕಣಿ ಹೇಳಲಿ...
ಶುಭದಿನ... 🧚
🦜🦜🦜
ಶುಭವ ಬಯಸಿ ಶುಭವನೇ ಹೊಂದುವ ಶುದ್ಧ ಭರವಸೆಯ ಬೆಳಕಿನುತ್ಸವ ಬೆಳಗು... 🍬🪻
🦜🦜🦜
ಎದೆಯ ನಗೆಯ ಸೆಳಕೊಂದು ಬೆಳಕ ಮೀಯಲಿ - ಹಗಲು ಶುಭವ ಹಾಡಲಿ...
ಶುಭದಿನ... 🍬
🦜🦜🦜
ಆಕಳಿಸಿ ಎದ್ದ ಕನಸ ಕರುಳಿನ ಕನವರಿಕೆ...
ಶುಭದಿನ... 🦋
*** ಇಲ್ಲಿನ ತುಂಡು ಭಾವಗಳು ಮುಂದಿನ ಯಾವುದೇ ಬರಹದಲ್ಲೂ ಮತ್ತೆ ಕಾಣಿಸೀತು... :)
ಜಗುಲಿಗೆ ಇಣುಕಿದ ಚಂದಿರ; ಮನಮಂದಿರದಿ ಮೂಡಿಸುವ ಭಾವಗಳೆ ಸುಂದರ... ಕ್ಷಣ ಕ್ಷಣಕೂ ಅದಲುಬದಲಾಗುವ ನನ್ನೊಳಗಿನ ನನ್ನದೇ ಭಾವಗಳು ನನ್ನನೇ ಬೆಚ್ಚಿಬೀಳಿಸುತ್ತವೆ ಹಲವೊಮ್ಮೆ...
Wednesday, May 1, 2024
ಗೊಂಚಲು - ನಾಕ್ನೂರಿಪ್ಪತ್ತೇಳು.....
Subscribe to:
Post Comments (Atom)
No comments:
Post a Comment